ಕೊಡಗಿನ ವಿರಾಜಪೇಟೆ ತಾಲೂಕಿನ ಸಿದ್ದಾಪುರ ಸಮೀಪದಲ್ಲಿ ಗುರುವಾರ ಕಾಫಿ ಬೆಳೆಗಾರನನ್ನು ಕೊಂದಿದ್ದ ಕಾಡಾನೆಯನ್ನು ಅರಣ್ಯ ಇಲಾಖೆ ಶುಕ್ರವಾರ ಸೆರೆಹಿಡಿದಿದೆ.
38 ರಿಂದ 40 ವರ್ಷ ವಯಸ್ಸಿನ ಈ ಕಾಡಾನೆಯನ್ನು ಸೆರೆಹಿಡಿದು ಜಿಲ್ಲೆಯ ದುಬಾರೆ ಆನೆ ಶಿಬಿರಕ್ಕೆ ಸ್ಥಳಾಂತರಿಸಲಾಗಿದೆ.
ಕಾಡಾನೆ ದಾಳಿಯಲ್ಲಿ ಗುಹ್ಯದ ಕಾಫಿ ಬೆಳೆಗಾರ ಗಣಪತಿ(ಗಪ್ಪು) ಮೃತಪಟ್ಟಿದ್ದರು. ಕೊಡಗಿನಲ್ಲಿ ಕಳೆದ ಒಂದು ವಾರದಲ್ಲಿ ನಡೆದ ಮೂರನೇ ಆನೆ ದಾಳಿ ಇದಾಗಿದ್ದು, ಜಿಲ್ಲೆಯಾದ್ಯಂತ ನೂರಾರು ರೈತರು ತೀವ್ರ ಆಕ್ರೋಶಗೊಂಡಿದ್ದರು. ಅರಣ್ಯ ಇಲಾಖೆಯ ವಿರುದ್ಧ ಪ್ರತಿಭಟನೆ ನಡೆಸಿ, ವನ್ಯಜೀವಿ ಸಂಘರ್ಷದ ಬಗ್ಗೆ ನಿರ್ಲಕ್ಷ್ಯ ವಹಿಸುತ್ತಿರುವ ಇಲಾಖೆಯ ವಿರುದ್ಧ ಎಫ್‌ಐಆರ್ ದಾಖಲಿಸಬೇಕೆಂದು ಒತ್ತಾಯಿಸಿದರು.
ಈ ಬೆಳವಣಿಗೆ ನಂತರ, ಇಲಾಖೆಗೆ ಕಾಡಾನೆಯನ್ನು ಸೆರೆಹಿಡಿಯಲು ರಾಜ್ಯ ಸರ್ಕಾರದಿಂದ ತಕ್ಷಣ ಅನುಮತಿ ಸಿಕ್ಕಿತು. ಆನೆ ಸೆರೆಹಿಡಿಯುವ ಕಾರ್ಯಾಚರಣೆಗೆ ಬೆಂಬಲವಾಗಿ ಆರು ಪಳಗಿದ ಆನೆಗಳನ್ನು ಸ್ಥಳಕ್ಕೆ ಕರೆತರಲಾಯಿತು. ಅಲ್ಲದೆ ಆನೆಯನ್ನು ಪತ್ತೆಹಚ್ಚಲು ಥರ್ಮೋ ಡ್ರೋನ್‌ಗಳು ಮತ್ತು ಇತರ ಡ್ರೋನ್ ಕ್ಯಾಮೆರಾಗಳನ್ನು ಬಳಸಲಾಯಿತು.
ಆನೆ ಸೆರೆಹಿಡಿಯುವ ಕಾರ್ಯಾಚರಣೆ ಶುಕ್ರವಾರ ಬೆಳಗ್ಗೆ ಪ್ರಾರಂಭವಾಯಿತು ಮತ್ತು ಸಂಜೆ ವೇಳೆ ಅರಣ್ಯ ಇಲಾಖೆ, ಗಂಡು ಆನೆಯನ್ನು ಸೆರೆಹಿಡಿಯುವಲ್ಲಿ ಯಶಸ್ವಿಯಾಯಿತು. ಘಟನೆ ನಡೆದ ಸ್ಥಳದಿಂದ ಸುಮಾರು 15 ಕಿ.ಮೀ ದೂರ ಕ್ರಮಿಸಿದ್ದ ಆನೆಯನ್ನು ಹುಂಡಿ ಗ್ರಾಮದಲ್ಲಿ ಸೆರೆಹಿಡಿಯಲಾಗಿದೆ.



