guhe 2

 

 

ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲ್ಲೂಕಿನ ದಡ್ಡ ಕಾನನದ ಗುಹೆಯೊಂದರಲ್ಲಿ ರಷ್ಯಾ ಮೂಲದ ಮಹಿಳೆ ತನ್ನ ಪುಟ್ಟ ಮಕ್ಕಳೊಂದಿಗೆ ವಾಸವಾಗಿದ್ದ ವಿಚಿತ್ರ ಘಟನೆ ಬೆಳಕಿಗೆ ಬಂದಿದೆ.

ಕುಮಟಾದ ಸಮುದ್ರ ತೀರದ ರಾಮತೀರ್ಥ ಬೆಟ್ಟದಲ್ಲಿರುವ ಗುಹೆಯಿಂದ 40 ವರ್ಷದ ರಷ್ಯಾದ ಮಹಿಳೆ ಮತ್ತು ಆಕೆಯ ಇಬ್ಬರು ಚಿಕ್ಕ ಮಕ್ಕಳನ್ನು ರಕ್ಷಿಸಲಾಗಿದೆ. ಅಲ್ಲಿ ಅವರು ಹಲವು ದಿನಗಳಿಂದ ಏಕಾಂತದಲ್ಲಿ ವಾಸಿಸುತ್ತಿದ್ದರು ಎಂದು ತಿಳಿದುಬಂದಿದೆ.

ಮೋಹಿ ಎಂಬ ಹೆಸರಿನ ಈ ಮಹಿಳೆ ತನ್ನ ಹೆಣ್ಣುಮಕ್ಕಳಾದ 6 ವರ್ಷದ ಪ್ರೇಯಾ ಮತ್ತು 4 ವರ್ಷದ ಅಮಾ ಜೊತೆ ದಟ್ಟವಾದ ಕಾಡುಗಳು ಮತ್ತು ಕಡಿದಾದ ಇಳಿಜಾರುಗಳಿಂದ ಆವೃತವಾದ ನೈಸರ್ಗಿಕ ಗುಹೆಯೊಳಗೆ ವಾಸವಾಗಿದ್ದರು. ಗುಹೆಯ ಬಳಿ ರುದ್ರ ವಿಗ್ರಹವನ್ನು ಇಟ್ಟು ಅಲ್ಲಿ ಕುಟುಂಬವು ತಾತ್ಕಾಲಿಕ ವಾಸಸ್ಥಳವನ್ನು ನಿರ್ಮಿಸಿಕೊಂಡಿತ್ತು. ಅಲ್ಲಿ ಮೋಹಿ ತನ್ನ ದಿನಗಳನ್ನು ಪ್ರಾರ್ಥನೆ ಮತ್ತು ಧ್ಯಾನದಲ್ಲಿ ಕಳೆದಿದ್ದಾಳೆಂದು ಹೇಳಲಾಗುತ್ತಿದೆ. ಆಕೆ ಆಧ್ಯಾತ್ಮಿಕ ಶಾಂತಿಯನ್ನು ಬಯಸಿ ಆ ಗುಹೆಗೆ ತೆರಳಿದ್ದಾಗಿ ಹೇಳಿಕೊಂಡಿದ್ದಾರೆ.

ರಾಮತೀರ್ಥ ಬೆಟ್ಟದಲ್ಲಿ ಭೂಕುಸಿತವಾಗುತ್ತಿದ್ದರಿಂದ ಅಲ್ಲಿಗೆ ಪ್ರವಾಸಿಗರಿಗೆ ನಿರ್ಬಂಧ ಹೇರಲಾಗಿದೆ. ಆದರೂ ಕೆಲವು ಪ್ರವಾಸಿಗರು ಆ ಸ್ಥಳಕ್ಕೆ ತೆರಳುತ್ತಿದ್ದರಿಂದ ಅಲ್ಲಿಗೆ ಆಗಾಗ ಪೊಲೀಸರು ಗಸ್ತು ತಿರುಗುತ್ತಿದ್ದರು, ಮಾಮೂಲಿನಂತೆ ಗಸ್ತು ತಿರುಗುತ್ತಿದ್ದಾಗ ಪೊಲೀಸರ ಕಣ್ಣಿಗೆ ದೂರದ ಬೆಟ್ಟದ ಗುಹೆಯ ಹೊರಗೆ ಬಟ್ಟೆ ಒಣಗಿ ಹಾಕಿದ್ದು ಕಾಣಿಸಿತ್ತು.  ಅನುಮಾನ ಬಂದು ಸ್ಥಳಕ್ಕೆ ತೆರಳಿ ಅಲ್ಲಿದ್ದ ಗುಹೆಯ ಹೋಗುತ್ತಿದ್ದಂತೆ ಬಟ್ಟೆ ಧರಿಸದ ಪುಟ್ಟ ಮಗು ಓಡಿ ಹೊರ ಬಂದಿದೆ. ಪೊಲೀಸರನ್ನು ನೋಡಿ ಒಳಗೆ ಓಡಿ ಹೋದ ಪುಟ್ಟ ಮಗುವಿನ ಹಿಂದೆ ಹೋದಾಗ ಚಿಕ್ಕ ದೀಪವನ್ನಿಟ್ಟುಕೊಂಡು ತನ್ನ ದೊಡ್ಡ ಮಗುವಿಗೆ ಚಿತ್ರ ಬಿಡಿಸುವುದನ್ನು ಹೇಳಿಕೊಡುತ್ತಿದ್ದ ಮಹಿಳೆಯನ್ನು ಕಂಡು ಪೊಲೀಸರಿಗೆ ಅಚ್ಚರಿ ಆಗಿತ್ತು.

ಆ ಗುಹೆ ಸಂಪೂರ್ಣವಾಗಿ ಕತ್ತಲಾಗಿದ್ದು, ಇದು ಅತ್ಯಂತ ಅಪಾಯಕಾರಿ ಸ್ಥಳವಾಗಿದೆ. ಅಲ್ಲಿ ವಿಷಪೂರಿತ ಹಾವುಗಳು ಸೇರಿದಂತೆ ಅಪಾಯಕಾರಿ ವನ್ಯಜೀವಿಗಳಿಗೆ ನೆಲೆಸಿವೆ.  ಆ ಪ್ರದೇಶದಲ್ಲಿ ಟ್ರೆಕ್ಕಿಂಗ್ ಕೂಡ ನಿಷೇಧಿಸಿ ಸುತ್ತಲೂ ಫೆನ್ಸಿಂಗ್ ಹಾಕಲಾಗಿದೆ. ಫೆನ್ಸಿಂಗ್ ಇದ್ದರೂ ಪಕ್ಕದ ಗುಡ್ಡದಿಂದ ಬಂದು ಗುಹೆ ಒಳಗಡೆ ಹೋಗಿ ನೆಲೆಸಿದ್ದ ರಷ್ಯಾದ‌ ಮಹಿಳೆ ಈ ಹಿಂದೆಯೂ ಬಹಳಷ್ಟು ಬಾರಿ ಈ ಗುಹೆಯಲ್ಲಿ ಬಂದು ನೆಲೆಸಿರುವುದಾಗಿ ಪೊಲೀಸರ ಮುಂದೆ ಒಪ್ಪಿಕೊಂಡಿದ್ದಾರೆ.

ಪೊಲೀಸರು ಮಹಿಳೆಗೆ ಸಲಹೆ ನೀಡಿ ಅಲ್ಲಿನ ಅಪಾಯಗಳ ಬಗ್ಗೆ ತಿಳಿಸಿದ ನಂತರ, ಆಕೆ ಹಾಗೂ ಇಬ್ಬರು ಮಕ್ಕಳನ್ನು ಯಶಸ್ವಿಯಾಗಿ ರಕ್ಷಿಸಿ ಬೆಟ್ಟದಿಂದ ಕೆಳಕ್ಕೆ ಕರೆದುಕೊಂಡು ಬರಲಾಗಿದೆ. ಆಕೆಯ ಕೋರಿಕೆಯ ಮೇರೆಗೆ ಆ ಮಹಿಳೆಯನ್ನು ಕುಮಟಾ ತಾಲ್ಲೂಕಿನ ಬಂಕಿಕೋಡ್ಲಾ ಗ್ರಾಮದಲ್ಲಿರುವ 80 ವರ್ಷದ ಮಹಿಳಾ ಸನ್ಯಾಸಿ ಸ್ವಾಮಿ ಯೋಗರತ್ನ ಸರಸ್ವತಿ ನಡೆಸುತ್ತಿರುವ ಆಶ್ರಮಕ್ಕೆ ಸ್ಥಳಾಂತರಿಸಲಾಗಿದೆ.

ರಷ್ಯಾದಿಂದ 2016ರಲ್ಲಿ ಗೋವಾಕ್ಕೆ ಖಾಸಗಿ ಕಂಪನಿಯೊಂದರಲ್ಲಿ ಕೆಲಸಕ್ಕೆಂದು ಬಂದಿದ್ದ ಮೋಹಿಯನ್ನು 2017ರ ಬಳಿಕ ಕಂಪನಿಯರು ಕೆಲಸದಿಂದ ತೆಗೆದುಹಾಕಿದ್ದರು. ಹೀಗಾಗಿ, ಆಕೆ ಗೋವಾದಿಂದ ನೇಪಾಳಕ್ಕೆ ತೆರಳಿ ಅಲ್ಲಿ ಕೆಲವು ದಿನ ವಾಸವಾಗಿದ್ದರು. ಮತ್ತೆ ಗೋವಾಕ್ಕೆ ಬಂದು ಅಲ್ಲಿಂದ ಆಗಾಗ ಗೋಕರ್ಣಕ್ಕೆ ಬಂದು ಈ ಗುಹೆಯಲ್ಲಿ ನೆಲೆಸುತ್ತಿದ್ದರು ಎಂದು ತಿಳಿದುಬಂದಿದೆ.

ಸಂಪೂರ್ಣವಾಗಿ ಆಧ್ಯಾತ್ಮಿಕತೆಯತ್ತ ವಾಲಿರುವ ಮಹಿಳೆ ಏಕಾಂತ ಹಾಗೂ ಪೂಜೆಯನ್ನು ಹೆಚ್ಚು ಇಷ್ಟ ಪಡುತ್ತಿರುವುದಾಗಿ ಪೊಲೀಸರ ಮುಂದೆ ತಿಳಿಸಿದ್ದಾರೆ. ಭಾರತ ಮತ್ತು ಹಿಂದೂ ಸಂಸ್ಕೃತಿಯ ಬಗ್ಗೆ ನನಗೆ ಭಾರಿ ಗೌರವ ಇದೆ, ನಾನು ಋಷಿ ಮುನಿಗಳ ತರ ಗುಹೆಯಲ್ಲಿ ಇರಲು ಖುಷಿ ಇದೆ ಎಂದು ತಿಳಿಸಿದ್ದಾರೆ.

ಈಕೆಗೆ ರಷ್ಯಾ ಮೂಲದ ಆಕೆಯ ಕುಟುಂಬಸ್ಥರು ಹಣ ಕಳಿಸುತ್ತಿದ್ದರು ಎನ್ನಲಾಗುತ್ತಿದೆ. ಮಹಿಳೆ ಮತ್ತು ಆಕೆಯ ಮಕ್ಕಳನ್ನು ಬೆಂಗಳೂರಿನ ವಿದೇಶಿ ನೊಂದಣಿಧಿಕಾರಿಗಳ ಕಚೇರಿಗೆ ಶಿಫ್ಟ್ ಮಾಡಿ, ಅಲ್ಲಿಂದ ರಷ್ಯಾ ದೇಶದ ಹಾಗೂ ಕುಟುಂಬಸ್ಥರ ಜೊತೆ ಸಂಪರ್ಕಿಸಿ ಅವರ ದೇಶಕ್ಕೆ ಕಳುಹಿಸಲಿದ್ದಾರೆ.  ಉತ್ತರ ಕನ್ನಡ ಎಸ್ ಪಿ ನಾರಾಯಣ ಅವರ ನೇತೃತ್ವದಲ್ಲಿ ಆ ಮಹಿಳೆಯನ್ನು ಸುರಕ್ಷಿತವಾಗಿ ಕರೆತಂದು ಬೆಂಗಳೂರಿಗೆ ಕಳಿಸಲು ವ್ಯವಸ್ಥೆ ಮಾಡಲಾಗುತ್ತಿದೆ.

ಪೊಲೀಸರು, ಕಲ್ಯಾಣ ಅಧಿಕಾರಿಗಳು ಮತ್ತು ಆಶ್ರಮದ ಮುಖ್ಯಸ್ಥರು ಆಕೆಯನ್ನು ವಿಚಾರಿಸಿದಾಗ, ವೀಸಾ ಮತ್ತು ಪಾಸ್‌ಪೋರ್ಟ್‌ನಂತಹ ದಾಖಲೆಗಳು ಕಾಡಿನ ಗುಹೆಯಲ್ಲಿ ಕಳೆದುಹೋಗಿರಬಹುದು ಎಂದು ಆಕೆ ಹೇಳಿದ್ದಾರೆ. ಗೋಕರ್ಣ ಪೊಲೀಸರು ಮತ್ತು ಅರಣ್ಯ ಇಲಾಖೆ ಅಧಿಕಾರಿಗಳು ನಡೆಸಿದ ಜಂಟಿ ಶೋಧ ಕಾರ್ಯಾಚರಣೆಯ ಬಳಿಕ ಆಕೆಯ ಪಾಸ್‌ಪೋರ್ಟ್ ಮತ್ತು ವೀಸಾವನ್ನು ಹುಡುಕಿ ಪತ್ತೆಹಚ್ಚಲಾಯಿತು.  ಅದರ ಪ್ರಕಾರ ಮೋಹಿ ಭಾರತಕ್ಕೆ ವ್ಯಾಪಾರ ವೀಸಾದಲ್ಲಿ ಪ್ರವೇಶಿಸಿದ್ದರು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಅದರ ಅವಧಿ 2017ರಲ್ಲಿಯೇ ಮುಗಿದಿದೆ.

ಅಷ್ಟು ದಟ್ಟ ಕಾಡಿನಲ್ಲಿ ಇಬ್ಬರು ಹೆಣ್ಣುಮಕ್ಕಳ ಜೊತೆ ಆ ಮಹಿಳೆ ಹೇಗೆ ಏಕಾಂಗಿಯಾಗಿ ವಾಸವಾಗಿದ್ದರು, ಊಟ-ತಿಂಡಿಗೆ ಏನು ವ್ಯವಸ್ಥೆ ಮಾಡಿಕೊಂಡಿದ್ದರು ಎಂಬುದು ಇನ್ನೂ ನಿಗೂಢವಾಗಿದೆ.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ