ರಸ್ತೆ, ವಸ್ತಾರೆ-ಆಲ್ದೂರು-ಬಾಳೆಹೊನ್ನೂರು ರಸ್ತೆ, ಹಾಂದಿ-ಬಸ್ಕಲ್ ಗೆಂಡೇಹಳ್ಳಿ ರಸ್ತೆಗಳಿಗೆ ಹೊಂದಿರುವ ಹೋಬಳಿ, ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳು ಗುಂಡಿಗಳಾಗಿದ್ದು, ಇವುಗಳ ದುರಸ್ಥಿಗೆ ಮುಂದಾಗದ ರಾಜ್ಯ ಸರ್ಕಾರದ ವಿರುದ್ಧ ಆಗಸ್ಟ್ 13 ರಂದು ಬಿಜೆಪಿ ಮತ್ತು ಜೆಡಿಎಸ್ ಪಕ್ಷದಿಂದ ಬೃಹತ್ ಪ್ರತಿಭಟನೆ ಮತ್ತು ರಸ್ತೆ ತಡೆ ಚಳುವಳಿಯನ್ನು ಚಿಕ್ಕಮಗಳೂರು ತಾಲ್ಲೂಕು ಜೋಳದಾಳ್ ಸರ್ಕಲ್ ನಲ್ಲಿ ನಡೆಸಲಾಗುವುದೆಂದು ಬಿಜೆಪಿ ಮುಖಂಡ ದೀಪಕ್ ದೊಡ್ಡಯ್ಯ ಹೇಳಿದರು.
ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮಲೆನಾಡು ಭಾಗಗಳಲ್ಲಿ ಕಳೆದ ಮೂರು ವರ್ಷಗಳಿಂದ ಮುಂಗಾರು ಮಳೆ ಆರ್ಭಟಿಸುತ್ತಿದ್ದು, ರಸ್ತೆಗಳೆಲ್ಲಾ ಕೊಚ್ಚಿ ಹೋಗಿ ಗುಂಡಿಗಳಿಂದ ಕೂಡಿವೆ. ವಾಹನ ಸವಾರರು ವಾಹನ ಚಲಾಯಿಸಲು ಹರ ಸಾಹಸ ಪಡುತ್ತಿದ್ದು, ರಸ್ತೆಗಳನ್ನು ದುರಸ್ಥಿಗೆ ಮುಂದಾಗಬೇಕಿದ್ದ ರಾಜ್ಯ ಸರ್ಕಾರ ಅಭಿವೃದ್ಧಿಗೆ ಮೀಸಲಿಟ್ಟಿದ್ದ ಹಣವನ್ನು ಗ್ಯಾರಂಟಿ ಯೋಜನೆಗೆ ವಿನಿಯೋಗ ಮಾಡಿ, ಜನಸಾಮಾನ್ಯರ ಜೊತೆ ಸರ್ಕಾರ ಚೆಲ್ಲಾಟವಾಡುತ್ತಿದೆ ಎಂದರು.
ಕೃಷಿ ಮತ್ತು ತೋಟಗಾರಿಕೆ ಇಲಾಖೆಗೆ ಬರುವ ಅನುದಾನವನ್ನು ಕಡಿತಗೊಳಿಸಿದ್ದು, ರೈತರು ತಮಗೆ ಸಿಗಬೇಕಿದ್ದ ಸವಲತ್ತುಗಳಿಂದ ವಂಚಿತರಾಗಿದ್ದಾರೆ. ಕಳೆದ 2 ವರ್ಷಗಳಿಂದ ಅತಿವೃಷ್ಟಿಯಿಂದ ಕಾಫಿ, ಕಾಳು ಮೆಣಸು, ಅಡಿಕೆ ಬೆಳೆಗಳು ಕೊಳೆ ರೋಗಕ್ಕೆ ತುತ್ತಾಗಿ ಫಸಲು ಕಳೆದುಕೊಳ್ಳುವ ಆತಂಕದಲ್ಲಿದ್ದು, ರೈತರಿಗೆ ಸೂಕ್ತವಾದ ಪರಿಹಾರ ನೀಡಲು ಸರ್ಕಾರ ಮುಂದಾಗಬೇಕೆಂದು ಒತ್ತಾಯಿಸಿದರು.
ಆಲ್ಲೂರು, ವಸ್ತಾರೆ, ಆವತಿ, ಜಾಗರ, ಖಾಂಡ್ಯ ಹೋಬಳಿಯ ಶೇ. 90 ರಷ್ಟು ಬಡವರು ಒಂದು ಎಕರೆ, ಎರಡು ಎಕರೆ ಕಂದಾಯ ಭೂಮಿಯನ್ನು ಒತ್ತುವರಿ ಮಾಡಿ ಜೀವನ ಸಾಗಿಸುತ್ತಿದ್ದು, ಅಕ್ರಮ-ಸಕ್ರಮ ಯೋಜನೆಯಲ್ಲಿ ಫಾರಂ 57 ಅಡಿಯಲ್ಲಿ ಸರ್ಕಾರ ಅರ್ಜಿ ಪಡೆದಿದೆ. ಆದರೆ ಈಗ ಫಾರಂ 57 ಅರ್ಜಿ ಕಾಫಿಗೆ ಅನ್ವಯವಾಗುವುದಿಲ್ಲವೆಂದು ಸರ್ಕಾರ ಆದೇಶಿಸಿದ್ದು, ಈ ಹೋಬಳಿಗಳ ವ್ಯಾಪ್ತಿಯ ಭೂಮಿಯಲ್ಲಿ ರೈತರು ಕಾಫಿ, ಮೆಣಸು ಬೆಳೆಯದೆ ಬೇರೆ ಏನನ್ನು ಬೆಳೆಯಲು ಸಾಧ್ಯ ಎಂದು ಪ್ರಶ್ನಿಸಿದರು.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಮೀಸಲಿಟ್ಟಿದ್ದ 39 ಸಾವಿರ ಕೋಟಿಗಳನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸಿಕೊಂಡಿರುವುದು ಖಂಡನೀಯ. ರಾಜ್ಯದ ಎಲ್ಲಾ ಗ್ರಾಮ ಪಂಚಾಯಿತಿಗಳು ನಿಷ್ಕ್ರಿಯಗೊಂಡಿವೆ. ಗ್ರಾಮ ಪಂಚಾಯಿತಿ ಸಿಬ್ಬಂದಿಗಳಿಗೆ ಸಂಬಳ ಕೊಡಲು ಸರ್ಕಾರದಲ್ಲಿ ಹಣವಿಲ್ಲದಂತಾಗಿದೆ ಎಂದು ಹೇಳಿದರು.
ಮಲೆನಾಡು ಭಾಗದಲ್ಲಿ ಕಾಡು ಪ್ರಾಣಿಗಳು ಮತ್ತು ಮಾನವ ಸಂಘರ್ಷ ಮಿತಿ ಮೀರಿದ್ದು, ಕಾಡಾನೆ, ಕಾಡು ಕೋಣಗಳು ಮಲೆನಾಡಿನಲ್ಲಿ ಬೀಡುಬಿಟ್ಟಿವೆ. ಇವುಗಳನ್ನು ಕಾಡಿಗಟ್ಟದೆ, ಸರ್ಕಾರ ಜನರ ಜೀವದ ಜೊತೆ ಚೆಲ್ಲಾಟವಾಡುತ್ತಿದೆ. ಅಲ್ಲೂರು ಮಂಡಲ ಬಿಜೆಪಿ ಮತ್ತು ಜೆಡಿಎಸ್ ಒಂದಾಗಿ ರಸ್ತೆ ತಡೆ ನಡೆಸಿ, ಮುಖ್ಯಮತ್ರಿಗಳು ಮತ್ತು ಉಸ್ತುವಾರಿ ಸಚಿವರ ಪ್ರತಿಕೃತಿ ದಹಿಸಲಾಗುವುದು. ಮುಂದಿನ ದಿನಗಳಲ್ಲಿ ಸರ್ಕಾರ ಎಚ್ಚೆತ್ತು ಕೊಂಡು ಅಭಿವೃದ್ಧಿ ಮುಂದಾಗದಿದ್ದರೆ ಉಗ್ರ ಹೋರಾಟ ರೂಪಿಸಲಾಗುವುದು ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಆಲ್ಲೂರು ಮಂಡಲ ಅಧ್ಯಕ್ಷ ರವಿ ಬಸರವಳ್ಳಿ, ಬಿಜೆಪಿ ಅವತಿ ಅಧ್ಯಕ್ಷ ಕೆರೆಮಕ್ಕಿ ಮಹೇಶ್, ಮುಖಂಡರಾದ ಟಿ.ಡಿ.ಮಲ್ಲೇಶ್ ಗೌಡ, ಕೃಷ್ಣಗೌಡ ಉಪಸ್ಥಿತರಿದ್ದರು.



