ಮೂಡಿಗೆರೆ ತಾಲ್ಲೂಕಿನ ಕೊಟ್ಟಿಗೆಹಾರದಲ್ಲಿ ಚರ್ಚ್ ಯೇಸುವಿನ ಪವಿತ್ರ ಹೃದಯದ ಉಪಕೇಂದ್ರವನ್ನು ಮೇಲ್ದರ್ಜೆಗೆ ಏರಿಸಿ ನೂತನ ದರ್ಮಕೇಂದ್ರದ ಸ್ಥಾಪನೆ ಕಾರ್ಯದ ಸಂಭ್ರಮದ ಪೂಜೆ ಸೋಮವಾರ ಬೆಳಿಗ್ಗೆ ನಡೆಯಿತು.
ಸಂಸೆಯ ದರ್ಮಕೇಂದ್ರದ ಗುರುಗಳಾದ ರೆ.ಫಾ.ಅಂತೋಣಿರಾಜ್ ಪೂಜೆ ಅರ್ಪಿಸಿ ಪ್ರಬೋಧನೆ ನೀಡಿ ಮಾತನಾಡಿ’ಯಾಜಕರು ಆಧ್ಯಾತ್ಮಿಕ ಪೋಷಣೆಯ ರೂವಾರಿಯಾಗಿದ್ದಾರೆ. ಯಾವುದೇ ದರ್ಮಗುರುಗಳಾಗಲಿ ಜನರ ಆಧ್ಯಾತ್ಮಿಕ ಹಸಿವು ನೀಗಿಸಲು ಮತ್ತಿತರ ದಾರ್ಮಿಕ ಅವಶ್ಯಕತೆಗಳಿಗೆ ಅವರು ಪ್ರಮುಖ ಸ್ಥಾನ ಪಡೆಯುತ್ತಾರೆ. ಜನರ ಸಹಕಾರ, ಅನ್ಯೋನತೆ, ಐಕ್ಯತೆಯೊಂದಿಗೆ ಮಾತ್ರ ಗುರುಗಳು ಕ್ರೈಸ್ತ ದರ್ಮ ಅಭಿವೃದ್ದಿ ಪಥದತ್ತ ಕೊಂಡ್ಯೊಯ್ಯಲು ಸಾಧ್ಯವಾಗುತ್ತದೆ’ಎಂದರು.
ಚಿಕ್ಕಮಗಳೂರು ಧರ್ಮಕ್ಷೇತ್ರದ ಕುಲಪತಿ ರೆ.ಫಾ.ಚಾರ್ಲ್ಸ್ ಪಿರೇರಾ ಮಾತನಾಡಿ’ಧರ್ಮಾಧ್ಯಕ್ಷರು ಕೊಟ್ಟಿಗೆಹಾರ ನೂತನ ದರ್ಮಕೇಂದ್ರವನ್ನಾಗಿ ಮಾಡಲು ಆದೇಶಿಸಿರುವುದು ಅಭಿವೃದ್ದಿಯ ದ್ಯೋತಕವಾಗಿದೆ. 57ವರ್ಷಗಳ ಕಾಲ ಕಪುಚಿನ್ ಗುರುಗಳ ಪಂಗಡ ನಡೆಸಿಕೊಂಡು ಬಂದು ಈಗ ಚಿಕ್ಕಮಗಳೂರಿನ ಧರ್ಮಕ್ಷೇತ್ರದ ಸಾರಥ್ಯಕ್ಕೆ ನೀಡಿ ನೂತನ ದರ್ಮಕೇಂದ್ರ ಸ್ಥಾಪನೆಯಾಗಿದೆ. ನಮ್ಮ ಹಿರಿಯರು ಧಾರ್ಮಿಕ ಕಾರ್ಯ ಮಾಡುತ್ತಾ ಬಂದಿದ್ದಾರೆ. ಈಗಿನ ಪೀಳಿಗೆ ಅದನ್ನು ಮುಂದುವರಿಸಿಕೊಂಡು ಬರುತ್ತಿದೆ. ಪ್ರಥಮ ಧರ್ಮಕೇಂದ್ರಕ್ಕೆ ನೂತನ ಅನನುಭವಿ ಗುರುಗಳು ಎಷ್ಟು ಮುಖ್ಯವೊ ಅಷ್ಟೇ ಮುಖ್ಯ ಅನುಭವಿ ಕ್ರೈಸ್ತ ಭಕ್ತಾದಿಗಳ ಪಾತ್ರವೂ ಅತಿ ಮುಖ್ಯವಾಗುತ್ತದೆ. ಇವರಿಂದ ದರ್ಮಕೇಂದ್ರದ ಪ್ರಗತಿ ಸಾಧ್ಯವಾಗುತ್ತದೆ’ಎಂದರು.
ಬಣಕಲ್ ಚರ್ಚ್ ಧರ್ಮಗುರು ರೆ.ಫಾ.ಪ್ರೇಮ್ ಲಾರೆನ್ಸ್ ಡಿಸೋಜ ಮಾತನಾಡಿ’ 57 ವರ್ಷ ಬಾಳೂರು, ಜಾವಳಿ, ಕೊಟ್ಟಿಗೆಹಾರ ಉಪಕೇಂದ್ರ ನಡೆಸಿಕೊಂಡು ಬಂದಿದ್ದೇವೆ. ನಮ್ಮ ಕಪುಚಿನ್ ಪಂಗಡದ ಹಿರಿಯ ಗುರುಗಳ ಸಾಧನೆ ಶ್ರಮದಾಯಕವಾದುದು ಎಂದು ಸ್ಮರಿಸಿದರು. ಇನ್ನು ನೂತನ ಗುರುಗಳಿಗೆ ಅದೇ ಐಕ್ಯತೆಯ ಸಹಕಾರ ನೀಡಿ ಸಹಕರಿಸಿ’ಎಂದರು.

ಸಂಭ್ರಮಿಕ ಬಲಿಪೂಜೆಯಲ್ಲಿ ನೂತನ ಗುರು ರೆ.ಫಾ.ವಿಲಿಯಂ ಬರ್ನಾರ್ಡ್ ಅವರಿಗೆ ಫಾ.ಪ್ರೇಮ್ ಲಾರೆನ್ಸ್ ಡಿಸೋಜ ಅಧಿಕಾರ ಹಸ್ತಾಂತರಿಸಿದರು. ಬಣಕಲ್ ಚರ್ಚಿನ ಗುರುಗಳಾದ ಪಾ.ಪ್ರೇಮ್ ಡಿಸೋಜ, ಸಹಾಯಕ ಗುರುಗಳಾದ ಫಾ.ಥೋಮಸ್ ಕಲಘಟಗಿ ಅವರಿಗೆ ಧರ್ಮಕ್ಷೇತ್ರ ಹಾಗೂ ಕೊಟ್ಟಿಗೆಹಾರ,ಬಾಳೂರು,ಜಾವಳಿ ಭಕ್ತಾಧಿಗಳಿಂದ ಸನ್ಮಾನ ಕಾರ್ಯಕ್ರಮ ನಡೆಯಿತು.
ವೇದಿಕೆ ಕಾರ್ಯಕ್ರಮವನ್ನು ಆಲ್ವಿನ್ ವಿನೋದ್ ನಿರ್ವಹಿಸಿದರು. ಚರ್ಚ್ ಚರಿತ್ರೆಯನ್ನು ಸಿಂತಿಯಾ ಪಾಯ್ಸ್ ವಾಚಿಸಿದರು. ಕುಮಾರಿ ಅಲೀಶಾ ನೊರೋನ್ನಾ ಸ್ವಾಗತಿಸಿದರು. ರೇಷ್ಮಾ ಪಿರೇರಾ ವಂದಿಸಿದರು. ಪೂಜೆಯಲ್ಲಿ ಚಿಕ್ಕಮಗಳೂರು ಧರ್ಮಕ್ಷೇತ್ರದ ವಿವಿಧ ಗುರುಗಳು ಭಾಗವಹಿಸಿದ್ದರು.



