ಪ್ರಾಚೀನ ಪರಂಪರೆಯ ಯೋಗಸೂತ್ರವನ್ನು ಪತಂಜಲಿ ಮುನಿಗಳು ರಚಿಸಿದ್ದಾರೆ, ದೇಹ, ಮನಸ್ಸು ಮತ್ತು ಬುದ್ಧಿಯನ್ನು ಸುಸ್ಥಿತಿಯಲ್ಲಿಡಲು ಯೋಗ ಸಹಕಾರಿ ಎಂದು ಯೋಗ ಶಿಕ್ಷಕಿ ಶೈಲಜಾ ಬಸವರಾಜು ನುಡಿದರು.
ಚಿಕ್ಕಮಗಳೂರು ಮಾಧ್ಯಮ ಸಂಸ್ಕøತಿ ಪ್ರತಿಷ್ಠಾನ, ಶ್ರೀ ದೇವಿ ಗುರುಕುಲ ಹಾಗೂ ಶ್ರೀ ಪಾರ್ವತಿ ಮಹಿಳಾಮಂಡಳಿ ಸಂಯುಕ್ತವಾಗಿ ಸುವರ್ಣಮಾಧ್ಯಮ ಭವನದ ಚಿಕ್ಕೊಳಲೆ ಸದಾಶಿವಶಾಸ್ತ್ರಿ ಸಭಾಂಗಣದ ಆವರಣದಲ್ಲಿ ಆಯೋಜಿಸಿದ್ದ ‘ವಿಶ್ವ ಯೋಗ ದಿನ’ದಲ್ಲಿ ಯೋಗ ತರಬೇತಿ ನೀಡಿ ಗೌರವ ಸ್ವೀಕರಿಸಿ ಅವರು ಮಾತನಾಡಿದರು.
ಮಾನವನ ಬದುಕಿಗೆ ಅತ್ಯಂತ ಉಪಯುಕ್ತವಾದ ಯೋಗವನ್ನು ಜಗತ್ತಿಗೆ ವ್ಯಾಪಕವಾಗಿ ಪರಿಚಯಿಸಿ ವಿಶ್ವಾದ್ಯಂತ ಯೋಗ ದಿನಾಚರಣೆಗೆ ಪ್ರಧಾನಿ ನರೇಂದ್ರಮೋದಿ ಕಾರಣೀಭೂತರಾಗಿರುವುದು ಹೆಮ್ಮೆಯ ಸಂಗತಿ ಎಂದರು.
ಶ್ರೀ ದೇವಿ ಗುರುಕುಲದ ಸಂಸ್ಥಾಪಕ ವಿದ್ವಾನ್ ಡಾ.ದಯಾನಂದಮೂರ್ತಿಶಾಸ್ತ್ರಿ ಅಧ್ಯಕ್ಷತೆವಹಿಸಿ ಮಾತನಾಡಿ ಯೋಗ ಮನುಷ್ಯನ ಸರ್ವಾಂಗೀಣ ಅಭಿವೃದ್ಧಿಗೆ ಪೂರಕ. ಯೋಗದಿಂದ ಬಹುತೇಕ ರೋಗಗಳನ್ನು ನಿಯಂತ್ರಿಸಬಹುದು. ಪ್ರತಿನಿತ್ಯ ಯೋಗಾಭ್ಯಾಸ ದೇಹಾರೋಗ್ಯ ಸುಸ್ಥಿತಿಗೆ ಸಹಕಾರಿ ಎಂದರು.
ಮಾಧ್ಯಮ ಸಂಸ್ಕೃತಿ ಪ್ರತಿಷ್ಠಾನದ ಅಧ್ಯಕ್ಷ ಪ್ರಭುಲಿಂಗಶಾಸ್ತ್ರಿ ಪ್ರಾಸ್ತಾವಿಕವಾಗಿ ಮಾತನಾಡಿ ಜೂನ್ 21 ವರ್ಷದಲ್ಲಿ ಅತಿಹೆಚ್ಚು ಹಗಲು ಹೊಂದಿರುವ ದಿನ. ಹಗಲು ಎಂದರೆ ಬೆಳಕು. ಬೆಳಕು ಜ್ಞಾನ, ಕಲ್ಯಾಣ, ಪ್ರಗತಿಯ ಧ್ಯೋತಕ. ಇದೇ ದಿನವನ್ನು ವಿಶ್ವಾದ್ಯಂತ 171ಕ್ಕೂ ರಾಷ್ಟ್ರಗಳಲ್ಲಿ ಲಕ್ಷಾಂತರ ಮಂದಿ ಸಾಮೂಹಿಕವಾಗಿ ಯೋಗ ಆಚರಣೆಗೆ ವಿಶ್ವಸಂಸ್ಥೆ ಅನುವು ಮಾಡಿಕೊಟ್ಟಿರುವುದು ಅರ್ಥಪೂರ್ಣ. ಸನಾತನ ಪರಂಪರೆಯ ಕೊಡುಗೆಯಾದ ಯೋಗ ಧರ್ಮದ ವಿಷಯಕ್ಕಿಂತ ಆರೋಗ್ಯದ ಸಂಗತಿ ಎಂಬುದು ಅರ್ಥಮಾಡಿಕೊಳ್ಳಬೇಕು. ಯೋಗದ ಉಪಯೋಗಗಳನ್ನು ಸರಿಯಾಗಿ ಅರಿತವರು ಯೋಗವನ್ನು ಆಶ್ರಯಿಸುವುದು ಅನಿವಾರ್ಯವಾಗುತ್ತದೆ. ಯೋಗ ಬುದ್ಧಿ-ಭಾವಗಳ ವಿಕಾಸಕ್ಕೆ ಪೂರಕ. ರೋಗ ಮುಕ್ತರಾಗಲು ಯೋಗವನ್ನು ದೈನಂದಿನ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ಕೇವಲ ಆಸನ ಮುದ್ರೆಗಳಷ್ಟೆ ಯೋಗವಲ್ಲ. ನಿಜವಾದ ಯೋಗ ಅರಿತು ಅಭ್ಯಾಸ ಮಾಡುವುದರಿಂದ ಮಾನವನ ವಿಕಾಸಕ್ಕೆ ಉಪಯುಕ್ತ ಎಂದರು.

ಶ್ರೀ ಪಾರ್ವತಿ ಮಹಿಳಾ ಮಂಡಳಿಯ ಅಧ್ಯಕ್ಷೆ ಸುಮಿತ್ರಾಶಾಸ್ತ್ರಿ ಸ್ವಾಗತಿಸಿ, ಶ್ರೀದೇವಿ ಗುರುಕುಲದ ನಂದಿನಿ ನಿರೂಪಿಸಿ, ಎಸ್.ಶೈಲಾಬಸವರಾಜ್ ಯೋಗಗೀತೆ ಹಾಡಿದರು. ಎಚ್.ಮಹಾಲಿಂಗಯ್ಯ, ವಿಜಯಕುಮಾರ್, ಶಿವಣ್ಣ, ಶಿವಮೂರ್ತಿ ಗುರುಜಿ, ಸರೋಜಮ್ಮ, ಪುಷ್ಪಾಕುಮಾರಸ್ವಾಮಿ, ವಿಶಾಲಯೋಗೀಶ್, ಶಾರದಾ, ಅನ್ನಪೂರ್ಣ, ಕಮಲಾಕ್ಷಿ ನೇತೃತ್ವದಲ್ಲಿ ಸಾಮೂಹಿಕ ಯೋಗ ಪ್ರದರ್ಶನ ನಡೆಯಿತು.



