ರೋಟರಿ ಮಾನವೀಯತೆಯ ಪ್ರತೀಕ. ಸಮಾಜದಲ್ಲಿ ಸಕಾರಾತ್ಮಕವಾದ ಪರಿವರ್ತನೆ ತರುವುದು ಆಶಯ ಎಂದು ರೋಟರಿ 3182ಜಿಲ್ಲಾ ಮಾಜಿಗೌರ್ನರ್ ಕುಂದಾಪುರದಉದ್ಯಮಿ ಅಭಿನಂದನ್‍ಎ.ಶೆಟ್ಟಿ ಅಭಿಪ್ರಾಯಿಸಿದರು.
ಚಿಕ್ಕಮಗಳೂರು ನಗರದ ಎಂ.ಎಲ್.ವಿ.ರೋಟರಿ ಸಭಾಂಗಣದಲ್ಲಿ ಚಿಕ್ಕಮಗಳೂರು ರೋಟರಿಕ್ಲಬ್ ನಿನ್ನೆ ಸಂಜೆ ಆಯೋಜಿಸಿದ್ದ ವರ್ಣರಂಜಿತ ಸಮಾರಂಭದಲ್ಲಿ 2025-26ನೆಯ ಸಾಲಿಗೆ ಎನ್.ಪಿ.ಲಿಖಿತ್ ನೇತೃತ್ವದ ಪದಾಧಿಕಾರಿಗಳಿಗೆ ಪ್ರಮಾಣವಚನ ಬೋಧಿಸಿ ಅವರು ಮಾತನಾಡಿದರು.
ವೃತ್ತಿ ಕೌಶಲ್ಯವನ್ನು ಹೆಚ್ಚಿಸಿಕೊಂಡು ಪರಸ್ಪರ ಬಾಂಧವ್ಯ ಬೆಸೆದು ಜಾಗತಿಕ ಶಾಂತಿ-ಸೌಹಾರ್ದತೆ-ಮಾನವೀಯ ಸಮಾಜ ನಿರ್ಮಾಣಕ್ಕೆ ಪ್ರಯತ್ನಿಸುವುದೇ ಅಂತರರಾಷ್ಟ್ರೀಯ ರೋಟರಿ ಸಂಸ್ಥೆಯ ಉದ್ದೇಶ. ಸಮಾಜಮುಖಿಯಾಗಿ ಕಾರ್ಯನಿರ್ವಹಿಸಿದಾಗ ಸಂತೋಷ, ತೃಪ್ತಿ ನಮ್ಮದಾಗುತ್ತದೆ. ಮತ್ತೊಬ್ಬರ ಸಂತೋಷದಲ್ಲಿ ನಮ್ಮ ಸಂತೋಷ ಅಡಗಿದೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕು ಎಂದರು.
67ವರ್ಷಗಳ ಘನ ಇತಿಹಾಸ ಹೊಂದಿರುವ ಚಿಕ್ಕಮಗಳೂರು ರೋಟರಿಕ್ಲಬ್, ಜೀವನಸಂಧ್ಯಾ ಸೇರಿದಂತೆ ವಿವಿಧ ಯೋಜನೆಗಳ ಮೂಲಕ ಜನಮಾನಸಕ್ಕೆ ಸ್ಪಂದಿಸುತ್ತಿರುವುದರಿಂದ ಇಲ್ಲಿ ರೋಟರಿಯ ಬಗ್ಗೆ ಸಮಾಜದಲ್ಲಿ ಗೌರವ-ಅಭಿಮಾನ ಹೆಚ್ಚಾಗಿದೆ. ತಾರುಣ್ಯ ಮತ್ತು ಹಿರಿತನದ ಸಮತೋಲನ ಇಲ್ಲಿಯ ವಿಶೇಷ. ಕಷ್ಟ, ತೊಂದರೆ, ಸವಾಲು ತಾಪತ್ರಯಗಳೆ ಉತ್ತಮ ನಾಯಕತ್ವ ರೂಢಿಸಲು ಸಹಕಾರಿ ಎಂದ ಅಭಿನಂದಶೆಟ್ಟಿ, ಶುಭ್ರವಾದ ಆಕಾಶ ಮಳೆ ಸುರಿಸುವುದಿಲ್ಲ ಎಂದರು.
ಯುದ್ಧ ಕೆಲವರಿಗೆ ವ್ಯಾಪಾರವಾದರೆ, ಇನ್ನು ಕೆಲವರಿಗೆ ಧರ್ಮ, ಮತ್ತೆ ಕೆಲವರಿಗೆ ಸ್ವಭಾವವಾಗಿರುವುದು ಪ್ರಪಂಚದ ದೌರ್ಬಾಗ್ಯ. ವಿಶ್ವಸಂಸ್ಥೆಯನ್ನು ಪ್ರಾರಂಭಿಸಿದ ದೇಶ-ಸಂಸ್ಥೆಗಳೆ ಇಂದು ಯುದ್ಧದಲ್ಲಿ ತೊಡಗಿ ಪ್ರಚೋಚಿಸುತ್ತಿರುವುದನ್ನು ಕಾಣುತ್ತಿದ್ದೇವೆ. ಜಗತ್ತಿನಲ್ಲಿ ಶಾಂತಿ ನಿರ್ಮಾಣಕ್ಕೆ ಅಗತ್ಯವಾದ ನಾಯಕತ್ವದ ಕೊರತೆ ಇದೆ ಎಂದ ಅಭಿನಂದನಶೆಟ್ಟಿ, ಶಾಂತಿ ಮತ್ತು ಸೌಹಾರ್ದತೆ ಇಂದಿನ ಜಾಗತಿಕ ಅನಿವಾರ್ಯತೆ. ಇದನ್ನು ಅರಿತು ಅಂತರರಾಷ್ಟ್ರೀಯ ರೋಟರಿಸಂಸ್ಥೆ 8ನೆಯ ಶಾಂತಿ ವಿಶ್ವ ವಿದ್ಯಾನಿಲಯವನ್ನು ಭಾರತದ ಪೂನಾ ನಗರದಲ್ಲಿ ಆರಂಭಿಸುತ್ತಿದೆ. ಇದು ಸೇವೆ ಮತ್ತು ಶಾಂತಿಗೆ ಮತ್ತಷ್ಟು ಪ್ರೇರಣಾದಾಯಕ ಎಂದರು.
ಯುದ್ಧ ಇಲ್ಲ ಎಂದರೆ ಶಾಂತಿ ಇದೆ ಎಂದರ್ಥವಲ್ಲ. ಪರಸ್ಪರ ಸೌಹಾರ್ದತೆ, ಭ್ರಾತೃತ್ವ, ಕರುಣೆ, ಪ್ರೀತಿ, ಮಾನವೀಯತೆ, ಹಸಿವು-ಬಡತನ ಮುಕ್ತತೆ, ಭಾವೈಕ್ಯತೆಯ ಸಮಾಜ ನಿರ್ಮಾಣವಾದರೆ ಅದು ಶಾಂತಿ. ವಿಶ್ವಶಾಂತಿಗೆ ಪರ್ಯಾಯವಿಲ್ಲ. ಯುದ್ಧದಲ್ಲಿ ಎಲ್ಲರಿಗೂ ನಷ್ಟವೇ ಖಚಿತ. ಎರಡನೆಯ ಮಹಾಯುದ್ಧದಲ್ಲಿ ಸರ್ವನಾಶವಾದ ಜಪಾನ್ ಕೆಲವು ದಶಕಗಳಲ್ಲಿ ಜಗತ್ತಿನ ಸೂಪರಪವರ್ ದೇಶವಾಗಿ ಹೊಮ್ಮಿರುವುದಕ್ಕೆ ಅಲ್ಲಿಯ ದೂರದೃಷ್ಟಿಯ ನಾಯಕತ್ವ ಜೊತೆಗೆ ಪ್ರಜೆಗಳು ದಿನದ 18ಗಂಟೆ ದುಡಿಮೆ ಮಾಡಿದ್ದೇ ಕಾರಣ ಎಂದು ಅಭಿನಂದನಶೆಟ್ಟಿ ನುಡಿದರು.
ನೂತನ ಅಧ್ಯಕ್ಷ ಎನ್.ಪಿ.ಲಿಖಿತ್ ಮಾತನಾಡಿ ಕಿರಿಯನಲ್ಲಿ ಹಿರಿಯರೆಲ್ಲ ವಿಶ್ವಾಸ ಇರಿಸಿ ಗುರುತರವಾದ ಹೊಣೆಗಾರಿಕೆಯನ್ನು ವಹಿಸಿರುವುದು ಸಂತೋಷ ತಂದಿದೆ. ಸಂಸ್ಥೆಯ ಉನ್ನತ ಆದರ್ಶಗಳನ್ನು ಬೆಳೆಸುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಶ್ರಮಿಸಿ ಸದಸ್ಯರೆಲ್ಲರ ಸಹಕಾರ ಪಡೆದು ಒಂದುವರ್ಷಗಳ ಕಾಲ ಚಿಕ್ಕಮಗಳೂರು ರೋಟರಿ ಸಂಸ್ಥೆಯನ್ನು ಮುನ್ನಡೆಸುವುದಾಗಿ ನುಡಿದರು.
ನಿರ್ಗಮಿತ ಅಧ್ಯಕ್ಷ ಎಂ.ಎಲ್.ಸುಜಿತ್ ಮಾತನಾಡಿ ವರ್ಷಪೂರ್ತಿ ವಿವಿಧ ಯೋಜನೆಗಳ ಮೂಲಕ ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸಲು ಸದಸ್ಯರೆಲ್ಲರ ಬೆಂಬಲವೇ ಕಾರಣ. ಸಂತೃಪ್ತಿಯಿಂದ ಕಾರ್ಯನಿರ್ವಹಿಸಿದ್ದು ಮುಂದಿನ ತಂಡಕ್ಕೂ ಸಂಪೂರ್ಣ ಬೆಂಬಲ-ಸಹಕಾರ ನೀಡುವುದಾಗಿ ಹೇಳಿದರು.
ನೂತನ ಸದಸ್ಯರನ್ನು ಉಪಾಧ್ಯಕ್ಷ ಚಿದಾನಂದ ಪರಿಚಯಿಸಿದ್ದು, ಅವರಿಗೆ ಮಾಜಿಅಧ್ಯಕ್ಷ ಎನ್.ಶ್ರೀವಾತ್ಸವ್ ಪ್ರಮಾಣವಚನ ಬೋಧಿಸಿದರು. ವರ್ಷದ ಕಾರ್ಯಚಟುವಟಿಕೆಗಳನ್ನು ಪವರ್‍ಪಾಯಿಂಟ್ ಮೂಲಕ ಲಿಖಿತ್ ಮಂಡಿಸಿದರು. ಮಾಜಿಅಧ್ಯಕ್ಷ ಕೆ.ಎಸ್.ರಮೇಶ್ ನಿರ್ಗಮಿತ ನಾಯಕರಿಗೆ ಬೆಳ್ಳಿತಟ್ಟೆ ನೀಡಿ ಅಭಿನಂದಿಸಿದರು. ಅಂತರರಾಷ್ಟ್ರೀಯ ರೋಟರಿ ನಿಧಿಯ ಪ್ರಾಮುಖ್ಯತೆಯನ್ನು ಎಂ.ಎನ್.ರಾಕೇಶ್ ವಿವರಿಸಿದರು.
ಸಮಾಜದಲ್ಲಿ ಸಾಧನೆ ಮಾಡಿದ ಡಿ.ಎಚ್.ನಟರಾಜ್, ಎಂ.ಎಸ್.ಜಗದೀಶ್ವರ ಮತ್ತು ಉಪ್ಪಳ್ಳಿ ನಂದಕುಮಾರರನ್ನು ಡಾ.ಗೌತಮ್ ಅಭಿನಂದಿಸಿದರು. ಜೀವನಸಂಧ್ಯಾ ವೃದ್ಧಾಶ್ರಮದ ದಾನಿಗಳನ್ನು ಟ್ರಸ್ಟ್ ಅಧ್ಯಕ್ಷ ಎನ್.ಶ್ರೀಕಾಂತಶೆಟ್ಟಿ ಗೌರವಿಸಿದರು. ಅಭಿನಂದಶೆಟ್ಟಿ ಅವರನ್ನು ಮಾಜಿಸಹಾಯಕ ಗೌರ್ನರ್‍ಗಳಾದ ಕೆ.ಬಿ.ಅನಂತೇಗೌಡ ಮತ್ತು ಎ.ಎಂ.ನಂಜುಂಡಸ್ವಾಮಿ ಸನ್ಮಾನಿಸಿದರು.
ನೂತನ ಅಧ್ಯಕ್ಷ-ಕಾರ್ಯದರ್ಶಿಗಳನ್ನು ಶ್ರೇಯಸ್ ಮತ್ತು ಡಿ.ಎಸ್.ಪವನ್ ಪರಿಚಯಿಸಿದರೆ, ಮುಖ್ಯಅತಿಥಿಗಳನ್ನು ಶ್ರೀವಾತ್ಸವ್, ಕೆ.ಎಸ್.ಆದರ್ಶ ಮತ್ತು ಟಿ.ಡಿ.ತಿಮ್ಮಯ್ಯ ಪರಿಚಯಿಸಿದರು. ಶೇ.100 ಹಾಜರಾತಿ ಹೊಂದಿದ್ದ ಎಂ.ಸಿ.ಶೇಖರ್ ಸೇರಿದಂತೆ ಸದಸ್ಯರನ್ನು ವಲಯ ದಂಡನಾಯಕ ಆರ್.ನಾಗೇಂದ್ರ ಗೌರವಿಸಿದರು. ಜಿಲ್ಲಾ ಮತ್ತು ವಲಯ ತಂಡದಲ್ಲಿ ಸ್ಥಾನಪಡೆದ ಸದಸ್ಯರನ್ನು ಪಣೀಂದ್ರನಾಡಿಗ್ ಗುರುತಿಸಿದರು.
ಎಚ್.ಪಿ.ದಿನಕರರಾವ್ ಪ್ರಾರ್ಥಿಸಿ ಎಂ.ಎಲ್.ಸುಜಿತ್ ಸ್ವಾಗತಿಸಿ, ನೂತನಕಾರ್ಯದರ್ಶಿ ಹರ್ಷಿತ್‍ವಸಿಷ್ಠ ವಂದಿಸಿದರು. ನೋಟ್‍ಪುಸ್ತಕಗಳನ್ನು ಸರ್ಕಾರಿಶಾಲೆಗಳಿಗೆ ಸಾಂಕೇತಿಕವಾಗಿ ವಿತರಿಸಲಾಯಿತು. ಎಸ್‍ಎಸ್‍ಎಲ್‍ಸಿ ಯಲ್ಲಿ ಹೆಚ್ಚು ಅಂಕಪಡೆದ ವಿದ್ಯಾರ್ಥಿಗಳನ್ನು ಗೌರವಿಸಿ, ಸಹಾಯಕ ಗೌರ್ನರ್ ಪ್ರವೀಣ್‍ನಾಹರ್ ಮಾತನಾಡಿದರು.
ವರದಿ : ಪ್ರಭುಲಿಂಗಶಾಸ್ತ್ರಿ



