ಸರ್ವರಿಗೂ ಗುಣಮಟ್ಟದ ಶಿಕ್ಷಣ ನೀಡುವುದು ಸರ್ಕಾರದ ಬದ್ಧತೆ ಎಂದು ಚಿಕ್ಕಮಗಳೂರು ಶಾಸಕ ಎಚ್.ಡಿ.ತಮ್ಮಯ್ಯ ನುಡಿದರು.
ಚಿಕ್ಕಮಗಳೂರು ರೌಂಡ್ ಟೇಬಲ್-164 ಘಟಕ ತೊಗರಿಹಂಕಲ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಸುಮಾರು 25ಲಕ್ಷರೂ. ವೆಚ್ಚದಲ್ಲಿ ನಿರ್ಮಿಸಿಕೊಟ್ಟಿರುವ ಶಾಲಾ ಕೊಠಡಿಗಳನ್ನು ಇಂದು ಬೆಳಗ್ಗೆ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.
ಶೋಷಿತರು, ಕಾರ್ಮಿಕರು, ರೈತಾಪಿ, ದುಡಿಯುವ ವರ್ಗದ ಬಡಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ಆರೋಗ್ಯಪೂರ್ಣ ಸಮಾಜ ನಿರ್ಮಿಸಬಹುದು. ಈ ನಿಟ್ಟಿನಲ್ಲಿ ರಾಜ್ಯಸರ್ಕಾರ ಬದ್ಧತೆಯೊಂದಿಗೆ ಕಾರ್ಯನಿರ್ವಹಿಸುತ್ತಿದೆ. ಪಂಚಾಯಿತಿಗೆ ಒಂದರಂತೆ ಪಬ್ಲಿಕ್ ಶಾಲೆ ಆರಂಭಗೊಳ್ಳಬೇಕು. ಪ್ರಸ್ತುತ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಎರಡು ಪಬ್ಲಿಕ್‍ಶಾಲೆ ನೀಡಲು ಸರ್ಕಾರ ತೀರ್ಮಾನಿಸಿದೆ ಎಂದರು.
ಶಿಕ್ಷಣ, ಆರೋಗ್ಯ, ನೀರು ಸೇರಿದಂತೆ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದು ಸರ್ಕಾರದ ಹೊಣೆಗಾರಿಕೆ. ಜನರಿಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವ ಹೊಣೆಗಾರಿಕೆ ಸರ್ಕಾರದ್ದಾಗಿದ್ದರೂ ರೌಂಡ್ ಟೇಬಲ್ ನಂತಹ ಸೇವಾ ಸಂಸ್ಥೆಗಳೂ ನೆರವು ನೀಡುತ್ತಿರುವುದು ಶ್ಲಾಘನೀಯ ಎಂದ ಶಾಸಕ ತಮ್ಮಯ್ಯ, ಜೂನ್ 21ರಂದು ತಮ್ಮ ಹುಟ್ಟೂರಿನಲ್ಲಿ ಹೊಸಶಾಲಾ ಕಟ್ಟಡವನ್ನು ಕಟ್ಟಿಸಿ ಲೋಕಾರ್ಪಣೆಗೊಳಿಸಲಾಗುತ್ತಿದೆ ಎಂದರು.

ವಿಧಾನಪರಿಷತ್ ಸದಸ್ಯ ಎಸ್.ಎಲ್.ಭೋಜೇಗೌಡ ಮಾತನಾಡಿ, ಶೇ.55ರಷ್ಟು ಶಿಕ್ಷಣ ಕ್ಷೇತ್ರದಲ್ಲಿ ಖಾಸಗೀ ಸಂಸ್ಥೆಗಳ ಪಾಲಿದೆ. ಉಳಿದ ಶೇ.40ರಷ್ಟು ಸರ್ಕಾರದ ಶಾಲಾ ಕಾಲೇಜುಗಳಲ್ಲಿ ಉತ್ತಮ ಸೌಕರ್ಯ ಕಲ್ಪಿಸಬೇಕು. ಕಟ್ಟಡ, ನೀರು, ಶೌಚಾಲಯ, ಸಮವಸ್ತ್ರ, ಪಠ್ಯಪುಸ್ತಕ ಮತ್ತಿತರ ಪೂರಕ ಅಂಶಗಳತ್ತ ವಿಶೇಷ ಗಮನ ಕೊಡುವುದು ಅಗತ್ಯ. ಆದರೆ ಸರ್ಕಾರಿ ಶಾಲೆಗಳ ಪರಿಸ್ಥಿತಿ ಬಹಳಷ್ಟು ಸುಧಾರಿಸಬೇಕಾಗಿದೆ. ವಾಸ್ತವವಾಗಿ ಸರ್ಕಾರಿ ಕನ್ನಡ ಶಾಲೆಯಲ್ಲಿ ಕಲಿತವರು ಸರ್ವೋಚ್ಛ ನ್ಯಾಯಾಲಯದ ನ್ಯಾಯಾಧೀಶರಾಗಿ, ಪ್ರಧಾನಿ, ಮುಖ್ಯಮಂತ್ರಿ ಸೇರಿದಂತೆ ಪ್ರಮುಖ ಹುದ್ದೆಗಳನ್ನು ಸಮರ್ಥವಾಗಿ ನಿರ್ವಹಿಸಿದ ಉದಾಹರಣೆಗಳಿವೆ, ತೊಗರಿಹಂಕಲ್ ಶಾಲಾ ಎರಡು ಕೊಠಡಿಗಳನ್ನು ಚೆನ್ನಾಗಿ ನಿರ್ಮಿಸಿದ್ದು, ರಂಗಮಂದಿರವಾಗಿಯೂ ಬಳಕೆ ಮಾಡಿಕೊಳ್ಳುವ ಅವಕಾಶ ಕಲ್ಪಿಸಿರುವುದು ರಾಷ್ಟ್ರದಲ್ಲೆ ವಿಶೇಷವಾದದ್ದು ಎಂದರು.
ಚಿಕ್ಕಮಗಳೂರು ರೌಂಡ್ ಟೇಬಲ್ ಅಧ್ಯಕ್ಷ ರಾಷ್ಟ್ರೀತ್ ಸಮಾರಂಭದ ಅಧ್ಯಕ್ಷತೆವಹಿಸಿ ಮಾತನಾಡಿ ಸುಮಾರು 20 ಕ್ರಿಯಾಶೀಲ ಯುವಕರನ್ನೊಳಗೊಂಡ ತಂಡ ಶಾಲಾಕಟ್ಟಡ ನಿರ್ಮಾಣಕ್ಕೆ ಸಹಕರಿಸಿದೆ. ಎವಿಜೆ ಶಿಕ್ಷಾ ಸಂಸ್ಥೆಯು 4ಲಕ್ಷರೂ. ನೀಡುವ ಮೂಲಕ ನೆರವು ನೀಡಿದ್ದು ಹತ್ತಾರು ಹಿತೈಷಿಗಳು ಆರ್ಥಿಕ ಸಹಾಯ ಮಾಡಿದ್ದರಿಂದ ಸುಂದರ ಕೊಠಡಿಗಳು ನಿರ್ಮಾಣಗೊಂಡಿವೆ ಎಂದರು.

ಯೋಜನಾ ನಿರ್ದೇಶಕ ವಿನಯರಾಜ್ ಕೇವಲ 6ತಿಂಗಳಲ್ಲಿ ಶಾಲಾ ಕೊಠಡಿ ನಿರ್ಮಾಣವಾಗಿದೆ. 20ಬೆಂಚ್ ಮತ್ತು ಡೆಸ್ಕ್‍ಗಳು, ಕರಿಹಲಗೆ, ವಿದ್ಯುದ್ದೀಕರಣದೊಂದಿಗೆ ಸುಸಜ್ಜಿತವಾಗಿ ನೀಡಲಾಗುತ್ತಿದೆ. ಮಕ್ಕಳು ಹಾಗೂ ಶಿಕ್ಷಕರು ಇದರ ಸದ್ಭಳಕೆ ಮಾಡಿಕೊಳ್ಳುವ ಮೂಲಕ ನೀಡಿರುವ ನೆರವನ್ನು ಸಾರ್ಥಕಪಡಿಸಬೇಕಾಗಿದೆ ಎಂದರು.
ವಲಯ-13ರ ಯೋಜನಾ ಸಂಯೋಜಕ ಈಶ್ವರಸರ್ಜಿ, ಮಾಜಿವಲಯಾಧ್ಯಕ್ಷ ದೇವಾನಂದ, ಜಿ.ಪಂ.ಮಾಜಿಸದಸ್ಯ ಹೆಚ್.ಹೆಚ್.ದೇವರಾಜ್, ಎಚ್.ಎಸ್.ಮಂಜಪ್ಪ, ಟಿ.ಡಿ.ಮಲ್ಲೇಶ್, ಗ್ರಾಮಪಂಚಾಯಿತಿ ಅಧ್ಯಕ್ಷ ಸಾದೀಕ್‍ಪಾಷಾ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಶಿವಕುಮಾರ್ ಮತ್ತಿತರರು ಮಾತನಾಡಿ ಯುವಶಕ್ತಿಯ ಸತ್ಕಾರ್ಯವನ್ನು ಶ್ಲಾಘಿಸಿದರು.
ಚಿಕ್ಕಮಗಳೂರು ಗಾಲ್ಫಕ್ಲಬ್ ಅಧ್ಯಕ್ಷ ಎ.ಬಿ.ಸುದರ್ಶನ, ಕ್ಯಾಪ್ಟನ್ ಎ.ಬಿ.ರವಿಶಂಕರ್, ಜಿ.ಪಂ.ಮಾಜಿಅಧ್ಯಕ್ಷ ಕೆ.ಮಹಮ್ಮದ್, ದಾನಿ ಕೇಶವಬಿಚ್ಚಾಲೆ, ಉತ್ತಮ್‍ಹುಲಿಕೆರೆ, ಫಾರ್ಟಿಓವರ್ಸ್ ಕ್ಲಬ್ ಅಧ್ಯಕ್ಷ ಡಾ.ಚೇತನ್, ಪಿಡಿಓ ರವಿಕುಮಾರ್, ಕ್ಲಬ್ ಕಾರ್ಯದರ್ಶಿ ಕಾರ್ತಿಕ್‍ಸಾರಗೋಡು ಮತ್ತಿತರರು ಪಾಲ್ಗೊಂಡಿದ್ದರು. ಶಾಲಾಮುಖ್ಯಶಿಕ್ಷಕಿ ಬಿ.ಎನ್. ಹೇಮಲತಾ ಸ್ವಾಗತಿಸಿ, ಸಹಶಿಕ್ಷಕ ದಿನೇಶ್ ನಿರೂಪಿಸಿದರು.



