ಬಿಜೆಪಿಯವರಿಗೆ ರಾಹುಲ್‌ಗಾಂಧಿ ಅವರ ಬಗ್ಗೆ ಮಾತನಾಡಲು ಯಾವ ನೈತಿಕತೆಯೂ ಇಲ್ಲ. ಬಿಜೆಪಿಯಿಂದ ಕಾಂಗ್ರೆಸ್ ಪಕ್ಷ ಭಾರತದ ಚುನಾವಣಾ ವ್ಯವಸ್ಥೆಯ ಬಗ್ಗೆ ಪಾಠ ಕಲಿಯಬೇಕಿಲ್ಲ, ದೇಶಕ್ಕೆ ಮಾದರಿ ಚುನಾವಣಾ ವ್ಯವಸ್ಥೆಯನ್ನು ಜಾರಿ ಮಾಡಿದ್ದೇ ಕಾಂಗ್ರೆಸ್ ಪಕ್ಷ. ಈ ಇತಿಹಾಸದ ಅರಿವಿಲ್ಲದ ಬಿಜೆಪಿ ಮುಖಂಡರು ರಾಹುಲ್‌ಗಾಂಧಿ ಬಗ್ಗೆ ಬಾಯಿಗೆ ಬಂದಂತೆ ಮಾತನಾಡಿದಲ್ಲಿ ನಗೆಪಾಟಲಿಗೀಡಾಗುತ್ತಿದ್ದಾರೆ ಎಂದು ಚಿಕ್ಕಮಗಳೂರು ಜಿಲ್ಲಾ ಕಾಂಗ್ರೆಸ್ ವಕ್ತಾರ ಎಂ.ಎಸ್.ಅನಂತ್ ಟೀಕಿಸಿದ್ದಾರೆ.
ಈ ಸಂಬಂಧ ಶುಕ್ರವಾರ ಪತ್ರಿಕಾ ಹೇಳಿಕೆ ನೀಡಿರುವ ಅವರು, ಕಳೆದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ನಾಯಕರು ಚುನಾವಣಾ ಆಯೋಗದ ಸಹಕಾರದಿಂದ ನಕಲಿ ಮತದಾರರನ್ನು ಸೃಷ್ಟಿಸಿ ಮತದಾನ ಮಾಡಿರುವ ಬಗ್ಗೆ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್‌ಗಾಂಧಿ ದಾಖಲೆ ಸಹಿತ ಸಾಕ್ಷ್ಯ ಮುಂದಿಟ್ಟಿದ್ದಾರೆ. ಇದರಿಂದ ಬಿಜೆಪಿಯವರು ಇದುವರೆಗೆ ಚುನಾವಣೆಯಲ್ಲಿ ಅಕ್ರಮ ನಡೆಸಿ ವಾಮಮಾರ್ಗದ ಮೂಲಕ ಅಧಿಕಾರಕ್ಕೆ ಬಂದಿರುವುದು ಸ್ಪಷ್ಟವಾಗುತ್ತಿದೆ. ಈ ಹಗರಣದಿಂದ ಬಿಜೆಪಿಯವರ ಅಕ್ರಮ ಚುನಾವಣಾ ತಂತ್ರಗಾರಿಕೆ ಬಟಾ ಬಯಲಾಗುತ್ತಿದ್ದು, ನಾಡಿನ ಜನರ ಮುಂದೆ ಬಿಜೆಪಿಯವರು ಬೆತ್ತಲಾಗುತ್ತಿದ್ದಾರೆ. ಇದರಿಂದ ಸೋತು ಮೂಲೆಗುಂಪಾಗಿರುವ ಸಿ.ಟಿ.ರವಿ ಸೇರಿದಂತೆ ಬಿಜೆಪಿ ಮುಖಂಡರು ಹತಾಶೆಯಿಂದ ರಾಹುಲ್‌ಗಾಂಧಿ ವಿರುದ್ಧ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಇದನ್ನು ಕಾಂಗ್ರೆಸ್ ಪಕ್ಷ ಖಂಡಿಸುತ್ತದೆ ಎಂದವರು ತಿಳಿಸಿದ್ದಾರೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರತಿಷ್ಠಿತ ಯೂನಿವರ್ಸಿಟಿಯಲ್ಲಿ ಹಲವಾರು ಪದವಿ ಪಡೆದು ರಾಜಕೀಯ ಕ್ಷೇತ್ರದ ಆಳ ಅಗಲ ಅರಿತು ದೇಶದ ಭವಿಷ್ಯಕ್ಕಾಗಿ ರಾಜಕೀಯ ಕ್ಷೇತ್ರಕ್ಕೆ ಬಂದಿದ್ದಾರೆ. ಚುನಾವಣಾ ಅಕ್ರಮದ ಬಗ್ಗೆ ರಾಹುಲ್ ಗಾಂಧಿ ಮಾಡಿರುವ ಆರೋಪಕ್ಕೆ ಸಿ.ಟಿ.ರವಿ ಅವರು ಸೇರಿದಂತೆ ಕೆಲ ಬಿಜೆಪಿ ಮುಖಂಡರು ತಾವು ಮಹಾ ಮೇಧಾವಿಗಳು ಎಂಬಂತೆ ಸಮಾಜಾಯಿಸಿ ಕೊಡುತ್ತಿದ್ದಾರೆ.
ಮತಗಳ್ಳತನ ಮಾಡಿರುವ ಮಹಾನುಭಾವರು ಯಾರು ಎಂಬುದನ್ನೂ ರಾಹುಲ್ ಗಾಂಧಿ ಸಾಕ್ಷಿ ಸಮೇತ ಪತ್ತೆ ಹಚ್ಚಿದ್ದಾರೆ. ಎಲ್ಲಿ ತಮ್ಮ ಪಕ್ಷದ ಬಂಡವಾಳ ಬೀದಿಲಿ ಹರಾಜು ಆಗುತ್ತದೋ ಅನ್ನೋ ಭಯದಿಂದ ಬಿಜೆಪಿ ಮುಖಂಡರು ಈ ರೀತಿ ಹೇಳಿಕೆ ನೀಡುತ್ತಿದ್ದಾರೆ. ಕುಂಬಳ ಕಾಯಿ ಕಳ್ಳ ಎಂದರೆ ಹೆಗಲು ಮುಟ್ಟಿ ನೋಡಿಕೊಳ್ಳುವ ಕೆಲಸ ಬಿಜೆಪಿಯವರು ಮಾಡುತ್ತಿದ್ದಾರೆ. ಇದರಿಂದ ಅವರುಗಳ ಮೇಲೆ ಸಂಶಯ ಬರುತ್ತಿದೆ ಎಂದು ಕಿಡಿಕಾರಿದ್ದಾರೆ



