ಬಿಜೆಪಿ ಪಕ್ಷದ ಸಂಸದ ತೇಜಸ್ವಿ ಸೂರ್ಯ ಅವರು ಟ್ರಂಪ್ ಅವರನ್ನು ಅನಧಿಕೃತವಾಗಿ ಭೇಟಿಯಾಗಲು ಹೋಗಿ ನಗೆಪಾಟಲಿಗೀಡಾಗಿರುವುದಲ್ಲದೇ, ದೇಶದ ಸಂಸದರಿಗೆ ಮಾಡಿದ ಅಪಮಾನವಾಗಿದೆ. ಅಮೇರಿಕದಂತಹ ದೇಶದಲ್ಲಿ ಅವಿವೇಕಿಯಂತೆ ಶಿಷ್ಟಾಚಾರ ಉಲ್ಲಂಘಿಸಿ ರಾಜ್ಯದ ಮಾನ ಮರ್ಯಾದೆಯನ್ನು ಹರಾಜು ಹಾಕಿರುವುದು ನಾಡಿನ ಜನತೆಗೆ ಮಾಡಿದ ಅವಮಾನವಾಗಿದೆ. ಅವರು ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ದೇಶದ ಜನತೆಯ ಕ್ಷಮೆಯಾಚನೆ ಮಾಡಬೇಕು ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಎಂ.ಎಸ್.ಅನಂತ್ ಒತ್ತಾಯಿಸಿದ್ದಾರೆ.
ಈ ಸಂಬಂದ ಪತ್ರಿಕಾ ಪ್ರಕಟನೆ ನೀಡಿರುವ ಅವರು, ರಾಜ್ಯದ ಸಂಸದರಾಗಿರುವ ತೇಜಸ್ವಿ ಸೂರ್ಯ ಓರ್ವ ಎಳಸು ವ್ಯಕ್ತಿತ್ವದ ವ್ಯಕ್ತಿ ಎಂಬುದು ಈಗಾಗಲೇ ಸಾಭೀತಾಗಿದೆ. ತಮ್ಮ ನಡವಳಿಕೆ ಕಾರಣಕ್ಕೆ ಅವರು ಹಲವಾರು ಬಾರಿ ರಾಜ್ಯದ ಜನರಿಂದ ಛೀಮಾರಿ ಹಾಕಿಸಿಕೊಂಡಿದ್ದಾರೆ. ಕೇವಲ ಹಿಂದುತ್ವದ ಅಮಲಿನ ಭಾಷಣ ಮಾಡಿ 2ನೇ ಬಾರಿ ಸಂಸದನಾಗಿ ಆಯ್ಕೆಯಾಗಿರುವ ತೇಜಸ್ವಿ ಸೂರ್ಯ ಅವರಿಗೆ ವಯಸ್ಸಿಗೆ ತಕ್ಕಂತೆ ಬುದ್ಧಿ ಬೆಳೆಯದಿರುವುದು ವಿಪರ್ಯಾಸ.
ದೇಶದ ಸಂಸದರ ನಿಯೋಗ ಅಮೇರಿಕಾ ದೇಶಕ್ಕೆ ತೆರಳಿದ್ದ ವೇಳೆ ಆ ದೇಶದ ಅಧ್ಯಕ್ಷ ಟ್ರಂಪ್ ಅವರನ್ನು ಅನಧಿಕೃತವಾಗಿ ಭೇಟಿಯಾಗಲು ಹೋಗಿ ನಗೆಪಾಟಲಿಗೀಡಾಗಿದ್ದಾರೆ. ಈ ಮೂಲಕ ಅವರು ದೇಶದ ಸಂಸದರು ಮತ್ತು ರಾಜ್ಯದ ಜನರಿಗೆ ಅವಮಾನ ಮಾಡಿದ್ದಾರೆ ಎಂದು ಟೀಕಿಸಿದ್ದಾರೆ.
ಅಮೇರಿಕಾ ದೇಶದ ಅಧ್ಯಕ್ಷ ತಮ್ಮದೇಯಾದ ಸ್ಥಾನಮಾನ ಹೊಂದಿದ್ದಾರೆ, ಅವರು ವಿಶ್ವದ ಪ್ರಭಾವಿ ಸ್ಥಾನದಲ್ಲಿದ್ದಾರೆ. ಅವರನ್ನು ಭೇಟಿ ಮಾಡುವುದು, ಮಾತನಾಡಿಸುವುದು ನಮ್ಮ ದೇಶದ ಪ್ರಧಾನಿಗೂ ಅಮೇರಿಕಾ ದೇಶದ ಪ್ರಧಾನಿಯನ್ನು ಭೇಟಿಯಾಗಲು ನಿರ್ದಿಷ್ಟ ಕಾನೂನು, ಶಿಷ್ಟಾಚಾರಗಳಿವೆ. ಅಮೇರಿಕಾ ದೇಶಕ್ಕೆ ಹೋದ ನಿಯೋಗದಲ್ಲಿ ಸಂಸದ ತೇಜಸ್ವಿ ಸೂರ್ಯನಿಗೆ ಸ್ಥಾನ ಸಿಕ್ಕಿರುವುದೇ ದೊಡ್ಡ ವಿಚಾರ, ಅಲ್ಲಿಗೆ ಹೋದ ನಿಯೋಗದವರ ಪೈಕಿ ಓರ್ವರಿಗೆ ಅಮೇರಿಕಾ ಅಧ್ಯಕ್ಷ ಟ್ರಂಪ್ ಅವರನ್ನು ಭೇಟಿಯಾಗಲು ಅವಕಾಶ ಸಿಕ್ಕಿದೆ, ಇದರಿಂದ ಹತಾಶರಾದ ತೇಜಸ್ವಿ ಸೂರ್ಯ ಶಿಷ್ಟಾಚಾರ ಉಲ್ಲಂಘಿಸಿ ಅಮೇರಿಕಾ ಅಧ್ಯಕ್ಷರನ್ನು ಭೇಟಿಯಾಗಲು ಅನಧೀಕೃತವಾಗಿ ಪ್ರಯತ್ನಿಸಿದ್ದಾರೆ. ಇದು ಅವರ ಎಳಸು ವ್ಯಕ್ತಿತ್ವಕ್ಕೆ ಹಿಡಿದ ಕನ್ನಡಿಯಾಗಿದೆ ಎಂದು ಅವರು ಟೀಕಿಸಿದ್ದಾರೆ.
ಓರ್ವ ಸಂಸದ ಬೇರೆ ದೇಶಕ್ಕೆ ಹೋದ ಸಂದರ್ಭದಲ್ಲಿ ಕನಿಷ್ಠ ಜ್ಞಾನವನ್ನಾದರೂ ಹೊಂದಿರಬೇಕು, ಅಮೇರಿಕಾ ದೇಶದ ಅಧ್ಯಕ್ಷರನ್ನು ಭೇಟಿಯಾಗುವ ಸಂದರ್ಭದಲ್ಲಿ ಪಾಲಿಸಬೇಕಾದ ಶಿಷ್ಟಾಚಾರದ ಬಗ್ಗೆ ಕಿಂಚಿತ್ ಪರಿಜ್ಞಾನ ಇಲ್ಲದ ತೇಜಸ್ವಿ ಸೂರ್ಯ ಅವರನ್ನು ಬಿಜೆಪಿ ನಾಯಕರು ಪಕ್ಷದಿಂದ ಉಚ್ಚಾಟನೆ ಮಾಡಿ ತಮ್ಮ ನೈತಿಕತೆಯನ್ನು ಉಳಿಸಿಕೊಳ್ಳಬೇಕು, ತನ್ನ ಘನ ಕೃತ್ಯದಿಂದ ಪ್ರಧಾನಿ ಮೋದಿ ಅವರಿಂದಲೂ ಉಗಿಸಿಕೊಂಡಿರುವ ತೇಜಸ್ವಿ ಸೂರ್ಯ ಅವರಿಗೆ ಮಾನ ಮರ್ಯಾದೆ ಇದ್ದಲ್ಲಿ ತಮ್ಮ ಸ್ಥಾನಕ್ಕೆ ಕೂಡಲೇ ರಾಜೀನಾಮೆ ನೀಡಿ ದೇಶಕ್ಕೆ ಮಾಡಿರುವ ಅಪಮಾನ ಕೃತ್ಯಕ್ಕಾಗಿ ದೇಶ ಹಾಗೂ ರಾಜ್ಯದ ಜನರ ಕ್ಷಮೆಯಾಚನೆ ಮಾಡಬೇಕು ಎಂದು ಅವರು ಆಗ್ರಹಿಸಿದ್ದಾರೆ.



