ಮೂಡಿಗೆರೆ ಹ್ಯಾಂಡ್‌ಪೋಸ್ಟ್ ನಿಂದ ಚಿಕ್ಕಮಗಳೂರಿನ ಮೂಗ್ತಿಹಳ್ಳಿವರೆಗೆ 26 ಕಿ.ಮೀ ರಾಷ್ಟ್ರೀಯ ಹೆದ್ದಾರಿ ವಿಸ್ತರಣೆಗೆ ಹೆದ್ದಾರಿ ಪ್ರಾಧಿಕಾರದಿಂದ ವಿವಿಧ ರೀತಿಯಲ್ಲಿ ಪ್ರಕ್ರಿಯೆಗಳು ನಡೆಯುತ್ತಿದೆ. ಇದಕ್ಕಾಗಿ 3,142 ಸಾಲುಮರಗಳನ್ನು ತೆರವುಗೊಳಿಸಲು ಸಿದ್ಧತೆ ನಡೆದಿದೆ. ಎಲ್ಲಾ ಅಂದುಕೊಂಡಂತೆ ನಡೆದರೆ ಮಳೆಗಾಲದ ಬಳಿಕ ಕಾಮಗಾರಿ ಆರಂಭವಾಗಲಿದೆ. ಪಟ್ಟಣ ಪ್ರದೇಶದಲ್ಲಿ ಮಾತ್ರ ಹೆದ್ದಾರಿ ಅಗಲೀಕರಣಕ್ಕಾಗಿ ಯಾವ ಪ್ರಕ್ರಿಯೆಗಳು ನಡೆದಿಲ್ಲ.
ಹೆದ್ದಾರಿ ಅಭಿವೃದ್ಧಿಗೆ 410 ಕೋಟಿ ರೂ. ಬಿಡುಗಡೆಯಾಗಿ ಒಂದು ವರ್ಷ ಕಳೆದಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಸಿದ್ಧಪಡಿಸಿರುವ 3ಡಿ ನಕ್ಷೆಗೆ ಕೇಂದ್ರ ಹೆದ್ದಾರಿ ಸಚಿವಾಲಯದಿಂದ ಅನುಮೋದನೆ ನೀಡಿದೆ. 13 ಹೆಕ್ಟೇರ್ ಭೂ ಸ್ವಾಧೀನ ಪ್ರಕ್ರಿಯೆಗೆ ಚಾಲನೆ ನೀಡಲು ಅಧಿಕಾರಿಗಳು ನಿರ್ಧರಿಸಿದ್ದಾರಾದರೂ ಅದಕ್ಕೆ ಅನುದಾನ ಇನ್ನಷ್ಟೆ ಬಿಡುಗಡೆಯಾಗಬೇಕು. 9 ಹೆಕ್ಟೇರ್ ಭೂ ಸ್ವಾಧೀನ ಸಂಬಂಧ ಕೆಲ ಪ್ರಕ್ರಿಯೆಗಳು ಮುಗಿದಿದ್ದು, 3ಡಿ ಅನುಮೋದನೆ ದೊರೆತಿದೆ. ಇನ್ನೂ 4 ಹೆಕ್ಟೇರ್ ಭೂಸ್ವಾಧೀನಕ್ಕೆ 3ಡಿ ಅನುಮೋದನೆ ದೊರೆಯಬೇಕಾಗಿದೆ.
ಸ್ವಾಧೀನವಾಗಲಿರುವ ಜಮೀನಿನ ಮಾಲೀಕರಿಗೆ ಭೂಸ್ವಾಧೀನಾಧಿಕಾರಿಗಳು ನೋಟಿಸ್ ನೀಡಿದ್ದಾರೆ. ತಹಸಿಲ್ದಾರ್ ನೇತೃತ್ವದಲ್ಲಿ ಸ್ವಾಧೀನವಾಗಬೇಕಾಗಿರುವ ಜಮೀನಿನ ಮಾಲೀಕರ ಸಭೆ ಕೂಡ ನಡೆದಿದೆ. ಜಮೀನಿನ ಸಂಪೂರ್ಣ ದಾಖಲೆಯನ್ನು ಒದಗಿಸುವಂತೆ ಸೂಚಿಸಲಾಗಿದೆ. ಜಮೀನಿನ ದಾಖಲೆ ಸಂಗ್ರಹಿಸಿ ಒದಗಿಸುವುದು ಸುಲಭದ ಮಾತಲ್ಲ. ತಂದೆ ಅಥವ ತಾಯಿಯ ಹೆಸರಿನಲ್ಲಿ ಜಮೀನಿದ್ದು, ಅವರು ನಿಧನರಾಗಿದ್ದರೆ ಆ ಜಮೀನು ಮಕ್ಕಳ ಹೆಸರಿನಲ್ಲಿ ಖಾತೆಯಾದ ಬಳಿಕ ದುರಸ್ತಿಯಾಗಬೇಕು. ಈ ಎಲ್ಲಾ ಪ್ರಕ್ರಿಯೆಗಳು ಮುಗಿದ ನಂತರ ಜಮೀನಿನ ದಾಖಲೆಯನ್ನು ಹೆದ್ದಾರಿ ಪ್ರಾದಿಕಾರಕ್ಕೆ ಒದಗಿಸಬೇಕಾಗಿದೆ. ಈ ಪ್ರಕ್ರಿಯೆ ವಿಳಂಬವಾಗುವುದರಿಂದ ಕೆಲ ಜಮೀನಿನ ಮಾಲೀಕರು ದಾಖಲೆ ಒದಗಿಸುವುದು ತಡವಾಗಲಿದೆ.
ಭೂಸ್ವಾಧೀನ ಪ್ರಕ್ರಿಯೆ ಆರಂಭವಾದೊಡನೆ ಟೆಂಡರ್ ಬಿಡ್ ತೆರೆಯಲಾಗುತ್ತದೆ. ಅದಕ್ಕಾಗಿ ಇನ್ನೂ ಕಾಲ ಕೂಡಿ ಬಂದಿಲ್ಲ. ಈಗಾಗಲೆ ಟೆಂಡರ್ ಪ್ರಕ್ರಿಯ ಪೂರ್ಣಗೊಂಡಿದ್ದು, ಗಣಕಯಂತ್ರದಲ್ಲಿ ಭದ್ರವಾಗಿದೆ. ಅದನ್ನು ತೆರೆದು ಗುತ್ತಿಗೆದಾರರ ಆಯ್ಕೆ ಕಾರ್ಯವನ್ನು ಪದೇ ಪದೇ ಮುಂದೂಡಲಾಗುತ್ತಿದೆ. ಸ್ವಾಧೀನ ಆಗಬೇಕಿರುವ ಭೂಮಿಯಲ್ಲಿ ಶೇ 90ರಷ್ಟು ದೊರೆತ ಬಳಿಕವೆ ಟೆಂಡರ್ ಬಿಡ್ ತೆರೆಯಬೇಕು ಎಂಬ ನಿಯಮ ಇದೆ. ಹಾಗಾಗಿ ಗಣಕಯಂತ್ರದಿಂದ ಟೆಂಡರ್ ತೆರೆಯುವುದನ್ನು ಪದೇ ಪದೇ ಮುಂದೂಡಲಾಗುತ್ತಿದೆ. ಈ ತಿಂಗಳ ಕೊನೆಯಲ್ಲಿ ಪ್ರಕ್ರಿಯೆ ನಡೆದರೆ ಸೆಪ್ಟೆಂಬರ್ ಅಥವ ಅಕ್ಟೋಬರ್ ನಲ್ಲಿ ಕಾಮಗಾರಿ ಆರಂಭವಾಗುವ ಸಾಧ್ಯತೆಯಿದೆ. ಯೋಜನೆಗೆ 410 ಕೋಟಿ ರೂ. ಬಿಡುಗಡೆಯಾಗಿದೆ. ಟೆಂಡರ್ ತೆರೆದು ಗುತ್ತಿಗೆದಾರರ ಆಯ್ಕೆ ಬಳಿಕ ಅನುದಾನದ ಬಳಕೆ ಪ್ರಮಾಣ ನಿರ್ಧಾರವಾಗಲಿದೆ. ಇದರಲ್ಲಿ 263.56 ಕೋಟಿ ರೂ. ಸಿವಿಲ್ ಕಾಮಗಾರಿಗೆ ಬಳಸಬೇಕಾಗಿದೆ. ಉಳಿದ ಅನುದಾನದಲ್ಲಿ ಹೆದ್ದಾರಿ ಕಾಮಗಾರಿಯನ್ನು ಗುತ್ತಿಗೆದಾರರು ಮುಗಿಸಬೇಕು.
ನಗರ ಪ್ರದೇಶದಲ್ಲಿ ರಸ್ತೆ ಮಧ್ಯದಿಂದ 35 ಒಟ್ಟು 70ಅಡಿ, ಗ್ರಾಮೀಣ ಭಾಗದಲ್ಲಿ 45 ಒಟ್ಟು 90 ಅಡಿ ಅಗಲೀಕರಣವಾಗಲಿದೆ. 10 ಮೀಟರ್ ಅಗಲದ ದ್ವಿಪಥ ಡಾಂಬರ್ ರಸ್ತೆ ನಿರ್ಮಿಸಲು ನಕ್ಷೆ ತಯಾರಿಸಲಾಗಿದೆ. 26 ಕಿ.ಮೀ ಉದ್ದದ ರಸ್ತೆಯಲ್ಲಿ 67 ಕಡೆ ಮೋರಿ, 2 ಕಡೆಗಳಲ್ಲಿ ಕಿರು ಸೇತುವೆ ನಿರ್ಮಾಣ, 15 ಕಡೆ ಜಂಕ್ಷನ್ ಅಭಿವೃದ್ಧಿ, 28 ಕಡೆ ಪ್ರಯಾಣಿಕರ ತಂಗುದಾಣ, 2525 ಮೀಟರ್ ಸುರಕ್ಷಿತ ತಡೆಗೋಡೆ, ರಸ್ತೆ ಎರಡೂ ಬದಿಯಲ್ಲಿ 23 ಕಿ.ಮೀ ಉದ್ದದ ಚರಂಡಿ ನಿರ್ಮಾಣ ವಿಸ್ತ್ರತ ಯೋಜನಾ ವರದಿಯಲ್ಲಿ ಸೇರ್ಪಡೆಯಾಗಿದೆ.
ಬದಿಯಲ್ಲಿ ಸಾಲುಮರಗಳಿವೆ. ಬದಿಯಲ್ಲಿರುವ ಕಾಫಿ ತೋಟಗಳಲ್ಲಿ ಖಾಸಗಿಯವರಿಗೆ ಸೇರಿದ ಮರಗಳಿವೆ. ಹೆದ್ದಾರಿ ವಿಸ್ತರಣೆ ಯಾಗಬೇಕಾದರೆ ಯೋಜನೆ ಪ್ರಕಾರ 3,142 ಮರಗಳನ್ನು ಕಡಿಯಬೇಕಾಗುತ್ತದೆ. ಮರಗಳನ್ನು ಕಡಿತಲೆ ಮಾಡಲು ಅರಣ್ಯ ಇಲಾಖೆ ಅನುಮತಿಗಾಗಿ ರಾಷ್ಟ್ರೀಯ ಹೆದ್ದಾರಿ ಅಧಿಕಾರದ ಅಧಿಕಾರಿಗಳು ಪ್ರಯತ್ನ ನಡೆಸಿದ್ದಾರೆ. ತೆರವುಗೊಳಿಸಬೇಕಾದ ಮರಗಳನ್ನು ಗುರುತಿಸುವ ಮತ್ತು ಎಣಿಕೆ ಮಾಡುವ ಕಾರ್ಯ 2 ನೇ ಭಾರಿ ನಡೆದಿದೆ. ಮರಗಳನ್ನು ಕಡಿದು ತೆರೆವುಗೊಳಿಸಿದರೆ ಸಾಲದು ಪ್ರತಿಯೊಂದು ಮರಕ್ಕೆ ಪ್ರತಿಯಾಗಿ 10 ಗಿಡಗಳನ್ನು ನೆಡಬೇಕಾಗಿದೆ. ಕಡಿತಲೆ ಮಾಡಬೇಕಾಗಿರುವ ಎಲ್ಲಾ ಮರಗಳಿಗೂ ಪ್ರತಿಯಾಗಿ 34.550 ಗಿಡಗಳನ್ನು ನೆಡಬೇಕಿದೆ. ಈ ಒಪ್ಪಂದವಾದ ಮಾತ್ರ ಮರ ಕಡಿತಲೆ ಮಾಡಲು ಅರಣ್ಯ ಇಲಾಖೆಯ ಅನುಮತಿ ನೀಡಲಿದೆ.
ರಸ್ತೆ ಬದಿಯಲ್ಲಿ ಉದ್ದಕ್ಕೂ ವಿದ್ಯುತ್ ಕಂಬಗಳಿವೆ. ಅದನ್ನು ತೆರವುಗೊಳಿಸಬೇಕು. ಮೆಸ್ಕಾಂನೊಂದಿಗೆ ಹೆದ್ದಾರಿ ಅಧಿಕಾರಿಗಳು ಈ ಸಂಬಂಧ ಚರ್ಚೆ ನಡೆಸಿದ್ದಾರೆ. ರಸ್ತೆ ಬದಿಯಲ್ಲಿ ಕುಡಿಯುವ ನೀರಿನ ಪೈಪ್ ಅಳವಡಿಸಲಾಗಿದೆ. ಆಯಾ ಗ್ರಾಪಂಗಳು ಪೈಪ್ ಗಳನ್ನು ತೆರವುಗೊಳಿಸಿ ಮತ್ತೆ ರಸ್ತೆ ಮಧ್ಯ ಭಾಗದಿಂದ 45 ಜಾಗ ರಸ್ತೆಗೆ ಬಿಟ್ಟು ಪೈಪ್ ಅಳವಡಿಸಿಕೊಳ್ಳಬೇಕಿದೆ. ಭೂ ಸ್ವಾಧೀನವಾದ ಬಳಿಕ ಈ ಪ್ರಕ್ರಿಯೆ ನಡೆಯಲಿದೆ. ಪಟ್ಟಣ ಪ್ರದೇಶದಲ್ಲಿ 35 ಅಡಿ ಬಿಟ್ಟು ಪಪಂ ಆಡಳಿತದಿಂದ ಪೈಪ್ ಅಳವಡಿಸಿಕೊಳ್ಳಬೇಕು. ಭೂಸ್ವಾಧೀನ ಪ್ರಕ್ರಿಯೆ ನಂತರ ಹೆದ್ದಾರಿ ಬದಿಯ ಕಟ್ಟಡಗಳನ್ನು ತೆರವುಗೊಳಿಸಿದ ಬಳಿಕವಷ್ಟೆ ವಿದ್ಯುತ್ ಕಂಬ ಮತ್ತು ಕುಡಿಯುವ ನೀರಿನ ಪೈಪ್ ತೆರವುಗೊಳಿಸಿ ಬದಿಗೆ ಅಳವಡಿಸಲು ಸಾಧ್ಯವಾಗಲಿದೆ.



