ಚಿಕ್ಕಮಗಳೂರು ನಗರದಲ್ಲಿ ಪೊಲೀಸ್ ಹೆಡ್ ಕಾನ್ಸ್ ಟೇಬಲ್ ಒಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಕಾಂತರಾಜ್ (45) ಮೃತ ದುರ್ದೈವಿಯಾಗಿದ್ದು, ಅವರು ಪೊಲೀಸ್ ಕ್ವಾಟ್ರಸ್ ನಲ್ಲಿಯೇ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಚಿಕ್ಕಮಗಳೂರು ನಗರದ ಬಾರ್ ಲೈನ್ ರಸ್ತೆಯಲ್ಲಿರುವ ಪೊಲೀಸ್ ವಸತಿ ಗೃಹದಲ್ಲಿ ಘಟನೆ ನಡೆದಿದೆ.
ಎಸ್ಪಿ ಕಚೇರಿಯಲ್ಲಿ ಕಂಪ್ಯೂಟರ್ ಸೆಕ್ಷನ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕಾಂತರಾಜ್ ಅಪಘಾತದಲ್ಲಿ ತನ್ನ ಬಲಗಾಲು ಕಳೆದುಕೊಂಡಿದ್ದರು ಎನ್ನಲಾಗಿದೆ. ಕೃತಕ ಕಾಲು ಜೋಡಣೆ ಮೂಲಕ ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.
ಅಪಘಾತದಲ್ಲಿ ಕಾಲು ಕಳೆದುಕೊಂಡಾಗಿನಿಂದ ಮಾನಸಿಕ ಖಿನ್ನತೆಗೊಳಗಾಗಿದ್ದರು ಎಂದು ಹೇಳಲಾಗುತ್ತಿದೆ. ಕಾಂತರಾಜು ಈ ಹಿಂದೆ ನಕ್ಸಲ್ ನಿಗ್ರಹ ದಳ ಮತ್ತು ಕಳಸ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಿದ್ದರು ಎಂದು ತಿಳಿದುಬಂದಿದೆ.
ತರೀಕೆರೆ ತಾಲೂಕಿನ ಸುಣ್ಣದಹಳ್ಳಿ ಮೂಲದ ಕಾಂತರಾಜ್ ವಿವಾಹಿತರಾಗಿದ್ದು, ಒಂದು ಮಗುವಿನ ತಂದೆಯಾಗಿದ್ದಾರೆ. ಅವರ ಪತ್ನಿ ಮತ್ತು ಮಗು ಊರಿನಲ್ಲಿ ಇದ್ದ ಸಂದರ್ಭದಲ್ಲಿ ಪೊಲೀಸ್ ಕ್ವಾಟ್ರಸ್ ನಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಎರಡು ದಿನಗಳ ಹಿಂದೆ ಕಾಂತರಾಜ್ ಕೂಡ ಊರಿಗೆ ಹೋಗಿದ್ದರು. ಊರಿನಿಂದ ವಾಪಸ್ ಬಂದ ಬಳಿಕ ನಿನ್ನೆ ಗುರುವಾರ ರಾತ್ರಿ ವಸತಿಗೃಹದಲ್ಲಿಯೇ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕಾಂತರಾಜ್ ತುಂಬಾ ದೈರ್ಯವಂತ ಪೊಲೀಸ್ ಎಂದು ಆತನ ಸ್ನೇಹಿತರು ಕಣ್ಣೀರಿಟ್ಟಿದ್ದಾರೆ. ಇಷ್ಟೊಂದು ದೈರ್ಯವಂತ ಪೊಲೀಸ್ ತಮ್ಮ ಜೀವ ಕಳೆದುಕೊಳ್ಳುವ ನಿರ್ಧಾರಕ್ಕೆ ಏಕೆ ಬಂದರು ಎಂಬ ಪ್ರಶ್ನೆ ಕಾಡುತ್ತಿದೆ. ಸ್ಥಳಕ್ಕೆ ಎಸ್ಪಿ ಹಾಗೂ ಎಎಸ್ಪಿ ಭೇಟಿ ನೀಡಿದ್ದಾರೆ. ಚಿಕ್ಕಮಗಳೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



