ಡಿ.ಎಲ್. ಅಶೋಕ್
ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಾಡಾನೆ, ಕಾಡು ಕೋಣ ಮತ್ತಿತರೆ ಕಾಡುಪ್ರಾಣಿಗಳ ಹಾವಳಿಯಿಂದ ರೈತರು ತಮ್ಮ ಜಮೀನನ್ನು ಪಾಳುಬಿಡುವಂತಾಗಿದೆ. ಕೂಲಿ ಕಾರ್ಮಿಕರು ಕೆಲಸಕ್ಕೆ ಹಾಗೂ ವಿದ್ಯಾರ್ಥಿಗಳು ಶಾಲಾ ಕಾಲೇಜುಗಳಿಗೆ ತೆರಳಲು ಭಯಪಡುತ್ತಿದ್ದಾರೆ. ಕಾಡುಪ್ರಾಣಿಗಳ ಹಾವಳಿಗೆ ಸರ್ಕಾರ ಶಾಶ್ವತ ಪರಿಹಾರ ಕಲ್ಪಿಸಬೇಕೆಂದು ಕೃಷಿಕ ಸಮಾಜದ ಜಿಲ್ಲಾ ಅಧ್ಯಕ್ಷ ಡಿ.ಎಲ್.ಅಶೋಕ್‌ಕುಮಾರ್ ಒತ್ತಾಯಿಸಿದ್ದಾರೆ.
ಈ ಹಿಂದೆ ಮೂಡಿಗೆರೆ ತಾಲ್ಲೂಕಿನ ತತ್ಕೊಳ, ಕುಂದೂರು, ಸಾರಗೋಡು, ಹೊಸ್ಕೆರೆ, ಸತ್ತಿಗನಹಳ್ಳಿ ಭೈರಾಪುರ ಭಾಗದಲ್ಲಿ ಕಾಡಾನೆಗಳ ಕಾಟ ಹೆಚ್ಚಾಗಿತ್ತು. ಇತ್ತೀಚೆಗೆ ಅರಣ್ಯ ಪ್ರದೇಶದಿಂದ ಜನವಸತಿ ಪ್ರದೇಶಕ್ಕೆ ಹಾಗೂ ಕಾಫಿ ತೋಟ, ಭತ್ತದ ಗದ್ದೆಗಳಿಗೆ ಕಾಡಾನೆಗಳು ಲಗ್ಗೆಯಿಟ್ಟು ಬೆಳೆ, ಸಾರ್ವಜನಿಕ ಆಸ್ತಿಪಾಸ್ತಿಗಳು ನಾಶಮಾಡಿ ಅನೇಕ ನರಬಲಿಯನ್ನೂ ತೆಗೆದುಕೊಂಡಿದೆ. ಕಾಡಾನೆಗಳು ಈಗ ನೆರೆಯ ಬೇಲೂರು ಮತ್ತು ಸಕಲೇಶಪುರ ಭಾಗದಿಂದ ನಮ್ಮ ಜಿಲ್ಲೆಗೆ ಲಗ್ಗೆಯಿಡುತ್ತಿದ್ದು ರೈತರು ಜಮೀನಿನಲ್ಲಿ ಬೇಸಾಯ ಮಾಡಲು ಸಾಧ್ಯವಿಲ್ಲದಂತಾಗಿದೆ. ಕಳೆದ ವಾರ ಬೈದುವಳ್ಳಿ ಗ್ರಾಮದಲ್ಲಿ ಕಾಡಾನೆಯೊಂದು ಕೂಲಿ ಕಾರ್ಮಿಕ ರೊಬ್ಬರನ್ನು ಸೊಂಡಿಲಿನಿಂದ ಎತ್ತಿ ದೂರಕ್ಕೆ ಎಸೆದಿದ್ದು ಅವರು ಅಲ್ಲಿಂದ ತಪ್ಪಿಸಿಕೊಂಡು ಓಡಿದ್ದರಿಂದ ಪ್ರಾಣ ಉಳಿಸಿಕೊಂಡಂತಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಿದರು.
ಮೂಡಿಗೆರೆ ತಾಲೂಕಿನ ದುರ್ಗದಹಳ್ಳಿ ಗ್ರಾಮದಲ್ಲಿ ಇತ್ತೀಚೆಗೆ ಕಾಫಿ ತೋಟದಲ್ಲಿ ಕೆಲಸ ಮಡುತ್ತಿದ್ದ ಕೃಷಿಕ ಡಿ.ವಿ.ರಮೇಶ್‌ಗೌಡ ಎಂಬುವವರ ಮೇಲೆ ಕಾಡುಕೋಣ ದಾಳಿ ನಡೆಸಿ ಕೊಂದುಹಾಕಿದೆ. ಆರು ತಿಂಗಳ ಹಿಂದೆ ಹಳೇಕೋಟೆ ಗ್ರಾಮದಲ್ಲಿ ಕೂಲಿಮಾಡುತ್ತಿದ್ದ ಮಹಿಳೆಯೊಬ್ಬರನ್ನು ಕಾಡು ಕೋಣ ಕೊಂದು ಹಾಕಿದೆ. ಮಲೆನಾಡಿನಲ್ಲಿ ಕಾಡಾನೆ ಮತ್ತು ಕಾಡುಕೋಣಗಳ ಹಾವಳಿ ಮಿತಿಮೀರಿದೆ. ಇದಲ್ಲದೆ ದೂರದ ಊರುಗಳಿಂದ ಮಂಗಗಳನ್ನು ಹಿಡಿದು ಇಲ್ಲಿಗೆ ತಂದು ಬಿಡುತ್ತಿರುವುದರಿಂದ ಈ ಭಾಗಗಳಲ್ಲಿ ಮಂಗಗಳ ಕಾಟ ಹೆಚ್ಚಾಗಿದ್ದು, ಇವುಗಳಿಂದ ಬೆಳೆ ನಾಶವಾಗುತ್ತಿದ್ದು ರೈತರಿಗೆ ಬೆಳೆ ರಕ್ಷಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಇದು ಹೀಗೆಯೇ ಮುಂದುವರಿದಲ್ಲಿ ಮಲೆನಾಡಿನ ರೈತರು ತೋಟ ಗದ್ದೆಗಳನ್ನು ಪಾಳುಬಿಟ್ಟು ಪಟ್ಟಣದತ್ತ ಮುಖಮಾಡಲಿದ್ದಾರೆ, ಹಾಗಾದಾಗ ರೈತರು ಬೆಳೆ ಬೆಳೆಯದೆ ದೇಶದ ಆರ್ಥಿಕ ಪರಿಸ್ಥಿತಿ ಅಲ್ಲೋಲ ಕಲ್ಲೋಲವಾಗಲಿದೆ ಎಂದು ಎಚ್ಚರಿಸಿದರು.
ಕಾಡಾನೆ, ಕಾಡುಕೋಣ ಮತ್ತಿತರೆ ಕಾಡುಪ್ರಾಣಿಗಳ ಉಪಟಳ ಹೆಚ್ಚಾಗುತ್ತಿದ್ದರೂ ಅರಣ್ಯ ಇಲಾಖೆ ಆ ಬಗ್ಗೆ ತಲೆಕೆಡಿಸಿಕೊಂಡಂತಿಲ್ಲ. ವನ್ಯ ಮೃಗಗಳ ದಾಳಿಯಿಂದ ಪ್ರಾಣ ಹಾನಿಯಾದಾಗ ಅಥವಾ ಬೆಳೆ ಹಾನಿಯಾದಾಗ ಮಾತ್ರ ಅರಣ್ಯ ಇಲಾಖೆಯಿಂದ ಒಂದಷ್ಟು ಪರಿಹಾರ ನೀಡಿ ಕೈ ತೊಳೆದುಕೊಳ್ಳುತ್ತಾರೆ. ಕಾಡುಪ್ರಾಣಿಗಳ ಹಾವಳಿ ತಡೆಗಟ್ಟಲು ಅರಣ್ಯ ಇಲಾಖೆ ಕೂಡಲೇ ಶಾಶ್ವತ ಪರಿಹಾರ ಕಲ್ಪಿಸಲು ಮುಂದಾಗಬೇಕೆಂದು ಒತ್ತಾಯಿಸಿದ್ದಾರೆ.



