ಸಾಂಸ್ಕೃತಿಕ, ಸಾಮಾಜಿಕ, ಧಾರ್ಮಿಕ ಬದಲಾವಣೆಗೆ ಶ್ರಾವಣ ಪ್ರೇರಕ-ಸಹಕಾರಿ ಎಂದು ಶಾಸಕ ಎಚ್.ಡಿ.ತಮ್ಮಯ್ಯ ಅಭಿಪ್ರಾಯಿಸಿದರು.
ಮಾಧ್ಯಮ ಸಂಸ್ಕೃತಿ ಪ್ರತಿಷ್ಠಾನ, ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಹಾಗೂ ಐಸಿರಿ ಫೌಂಡೇಶನ್ ಸಹಯೋಗದೊಂದಿಗೆ ಜುಲೈ26 ರಿಂದ ಆಗಸ್ಟ್24ರ ವರೆಗೆ ಆಯೋಜಿಸಿರುವ ‘ಅಂಗಳದೆಡೆಗೆ ಮಂಗಳ ನುಡಿ-ನಡಿಗೆ’ ‘ಶ್ರಾವಣಮಾಸದ ಪ್ರವಚನ ಮಾಲಿಕೆ’ಯನ್ನು ಕಲ್ಯಾಣನಗರದ ಶಾಸಕರ ಮನೆಯಂಗಳದಲ್ಲಿ ನಿನ್ನೆಸಂಜೆ ಉದ್ಘಾಟಿಸಿ ಅವರು ಮಾತನಾಡಿದರು.
ಯುವಪೀಳಿಗೆಯಲ್ಲಿ ನಮ್ಮ ಸಂಸ್ಕೃತಿ, ಇತಿಹಾಸ, ಪರಂಪರೆಯ ಬಗ್ಗೆ ಅರಿವು ಮೂಡಿಸಲು ಶ್ರಾವಣಮಾಸ ಅತ್ಯಂತ ಸೂಕ್ತ. ಶ್ರಾವಣವೇ ಅಪ್ಯಾಯಮಾನ. ನಿಸರ್ಗ ಸಂಭ್ರಮಿಸುವ ಶ್ರಾವಣದಲ್ಲಿ ಘಂಟಾನಾದ, ಪುರಾಣ ಪ್ರವಚನ, ಶುಭ ನುಡಿಗಳ ಸಿಂಚನ ಪ್ರಮುಖವಾಗಿರುತ್ತದೆ. ಶ್ರಾವಣ ಶುಭ ಕಾರ್ಯಗಳಿಗೆ ಪ್ರಶಸ್ತವೆಂಬ ಮಾತಿದೆ. ಹಬ್ಬಗಳ ಮೆರವಣಿಗೆ ಶ್ರಾವಣ ಎಂದರು.
ನಾವೆಲ್ಲರೂ ನೆಮ್ಮದಿಯ ಶಾಂತಿಯ ವಾತಾವರಣದಲ್ಲಿರಲು ದೇಶದ ಸುಭೀಕ್ಷೆ ಪ್ರಮುಖ. ನಂತರ ಧಾರ್ಮಿಕ ಆಚರಣೆಗಳು ನಮ್ಮೊಂದಿಗೆ ಬೆಸೆದುಕೊಂಡಿದೆ. ಭಾರತ ಹಲವು ಧರ್ಮ, ಸಂಸ್ಕøತಿ, ಸಂಸ್ಕಾರ ವಿಚಾರಗಳನ್ನೊಳಗೊಂಡ ಬಹುತ್ವದ ವಿಶೇಷತೆ ಹೊಂದಿದೆ. ಸಾಂಸ್ಕøತಿಕ ಚಿಂತಕ ಚಟ್ನಳ್ಳಿಮಹೇಶಣ್ಣ ತಂಡ ಶ್ರಾವಣಮಾಸದಲ್ಲಿ ಒಳ್ಳೆಯ ಮಾತುಗಳನ್ನು ಮನೆ-ಮನಕ್ಕೆ ಮುಟ್ಟಿಸುವ ಕೆಲಸ ಹಿಂದಿನಿಂದಲೂ ಮಾಡಿಕೊಂಡು ಬಂದಿದೆ. ಜಾತಿ, ಮತ, ಪಕ್ಷ ಯಾವುದೇ ಬೇಧವಿಲ್ಲದೆ ಸಹೃದಯರ ಮನೆಯಂಗಳದಲ್ಲಿ ಚಿಕ್ಕ-ಚೊಕ್ಕ ಕಾರ್ಯಕ್ರಮವನ್ನು ಶ್ರಾವಣಮಾಸ ಪರ್ಯಂತ ಹಮ್ಮಿಕೊಂಡಿರುವುದು ಮಾದರಿಯ ಸಂಗತಿ ಎಂದರು.
‘ಶ್ರಾವಣ ಶ್ರವಣ’ ಕುರಿತಂತೆ ಪ್ರವಚನ ನೀಡಿದ ಸಾಹಿತಿ-ವಾಗ್ಮಿ ಚಟ್ನಳ್ಳಿಮಹೇಶ್ ಮಾತಿಗೆ ಸಮಾಜ ಪರಿವರ್ತಿಸುವ ಅಪಾರ ಶಕ್ತಿ ಇದೆ. ನಮ್ಮ ಹಿರಿಯರ ಅನುಭವಗಳನ್ನು ಮೆಲುಕು ಹಾಕಿದರೆ ಅದೊಂದು ದೊಡ್ಡ ಶಬ್ದಕೋಶವಾಗುತ್ತದೆ. ಇಂದು ಆಧುಕತೆಯ ಭರಾಟೆಯಲ್ಲಿ ಮನಸ್ಸುಗಳು ದೂರವಾಗುತ್ತಿವೆ. ಮನಸ್ಸುಗಳನ್ನು ಹತ್ತಿರಕ್ಕೆ ತರುವ, ಮನಸ್ಸನ್ನು ಕಟ್ಟುವ ಕಾರ್ಯ ಇಂದಿನ ತುರ್ತು ಅಗತ್ಯ. ನಿಸರ್ಗದಲ್ಲೆ ಸಾಮರಸ್ಯದ ಸಂದೇಶವಿದೆ. ಅದನ್ನು ಮೆಲುಕುಹಾಕುವ ಪುಟ್ಟಪ್ರಯತ್ನ ಈ ಅಭಿಯಾನ ಎಂದರು.
ಆತ್ಮವಿಶ್ವಾಸ ಸಾಧನೆಗೆ ಪೂರಕ. ಯುವಶಕ್ತಿಯನ್ನು ಪರಿಣಾಮಕಾರಿಯಾಗಿ ಬಳಸಿಕೊಂಡರೆ ಸುಂದರ ಸಮಾಜ ನಮ್ಮದಾಗುತ್ತದೆ. ಕಾಲ ಕೆಟ್ಟಿದೆ ಎಂಬ ಸಾಮಾನ್ಯ ಮಾತು ಸರಿಯಲ್ಲ. ಡಿವಿಜಿ ಹೇಳಿರುವಂತೆ ‘ಅದೇ ಸೂರ್ಯ, ಅದೇ ಚಂದ್ರ, ಅದೇ ಭೂಮಿ…’ ಕೆಟ್ಟಿರುವುದು ನಾವು. ಯುವಶಕ್ತಿಗೆ ಒಳ್ಳೆಯ ದಿಕ್ಕು-ಆಲೋಚನೆ ನೀಡುವ, ಒಳಿತನ್ನು ಬೆಂಬಲಿಸುವ ಸ್ಫೂರ್ತಿಯ ಸೆಲೆಯಾಗಿ ಶ್ರಾವಣದ ಕಾರ್ಯಕ್ರಮ ನಡೆಯುತ್ತಿದೆ. ಮಹಾತ್ಮಾಗಾಂಧಿ ಅವರು ಯುವಜನರು ದೇಶದ ಸಾರಸತ್ವ ಎಂದಿದ್ದಾರೆ. ಸ್ವಾಮಿ ವಿವೇಕಾನಂದರು ಯುವಶಕ್ತಿಯ ಸದ್ಭಳಕೆ ಮಾತುಗಳನ್ನು ಆಡಿದ್ದಾರೆಂದ ಚಟ್ನಳ್ಳಿಮಹೇಶ್, ನರ ಹರನಾಗಲು, ಮಾನವ ಮಹಾದೇವನಾಗಲು, ಮನೆಗಳು ಮಹಾಮನೆಗಳಾಗಲು ಸತ್ಸಂಗ ಸಹಕಾರಿ ಎಂದರು.
ಬಸವತತ್ತ್ವ ಪೀಠದ ಅಧ್ಯಕ್ಷ ಡಾ.ಶ್ರೀಬಸವ ಮರುಳಸಿದ್ಧಸ್ವಾಮೀಜಿ ಸಾನಿಧ್ಯವಹಿಸಿ ಆಶೀರ್ವಚನ ನೀಡಿ, ಬದುಕಿನ ಸವಾಲುಗಳನ್ನು ಸಮರ್ಥವಾಗಿ ಎದುರಿಸಲು ಸಹಜವಾದ ವಾತಾವರಣದಲ್ಲಿ ಮಕ್ಕಳು ನೋಡಿ, ಆಡಿ, ತುಂಬು ಕುಟುಂಬದಲ್ಲಿ ಬೆಳೆಯಬೇಕು. ಸಹಜವಾಗಿರುವುದನ್ನು ಬಿಟ್ಟು ಕೃತಕತೆಯತ್ತ ಮುಖ ಮಾಡಿರುವುದು ದುರ್ದೈವದ ಸಂಗತಿ. ಜನರ ಒಡನಾಟ ಕಡಿಮೆ ಮಾಡಿ ಆಹಾರ, ಮಾತು, ಬಟ್ಟೆ ಬದುಕಿನಲ್ಲಿ ಬೇರೆಯದನ್ನೆ ಅನುಕರಿಸುವುದರಿಂದ ಮೌಲ್ಯಗಳು ಮರೆಯಾಗುತ್ತಿದೆ ಎಂದರು.
ನಮ್ಮ ಪರಂಪರೆಯಲ್ಲಿ ಬಂದಿರುವ ಆಚಾರ-ವಿಚಾರಗಳನ್ನು ಅಳವಡಿಸಿಕೊಂಡರೆ ಬದುಕು ಹಸನಾಗುತ್ತದೆ. ಶ್ರಾವಣಮಾಸದಲ್ಲಿ ಶ್ರವಣ ಮುಖ್ಯ. ರೈತಾಪಿ ವರ್ಗ ದೇಶದಲ್ಲಿ ಬಹುಸಂಖ್ಯಾತರಾಗಿದ್ದು ಅವರು ಆಷಾಢಮಾಸದಲ್ಲಿ ಬಿಡುವಿಲ್ಲದ ಭೂಮಿಯ ಕೆಲಸದಲ್ಲಿ ತೊಡಗಿಸಿಕೊಂಡ ಕಾಯಕ ಜೀವಿಗಳು. ಶ್ರಾವಣದಲ್ಲಿ ರೈತರಿಗೆ ಸ್ವಲ್ಪ ಬಿಡುವಿದ್ದು ಗುರು, ಲಿಂಗ, ಜಂಗಮ ಸೇವೆಯ ಜೊತೆಗೆ ಸಾಹಿತ್ಯದ ಅಭಿರುಚಿ-ಅಭಿವ್ಯಕ್ತಿಗೆ ಸೂಕ್ತ ಸಂದರ್ಭ. ಬದುಕಿನ ಏರಿಳಿತಗಳನ್ನು ನಿಭಾಯಿಸುವ ಸಾಮಥ್ರ್ಯವನ್ನು ಶ್ರಾವಣ ಕಾರ್ಯಕ್ರಮ ತಂದುಕೊಡಲಿ ಎಂದ ಸ್ವಾಮೀಜಿ, ಆಯೋಜಕ ತಂಡವನ್ನು ಅಭಿನಂದಿಸಿದರು.
ಬೇಲೂರಿನ ಚಂದನ್ ಶ್ರಾವಣಗೀತೆಗಳನ್ನು ಪ್ರಸ್ತುತ ಪಡಿಸಿದರು. ಪದೋನ್ನತಿ ಪಡೆದ ಪೌರಾಯುಕ್ತ ಬಸವರಾಜು ಅವರನ್ನು ಸನ್ಮಾನಿಸಲಾಯಿತು. ಎ.ಎಸ್.ಎಸ್.ಆರಾಧ್ಯ ಮತ್ತು ಸುಮಿತ್ರಾಶಾಸ್ತ್ರಿ ಅಭಿಪ್ರಾಯ ಹಂಚಿಕೊಂಡರು.
ಮಾಧ್ಯಮಸಂಸ್ಕøತಿ ಪ್ರತಿಷ್ಠಾನದ ಅಧ್ಯಕ್ಷ ಪ್ರಭುಲಿಂಗಶಾಸ್ತ್ರಿ ಸ್ವಾಗತಿಸಿ, ಐಸಿರಿ ಫೌಂಡೇಶನ್ ಅಧ್ಯಕ್ಷ ರೋಹನಭಾರ್ಗವಪುರಿ ಪ್ರಾಸ್ತಾವಿಸಿ, ಶಿಕ್ಷಕ ಪರಮೇಶ್ವರಪ್ಪ ನಿರೂಪಿಸಿದರು. ಪ್ರಾಯೋಜಕ ದೇವಿರಪ್ಪ ಅವರನ್ನು ಗೌರವಿಸಲಾಯಿತು.



