ಮೂಡಿಗೆರೆ ತಾಲ್ಲೂಕಿನ ಊರುಬಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕೆಲ ಸಮಯದಿಂದ ಕಡಿಮೆಯಾಗಿದ್ದ ಕಾಡಾನೆ ಹಾವಳಿ ಮತ್ತೆ ಮರುಕಳಿಸುತ್ತಿದೆ. ಊರುಬಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸತ್ತಿಗನಹಳ್ಳಿ, ಕುಂಬರಡಿ, ಊರುಬಗೆ, ಬೈರಾಪುರ, ಹೊಸಕೆರೆ, ಬೈದುವಳ್ಳಿ, ಅಡ್ಡಗುಡ್ಡೆ ಮುಂತಾದ ಗ್ರಾಮಗಳ ವ್ಯಾಪ್ತಿಯಲ್ಲಿ ಕಾಡಾನೆಯೊಂದು ನಿರಂತರ ತಿರುಗುತ್ತಾ ಜನರಲ್ಲಿ ಭಯವನ್ನು ಹುಟ್ಟಿಸಿದೆ.

ರಾತ್ರಿ ಹಗಲೆನ್ನದೇ ಮನೆಯ ಸಮೀಪಕ್ಕೆ ಬರುವ ಕಾಡಾನೆ ಹಾವಳಿ ಯಿಂದ ಜನರು ಕಂಗಾಲಾಗಿದ್ದಾರೆ. ಸತ್ತಿಗನಹಳ್ಳಿಯ ಅನೇಕ ಕೃಷಿಕರ ಮನೆಯಂಗಳಕ್ಕೆ ಬಂದು ಕಾಫಿ, ಕಾಳುಮೆಣಸು, ಅಡಿಕೆ, ಬಾಳೆ ಗಿಡಗಳನ್ನು ನಾಶಪಡಿಸುತ್ತಿವೆ. ಮನೆಯ ಸಮೀಪ ಇಟ್ಟಿದ್ದ ನೀರಿನ ಸಿಂಟೆಕ್ಸ್ ಗಳನ್ನು, ಬ್ಯಾರಲ್, ಪೈಪುಗಳನ್ನು ಪುಡಿಗೈಯುತ್ತಿವೆ. ಈ ಭಾಗದಲ್ಲಿ ಕಳೆದ ಒಂದು ವರ್ಷದಿಂದ ಕೊಂಚ ಕಡಿಮೆಯಾಗಿದ್ದ ಕಾಡಾನೆ ಹಾವಳಿ ಇದೀಗ ಮತ್ತೆ ಮರುಕಳಿಸುತ್ತಿದೆ. ಈ ಭಾಗದಲ್ಲಿ ಕಳೆದ ಎರಡು ವರ್ಷದ ಹಿಂದ ಇಟಿಎಫ್ ಸಿಬ್ಬಂದಿ ಸೇರಿದಂತೆ ಹಲವರನ್ನು ಕಾಡಾನೆ ತುಳಿದು ಸಾಯಿಸಿದ್ದ ಘಟನೆಗಳು ನಡೆದಿದ್ದವು. ಇದೀಗ ಅಂತಹ ಜೀವ ಹಾನಿ ಮತ್ತೆ ಮರುಕಳಿಸುವ ಮುನ್ನ ಇಲ್ಲಿ ಬೀಡುಬಿಟ್ಟಿರುವ ಕಾಡಾನೆಯನ್ನು ಕೂಡಲೇ ಸೆರೆಹಿಡಿದು ಬೇರೆಡೆಗೆ ಸಾಗಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಒಂಟಿ ಸಲಗವೊಂದು ಕಳೆದ ಕೆಲ ದಿನಗಳಿಂದ ರಾತ್ರಿ ಸಮಯದಲ್ಲಿ ನಿರಂತರವಾಗಿ ಮನೆ ಸಮೀಪಕ್ಕೆ ಬರುತ್ತಿದೆ. ಕಾಫಿ ತೋಟಗಳನ್ನು ನಾಶಗೈಯುತ್ತಿದೆ. ಸಂಜೆಯಾದ ನಂತರ ಮನೆಯಿಂದ ಹೊರಗೆ ಬರಲು ಭಯಪಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಅರಣ್ಯ ಇಲಾಖೆಗೆ ಕರೆ ಮಾಡಿದರೆ ಸಿಬ್ಬಂದಿಗಳು ಬಂದು ಸ್ಥಳ ಪರಿಶೀಲನೆ ಮಾಡಿ ಹೋಗುತ್ತಾರಷ್ಟೇ. ಆನೆಯನ್ನು ಕಾಡಿಗೆ ಅಟ್ಟುವ ಕಾರ್ಯ ಮಾಡುತ್ತಿಲ್ಲ. ತಕ್ಷಣ ಇಲ್ಲಿ ಉಪಟಳ ನೀಡುತ್ತಿರುವ ಕಾಡಾನೆಯನ್ನು ಸೆರೆಹಿಡಿದು ಬೇರೆಡೆಗೆ ಸಾಗಿಸಬೇಕು. ಇಲ್ಲದೇ ಇದ್ದರೆ ಈ ಭಾಗದ ರೈತರು ಪ್ರತಿಭಟನೆಯ ಹಾದಿ ಹಿಡಿಯಬೇಕಾಗುತ್ತದೆ.
* ಎಸ್.ಎ.ವಾಸುದೇವ್, ಸತ್ತಿಗನಹಳ್ಳಿ



