ಸರಕಾರದ ಯೋಜನೆಗಳನ್ನು ಜನರಿಗೆ ಸಮರ್ಪಕವಾಗಿ ತಲುಪಿಸಲು ಗ್ರಾಮ ಆಡಳಿತಾಧಿಕಾರಿಗಳು ಪಾರದರ್ಶಕವಾಗಿ ಕಾರ್ಯ ನಿರ್ವಹಿಸಬೇಕೆಂದು ಶಾಸಕಿ ನಯನಾ ಮೋಟಮ್ಮ ಹೇಳಿದರು.
ಅವರು ಮಂಗಳವಾರ ಮೂಡಿಗೆರೆ ಪಟ್ಟಣದ ತಾಲೂಕು ಕಚೇರಿಯಲ್ಲಿ ಮೂಡಿಗೆರೆ ಹಾಗೂ ಕಳಸ ತಾಲೂಕಿನ ಗ್ರಾಮ ಆಡಳಿತಾಧಿಕಾರಿಗಳಿಗೆ ಲ್ಯಾಪ್‍ಟಾಪ್ ವಿತರಿಸಿ ಮಾತನಾಡಿದರು.
ಗ್ರಾಮ ಆಡಳಿತಾಧಿಕಾರಿಗಳ ವಿವಿಧ ಬೇಡಿಕೆಯಲ್ಲಿ ಪ್ರಥಮವಾಗಿ ಸರಕಾರ ಲ್ಯಾಪ್‍ಟಾಪ್ ವಿತರಿಸುವ ಮೂಲಕ ಒಂದು ಬೇಡಿಕೆ ಈಡೇರಿಸಿದೆ. ಉಳಿದ ಬೇಡಿಕೆಗಳನ್ನು ಸರಕಾರ ಹಂತಹಂತವಾಗಿ ಈಡೇರಿಸಲಿದೆ. ಲ್ಯಾಪ್‍ಟಾಪ್‍ನಿಂದ ಗ್ರಾಮ ಆಡಳಿತಾಧಿಕಾರಿಗಳು ಈಗ ಪರಿಣಾಮಕಾರಿಯಾಗಿ ಕೆಲಸ ಮಾಡಲು ಅನುಕೂಲವಾಗಲಿದೆ. ತನ್ನ ಕ್ಷೇತ್ರದ ಜನರು ತಮ್ಮ ಕೆಲಸ ಕಾರ್ಯಗಳಿಗೆ ತಾಲೂಕು ಕಚೇರಿಗೆ ಬಂದರೆ ತ್ವರಿತವಾಗಿ ಕೆಲಸ ಮಾಡಿಕೊಡಬೇಕು. ಎಷ್ಟೋ ಮಂದಿಗೆ ಯಾವ ಅಧಿಕಾಗಳನ್ನು ಭೇಟಿ ಮಾಡಬೇಕೆಂಬ ಅರಿವು ಇರುವುದಿಲ್ಲ. ಅವರಿಗೆ ಸೌಜನ್ಯದಿಂದ ಮಾತನಾಡಿಸಿ, ಪುನಃ ಅಲೆದಾಡದಂತೆ ಮಾರ್ಗದರ್ಶನ ನೀಡಬೇಕೆಂದು ಸಲಹೆ ನೀಡಿದರು.
ಮೂಡಿಗೆರೆ ತಹಸೀಲ್ದಾರ್ ರಾಜಶೇಖರ್ ಮೂರ್ತಿ, ಕಳಸ ತಹಸೀಲ್ದಾರ್ ಕಾವ್ಯ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು, ನೌಕರರು ಉಪಸ್ಥಿತರಿದ್ದರು.



