ಧರ್ಮಸ್ಥಳ ಕ್ಷೇತ್ರ ವ್ಯಾಪ್ತಿಯಲ್ಲಿ ಸರಣಿ ಸಾವುಗಳ ಕೊಲೆ ಪ್ರಕಾರಣ ಬಗ್ಗೆ ಉನ್ನತಮಟ್ಟದ ನ್ಯಾಯಾಂಗ ತನಿಖೆಗೆ ವಹಿಸಬೇಕೆಂದು ಸಿಪಿಐಎಂಎಲ್ ರಾಜ್ಯ ಕಾರ್ಯದರ್ಶಿ ಬಿ.ರುದ್ರಯ್ಯ ಒತ್ತಾಯಿಸಿದರು.
ಅವರು ಬುಧವಾರ ಮೂಡಿಗೆರೆಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, ಧರ್ಮಸ್ಥಳದಲ್ಲಿ ಧರ್ಮ, ಧರ್ಮಾಧಿಕಾರಿಗಳಿದ್ದಾರೆ. ಅಲ್ಲಿ ಧಯೆ, ಧರ್ಮ, ನ್ಯಾಯ, ನೀತಿಯಿದೆ ಎಂದು ಜನರು ಅಪಾರ ನಂಬಿಕೆ ಹಾಗೂ ಭಕ್ತಿಯಿಂದ ನಡೆದುಕೊಳ್ಳುತ್ತಿದ್ದಾರೆ. ಆದರೆ ಅಂತಹ ಧಾರ್ಮಿಕ ಪರಿಸರದಲ್ಲಿ ಮಹಿಳೆಯರ ಸರಣಿ ಹತ್ಯೆ ನಡೆದಿರುವುದರಿಂದ ಕ್ಷೇತ್ರದ ಮೇಲೆ ಕೆಟ್ಟ ಪರಿಣಾಮ ಬೀರಿದೆ. ಅಲ್ಲದೇ ಕೇಂದ್ರ ಹಾಗೂ ರಾಜ್ಯ ಸರಕಾರಗಳ ನಿಕಟ ಸಂಪರ್ಕದಲ್ಲಿರುವ ದೇವಸ್ಥಾನವಾಗಿದ್ದರಿಂದ ಸರಕಾರಗಳ ಮೇಲೆ ಪ್ರಭಾವ ಬೀರುವ ಮೂಲಕ ಸರಣಿ ಪ್ರಕರಣ ಹಳ್ಳ ಹಿಡಿಸುವ ಷಡ್ಯಂತರ ನಡೆಯುತ್ತಿದೆ ಎಂಬ ಭಾವನೆ ರಾಜ್ಯದ ಜನರಲ್ಲಿ ಮೂಡಿದೆ. ಈಗಾಗಲೇ 400 ಕೊಲೆಗಳು ನಡೆದಿದೆ ಎಂದು ಹೇಳಲಾಗುತ್ತಿದೆ. ಇದು ಸತ್ಯವೋ ಅಥವಾ ಕೆಲ ಶಕ್ತಿಗಳು ಧರ್ಮಸ್ಥಳ ಕ್ಷೇತ್ರಕ್ಕೆ ಮಸಿ ಬಳೆಯುವ ಷಡ್ಯಂತರ ನಡೆಸುತ್ತಿದ್ದಾರೆಯೋ ಎಂಬುದು ತಿಳಿಯಬೇಕೆಂದರೆ ಈ ಬಗ್ಗೆ ನಿಷ್ಪಕ್ಷಪಾತ ತನಿಖೆಯಾಗಬೇಕೆಂದು ಆಗ್ರಹಿಸಿದರು.
ಸೌಜನ್ಯಳ ಹತ್ಯೆ ಪ್ರಕರಣದ ಅಪರಾಧಿಗಳ ಪರ ನಿಂತಿರುವ ಎಲ್ಲಾ ಅಧಿಕಾರಿಗಳನ್ನು ಕೂಡಲೇ ಸೇವೆಯಿಂದ ವಜಾಗೊಳಿಸಬೇಕು. 400ಕ್ಕೂ ಅಧಿಕ ಯುವತಿ, ಮಹಿಳೆಯರನ್ನು ಹತ್ಯೆ ಮಾಡಿ ಹೂತಿಟ್ಟಿರುವ ಮೃತ ದೇಹಗಳನ್ನು ಹೊರ ತೆಗೆದು ಉನ್ನತ ಪ್ರಯೋಗಾಲಯಕ್ಕೆ ಕಳುಹಿಸಿಕೊಡಬೇಕು. ಈಗಾಗಲೇ ರಾಜ್ಯ ಸರಕಾರ ಎಸ್‍ಐಟಿ ಮೂಲಕ ಪ್ರಕರಣಗಳ ತನಿಖೆಗೆ ಮುಂದಾಗಿರಿವುದು ಮತ್ತೆ ಅನುಮಾನಕ್ಕೆ ಎಡೆಮಾಡಿಕೊಟ್ಟಂತಾಗಿದೆ. ಸರಕಾರದ ನಿಯಂತ್ರಣ ತಂಡವಾದ ಎಸ್‍ಐಟಿಯಿಂದ ಸತ್ಯಾಂಶ ಹೊರಬರುವ ಸಾಧ್ಯತೆ ಕಡಿಮೆ ಇದೆ. ಹಾಗಾಗಿ ನಿವೃತ್ತ ನ್ಯಾಯಾಧೀಶರಿಂದ ಪ್ರಕರಣದ ತನಿಖೆಗೆ ವಹಿಸಬೇಕೆಂದು ಆಗ್ರಹಿಸಿದರು.
ಧರ್ಮ, ಜಾತಿ ಬಗ್ಗೆ ಬಾಯಿ ಬಡೆದುಕೊಳ್ಳುವ ಸಿ.ಟಿ.ರವಿ, ಶೋಭಾ ಕರಂದ್ಲಾಜೆ, ಈಶ್ವರಪ್ಪ ಸೇರಿದಂತೆ ಬಿಜೆಪಿ, ಆರ್‍ಎಎಸ್‍ಎಸ್ ಹಾಗೂ ಹಿಂದೂಪರ ಸಂಘಟನೆಗಳು ಧರ್ಮ ಕ್ಷೇತ್ರದಲ್ಲಿ 400ಕ್ಕೂ ಅಧಿಕ ಹಿಂದೂ ಮಹಿಳೆಯರ ಕೊಲೆ ನಡೆದಿದ್ದರೂ ತುಟಿ ಬಿಚ್ಚದಿರುವುದು ದುರ್ಧೈವ. ಈ ಪ್ರಕರಣದ ಬಗ್ಗೆ ಸಿ.ಟಿ.ರವಿ ಅವರು ಆಡೋ ಮಕ್ಕಳ ರೀತಿಯಲ್ಲಿ ಮಾತನಾಡುತ್ತಾರೆ. ಚಿಕ್ಕಮಗಳೂರಿಗೆ ಅವರ ಕೊಡುಗೆ ಶೂನ್ಯ ಎಂದು ದೂರಿದರು.
ಮುಖಂಡರಾದ ಸುರೇಶ್, ಗಣೇಶ್, ಹರೀಶ್ ನಲ್ಕೆ ಉಪಸ್ಥಿತರಿದ್ದರು.



