ಶೌಚಾಲಯ ನಿರ್ಮಿಸಲು ಮೂಡಿಗೆರೆ ಪಟ್ಟಣದ ಗೆಂಡೆಹಳ್ಳಿ ರಸ್ತೆಯಿಂದ ಅಂಚೆ ಕಚೇರಿಗೆ ಸಂಪರ್ಕ ಹೊಂದಿದ್ದ ಕಾಲುದಾರಿಯನ್ನು ಪ.ಪಂ. ಶನಿವಾರ ಬಂದ್ ಮಾಡಿದ್ದಲ್ಲದೇ ಜೀವನೋಪಾಯಕ್ಕಾಗಿ ಇಟ್ಟುಕೊಂಡಿದ್ದ ಕ್ಯಾಂಟೀನ್ ಮತ್ತು ಚಪ್ಪಲಿ ಅಂಗಡಿಗಳನ್ನು ತೆರವುಗೊಳಿಸಿದ ಹಿನ್ನಲೆಯಲ್ಲಿ ಪ.ಪಂ. ಆಡಳಿತದ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಕಳೆದ 50 ವರ್ಷದಿಂದಲೂ ಕೆ.ಎಂ.ರಸ್ತೆಯಲ್ಲಿ ಈಗಿರುವ ಆಟೋ ನಿಲ್ದಾಣ ಹಾಗೂ ಗೆಂಡೇಹಳ್ಳಿ ರಸ್ತೆ ಮೂಲಕ ಈ ಎರಡು ಕಡೆ ಪಟ್ಟಣದ ಅಂಚೆ ಕಚೇರಿಗೆ ಸಾರ್ವಜನಿಕರು ತೆರಳುತ್ತಿದ್ದರು. ಕೆ.ಎಂ.ರಸ್ತೆಯಲ್ಲಿ ಆಟೋ ನಿಲ್ದಾಣ ಇರುವುದರಿಂದ ಹಾಗೂ ನಿತ್ಯ ವಾಹನ ಸಂಚಾರ ಅಧಿಕವಾಗಿರುವುದರಿಂದ ಜನರು ಹೆಚ್ಚಾಗಿ ಗೆಂಡೇಹಳ್ಳಿ ರಸ್ತೆ ಬದಿಯ ಕಾಲು ದಾರಿಯನ್ನು ಬಳಕೆ ಮಾಡಿಕೊಳ್ಳುತ್ತಿದ್ದರು. ಇದೀಗ ಜನರು ಅಧಿಕ ಬಳಕೆ ಮಾಡಿಕೊಳ್ಳುವ ಕಾಲುದಾರಿಯನ್ನು ಪ.ಪಂ. ದಿಢೀರ್ ಬಂದ್ ಮಾಡಿ, ಶೌಚಾಲಯ ನಿರ್ಮಿಸಲು ಗುಂಡಿ ತೋಡಿಸಿದ್ದಾರೆ. ಇದರಿಂದ ಜನರು ಪ.ಪಂ. ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಈ ಹಿಂದೆ ಪ.ಪಂ.ಯಿಂದ ಲಕ್ಷಾಂತರ ರೂ ಖರ್ಚು ಮಾಡಿ ತಾಲೂಕು ಕಚೇರಿ ಬಳಿ ಹಾಗೂ ಎಸ್‍ಬಿಐ ಬ್ಯಾಂಕ್ ಪಕ್ಕದಲ್ಲಿ ಮತ್ತು ಪೊಲೀಸ್ ಸ್ಟೇಷನ್ ಮುಂಭಾಗದಲ್ಲಿ ಶೌಚಾಲಯ ನಿರ್ಮಿಸಲಾಗಿತ್ತು. ಈ ಶೌಚಾಲಯಗಳನ್ನು ಪ.ಪಂ. ನಿರ್ವಹಣೆ ಮಾಡಲು ಸಾಧ್ಯವಾಗದೇ ಎಸ್‍ಬಿಐ ಬ್ಯಾಂಕ್ ಪಕ್ಕದಲ್ಲಿದ್ದ ಶೌಚಾಲಯ ಮತ್ತು ಪೊಲೀಸ್ ಸ್ಟೇಷನ್ ಮುಂಭಾಗದಲ್ಲಿದ್ದ ಶೌಚಾಲಯಗಳನ್ನು ಒಡೆದು ಹಾಕಲಾಯಿತು.
ತಾಲೂಕು ಕಚೇರಿ ಬಳಿ ಇರುವ ಶೌಚಾಲಯ ಉಪಯೋಗಕ್ಕೆ ಬಾರದಂತಾಗಿದೆ. ಇದ್ದ ಶೌಚಾಲಯಗಳ ನಿರ್ವಹಣೆ ಮಾಡಲು ಸಾಧ್ಯವಾಗದ ಪ.ಪಂ, ಇದೀಗ ಪುನಃ ಸರಕಾರದ ಹಣ ಪೋಲು ಮಾಡುವ ಉದ್ದೇಶದಿಂದ ಅಂಚೇ ಕಚೇರಿ ಬಳಿ ಶೌಚಾಲಯ ನಿರ್ಮಿಸಲು ಮುಂದಾಗಿದೆ. ಈಗಿರುವ ಶೌಚಾಲಯ ನಿರ್ವಹಣೆ ಮಾಡುವ ಮೂಲಕ ಈ ಹಿಂದೆ ಇದ್ದ ಸ್ಥಳದಲ್ಲಿ ಮರು ಶೌಚಾಲಯ ನಿರ್ಮಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಕಾಮಗಾರಿ ನಡೆಸುವ ಸ್ಥಳಕ್ಕೆ ತೆರಳಿದ ಹಳೆ ಮೂಡಿಗೆರೆ ಜಗದೀಶ್, ಮನಮೋಹನ್, ಸುದೇವ್, ಜನಾರ್ಧನ್ ಶೆಟ್ಟಿ ಮುಂತಾದವರು ಕ್ಷಣ ಕಾಮಗಾರಿಯನ್ನು ನಿಲ್ಲಿಸುವಂತೆ ಒತ್ತಾಯಿಸಿದರು.



