ಮೂಡಿಗೆರೆ ತಾಲ್ಲೂಕಿನ ನೂತನ ತಹಸೀಲ್ದಾರ್, ತಾಲ್ಲೂಕು ದಂಡಾಧಿಕಾರಿಗಳಾಗಿ ಶ್ರೀಮತಿ ಅಶ್ವಿನಿ ಎಸ್. ಅಧಿಕಾರ ನೇಮಕವಾಗಿದ್ದಾರೆ.
ಈ ಹಿಂದೆ ತಹಸೀಲ್ದಾರ್ ಆಗಿದ್ದ ರಾಜಶೇಖರ್ ಅವರ ವರ್ಗಾವಣೆಯಿಂದ ತೆರವಾದ ಸ್ಥಾನಕ್ಕೆ ಅಶ್ವಿನಿಯವರನ್ನು ಸರ್ಕಾರ ನಿಯೋಜನೆ ಮಾಡಿದೆ.
ಇತ್ತೀಚೆಗೆ ಅಶ್ವಿನಿಯವರು ಮೂಡಿಗೆರೆ ತಹಸೀಲ್ದಾರ್ ಆಗಿ ಜವಾಬ್ದಾರಿ ವಹಿಸಿಕೊಂಡಿದ್ದಾರೆ.
2020 ರ ಬ್ಯಾಚ್ ನ ಕೆಎಎಸ್ ಅಧಿಕಾರಿಯಾಗಿರುವ ಅಶ್ವಿನಿಯವರು ಹಾಸನ ಜಿಲ್ಲೆ ಅರಸಿಕೆರೆ ಮೂಲದವರು. ಈ ಹಿಂದೆ ಹಾಸನ ನಗರಸಭೆಯಲ್ಲಿ ಮುನ್ಸಿಪಲ್ ತಹಸೀಲ್ದಾರ್ ಆಗಿ ಕಾರ್ಯನಿರ್ವಹಿಸಿದ್ದರು.
ಮೂಡಿಗೆರೆಯಲ್ಲಿ ಅಧಿಕಾರ ವಹಿಸಿಕೊಂಡ ನಂತರ ಅಶ್ವಿನಿಯವರು ಪತ್ರಿಕೆಯೊಂದಿಗೆ ಮಾತನಾಡಿ ಮೂಡಿಗೆರೆ ತಾಲ್ಲೂಕಿನಲ್ಲಿ ಕಂದಾಯ ಇಲಾಖೆಯ ಸಮಸ್ಯೆಗಳು, ವಿಲೇವಾರಿಗೆ ಬಾಕಿ ಇರುವ ಕಡತಗಳ ಬಗ್ಗೆ ಮಾಹಿತಿ ಪಡೆಯುತ್ತಿದ್ದು, ಆದ್ಯತೆಯ ಮೇಲೆ ಜನರ ಕೆಲಸಗಳನ್ನು ಸಕಾಲದಲ್ಲಿ ಮಾಡಿಕೊಡಲಾಗುವುದು. ಸದ್ಯ 125ಗೆ ಸಂಬಂಧಿಸಿದಂತೆ ಬಾಕಿಯಿರುವ ಕಡತಗಳ ಶೀಘ್ರ ವಿಲೇವಾರಿ, ಭೂ ದಾಖಲೆಗಳ ಡಿಜಿಟಲೀಕರಣಕ್ಕೆ ಸಂಬಂಧಿಸಿದ ‘ಭೂ ಸುರಕ್ಷ’ ಯೋಜನೆಯ ಕಾರ್ಯಗಳು ಪ್ರಗತಿಯಲ್ಲಿವೆ ಎಂದರು.
ತಾಲ್ಲೂಕು ಕಛೇರಿಯಲ್ಲಿ ಜನರ ಕೆಲಸಗಳು ಅನಗತ್ಯ ವಿಳಂಬವಿಲ್ಲದೇ ಸುಸೂತ್ರವಾಗಿ ನಡೆಯಲು ಕ್ರಮ ವಹಿಸಲಾಗುವುದು, ಕಂದಾಯ ಇಲಾಖೆಗೆ ಸಂಬಂಧಿಸಿದಂತೆ ಯಾವುದೇ ಸಮಸ್ಯೆ ಅಥವಾ ದೂರುಗಳಿದ್ದರೆ ಸಾರ್ವಜನಿಕರು ಮುಕ್ತವಾಗಿ ತಮ್ಮ ಗಮನಕ್ಕೆ ತರಬಹುದು ಎಂದಿದ್ದಾರೆ.

ನೂತನ ತಹಸೀಲ್ದಾರ್ ಅಶ್ವಿನಿಯವರು ಕ್ಷೇತ್ರದ ಶಾಸಕಿ ನಯನಾ ಮೋಟಮ್ಮ ಅವರನ್ನು ಭೇಟಿಯಾಗಿ ಸಮಾಲೋಚನೆ ನಡೆಸಿದ್ದಾರೆ.



