ಮೂಡಿಗೆರೆ ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿರುವ ಅಂಗಡಿಗಳ ನವೀಕರಣ ಹಾಗೂ ಪರವಾನಗಿ ಶುಲ್ಕವನ್ನು ಹಿಂದಿನ ಅಧ್ಯಕ್ಷರು ಮನಸ್ಸೋಇಚ್ಛೆಯಂತೆ ಏಕಾಏಕಿ ಅಧಿಕಗೊಳಿಸಿರುವುದು ಖಂಡನೀಯ ಎಂದು ಮೂಡಿಗೆರೆ ಛೇಂಬರ್ ಆಪ್ ಕಾಮರ್ಸ್ ಅಧ್ಯಕ್ಷ ಎಚ್.ಎ.ಆದರ್ಶ ಹೇಳಿದರು.
ಅವರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪಟ್ಟಣ ವ್ಯಾಪ್ತಿಯ ಅಂಗಡಿಗಳಿಗೆ ನವೀಕರಣ ಮತ್ತು ಪರವಾನಗಿ ಪಡೆಯಲು ಅಂಗಡಿಗಳಿಗೆ ಹಿಂದಿನ ಆಡಳಿತ ಅವಧಿಯಲ್ಲಿ ತಮ್ಮ ಮನಸ್ಸೋ ಇಚ್ಛೆಯಂತೆ ಶೇ.100ರಿಂದ 200 ರಷ್ಟು ಅಧಿಕಗೊಳಿಸಿದ್ದಾರೆ. ಈ ಬಗ್ಗೆ ಕಳೆದ ತಿಂಗಳು ವರ್ತಕರೆಲ್ಲರೂ ಸೇರಿ ಪಟ್ಟಣವನ್ನು ಅರ್ಧ ದಿನ ಬಂದ್ ಮಾಡಿ, ಮೊದಲಿದ್ದ ರೀತಿಯಲ್ಲೇ ಶುಲ್ಕ ಪಡೆಯಬೇಕೆಂದು ಪಟ್ಟಣ ಪಂಚಾಯತಿಯ ಆಡಳಿತಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿತ್ತು. ಆದರೆ ಈ ಬಗ್ಗೆ ಅಧಿಕಾರಿಗಳಿಂದ ಇದೂವರೆಗೂ ಯಾವುದೇ ಉತ್ತರ ನೀಡಿಲ್ಲ. ಸಮಸ್ಯೆ ಬಗೆಹರಿಸಿಲ್ಲವೆಂದು ದೂರಿದರು.
ನಗರಸಭೆಯಲ್ಲಿರುವ ಮಾನದಂಡವನ್ನು ಪ.ಪಂ.ಗೆ ಅಳವಡಿಸಿ ದುಪ್ಟಟ್ಟು ಶುಲ್ಕ ಹಾಕಲು ಮುಂದಾಗಿರುವ ಕ್ರಮ ಸರಿಯಲ್ಲ. ಈ ಬಗ್ಗೆ ಕಳೆದ ತಿಂಗಳು ಬಂದ್ ಮಾಡಿದ್ದ ಸಮಯದಲ್ಲಿ ಮಾಹಿತಿ ಕೊರತೆಯಿಂದ ಕೆಲವರು ಅಂಗಡಿ ಬಾಗಿಲು ತೆರೆದಿದ್ದರು. ಇನ್ನು ಮುಂದೆ ಈ ರೀತಿ ಮರುಕಳಿಸಬಾರದೆಂಬ ಕಾರಣಕ್ಕೆ ವರ್ತಕರೆಲ್ಲರೂ ಸಭೆ ನಡೆಸಿ ಸಂಘದ ನವೀಕರಣ ಮಾಡಿ ಇನ್ನಷ್ಟು ಬಲಪಡಿಸಲಾಗಿದೆ. ತಮ್ಮ ಬೇಡಿಕೆಯನ್ನು ಕೂಡಲೇ ಈಡೇರಿಸಬೇಕು. ಇಲ್ಲವಾದರೆ ಬಂದ್ ಕರೆ ಜತೆಗೆ ಕಾನೂನು ಹೋರಾಟ ನಡೆಸುವುದು ಅನಿವಾರ್ಯ ಎಂದು ಎಚ್ಚರಿಕೆ ನೀಡಿದರು.
ಉಪಾಧ್ಯಕ್ಷ ಮಹಮ್ಮದ್ ಆರೀಫ್, ಪ್ರಧಾನ ಕಾರ್ಯದರ್ಶಿ ಯು.ನಾಗೇಶ್ ನಾಯಕ್, ಸಹ ಕಾರ್ಯದರ್ಶಿ ರೊನಾಲ್ಡ್ ನರೋನ, ಕುಮಾರ್ ಅಪೂರ್ವ, ಐ.ಎಂ.ಸದರುದ್ದೀನ್, ಎಚ್.ವಿ.ಮಹೇಶ್ ಉಪಸ್ಥಿತರಿದ್ದರು.



