ಕಳಸ ಕೆಪಿಎಸ್ ಶಾಲೆಯ ಮೂಲಭೂತ ಸೌಕರ್ಯಕ್ಕಾಗಿ ರಾಜ್ಯ ಸರ್ಕಾರ 2.07 ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಿದೆ ಎಂದು ಶಾಲಾಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷ ಮೊಹಮ್ಮದ್ ರಫೀಕ್ ತಿಳಿಸಿದ್ದಾರೆ.
8 ತರಗತಿಗಳಿಗೆ 1.48 ಕೋಟಿ ರೂಪಾಯಿ ಮತ್ತು ಮೂರು ವಿಜ್ಞಾನ ಪ್ರಯೋಗಾಲಯಗಳಿಗೆ 59 ಲಕ್ಷ ರೂಪಾಯಿ ಮಂಜೂರಾಗಿದೆ. ಇದರಿಂದ ಶಾಲೆಯಲ್ಲಿ ಇದ್ದ ಕೊಠಡಿಗಳ ಕೊರತೆಯ ಸಮಸ್ಯೆ ನೀಗಲಿದೆ. ಒಂದರಿಂದ ಹನ್ನೆರಡನೇ ತರಗತಿವರೆಗಿನ ಎಲ್ಲ ಮಕ್ಕಳು ಒಂದೇ ಕ್ಯಾಂಪಸ್ ನಲ್ಲಿ ಶಿಕ್ಷಣ ಪಡೆಯಲು ಅನುಕೂಲ ಆಗುತ್ತದೆ ಎಂದು ರಫೀಕ್ ತಿಳಿಸಿದ್ದಾರೆ.
ಕಳೆದ ವರ್ಷ ಶಿಕ್ಷಣ ಸಚಿವ ಮಧು ಬಂಗಾರಪ್ಪ ಕಳಸ ಕೆಪಿಎಸ್ ಶಾಲೆಗೆ ಭೇಟಿ ನೀಡಿದಾಗ ಇಲ್ಲಿನ ಶಾಲೆಗೆ 10 ಕೋಟಿ ರೂಪಾಯಿ ಅನುದಾನ ಕೊಡುವಂತೆ ರಫೀಕ್ ಮನವಿ ಮಾಡಿದ್ದರು. ಶಾಲೆಗೆ ಕೆಪಿಎಸ್ ಸ್ಥಾನಮಾನ ಸಿಕ್ಕಿದಾಗಿನಿಂದ ವಿಶೇಷ ಅನುದಾನ ಸಿಕ್ಕಿರಲಿಲ್ಲ.1000ಕ್ಕೂ ಹೆಚ್ಚು ಮಕ್ಕಳು ವ್ಯಾಸಂಗ ಮಾಡುವ ಶಾಲೆಗೆ ಮೂಲಸೌಕರ್ಯಕ್ಕಾಗಿ ದೊಡ್ಡ ಮೊತ್ತ ಬೇಕಾಗುತ್ತದೆ ಎಂದು ಸಚಿವರ ಗಮನ ಸೆಳೆದಿದ್ದರು.
ಸತತ 2 ವರ್ಷದ ಪ್ರಯತ್ನದ ನಂತರ ಶಾಲೆಗೆ 2 ಕೋಟಿಗೂ ಹೆಚ್ಚಿನ ಮೊತ್ತ ಸಿಕ್ಕಿದೆ. ಇದು ರಾಜ್ಯದ ಯಾವುದೇ ಶಾಲೆಗೂ ಸಿಗದಷ್ಟು ದೊಡ್ಡ ಮೊತ್ತ ಸಿಕ್ಕಿದೆ.
ಈ ಅನುದಾನ ಬಿಡುಗಡೆಯಾಗಲು ಸಹಕರಿಸಿದ ರಾಜ್ಯದ ಮುಖ್ಯ ಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಶಿಕ್ಷಣ ಸಚಿವ ಮಧು ಬಂಗಾರಪ್ಪ, ಅವರ ಆಪ್ತ ಕಾರ್ಯದರ್ಶಿ ಕಿಶೋರ್, ಸಚಿವ ಕೆ.ಎಂ.ಮುನಿಯಪ್ಪ ಅವರ ವಿಶೇಷ ಅಧಿಕಾರಿ ವೆಂಕಟೇಶ್, ಕ್ಷೇತ್ರದ ಶಾಸಕರಾದ ಶ್ರೀಮತಿ ನಯನ ಮೋಟಮ್ಮನವರು ಸಹಕರಿಸಿದ್ದಾರೆ ಎಂದು ರಫೀಕ್ ಹರ್ಷ ವ್ಯಕ್ತಪಡಿಸಿದ್ದಾರೆ.



