ಚಿಕ್ಕಮಗಳೂರು ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಡಿಪೋದಲ್ಲಿ ಅಕ್ರಮವಾಗಿ ಸಾಗುವಾನಿ ಮರ ಕಡಿದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಡಿಪೋ ಆವರಣದಲ್ಲಿ ಬೆಳೆದಿದ್ದ ಸಾಗುವಾನಿ ಮರದ ರೆಂಬೆ ಕೊಂಬೆಗಳನ್ನು ಸವರಲು ಒಬ್ಬರಿಗೆ ಗುತ್ತಿಗೆ ನೀಡಲಾಗಿತ್ತು ಎನ್ನಲಾಗಿದೆ. (ಇದು ಸಾರಿಗೆ ಅಧಿಕಾರಿಗಳ ಸಮಜಾಯಿಸಿ)
ಆದರೆ ಆತ ಕೇವಲ ರೆಂಬೆಕೊಂಬೆಗಳನ್ನು ಮಾತ್ರ ಕತ್ತರಿಸದೆ ಬುಡ ಸಮೇತ ಮರಗಳನ್ನೇ ಕಡಿದಿರುವುದು ಪತ್ತೆಯಾಗಿದೆ.
ಡಿಪೋದಲ್ಲಿ ಇರುವ ಕೆಲವರು ಈ ಮಾಹಿತಿಯನ್ನು ಅರಣ್ಯ ಇಲಾಖೆ ಸಂಚಾರಿ ದಳಕ್ಕೆ ತಿಳಿಸಿದ್ದಾರೆ.
ಸ್ಥಳಕ್ಕೆ ಭೇಟಿ ಕೊಟ್ಟ ಅರಣ್ಯ ಸಂಚಾರಿ ದಳ ಅಧಿಕಾರಿ ಸಿಬ್ಬಂದಿ ರೆಂಬೆಕೊಂಬೆ ಕಡಿಯಲು ಅನುಮತಿ ಪಡೆದ ವ್ಯಕ್ತಿಯ ಮೇಲೆ ಸದ್ಯಕ್ಕೆ ಪ್ರಕರಣ ದಾಖಲಿಸಿ ಕೈ ತೊಳೆದುಕೊಂಡಿದ್ದಾರೆ.
ಒಂದೊಮ್ಮೆ ರೆಂಬೆ ಕೊಂಬೆ ಕಡಿಯಲು ಮಾತ್ರ ಅನುಮತಿ ನೀಡಿದ್ದೇ ಆಗಿದ್ದಲ್ಲಿ, ಪೂರ್ತಿ 8 ಮರಗಳನ್ನು ಕಡಿಯುವವರೆಗೂ ಡಿಪೋ ಅಧಿಕಾರಿಗಳ ಗಮನಕ್ಕೆ ಬರಲೇ ಇಲ್ಲವೇ ಎನ್ನುವ ಪ್ರಶ್ನೆ ಎದುರಾಗಿ ಅಧಿಕಾರಿಗಳ ಬಗ್ಗೆ ಅನುಮಾನ ಮೂಡುತ್ತಿದೆ.
ಈ ಬಗ್ಗೆ ಅರಣ್ಯ ಇಲಾಖೆ ಡಿಪೋ ವ್ಯವಸ್ಥಾಪಕರಿಗೆ ನೋಟಿಸ್ ನೀಡಿದ್ದು, ದಂಡ ರೂಪದಲ್ಲಿ 20,000 ರೂ. ಡಿ.ಡಿ.ಯನ್ನು ಪಾವತಿಸಿ ತನಿಖೆಗೆ ಸಹಕರಿಸುವ ಭರವಸೆ ನೀಡಿದ್ದಾರೆ ಎನ್ನಲಾಗಿದೆ.
8 ಸಾಗುವಾನಿ ಮರಗಳನ್ನು ಅಕ್ರಮವಾಗಿ ಕಡಿತಲೆ ಮಾಡಿದ್ದರೂ ಡಿಪೋ ವ್ಯವಸ್ಥಾಪಕರ ವಿರುದ್ಧ ಪ್ರಕರಣ ದಾಖಲು ಮಾಡದೆ ‘ಮೃದು ಧೋರಣೆ’ ತಳೆದ ಅರಣ್ಯ ಸಂಚಾರಿ ದಳದ ಅಧಿಕಾರಿಗಳ ಬಗ್ಗೆಯೂ ಶಂಕೆ ಮೂಡುವಂತೆ ಮಾಡಿದೆ.
ಮರ ಕಡಿದ ಸಣ್ಣ ಪುಟ್ಟ ಪ್ರಕರಣಗಳಲ್ಲಿ ತಕ್ಷಣ ಆರೋಪಿಗಳನ್ನು ಬಂಧಿಸುವ ಇಲಾಖೆ ಈ ಪ್ರಕರಣದಲ್ಲಿ ತಳೆದಿರುವ ನಿಲುವು ಅಚ್ಚರಿ ಮೂಡಿಸುತ್ತಿದೆ.
ಒಂದು ಮೂಲದ ಪ್ರಕಾರ ಇಲ್ಲಿ ಕಡಿತಲೆ ಆಗಿರುವ ಕೆಲ ಮರಗಳು ಬೆಂಗಳೂರಿನಲ್ಲಿ ನಿರ್ಮಾಣ ಆಗುತ್ತಿರುವ ಮಹಿಳಾ ಅಧಿಕಾರಿ ಮನೆಗೆ ಸಾಗಣೆ ಆಗಿದೆ ಎನ್ನುವ ಆರೋಪವು ಕೇಳಿ ಬಂದಿದೆ.
ಡಿಪೋ ಆವರಣದಲ್ಲಿ ಕಡಿತಲೆ ಆದ ಕೆಲ ಮರಗಳನ್ನು ಇಲಾಖೆ ತನ್ನ ವಶಕ್ಕೆ ಪಡೆದಿದ್ದು ಮಾಧ್ಯಮಗಳಿಗೆ ಈವರೆಗೂ ಹೇಳಿಕೆಯನ್ನು ಬಿಡುಗಡೆ ಮಾಡದೆ ಇಲಾಖೆ “ಮಾನ” ಉಳಿಸಲು ಪ್ರಯತ್ನಿಸಿದೆ.
ಈ ಪ್ರಕರಣವನ್ನು ಇಲಾಖೆ ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕೆಂಬ ಒತ್ತಾಯ ಕೇಳಿ ಬಂದಿದೆ.



