ಮಾಜಿ ಸಚಿವ, ಹಿರಿಯ ರಾಜಕೀಯ ಮುತ್ಸದ್ದಿ ದಿವಂಗತ ಡಿ.ಬಿ.ಚಂದ್ರೇಗೌಡರ 89ನೇ ಹುಟ್ಟುಹಬ್ಬದ ಪ್ರಯುಕ್ತ ಮೂಡಿಗೆರೆ ತಾಲ್ಲೂಕಿನ ದಾರದಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಸ್ಮಾರ್ಟ್ ಕ್ಲಾಸ್ ಗಾಗಿ ಎಲ್.ಇ.ಡಿ. ಟಿವಿಯನ್ನು ಕೊಡುಗೆಯಾಗಿ ನೀಡಲಾಯಿತು. ಹಾಗೆಯೇ ವಿವಿಧ ಅಂಗನವಾಡಿ ಕೇಂದ್ರಗಳಿಗೆ ಪರಿಕರಗಳ ಕೊಡುಗೆ ಘೋಷಣೆ ಮಾಡಲಾಯಿತು.
ಮಂಗಳವಾರ ದಾರದಹಳ್ಳಿ ಪೂರ್ಣ ಚಂದ್ರ ಎಸ್ಟೇಟ್ ನಲ್ಲಿರುವ ಡಿ.ಬಿ. ಚಂದ್ರೇಗೌಡರ ಸ್ಮಾರಕದ ಬಳಿ ನಡೆದ ಸರಳ ಸಮಾರಂಭದಲ್ಲಿ ಚಂದ್ರೇಗೌಡರ ಕುಟುಂಬ ಸದಸ್ಯರು ಶಾಲೆಯ ಮುಖ್ಯ ಶಿಕ್ಷಕರಿಗೆ ಎಲ್.ಇ.ಡಿ. ಟಿ.ವಿ. ಹಸ್ತಾಂತರಿಸಿದರು. ಇದೇ ಸಂದರ್ಭದಲ್ಲಿ ಅವರ ಹುಟ್ಟುಹಬ್ಬದ ಪ್ರಯುಕ್ತ ಹಣ್ಣಿನ ಗಿಡಗಳನ್ನು ನೆಡಲಾಯಿತು.
ಈ ಸಂದರ್ಭದಲ್ಲಿ ಕುಟುಂಬ ಸದಸ್ಯರು ಮತ್ತು ದಿ ಕಾಫಿ ಕೋರ್ಟ್ ಅಧ್ಯಕ್ಷರು ಆದ ಡಿ.ಬಿ. ಜಯಪ್ರಕಾಶ್ ಅವರು ಮಾತನಾಡಿ ; ಡಿ.ಬಿ.ಚಂದ್ರೇಗೌಡರು ನಾಡಿನ ಹಿರಿಯ ರಾಜಕೀಯ ಮುತ್ಸದ್ದಿಯಾಗಿ ರಾಷ್ಟ್ರ ಮತ್ತು ರಾಜ್ಯದ ನಾಲ್ಕೂ ಶಾಸನ ಸಭೆಗಳ ಸದಸ್ಯರಾಗಿ, ರಾಜ್ಯದಲ್ಲಿ ಸಚಿವರಾಗಿ, ವಿಧಾನಸಭಾ ಅಧ್ಯಕ್ಷರಾಗಿ ವೈವಿದ್ಯಮಯ ರಾಜಕೀಯ ಹುದ್ದೆಗಳನ್ನು ಸಮರ್ಥವಾಗಿ ನಿಭಾಯಿಸಿದ್ದರು. ಅವರು ಸಮಾಜಮುಖಿ ಚಿಂತನೆಯನ್ನು, ಕುವೆಂಪುರವರ ವಿಶ್ವಮಾನವ ತತ್ವಗಳನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡಿದ್ದರು. ಅವರು ದೈಹಿಕವಾಗಿ ನಮ್ಮೊಂದಿಗಿಲ್ಲದಿದ್ದರೂ ಅವರ ನೆನಪುಗಳು ಸದಾ ಹಸಿರಾಗಿವೆ.
ಡಿ.ಬಿ.ಚಂದ್ರೇಗೌಡರ ಹೆಸರಿನಲ್ಲಿ ಅವರ ಹುಟ್ಟುಹಬ್ಬದ ದಿನ ಸಮಾಜಮುಖಿ ಕಾರ್ಯಗಳಿಗೆ ಕೊಡುಗೆ ನೀಡಲು ಅವರ ಕುಟುಂಬದವರು ನಿರ್ಧರಿಸಿದ್ದು, ಅದರಂತೆ ಈ ವರ್ಷ ದಾರದಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ವಿದ್ಯಾರ್ಥಿಗಳ ವ್ಯಾಸಾಂಗಕ್ಕೆ ಪೂರಕವಾಗಿ ಸ್ಮಾರ್ಟ್ ಕ್ಲಾಸ್ ನಡೆಸಲು ಎಲ್.ಇ.ಡಿ. ಟಿವಿಯನ್ನು ನೀಡಲಾಗಿದೆ ಮತ್ತು ಸುತ್ತಮುತ್ತಲ ಅಂಗನವಾಡಿ ಕೇಂದ್ರಗಳಿಗೆ ವಿವಿಧ ಪರಿಕರಗಳನ್ನು ನೀಡಲು ನಿರ್ಧರಿಸಲಾಗಿದೆ. ಅವರ ಹೆಸರಿನಲ್ಲಿ ಟ್ರಸ್ಟ್ ಒಂದನ್ನು ಪ್ರಾರಂಭಿಸಿ ಟ್ರಸ್ಟ್ ಅಡಿಯಲ್ಲಿ ಶಾಶ್ವತವಾಗಿ ಸಮಾಜ ಸೇವಾ ಕಾರ್ಯಗಳನ್ನು ನಡೆಸಲು ತೀರ್ಮಾನಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ಡಿ.ಬಿ. ಚಂದ್ರೇಗೌಡರ ಧರ್ಮಪತ್ನಿ ಶ್ರೀಮತಿ ಪೂರ್ಣಿಮಾ ಚಂದ್ರೇಗೌಡ ಮತ್ತು ಅವರ ಪುತ್ರಿಯರು, ಕುಟುಂಬದ ಸದಸ್ಯರು, ದಾರದಹಳ್ಳಿ ಗ್ರಾಮಸ್ಥರು, ದಾರದಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎಸ್.ಡಿ.ಎಂ.ಸಿ. ಅಧ್ಯಕ್ಷರು, ಮುಖ್ಯ ಶಿಕ್ಷಕರು ಉಪಸ್ಥಿತರಿದ್ದರು.


