ಮಹಿಳಾ ಸಬಲೀಕರಣ, ಕ್ರೀಡೆ, ಸಹಕಾರ, ರಾಜಕಾರಣ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಪದ್ಮಾತಿಮ್ಮೇಗೌಡರ ಸೇವೆ ಸ್ಮರಣೀಯ ಎಂದು ಚಿಕ್ಕಮಗಳೂರು ಪಟ್ಟಣ ಸಹಕಾರ ಬ್ಯಾಂಕ್ ಅಧ್ಯಕ್ಷ ಎಚ್.ಎನ್.ನಂಜೇಗೌಡ ನುಡಿದರು.
ಬ್ಯಾಂಕಿನ ಹಿರಿಯ ನಿರ್ದೇಶಕಿ ಪದ್ಮಾತಿಮ್ಮೇಗೌಡ(70) ಬುಧವಾರ ನಿಧನ ಹೊಂದಿದ ಹಿನ್ನಲೆಯಲ್ಲಿ ನಿರ್ದೇಶಕ ಮಂಡಳಿ ಸಿಬ್ಬಂದಿವರ್ಗ ಹಾಗೂ ಗ್ರಾಹಕರು ಬ್ಯಾಂಕ್ ಆವರಣದಲ್ಲಿ ಆಯೋಜಿಸಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಅವರು ಮಾತನಾಡಿದರು.
ಚಿಕ್ಕಮಗಳೂರು ಕೋಟೆ ನಿವಾಸಿಯಾಗಿದ್ದ ಪದ್ಮಾ ರೈತಾಪಿ ಕುಟುಂಬದ ದಿಟ್ಟ ಹೆಣ್ಣುಮಗಳು, ತಾರುಣ್ಯದಲ್ಲೆ ಉತ್ತಮ ಕ್ರೀಡಾಪಟು ಹಾಗೂ ಸೈಕಲ್ ಪಟುವಾಗಿದ್ದು, ಕರಾಟೆ ಪದ್ಮಾ ಎಂಬ ಹೆಸರಿನಿಂದ ಅಂದು ಹೆಣ್ಣುಮಕ್ಕಳಿಗೆ ಪ್ರೇರಣಾದಾಯಕರಾಗಿದ್ದರು. ಮುಂದೆ ಜನತಾ ಪರಿವಾರದಲ್ಲಿ ಗುರುತಿಸಿಕೊಂಡು ರಾಜ್ಯಮಟ್ಟದ ಪದಾಧಿಕಾರಿಯಾಗಿದ್ದರು. ವಿವಿಧ ಮಹಿಳಾಪರ ಹೋರಾಟದಲ್ಲೂ ತೊಡಗಿಸಿಕೊಂಡಿದ್ದ ಇವರಿಗೆ ಕರ್ನಾಟಕ ಸರ್ಕಾರ ‘ಕಿತ್ತೂರುರಾಣಿ ಚೆನ್ನಮ್ಮ’ ಪ್ರಶಸ್ತಿ ನೀಡಿ ಪುರಸ್ಕರಿಸಲಾಗಿತ್ತೆಂದು ನುಡಿದರು.
ಪತಿ ತಿಮ್ಮೇಗೌಡ, ಓರ್ವ ಪುತ್ರ ಹಾಗೂ ಇಬ್ಬರು ಪುತ್ರಿಯರು ಅಪಾರಬಂಧು-ಮಿತ್ರರನ್ನು ಅಗಲಿರುವ ಪದ್ಮಾ, ಸಹಕಾರಿ ರಂಗದಲ್ಲೂ ಸಾಕಷ್ಟು ಕೆಲಸ ನಿರ್ವಹಿಸಿದ್ದರು. ಪಟ್ಟಣ ಸಹಕಾರ ಬ್ಯಾಂಕ್ ಅಭಿವೃದ್ಧಿಗೆ ಶ್ರಮಿಸಿದ್ದು, ಕಳೆದ ಎರಡು ದಶಕಗಳಿಂದ ನಿರ್ದೇಶಕಿ-ಉಪಾಧ್ಯಕ್ಷರಾಗಿ ಸೇವೆ ಸಲ್ಲಿದ್ದರು ಮೃತರ ಆತ್ಮಕ್ಕೆ ಚಿರಶಾಂತಿ ಲಭಿಸಲೆಂದು ಸಂಘದ ಸದಸ್ಯರು ಪ್ರಾರ್ಥಿಸಿದರು.

ಉಪಾಧ್ಯಕ್ಷ ಭಗವತಿ ಹರೀಶ್, ನಿರ್ದೇಶಕರುಗಳಾದ ಎಂ.ವಿ.ಷಡಕ್ಷರಿ, ಬಿ.ಎಚ್.ಶ್ರೀಕಾಂತ ಪೈ, ಜಿ.ರಘು, ಎಂ.ಎಸ್.ಉಮೇಶ್, ಧರ್ಮರಾಜು, ಶೈಲಜಾ ಮಂಜುನಾಥ, ಎಚ್.ಎಂ.ಚಂದ್ರಶೇಖರ್, ಕೆ.ಡಿ.ಪುಟ್ಟಣ್ಣ ಮತ್ತಿತರರು ಪುಷ್ಪನಮನ ಸಲ್ಲಿಸಿದ್ದರು. ಬ್ಯಾಂಕ್‍ನ ಮುಖ್ಯಕಾರ್ಯನಿರ್ವಹಣಾಧಿಕಾರಿ ಪಿ.ವಿ.ರಾಘವೇಂದ್ರ ನಿರೂಪಿಸಿದರು.
ಪದ್ಮಾ ತಿಮ್ಮೇಗೌಡ ಅವರ ನಿಧನಕ್ಕೆ ಜಿಲ್ಲೆಯ ವಿವಿಧ ಸಂಘಸಂಸ್ಥೆಗಳು, ರಾಜಕೀಯ ಪಕ್ಷದ ಮುಖಂಡರುಗಳು ತೀವ್ರ ಸಂತಾಪ ಸೂಚಿಸಿದ್ದಾರೆ.



