belegara

 

 

ರಾಜ್ಯದ ಅರಣ್ಯ ಪ್ರದೇಶದಲ್ಲಿ ಹಲವು ದಶಕಗಳಿಂದ ಇರುವ ಜನವಸತಿ ಪ್ರದೇಶಗಳಿಗೆ ಪರಿಹಾರಾತ್ಮಕವಾಗಿ ಪರ್ಯಾಯ ಭೂಮಿ ಪಡೆದು, ಬಡ ಜನರ ಸಂಕಷ್ಟ ಪರಿಹರಿಸಲು ಕೇಂದ್ರ ಸರ್ಕಾರ ಮತ್ತು ಸುಪ್ರೀಂಕೋರ್ಟ್ ಮೊರೆ ಹೋಗಲಾಗುವುದು ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ತಿಳಿಸಿದ್ದಾರೆ.

ಅರಣ್ಯ ಇಲಾಖೆಗೆ ಒಳಪಟ್ಟ ಮತ್ತು ಕಂದಾಯ ಇಲಾಖೆಗೆ ಸಂಬಂಧಿಸಿದಂತೆ ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ಇಂಧನ ಹಾಗೂ ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ. ಜಾರ್ಜ್, ಕಂದಾಯ ಸಚಿವ ಕೃಷ್ಣಬೈರೇಗೌಡ ಹಾಗೂ ಜನಪ್ರತಿನಿಧಿಗಳ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಸೆಕ್ಷನ್ 4 ಮತ್ತು ಪರಿಭಾವಿತ ಅರಣ್ಯಕ್ಕೆ ಸಂಬಂಧಿಸಿದಂತೆ ರಾಜ್ಯದಾದ್ಯಂತ ಸಮಸ್ಯೆ ಇದ್ದು, ಶಾಶ್ವತ ಪರಿಹಾರ ಕಲ್ಪಿಸಲು ಸರ್ಕಾರ ಕಂದಾಯ ಇಲಾಖೆ ಸಹಕಾರದೊಂದಿಗೆ ಮಾರ್ಗೋಪಾಯ ಹುಡುಕುತ್ತಿದೆ ಎಂದರು.

ಜನವಸತಿ ಪ್ರದೇಶ, ಸರ್ಕಾರಿ ಕಟ್ಟಡ, ಅಂಗನವಾಡಿ, ಖಾಸಗಿ ಪಟ್ಟಾ ಭೂಮಿಯನ್ನೂ ಡೀಮ್ಡ್ ಅರಣ್ಯದ ಪಟ್ಟಿಯಲ್ಲಿ ಸೇರಿಸಿ 2022ರಲ್ಲಿ ಎರಡನೇ ಬಾರಿ ಸುಪ್ರೀಂಕೋರ್ಟ್ ಗೆ ಪ್ರಮಾಣಪತ್ರ ಸಲ್ಲಿಸಲಾಗಿದೆ. ಈಗ ಕೊನೆಯ ಅವಕಾಶವನ್ನು ನ್ಯಾಯಾಲಯ ನೀಡಿದ್ದು, ಸಮರ್ಪಕವಾಗಿ ಜಂಟಿ ಸರ್ವೆ ನಡೆಸಿ ಪ್ರಮಾಣಪತ್ರ ಸಲ್ಲಿಸಿದರೆ ಸಮಸ್ಯೆಗೆ ಪರಿಹಾರ ದೊರಕುತ್ತದೆ. ಕಂದಾಯ ಮತ್ತು ಅರಣ್ಯ ಇಲಾಖೆಯ ಅಧಿಕಾರಿಗಳು ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕು ಎಂದರು.

ಸೆಕ್ಷನ್ 4 ಅಧಿಸೂಚನೆ ಆಗಿದ್ದರೂ ಸೆಕ್ಷನ್ 17 ಆಗದೆ ಇರುವ ಪ್ರಕರಣಗಳು ದಶಕಗಳಿಂದ ಬಾಕಿ ಉಳಿದಿದ್ದು, ವ್ಯವಸ್ಥಾಪನಾಧಿಕಾರಿ (ಎಫ್.ಎಸ್.ಓ.)ಗಳು ತ್ವರಿತವಾಗಿ ಇದನ್ನು ಇತ್ಯರ್ಥ ಮಾಡಬೇಕು. ಜನವಸತಿ, ಕೃಷಿ ಜಮೀನು ಇಲ್ಲದ ವಿಭಾಗಗಳನ್ನು ಕೂಡಲೇ ಸೆಕ್ಷನ್ 17ಕ್ಕೆ ಪರಿವರ್ತಿಸಿ ಅರಣ್ಯ ಎಂದು ಘೋಷಿಸಬೇಕು ಎಂದು ಸಲಹೆ ನೀಡಿದರು.

ರೈತ ಮತ್ತು ಬೆಳೆಗಾರ ಸಂಘಟನೆಗಳು ಸರ್ಕಾರಕ್ಕೆ ನೀಡಿರುವ ಮನವಿಯಲ್ಲಿ ; ಚಿಕ್ಕಮಗಳೂರು ಜಿಲ್ಲೆಯಲ್ಲಿ ಈಗಾಗಲೇ ಒಟ್ಟಾರೆ ಭೂಪ್ರದೇಶದ ಸುಮಾರು ಶೇ 41 ಕ್ಕೂ ಹೆಚ್ಚು ಅರಣ್ಯ ಪ್ರದೇಶವಿದ್ದು ಇದರೊಂದಿಗೆ ರೈತರಿಂದ ನಿರ್ಮಿತಗೊಂಡಿರುವ ಕೃತಕ ಅರಣ್ಯವೂ ಸಹ ಶೇ 30 ಕ್ಕೂ ಹೆಚ್ಚು ಒಟ್ಟು 70% ಅರಣ್ಯ ಭೂ ಪ್ರದೇಶ ಇರುತ್ತದೆ. ಸಂಪೂರ್ಣವಾಗಿ ಅರಣ್ಯ ಮತ್ತು ಪರಿಸರ ಕಾಳಜಿ ಇಟ್ಟುಕೊಂಡಿರುವ ಜಿಲ್ಲೆಯ ರೈತರಿಗೆ  ಅರಣ್ಯ ಇಲಾಖೆ ಮತ್ತು ಕಂದಾಯ ಇಲಾಖೆಯ ದೋರಣೆಗಳಿಂದ ರೈತರಿಗೆ ದಿನನಿತ್ಯ ಕಿರುಕುಳ ಉಂಟಾಗಿರುತ್ತದೆ.

80 ರ ದಶಕದಲ್ಲಿ ಜಿಲ್ಲೆಯ ಸಿ ಮತ್ತು ಡಿ ವರ್ಗದ ಭೂಮಿಗಳನ್ನು ಸುಮಾರು 1,40,000 ಹೆಕ್ಟೇರ್ ಪ್ರದೇಶವನ್ನು ಆರಣ್ಯ ಇಲಾಖೆಗೆ ಹಲವಾರು ನಿಬಂಧನೆಗಳ ಮೇರೆಗೆ ವರ್ಗಾಯಿಸಲಾಗಿದ್ದು ಇದೇ ರೀತಿ ಕೊಡಗಿನಲ್ಲೂ ಮತ್ತು ರಾಜ್ಯದ ಇತರೇ ಭಾಗಗಳಲ್ಲೂ ವರ್ಗಾಯಿಸಲಾಗಿದ್ದ ಸಿ ಮತ್ತು ಡಿ ವರ್ಗದ ಭೂಮಿಗಳನ್ನು 1991 ರ ಜನವರಿ 3 ರಂದು ಹೊರಡಿಸಲಾಗಿರುವ ಸರ್ಕಾರಿ ಆದೇಶದಲ್ಲಿ ಈ ಎಲ್ಲಾ ಭೂಮಿಗಳನ್ನು ಕಂದಾಯ ಇಲಾಖೆಗೆ ವಾಪಾಸ್ ಪಡೆದು ತಾಲ್ಲೂಕು ಕಚೇರಿ ಎಂ.ಆರ್. ನಲ್ಲಿ ಹಿಂಪಡೆದಿರುವ ಬಗ್ಗೆ ದಾಖಲು ಮಾಡಲಾಗಿದ್ದು, ಆದರೂ ಸಹ ಇದೇ ಭೂಮಿಗಳನ್ನು ಯಥಾವತ್ತಾಗಿ ಡೀಮ್ಡ್ ಮತ್ತು ಸೆಕ್ಷನ್ 4(1) ಎಂದು ಘೋಷಿಸಿ ಈ ಭೂಪ್ರದೇಶದಲ್ಲಿರುವ ಸುಮಾರು 1 ಲಕ್ಷಕ್ಕೂ ಹೆಚ್ಚು ಕುಟುಂಬಗಳನ್ನು ಅರಣ್ಯ ಒತ್ತುವರಿದಾರರೆಂದು ಬಿಂಬಿಸಲಾಗುತ್ತಿದೆ.

ಸರ್ಕಾರದ ಆದೇಶದ ಮೇರೆಗೆ ಈ ಭೂಮಿಗಳಲ್ಲಿ ಸಾಗುವಳಿ ಮಾಡಿಕೊಂಡು ಬರುತ್ತಿರುವ ತನ್ನ ಜೀವನ ನಿರ್ವಹಣೆಗಾಗಿ ಈ ಭೂಮಿಯನ್ನೇ ನಂಬಿರುವ ಈ ಬಡ ಕುಟುಂಬಗಳಿಗೆ ಮತ್ತು ತನ್ನ ಹುಟ್ಟಿನಿಂದಲೂ ಒಂದು ನಿವೇಶನವನ್ನೂ ಸಹ ಹೊಂದಿರದಂತಹ ಲಕ್ಷಾಂತರ ಜನ ನಿವೇಶನ ರಹಿತರು ಸಹ ನಿವೇಶನ ಪಡೆಯಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಘನ ಸರ್ಕಾರ ಈ ಸಮಸ್ಯೆಗಳ ಬಗ್ಗೆ ಸೂಕ್ತ ಪರಿಹಾರ ಒದಗಿಸಬೇಕೆಂದು ಆಗ್ರಹಿಸಿದ್ದಾರೆ.

ಸಭೆಯಲ್ಲಿ ಅರಣ್ಯ ಮತ್ತು ಕಂದಾಯ ಇಲಾಖೆಯ ಹಿರಿಯ ಅಧಿಕಾರಿಗಳು, ಚಿಕ್ಕಮಗಳೂರು ಜಿಲ್ಲೆಯ ಎಲ್ಲಾ ಶಾಸಕರುಗಳು, ಮಾಜಿ ಶಾಸಕರುಗಳು, ಕರ್ನಾಟಕ ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಹಳಸೆ ಶಿವಣ್ಣ, ಮೂಡಿಗೆರೆ ಬೆಳೆಗಾರರ ಸಂಘದ ಅಧ್ಯಕ್ಷ ಬಿ.ಆರ್. ಬಾಲಕೃಷ್ಣ, ಚಿಕ್ಕಮಗಳೂರು ಜಿಲ್ಲಾ ನಾಗರೀಕ ಮತ್ತು ರೈತ ಹೋರಾಟ ಸಮಿತಿ ಅಧ್ಯಕ್ಷ ವಿಜಯಕುಮಾರ್ ಸೇರಿದಂತೆ ವಿವಿಧ ಬೆಳೆಗಾರ ಮತ್ತು ರೈತ ಸಂಘಟನೆಗಳ ಮುಖಂಡರು, ರಾಜಕೀಯ ಪಕ್ಷಗಳ ಮುಖಂಡರು ಸಭೆಯಲ್ಲಿ ಭಾಗವಹಿಸಿ ಸಲಹೆಗಳನ್ನು ನೀಡಿದರು.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ