ಕಾಫಿನಾಡಲ್ಲಿ ಮತ್ತೊಂದು ಕಾಡಾನೆ ಸೆರೆಯಾಗಿದೆ. ಕಳೆದ ಆರು ತಿಂಗಳಿಂದ ಮಲೆನಾಡಿಗರ ನಿದ್ದೆಗೆಡಿಸಿದ್ದ ಒಂಟಿ ಸಲಗವನ್ನು ಸೆರೆಹಿಡಿಯಲಾಗಿದೆ.
ಎನ್.ಆರ್. ಪುರ ತಾಲೂಕಿನ ಕುಪ್ಪೂರಿನಲ್ಲಿ ಸೆರೆಯಾದ ಕಾಡಾನೆ, ಶಿವಮೊಗ್ಗದ ಸಕ್ರೆಬೈಲಿನ ಕುಮ್ಕಿ ಆನೆಗಳ ನೇತೃತ್ವದಲ್ಲಿ ಸೆರೆ
ಕಳೆದ 6 ತಿಂಗಳಿಂದ ಮಡಬೂರು, ಕುಪ್ಪೂರು ಸೇರಿ ಸುತ್ತಮುತ್ತ ಕೃಷಿ ಭೂಮಿ ಹಾನಿಮಾಡಿದ್ದ ಕಾಡಾನೆಯನ್ನು ಸೆರೆ ಹಿಡಿಯಲಾಗಿದೆ.
ಡಿ.ಎಫ್.ಓ ಶಿವಶಂಕರ್, ಆರ್.ಎಫ್.ಓ. ಪ್ರವೀಣ್, ಸಕ್ರೆಬೈಲು ವೈದ್ಯ ಮುರುಳಿ ಹಾಗೂ ಸಿಬ್ಬಂದಿಗಳಿಂದ ಕಾರ್ಯಾಚರಣೆ ನಡೆಸಲಾಗಿತ್ತು.
ಸೋಮವಾರ ಬೆಳಗ್ಗೆ ಸೆರೆ ಕಾರ್ಯಾಚರಣೆ ಪ್ರಾರಂಭಿಸಿದ್ದ ಅರಣ್ಯ ಇಲಾಖೆ ಮಧ್ಯಾಹ್ನದ ಹೊತ್ತಿಗೆ ಕಾಡಾನೆಯನ್ನು ಯಶಸ್ವಿಯಾಗಿ ಸೆರೆ ಹಿಡಿದಿದೆ.
ಇತ್ತೀಚೆಗೆ ಬಾಳೆಹೊನ್ನೂರು ಸುತ್ತಾಮುತ್ತಾ ಇಬ್ಬರ ಜೀವ ಕಾಡಾನೆ ದಾಳಿಗೆ ಬಲಿಯಾಗಿತ್ತು. ಇದರಿಂದ ಜನರ ಆಕ್ರೋಶಗೊಂಡು ಪ್ರತಿಭಟನೆ ನಡೆಸಿದ್ದರು. ಜನರ ಪ್ರತಿಭಟನೆಗೆ ಬೆಚ್ಚಿಬಿದ್ದ ಸರ್ಕಾರ ಈ ಭಾಗದಲ್ಲಿ ಎರಡು ಕಾಡಾನೆಗಳ ಸೆರೆಗೆ ಆದೇಶ ಮಾಡಿತ್ತು. ವಾರದ ಹಿಂದೆ ಒಂದು ಕಾಡಾನೆ ಸೆರೆ ಹಿಡಿಯಲಾಗಿತ್ತು.
ಒಂದು ಆನೆ ಹಿಡಿದು ಕಾರ್ಯಾಚರಣೆ ನಿಲ್ಲಿಸಲಾಗಿತ್ತು. ಇದರಿಂದ ಜನರು ಆಕ್ರೋಶ ಹೊರಹಾಕಿದ್ದರು. ನಂತರ 2ನೇ ಆನೆ ಸೆರೆಗೆ ಅರಣ್ಯ ಸಚಿವ ಖಂಡ್ರೆ ಅನುಮತಿ ನೀಡಿದ್ದರಿಂದ ಸೋಮವಾರ ಸಕ್ರೇಬೈಲಿನಿಂದ ಕುಮ್ಕಿ ಆನೆಗಳನ್ನು ಕರೆತಂದು ಎರಡನೇ ಆನೆ ಸೆರೆಗೆ ಕಾರ್ಯಾಚರಣೆ ನಡೆಸಲಾಗಿತ್ತು.



