kagga new

 

 

ನಿರೂಪಣೆ :

ಡಾ. ಸುಧಾ ಹೆಚ್.ಎಸ್
ಸಂಸ್ಕೃತ ಉಪನ್ಯಾಸಕರು,
ಮೈಸೂರು.
ಮೊ. 9448233119

 

“ಆಸೆನೇ ಈ ಮನುಷ್ಯನೆಲ್ಲಾ ದುಃಖದ ಕತೆ ಮೂಲ;
ಹಾಸಿಗೆಯಿದ್ದಷ್ಟು ಕಾಲ್ಚಾಚಬೇಕೋ ಮನಷ್ಯಾ ನಿನ್ನೀ ಕಾಲ”
– ಅಂತ ಒಂದು ಉಪದೇಶದ ಗೀತೆಯನ್ನ ನಮ್ಮಜ್ಜಿ ಚಿಕ್ಕಂದಿನಲ್ಲಿ ಹೇಳಿಕೊಟ್ಟಿದ್ದರು. ಅದು ಆಗ ಅರ್ಥವಾಗದೇ ಬರೀ ಹಾಡಾಗಿತ್ತು. ಆದರೆ ಈಗ ಅಂತರಂಗಕ್ಕೆ ಇಳಿದಾಗ ಅಂದಿನಿಂದ ಇಂದಿನವರೆಗೂ ಈ ಆಸೆ ಅನ್ನೋದರ ಅಂತ್ಯ ದುಃಖವೇ ಅನ್ನೋದು ಖಾತರಿಯಾಗುತ್ತದೆ.

ಹಿಂದಿನ ನಮ್ಮ ಎಲ್ಲ ಪುರಾಣದ ಕಥೆಗಳಾಗಿರಬಹುದು, ರಾಜ-ಮಹಾರಾಜರುಗಳ ಕಥೆಯಾಗಿರಬಹುದು ಎಲ್ಲವನ್ನು ಕೇಳುತ್ತಾ ಹೋದರೆ ಈ ‘ಆಸೆ’ ಯಿಂದ ಏನೆಲ್ಲ ಅನಾಹುತ ಆಗಿದೆಯಲ್ಲ ಅಂತ ಯಾರಿಗಾದರೂ ಅನ್ನಿಸದೇ ಇರದು. ಈ ಒಂದು ಪುಟ್ಟ ಪದ ತನ್ನೊಳಗೆ ಅದೆಂತಹ ಸೂಜಿಗಲ್ಲಿನ ಆಕರ್ಷಣೆ ಇಟ್ಟುಕೊಂಡು ಮನುಜರನ್ನ ಕುಣಿಸುತ್ತಿದೆಯಲ್ಲ, ಅಲ್ಲದೆ ಇದನ್ನು ಅದುಮಿ ಬದುಕ ಹೊರಡುವುದು ಅಂದರೆ ಅದೇನು ಸಾಮಾನ್ಯವೇ…? ಅಲ್ಲವೇ ಅಲ್ಲ; ಅದಕ್ಕಾಗಿ ಮನುಷÀ್ಯ ಎಷ್ಟು ಕಷ್ಟ ಪಡಬೇಕು, ಈ ಲೌಕಿಕದ ಚಿಂತೆಯನ್ನು ಮೊದಲು ಬಿಡಬೇಕಾಗುತ್ತದೆ. ಆದರೆ ಅದು ಅಷ್ಟು ಸುಲಭವೇ? ಹುಟ್ಟಿನಿಂದಲೇ ಈ ಜಗತ್ತಿಗೆ ಅಂಟಿಕೊಂಡ ಬದುಕು ನಮ್ಮದು, ಹುಟ್ಟಿ ಕಣ್ಣು ಬಿಡುವುದರೊಳಗೆ ಹಾಲಿಗಾಗಿ ಪರಿತಪಿಸಿ ಅಳುವುದನ್ನು ಕೂಸಿಗೆ ಯಾರು ಕಲಿಸಬೇಕಾಗಿಲ್ಲ. ಅಲ್ಲಿಂದ ನಿಧಾನಗತಿಯಲ್ಲಿ ಚಿಗುರೊಡೆದು ಬರುಬರುತ್ತಾ ಹೆಮ್ಮರವಾಗುವ ಈ ಆಸೆ ಒಂದೊಮ್ಮೆ ‘ದುರಾಸೆ’ ಯಾಗಿ ಬದಲಾಗಿ ನಮ್ಮಿಂದ ಎಂತೆಂಥಾ ಹೀನಾಯ ಕೆಲಸ ಬೇಕಾದರೂ ಮಾಡಿಸಬಲ್ಲ ತಾಕತ್ತು ಹೊಂದಿದೆ ಅಂದರೆ ಅದರ ಅಗಲ-ಆಳ ಎಷ್ಟಿರಬಹುದು ನೋಡಿ, ಊಹೆಗೂ ನಿಲುಕದು.

ಇಂತಹ ಆಸೆ ಎಲ್ಲ ಜೀವಿಗಳಲ್ಲಿಯೂ ಇದೆ, ಇದರಲ್ಲಿ ಪ್ರಾಣಿ ಪಕ್ಷಿಗಳು ಅಲ್ಪ ತೃಪ್ತ ಜೀವಿಗಳು. ಆದರೆ ಈ ಮನುಷನದ್ಯು ಮಾತ್ರ ಮತ್ತೂ ಮತ್ತೂ ಬೇಕು ಎನ್ನುವ ಹಪಾಹಪಿ. ಮನುಜನ ಜೀವಮಾನವೆಲ್ಲ ಅದು ಇದು ಎಂದು ಹುಡುಕಿಕೊಂಡು ಅಲೆಯುವುದೇ ಆಗುತ್ತದೆ. ಇದು ಕ್ಷಣಕ್ಕೊಂದರಂತೆ ಬದಲಾಗುತ್ತಾ ಹೆಚ್ಚುತ್ತಾ ಹೋಗುತ್ತಲೇ ಇರುತ್ತದೆ. ಈ ಮನುಜ ಜೀವಿ ತನ್ನ ಕೊನೇ ಘಳಿಗೆಯವರೆಗೂ ಈ ಆಸೆಗಳ ಸುಳಿಯಲ್ಲಿ ಸಿಲುಕಿ ಒದ್ದಾಡುತ್ತಲೇ ಇರುತ್ತಾನೆ; ಅದಕ್ಕೆ ನೋಡಿ ಪಶು-ಪಕ್ಷಿಗಳಿಗೆ ಇರುವಷ್ಟು ಸಂತೋಷ-ಸಂತೃಪ್ತಿ ಮನುಜ ಜೀವಿಗೆ ಇಲ್ಲ.

ಈ ರೀತಿಯಾದ ಆಸೆಗಳ ಬಗ್ಗೆ ನಮ್ಮ ಮಾನ್ಯ ಡಿ.ವಿ.ಜಿ.ಯವರು ಹೇಗೆ ಮನುಜ ಈ ಪ್ರಾಣಿ ಪಕ್ಷಿಗಿಂತ ಭಿನ್ನ ಎಂಬುದನ್ನು ಹೇಳುತ್ತಾರೆ.

ದನ ಸಿಂಗ ಹುಲಿ ಹಕ್ಕಿ ಹಾವು ಮೀನ್ ಗಳಿಗೆಲ್ಲ |
ಇನಿಸುಣಿಸು, ಬೆದೆ, ಬೆದರು – ಅಷ್ಟೇ ಜೀವಿತವು ||
ಮನುಜನೆಂತನಿತರಿಂ ತೃಪ್ತಿ ಪಡೆವನವಂಗೆ |
ಕ್ಷಣ ಕ್ಷಣವು ಹೊಸಹಸಿವು – ಮಂಕುತಿಮ್ಮ ||

ಪ್ರಾಣಿಗಳಾದ ದನ, ಸಿಂಹ, ಹುಲಿ, ಹಕ್ಕಿ, ಹಾವು, ಮೀನುಗಳಂತಹ ಪ್ರಾಣಿಗಳು ಮತ್ತು ಜಲಚರಗಳು – ಇವುಗಳಿಗೆ ತಿನ್ನಲು ಸ್ವಲ್ಪ ಆಹಾರ, ಸಂಗಾತಿಯ ಸಹವಾಸ (ಬೆದೆ) ಜೀವದ ಬೆದರಿಕೆ ಇಷ್ಟೇ ಇವುಗಳ ಜೀವನ. ಆದರೆ ಮನುಷ್ಯ ಹೀಗೆ ಇಷ್ಟ ರಿಂದಲೇ ತೃಪ್ತಿ ಪಡುತ್ತಾನೆಯೇ… ಇಲ್ಲ, ಅವನಿಗೆ ನಿಮಿಷ ಕ್ಕೊಂದೊಂದು ಹೊಸ ಹೊಸ ಆಸೆಗಳ ಹಸಿವು ಹುಟ್ಟುತ್ತಲೇ ಇರುತ್ತದೆ.
ಪ್ರಾಣಿಗಳು ಅವತ್ತಿಂದು ಅವತ್ತಿಗೆ ಸಾಕು ಎಂಬ ಭಾವದಿಂದ ಬದುಕು ಸಾಗಿಸುತ್ತವೆ, ಕೂಡಿಡಬೇಕು, ನಾಳೆ ಮಕ್ಕಳು ಮರಿಗೆ ಎಂಬ ಆಲೋಚನೆಯಾಗಲಿ ಅಥವಾ ತನಗೇ ನಾಳೆಗೆ ಇಟ್ಟುಕೊಳ್ಳೋಣ ಎನ್ನುವ ಯಾವುದೇ ಆಸೆಗಳಿಲ್ಲ, ಆದ್ದರಿಂದಲೇ ಅದು ಅಲ್ಪ ತೃಪ್ತಿ ಜೀವಿ. ಪಕ್ಷಿಗಳಾದರೋ ನಾಳೆ ಮಟ್ಟಿಗೆ ಅಂತ ಸ್ವಲ್ಪ ಕೂಡಿಹಾಕಿಕೊಂಡಿರುತ್ತವೆ ಯಾಕೆಂದರೆ ಮಳೆಗಾಲದಲ್ಲಿ ಪಕ್ಷಿಗಳಿಗೆ ಆಹಾರ ಸಿಗುವುದು ಸ್ವಲ್ಪ ಕಡಿಮೆ. ಹಾಗಾಗಿ ಅವು ಆಹಾರ ಕೂಡಿಟ್ಟುಕೊಳ್ಳುತ್ತವೆ. ತಮಗೆ ಹೇಗೆ ಅಗತ್ಯವೋ ಹಾಗೆ ಹೆಣ್ಣು-ಗಂಡುಗಳ ಮಿಲನ. ಅದೂ ಸಹ ಅತಿಯೇನಿಲ್ಲ ಆದರೆ ಜೀವದ ಬೆದರಿಕೆ ಮಾತ್ರ ಇವುಗಳಿಗೆ ಇರುತ್ತದೆ. ಯಾಕೆಂದರೆ ಒಂದನ್ನು ಕೊಂದು ಇನ್ನೊಂದು ಬದುಕುವುದು ಪ್ರಪಂಚದ ನಿಯಮ ಹಾಗಾಗಿ ಇವುಗಳಿಗೂ ಸಹ ಜೀವದ ಬೆದರಿಕೆ – ಇಷ್ಟರಲ್ಲೇ ತೃಪ್ತಿ ಪಡುವ ಪಶು-ಪಕ್ಷಿಗಳು ಸದಾ ಸುಖವಾಗಿ ಸಂತೋಷವಾಗಿರುತ್ತವೆ.

ಆದರೆ ಕ್ಷಣಕ್ಕೊಂದು ಆಸೆ ಪಡುವ ಚಿತ್ತ ಚಾಪಲ್ಯದ ಮನುಷ್ಯನಿಗೆ ಮಾತ್ರ ಒಂದಿಲ್ಲೊಂದು ಕೊರತೆ ಇದ್ದೇ ಇರುತ್ತದೆ. ಇದು ಇದ್ದರೆ ಅದು ಬೇಕು ಅದಿದ್ದರೆ ಇದು ಬೇಕು ಎಂಬ ಚಾಪಲ್ಯ ಈ ಬೇಕುಗಳ ಸುಳಿಯಲ್ಲಿ ಸಿಲುಕಿದ ಮನುಜ ತನ್ನ ಬದುಕಿನ ಅರ್ಥವನ್ನೇ ಕಳೆದುಕೊಂಡು ಸದಾ ಒಂದಿಲ್ಲೊಂದು ಕಾರಣಕ್ಕಾಗಿ ಮರುಗುತ್ತಾನೆ. ಮನೋನಿಗ್ರಹ ಈ ಆಸೆಗಳನ್ನು ಅದುಮಿಡುವ ಸಾಮಥ್ರ್ಯ ಹೊಂದಿದೆ ನಿಜ ಆದರೆ ಅದನ್ನು ಹಟದಿಂದ ನಿಗ್ರಹಿಸಿಕೊಳ್ಳುವ ದೃಡತೆ, ಕಾರ್ಯತತ್ಪರತೆ ಮನುಷ್ಯ ಪಡೆಯಬೇಕಾದಲ್ಲಿ ಅವನ ಮನಸ್ಸಿಗೆ ಅವನೇ ಕಡಿವಾಣ ಹಾಕಿಕೊಳ್ಳುವ ಮನೋಬಲವಿರಬೇಕು. ಈ ಮನೋಬಲ ಎಲ್ಲರಿಗೂ ಬರಲು ಸಾಧ್ಯವೇ ಇಲ್ಲ. ಈ ಲೌಕಿಕ ಆಸೆಗಳು ಕ್ಷಣಿಕ ಎಂಬ ಸತ್ಯವನ್ನು ಅರಿತ ಕೇವಲ ಕೆಲವರಿಗೆ ಮಾತ್ರ ಇದು ಸಾಧ್ಯ.

ತಂಗಳುಣಿಸಾದೊಡಂ ಸಾಕೆನುವನುಪವಾಸಿ |
ಸಿಂಗಾರ ಸಂಗಾತಿ ಬೇಕುಂಡವನಿಗೆ ||
ಬಂಗಾರ ಪದವಿ ಪ್ರತಿಷ್ಠೆ ಬೇಕಾಬಳಿಕ |
ಹಿಂಗದಾಯೆದೆ ಚಿಲುಮೆ – ಮಂಕುತಿಮ್ಮ ||

ಹಸಿದು ಬಳಲಿದವನಿಗೆ ತಂಗಳಾದರೂ ಸರಿಯೆ ಒಂದು ತುತ್ತು ಸಿಕ್ಕಿದರೆ ಅದು ಮೃಷ್ಠಾನ್ನ ಭೋಜನವಿದ್ದಂತೆ ಉಂಡು ಹೆಚ್ಚಾದವನಿಗೆ ಚೆಂದದ ಸಂಗಾತಿಯ ಆಸೆ, ಒಡವೆ ವಸ್ತ್ರದ ಆಸೆ ಅದೆಲ್ಲ ದೊರಕಿದ ಬಳಿಕ ಸಮಾಜದಲ್ಲಿ ಒಂದು ಪ್ರತಿಷ್ಟೆ ಸ್ಥಾನಮಾನ ಮನಸ್ಸು ಬಯಸುತ್ತಲೇ ಇರುತ್ತದೆ. ಈ ರೀತಿಯಾಗಿ ಆಸೆಯ ಚಿಲುಮೆ ಬತ್ತುವುದೆ ಇಲ್ಲ, ಅವನು ತೃಪ್ತಿ ಹೊಂದುವುದೂ ಇಲ್ಲ.

ಉಪವಾಸ ಇದ್ದವನಿಗೆ ಅನ್ನದ ಕಣಕಣದ ಬೆಲೆಯೂ ಸಹ ತಿಳಿದಿರುತ್ತದೆ, ಅವನಿಗೆ ಒಂದು ಮುಷ್ಠಿ ತಂಗಳನ್ನ ಸಿಕ್ಕಿದರೂ ಸಹ ಸಂತೋಷÀದಿಂದ ಅದನ್ನು ಸ್ವೀಕರಿಸುವ ಮನಸ್ಸಿರುತ್ತದೆ, ಇಷ್ಟಾದರೂ ಸಿಕ್ಕಿದರೆ ಜೀವ ಉಳಿಸಿಕೊಳ್ಳಬಹುದಲ್ಲ ಎಂಬ ಭಾವ ಅವನಿಗೆ ತೃಪ್ತಿಯನ್ನು ತಂದುಕೊಡುತ್ತದೆ. ಅದೇ ಹೊಟ್ಟೆ ತುಂಬಿರುವವನಿಗೆ ತಂಗಳನ್ನ ಯಾವ ಲೆಕ್ಕಕ್ಕೆ “ಹೊಟ್ಟೆ ತುಂಬಿದ ಮೇಲೆ ಹೋಳಿಗೆಯೂ ಕಹಿ” ಎಂಬಂತೆ. ಅವನಿಗೆ ತನ್ನ ಸಿರಿವಂತಿಕೆಗೆ ತಕ್ಕ ಸಂಗಾತಿ ಬೇಕು ಎನ್ನುವ ಹಂಬಲ, ಅದಾದ ಮೇಲೆ ಎಲ್ಲರೆದುರು ತಾನು ಸಿರಿವಂತ ಎನಿಸಿಕೊಳ್ಳುವ ಚಪಲಕ್ಕೆ ಒಡವೆ, ಅದಕ್ಕೆ ತಕ್ಕ ವಸ್ತ್ರ ಅಷ್ಟು ಸಾಲದು ಎಂಬಂತೆ ಸಮಾಜದಲ್ಲಿ ತಾನು ಮೆರೆಯಬೇಕೆನ್ನುವ ಹಂಬಲ. ಅದನ್ನು ತೀರಿಸಿಕೊಳ್ಳಲು ಒಂದು ಸ್ಥಾನಮಾನ ಹೀಗೆ ಹನುಮಂತನ ಬಾಲದಂತೆ ಈ ಆಸೆಗಳ ಸರಮಾಲೆ ಬೆಳೆಯುತ್ತಲೇ ಸಾಗುತ್ತದೆ; ಇದಕ್ಕೆ ಕೊನೆ ಮೊದಲಿಲ್ಲ.

ಈ ರೀತಿಯಾಗಿ ಇನ್ನೂ ಬೇಕು ಬೇಕು ಎಂಬ ಆಸೆ ಹೆಮ್ಮರವಾಗಿ ಬೆಳೆದು ಒಂದೊಮ್ಮೆ ತಾನೇ ಆ ಆಸೆಯ ಪಾಶದಲ್ಲಿ ಸಿಲುಕಿಕೊಂಡು ಹೊರಬರಲಾರದೆ ಒದ್ದಾಡುವಂತಹ ಪರಿಸ್ಥಿತಿಯನ್ನು ತಂದುಕೊಡುತ್ತದೆ. ನೀರಿನ ಚಿಲುಮೆಯಾದರೂ ಮಳೆಗಾಲದಲ್ಲಿ ಜೋರಾಗಿ ಬೇಸಿಗೆಯ ಕಾಲದಲ್ಲಿ ಬತ್ತಬಹುದು ಆದರೆ ಈ ಆಸೆಯ ಚಿಲುಮೆ ಮಾತ್ರ ಸದಾ ಕಾಲದಲ್ಲಿಯೂ ಸಹ ಬತ್ತದ ಚಿಲುಮೆಯಾಗಿ ಎತ್ತರೆತ್ತರಕ್ಕೆ ಚಿಮ್ಮುತ್ತಲೇ ಇರುತ್ತದೆ. ಪ್ರಪಂಚದಲ್ಲಿ ಎಲ್ಲ ಜೀವಿಗಳಿಗಿಂತ ಈ ಮನುಷ್ಯ ಜೀವಿಗೆ ಈ ‘ಆಸೆ’ ಎಂಬುದು ಅತಿ ಹೆಚ್ಚು, ಆಸೆಯ ನಶೆಯೊಳಗೆ ಸಿಲುಕಿದ ಮನುಜ ತನ್ನ ಸುತ್ತಲೂ ತಾನೇ ಬೇಲಿ ಹಾಕಿಕೊಳ್ಳುತ್ತಾ ಅದರೊಳಗೆ ಸಿಲುಕಿ ಹೊರಬಾರಲಾರದೆ ಬದುಕಿನ ಅರ್ಥವನ್ನೇ ಕಳೆದುಕೊಳ್ಳುತ್ತಾನೆ.

ಈ ಆಸೆ ಎಂಬುದು ಒಂದು ಲಂಟಾನ ಗಿಡದಂತೆ, ನೀವು ಎಲ್ಲ ಕಳೆ ಚೆನ್ನಾಗಿ ತೆಗೆದು ತೋಟ ಅಚ್ಚುಕಟ್ಟು ಮಾಡಿದ್ದೇನೆ ಎಂದು ನಿಟ್ಟುಸಿರು ಬಿಡುವುದರೊಳಗೆ ಎಲ್ಲೋ ಮೂಲೆಯಿಂದ ಈ ಗಿಡ ತಲೆಯೆತ್ತುತ್ತಲೇ ಇರುತ್ತದೆ. ಮನುಷ್ಯ ಹೇಗೆ ಬೆಳೆಯುತ್ತಾ ಹೋಗುತ್ತಾನೋ ಹಾಗೆ ಆಸೆ ಕೂಡ ಅವನೊಟ್ಟಿಗೆ ಬೆಳೆಯುತ್ತಲೇ ಸಾಗುತ್ತದೆ ಎಂಬುದನ್ನು ಮಾನ್ಯರು ಈ ರೀತಿ ಹೇಳುತ್ತಾರೆ.

ಮನಸು ಬೆಳೆದಂತೆಲ್ಲ ಹಸಿವು ಬೆಳೆಯುವುದಯ್ಯ |
ತಣಿಸಲದನೊಗೆಯುವುದು ಬಗೆಬಗೆಯ ಯುಕ್ತಿ ||
ಮನುಜನೇಳಿಗೆಯದರಿನ್; ಆ ಮನಸಿನೇಳಿಗೆಗೆ |
ಕೊನೆಯೆಲ್ಲಿ? ಚಿಂತಿಸೆಲೊ – ಮಂಕುತಿಮ್ಮ ||

ಮನಸ್ಸು ಬೆಳೆದಂತೆಲ್ಲ ಈ ಆಸೆಯ ಹಸಿವೆ ಬೆಳೆಯುತ್ತಲೇ ಸಾಗುತ್ತದೆ, ಅದನ್ನು ನೆರವೇರಿಸಿಕೊಳ್ಳಲು ಬಗೆಬಗೆಯ ತಂತ್ರಗಾರಿಕೆ ಹೊಳೆಯುತ್ತದೆ ಅದರಿಂದಲೇ ಮನಜನ ಏಳಿಗೆ ಸಾಧ್ಯವೇ …? ಮನಸಿನ ಏಳಿಗೆಯ ಬಗೆಗೆ ಸ್ವಲ್ಪ ಮನುಜ ಚಿಂತನೆ ಮಾಡಲೇಬೇಕು.

ದೈಹಿಕ ಕಾಮನೆಗಳ ಈಡೇರಿಕೆಗೆ ಬೇಕು ಬೇಕು ಎನ್ನುವ ಚಪಲ ಹೆಚ್ಚುತ್ತಾ ಸಾಗಿದಾಗ ಮನುಷ್ಯ ಅದರ ಪೂರೈಕೆಗಾಗಿ ಬಗೆ ಬಗೆಯ ಯುಕ್ತಿಗಳನ್ನು ಹೂಡುವ ಆಲೋಚನೆ ಮಾಡುತ್ತಾನೆ. ಹಿಂದಿನ ಕಾಲದಲ್ಲಿ ಅಂದರೆ ನಮ್ಮಗಳ ತಾತ-ಮುತ್ತಾತಂದಿರ ಕಾಲದಲ್ಲಿ ಪ್ರತಿಯೊಂದಕ್ಕೂ ಶ್ರಮಪಡಬೇಕಾಗಿತ್ತು, ಸರಿಯಾದ ವ್ಯವಸ್ಥೆಗಳಿರಲಿಲ್ಲ. ಹಾಗಾಗಿ ಅವರುಗಳ ಸ್ವಂತ ಪರಿಶ್ರಮದಿಂದ ಎಲ್ಲವನ್ನು ಮಾಡಿಕೊಳ್ಳಬೇಕಾಗಿತ್ತು. ಆದರೆ ಈಗ ಎಲ್ಲವೂ ಸಹ ನಮ್ಮ ಬೆರಳ ತುದಿಯಲ್ಲಿಯೇ ಬೇಕೆಂದಾಗ ಬೇಕಾದ್ದನ್ನು ಪಡೆಯ ಬಹುದಾದ ಸೌಕರ್ಯ ಒದಗಿದೆ, ಈ ಸೌಕರ್ಯಗಳು ಹೆಚ್ಚಾಗಿ ಮನುಜನ ಆಸೆ ಆಕಾಂಕ್ಷೆಗಳು ಸಹ ಅದಕ್ಕೆ ಪೈಪೋಟಿ ಕೊಡುವಂತೆ ನಾಗಾಲೋಟದಲ್ಲಿ ಸಾಗುತ್ತಾ ಇದೆ.

ಈ ಆಸೆಗಳ ಹಿಂದೆ ಬೆನ್ನತ್ತಿ ಹೋಗುತ್ತಿರುವಂತಹ ಮನುಜನಿಗೆ ತನ್ನ ಮನೋ ಏಳಿಗೆಯ ಬಗ್ಗೆ ಕೊಂಚವೂ ಸಹ ಚಿಂತೆಯಿಲ್ಲ. ಸಮಾಜದಲ್ಲಿ ಸಿರಿವಂತಿಕೆ ಸ್ಥಾನಮಾನ, ಒಡವೆ, ವಸ್ತ್ರ ಇದೇ ತನ್ನ ಏಳಿಗೆ ಅಂದುಕೊಂದಿರುವ ಮನುಜನಿಗೆ ತನ್ನ ಮನಸ್ಸಿನ ಏಳಿಗೆ ಅಂದರೇನು ಎಂಬುದೇ ಗೊತ್ತಿಲ್ಲ, ಹೋಗಲಿ ಅದರ ಬಗ್ಗೆ ಕೊಂಚ ಆಲೋಚನೆ ಮಾಡುವಷ್ಟು ಸಮಯವೂ ಸಹ ಅವನಿಗಿಲ್ಲ. ನಮ್ಮ ಬಾಹ್ಯ ಸೌಂದರ್ಯಕ್ಕಿಂತ ಮಿಗಿಲಾದುದು ನಮ್ಮ ಆಂತರಿಕ ಸೌಂದರ್ಯ. ಅಂತರಂಗದಲ್ಲಿ ಪ್ರೀತಿ, ವಿಶ್ವಾಸ, ಔದಾರ್ಯ, ಸ್ನೇಹಪರತೆ ಇಂತಹ ಸದ್ಗುಣಗಳನ್ನು ಬೆಳೆಸಿಕೊಂಡವನಿಗೆ ಮಾತ್ರವೇ ಈ ಮನಸ್ಸಿನ ಬೆಳವಣಿಗೆಯ ಚಿಂತನೆ ಬರಲು ಸಾಧ್ಯ. ಆಂತರಿಕ ಬೆಳವಣಿಗೆಯು ಮನುಜ ಬೇಡ ಬೇಡವೆಂದರೂ ಅವನಿಗೆ ಸುಖ ತಂದುಕೊಡುವುದರ ಜೊತೆ ಜೊತೆಯಲ್ಲಿ ತಾನಾಗಿಯೇ ಸ್ಥಾನ ಮಾನವನ್ನು ಕಲ್ಪಿಸಿಕೊಡುತ್ತದೆ. ಸಮಾಜದಲ್ಲಿ ದೊಡ್ಡ ವ್ಯಕ್ತಿ ಎನಿಸಿಕೊಂಡವರು ಯಾರೂ ಸಹ ಈ ಆಸೆಯ ಬೆನ್ನುಹತ್ತಿ ಓಡಿಲ್ಲ. ಅವರೆಲ್ಲರೂ ಸಹ ಸಮಯದ ಸದುಪಯೋಗದ ಬಗ್ಗೆ ಚಿಂತಿಸುತ್ತಾ ತನ್ನ ಉಸಿರಿರುವಾಗಲೇ ಸಮಾಜಕ್ಕೆ ಏನಾದರೂ ಮಾಡಬೇಕು ಎಂಬ ತುಡಿತವನ್ನು ಹೊತ್ತವರು. ಇಲ್ಲಸಲ್ಲದ ಆಸೆಗಳಿಗೆ ಬಲಿಯಾಗದೆ ತಮ್ಮ ಜೀವಿತದ ಅವಧಿಯಲ್ಲಿ ಏನಾದರೂ ಸಾಧನೆ ಮಾಡಬೇಕು ಅದರಿಂದ ಸಮಾಜಕ್ಕೆ ಒಳಿತಾಗಬೇಕು ಎಂಬ ಮನೋಭಿಲಾಷೆ ಹೊಂದಿದವರು ಅಲ್ಲದೆ ತಮ್ಮ ಇತಿ ಮಿತಿಯನ್ನು ಅರಿತು ನಡೆದವರು.

ಯಾವಾಗಲೂ ಸಹ ನಾವು ನಮ್ಮ ಇತಿ ಮಿತಿಯನ್ನು ಅರಿತುಕೊಂಡು ಅದರಲ್ಲಿಯೇ ನಾವು ಹೇಗೆ ಸಂತೋಷವಾಗಿ ಇರಬಲ್ಲೆವು ಎಂಬ ಕಲ್ಪನೆ ಮಾಡಿಕೊಂಡು ಬದುಕಿದ್ದಾಗ ಜೀವನದಲ್ಲಿ ನಮಗೆ ಸಿಗುವಂತಹ ಅವಕಾಶದ ಸದ್ಬಳಕೆ ಮಾಡಿಕೊಳ್ಳುತ್ತಾ ನಮ್ಮಿಂದ ಆದಷ್ಟ್ಟು ಜನರಿಗೆ ಹಾಗೂ ಸಮಾಜಕ್ಕೆ ಒಳಿತಾಗಬೇಕು ಎಂಬ ಆಶಾಭಾವವೇ ಮನೋ ಏಳಿಗೆಯತ್ತ ನಮ್ಮನ್ನು ತಾನೇ ಕೊಂಡೊಯ್ಯುತ್ತದೆ.

ದಿನದಿನವು ಹಳಸುವವು ದಿನದಿನವು ಕೊಳೆಯುವವು |
ಮನಜಕುಲದೆಲ್ಲ ಕೃತಿವಿಜಯವಿಭವಗಳು ||
ಅನುದಿನವು ಮತ್ತವನು ತೊಳೆದು ಹೊಸತೆನಿಸುವುದೆ |
ಜನಮಸಫಲತೆ ನಿನಗೆ – ಮಂಕುತಿಮ್ಮ ||

ಮನುಷ್ಯ ಸಾಧಿಸಿದ ಕೆಲಸಗಳು, ಅವನ ವೈಭವ ಇವುಗಳು ದಿನಗಳು ಕಳೆದಂತೆಲ್ಲ ಹಳೆಯದಾಗುತ್ತದೆ, ಮತ್ತೆ ಮತ್ತೆ ಈ ಹಳೆಯದನ್ನು ಕೊಳೆಯಾದ ಪಾತ್ರೆ ತೊಳೆಯುವಂತೆ ತೊಳೆದು ಹೊಸತು ಮಾಡುವುದು ಜನ್ಮ ಸಫಲತೆಗೆ ಕಾರಣವಾಗುತ್ತದೆ.

ಮನುಷ್ಯನು ಸಾಧನೆಗಳು, ಪಡೆದ ಪ್ರಶಸ್ತಿ ಫಲಕಗಳು ಇವುಗಳು ಆ ಕ್ಷಣಕ್ಕೆ ಆ ಒಂದೆರಡು ದಿನ ಅಬ್ಬರವಾಗಿ ಪ್ರಚಾರ ಪಡೆದುಕೊಂಡು ಆಮೇಲೆ ದಿನಕಳೆದಂತೆಲ್ಲ ಹಳೆಯದಾಗುತ್ತಾ ಸಾಗುತ್ತದೆ. ಒಂದು ವೇಳೆ ನಾವೇನಾದರೂ ಅದನ್ನೇ ಹೇಳುತ್ತಾ ಹೋದಲ್ಲಿ ಎಂದೋ ಒಂದು ಪ್ರಶಸ್ತಿ ಪುರಸ್ಕಾರ ಪಡೆದಿದ್ದಾನೆ ಅದನ್ನೇ ಹೇಳಿಕೊಂಡು ತಿರುಗುತ್ತಾನೆ ನೋಡಿ ಅಂತ ಆಡಿಕೊಂಡು ನಗುತ್ತಾರೆ. ಸಮಾಜದ ನೆನಪುಗಳು ತುಂಬ ತಾತ್ಕಾಲಿಕ. ಮತ್ತೊಂದು ಏನಾದರೂ ಹೊಸತು ಬಂದರೆ ಜನ ಹಳೇದನ್ನ ಮರೆತು ಹೊಸತರೆಡೆ ಸಾಗುತ್ತಿರುತ್ತಾರೆ. ಆದ್ದರಿಂದ ಹಳೆಯದನ್ನೇ ಕೆದಕಿ ಕೆದಕಿ ಹೇಳುವುದರ ಬದಲಾಗಿ ಮತ್ತೆ ಮತ್ತೆ ಹೊಸ ಹೊಸ ಸಾಧನೆ ಮಾಡಿದಾಗ ಸಮಾಜ ತಾನಾಗಿಯೇ ಬೆಂಬಲವನ್ನು ಕೊಡುತ್ತದೆ.

ಪ್ರತಿದಿನ ಅಡಿಗೆ ಮಾಡಿದಾಗಲೂ ಪಾತ್ರೆ ಮಸಿಯಾಗುತ್ತದೆ ಹಾಗಂತ ಅಯ್ಯೋ! ಅದರಲ್ಲೇ ಮಾಡಿದರಾಯಿತು ಹೇಗೂ ಮತ್ತೆ ಮಸಿಯಾಗುತ್ತಲ್ಲ ಅಂತ ನಾವು ಅಂದುಕೊಂಡು ಹಾಗೇ ಬಿಡುತ್ತಾ ಹೋದರೆ ಆ ಪಾತ್ರೆ ಅದರ ಅಂದವನ್ನು ಕಳೆದುಕೊಳ್ಳುತ್ತಾ ಹೋಗುತ್ತದೆ. ಬದಲಾಗಿ ಅದನ್ನು ಪ್ರತಿನಿತ್ಯ ಶುಭ್ರವಾಗಿ ತೊಳೆಯುತ್ತಿದ್ದಲ್ಲಿ ದಿನವೂ ಹೊಸತರಂತೆ ಹೊಳೆಯುತ್ತಿರುತ್ತದೆ. ನಾವು ಸಹ ಹಾಗೆ ಒಮ್ಮೆ ಮಾಡಿ ಕೈಕಟ್ಟಿ ಕುಳಿತುಕೊಂಡು ಮಾಡಿದ್ದನ್ನೇ ಹೇಳುತ್ತಿದ್ದರೆ ನಮ್ಮ ಸುತ್ತಲಿನವರು ನಮ್ಮನ್ನು ಕಡೆಗಣಿಸುತ್ತಾರೆ ಅದರ ಬದಲಿಗೆ ಮತ್ತೇನಾದರೂ ಹೊಸತನ್ನು ಮಾಡಬೇಕು ಎಂಬ ಆಸೆ ಹೊತ್ತು ಸತ್ಕಾರ್ಯಗಳನ್ನು ಮಾಡುತ್ತಾ ಸಾಗಿದಲ್ಲಿ ನಮ್ಮ ಮನಸ್ಸು ಪ್ರಫುಲ್ಲಗೊಳ್ಳುವುದಲ್ಲದೆ ಬೇರೊಬ್ಬರಿಗೆ ಸಹಾಯವೂ ಸಹ ಆಗಬಲ್ಲದು, ಅರಿವಿಲ್ಲದೆ ನಾವು ಯಾರೋ ಒಬ್ಬರಿಗೆ ಮಾದರಿಯಾಗಿ ನಿಂತರೂ ನಿಲ್ಲಬಹುದು, ಇದು ನಮ್ಮ ಜನುಮ ಸಫಲತೆಗೆ ಕಾರಣ ಸಹ ಆಗುತ್ತದೆ. ಆದ್ದರಿಂದ ಸಮಾಜಕ್ಕೆ ಕಿಂಚಿತ್ತಾದರೂ ಸೇವೆಯಾಗಲಿ ಎಂಬ ಮನೋಭಿಲಾಷೆ ಯಿಂದ ಮಾಡುವ ಕೆಲಸ ಕಾರ್ಯಗಳು ಯಶಸ್ಸನ್ನು ತಂದುಕೊಡುತ್ತದೆ, ಸ್ವಲ್ಪ ಮಟ್ಟಿಗಾದರೂ ಸರಿಯೇ ಒಳ್ಳೆಯ ಕೆಲಸವನ್ನು ಮಾಡುತ್ತಾ ಜನ್ಮ ಸಾರ್ಥಕತೆಯನ್ನು ಪಡೆಯುವತ್ತ ನಮ್ಮ ಸಾಧನೆಯಿರಬೇಕು.

ಸಾಜಗುಣವೆಂದುಪೇಕ್ಷಿಪೆಯ ನಿನ್ನವಗುಣವ |
ಸಾಜವನು ಬಿಟ್ಟಲುಗದಿಹುದು ಮೃಗಕೀಟ ||
ಸಾಜವಂ ಶಿಕ್ಷಿಸುತೆ ಲೋಕಸಂಸ್ಥಿತಿಗದನು |
ಯೋಜಿಪುದೆ ನರಮಹಿಮೆ – ಮಂಕುತಿಮ್ಮ ||

ನಿನ್ನ ಅವಗುಣವನ್ನು ಸಹಜವಾದದ್ದು ಎಂದು ಅಲಕ್ಷ್ಯ ಮಾಡುವೆಯೇನು…? ಮೃಗ, ಕೀಟಗಳು ಅವುಗಳ ಸಹಜ ಗುಣವನ್ನು ಎಂದಿಗೂ ಬಿಟ್ಟು ಅಲ್ಲಾಡಲಾರದು, ಈ ಸಹಜವಾದ ಗುಣವನ್ನು ತಿದ್ದಿಕೊಂಡು ಲೋಕಕ್ಕೆ ಒಳ್ಳೆಯದನ್ನು ಮಾಡುವತ್ತ ನಡೆಯುವುದೇ ಮನುಷ್ಯನ ಮಹಿಮೆ.
ಮನುಷ್ಯ ಮೃಗಗಳಿಗಿಂತ ಮೇಲು ಎನ್ನುವುದು ಅವನ ಆಲೋಚನಾ ಶಕ್ತಿಯಿಂದ. ಇದೊಂದೆ ದೇವರು ಬೇರೆಲ್ಲ ಜೀವಿಗಳಿಗಿಂತ ಮಿಗಿಲಾಗಿ ಮನುಷ್ಯನಿಗೆ ಕೊಟ್ಟಿರತಕ್ಕಂತಹ ವರ.

ಮನುಜ ತನ್ನಲ್ಲಿರುವ ಅವಗುಣಗಳನ್ನು ಅದು ಹುಟ್ಟಿನಿಂದಲೇ ಬಂದಿರುವುದು ಸಹಜ ಗುಣ ಎಂದು ನಿರ್ಲಕ್ಷ್ಯ ಮಾಡಿದರೆ ಅವನು ಮೃಗ ಕೀಟಗಳಿಗಿಂತ ಮೇಲು ಹೇಗಾದಾನು…? ಮೃಗ ಕೀಟಗಳಂತು ತಮ್ಮ ಗುಣವನ್ನು ಬಿಟ್ಟು ಬಿಡುವುದಿಲ್ಲ, ಒಂದು ರೀತಿಯಲ್ಲಿ ಅವುಗಳ ಅವಗುಣವೇ ಅವುಗಳಿಗೆ ರಕ್ಷೆಯೂ ಆಗಿರಬಹುದು ಎಂದರೂ ತಪ್ಪಾಗಲಾರದು, ಏಕೆಂದರೆ ಹಾವು ನಾನು ಇನ್ನು ಕಚ್ಚಲಾರೆ ಎಂದು ಕುಳಿತರೆ ಈ ಲೋಕದ ಜನರು ಸುಮ್ಮನಿದ್ದಾರೆಯೇ…? ಅದರ ಸಹಜಗುಣದ ಅರಿವಿರುವ ಜನ ಅದರ ಒಳ ನಿರ್ಧಾರವನ್ನೇನು ಬಲ್ಲರು, ಅವುಗಳಿಗೆ ಸಂವಹನ ಕ್ರಿಯೆಯುಂಟೇ, ಇಲ್ಲ ಹಾಗಾಗಿ ಅದರ ಪತನವಂತೂ ನಿಶ್ಚಿತವೇ ಅಲ್ಲವೇ…! ಆದರೆ ಮನುಷ್ಯ ಹಾಗಲ್ಲ, ಒಂದೊಮ್ಮೆ ಕೆಟ್ಟವನಾದವನು ನಾನು ಬದಲಾಗಿದ್ದೇನೆ ಎಂದು ಮಾತಿನಲ್ಲಿ ಹೇಳಿ ಕ್ರಿಯೆಯಲ್ಲಿಯೂ ತೋರಿಸಬಲ್ಲ.

ಆದ್ದರಿಂದ ಇಂತಹ ಒಂದು ಸದಾವಕಾಶ ದೇವರು ಕೊಟ್ಟಿರುವಾಗ ಕಡೆಗಣಿಸದೆ ಆ ಗುಣವನ್ನು ತಿದ್ದಿಕೊಂಡು ಸದ್ವರ್ತನೆಯನ್ನು ರೂಢಿಸಿಕೊಂಡು ಈ ಲೋಕವನ್ನು ಉತ್ತಮ ಸ್ಥಿತಿಯಲ್ಲಿಡುವುದೇ ಈ ನರ ಜನ್ಮದ ಮಹಿಮೆ. ಲೋಕದ ಡೊಂಕನ್ನು ತಿದ್ದಲಿಕ್ಕೆ ಆಗದಿದ್ದರೂ ಕೊನೇಪಕ್ಷ ನಮ್ಮ ನಮ್ಮ ಡೊಂಕನ್ನು ತಿದ್ದಿಕೊಂಡು ಬದುಕಬೇಕು ಎಂದು ಪ್ರತಿಯೊಬ್ಬರು ಅಪೇಕ್ಷೆಪಟ್ಟಾಗ ಲೋಕ ತಾನಾಗಿಯೇ ಸುಸ್ಥಿತಿಯಲ್ಲಿರುತ್ತದೆ.

ಮನುಷ್ಯ ಅನಗತ್ಯವಾದ ಆಸೆಗಳತ್ತ ಮನಸ್ಸು ನೀಡದೆ ತನ್ನ ಇತಿ-ಮಿತಿಯೊಳಗೆ ಎಷ್ಟು ಸಾಧ್ಯವೋ ಅಷ್ಟಕ್ಕೆ ಸಂತೃಪ್ತಿ ಪಟ್ಟಿದ್ದೇ ಆದರೆ ಯಾವ ತೊಂದರೆ ತಾಪತ್ರಯಗಳೂ ಸಹ ಹತ್ತಿರ ಕೂಡ ಸುಳಿಯಲಾರದು. ಇಲ್ಲ ಸಲ್ಲದ ಆಸೆಯ ಬಲೆಯೊಳಗೆ ಸಿಲುಕಿದರೆ ತನ್ನನ್ನು ತಾನೇ ವಿನಾಶದತ್ತ ತಳ್ಳಿಕೊಳ್ಳುತ್ತಾನೆ. ಅದ್ದರಿಂದ ದುಃಖವೇ ಹೊರತು ನೆಮ್ಮದಿಯಿಲ್ಲ. ಈ ಆಸೆಯೆಂಬ ಬಿಸಿಲುಗುದರೆಯನ್ನೇ ಏರದೆ ಸಂತೃಪ್ತಿಯ ಮನಸ್ಸಿನಲ್ಲಿ ಇಂದು ನನಗೆ ದೊರಕಿರುವುದು ಮಾತ್ರ ನನ್ನದು ಎಂಬ ಭಾವದಲ್ಲಿ ತನ್ನ ಅವಗುಣಗಳನ್ನು ಮೆಟ್ಟಿ ಮೇಲೆದ್ದಾಗ ಬದುಕು ಸಾರ್ಥಕ ಎನಿಸಿಕೊಳ್ಳುತ್ತದೆ.
**************

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ