ರಾಷ್ಟ್ರೀಯ ಸ್ವಯಂಸೇವಕ ಸಂಘದ ನೂರು ವರ್ಷದ ಸಂಭ್ರಮದ ಅಂಗವಾಗಿ ಕೊಟ್ಟಿಗೆಹಾರ ಮಂಡಲದಲ್ಲಿ ವಿಜಯದಶಮಿ ಉತ್ಸವವು ಅದ್ದೂರಿಯಾಗಿ ನೆರವೇರಿತು.
60 ವರ್ಷದ ಹಿರಿಯ ಸ್ವಯಂಸೇವಕರಿಂದ ಹಿಡಿದು ಇಂದಿನ ಶಿಶು ಸ್ವಯಂಸೇವಕರವರೆಗೂ, ಎಮೆರ್ಜನ್ಸಿ ಅವಧಿಯಲ್ಲಿ ಜೈಲು ಸೇರಿದ್ದ ಹೋರಾಟಗಾರರು, ತಾಲ್ಲೂಕು-ಜಿಲ್ಲಾ ಮಟ್ಟದಲ್ಲಿ ಪತ್ರಿಕೆಗಳನ್ನು ಮುದ್ರಿಸಿ ಹಂಚಿದ್ದವರು, ದತ್ತಪೀಠ ಹೋರಾಟದಲ್ಲಿ ಪಾಲ್ಗೊಂಡು ಶಿಕ್ಷೆಗೆ ಒಳಗಾದ ಕಾರ್ಯಕರ್ತರಿಂದ ಇಂದಿನ ತರುಣ ಪಡೆವರೆಗೂ ಎಲ್ಲರೂ ಗಣವೇಷ ಧರಿಸಿ ವಿಜಯದಶಮಿ ಉತ್ಸವದಲ್ಲಿ ಭಾಗವಹಿಸಿದರು.

ಪ್ರತಿ ಮನೆಮನೆಗೆ ಭೇಟಿ ನೀಡಿದ ಸಂದರ್ಭ ಕಾರ್ಯಕರ್ತರ ನಡುವೆ ಎಮೆರ್ಜನ್ಸಿ ಜೈಲು ಅನುಭವಗಳು, ಪ್ರಚಾರಕರೊಂದಿಗಿನ ನೆನಪುಗಳು, ಶಾಖಾ ಬದುಕಿನ ಕಥೆಗಳು ಹಂಚಿಕೊಂಡು ಪ್ರೇರಣೆಯ ಹೊನಲು ಬೆಳಗಿದವು. ಸಂಘವನ್ನು ಹಿಂದೆ ವಿರೋಧಿಸಿದ್ದವರೇ ತಮ್ಮ ಮೊಮ್ಮಕ್ಕಳಿಗೆ ಗಣವೇಷ ಹಾಕಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ವಿಶೇಷ. ತರುಣ ಪಡೆ “ಹಿಂದುತ್ವದಲ್ಲಿ ರಾಜಿ ಇಲ್ಲ” ಎಂಬ ನಿಲುವಿನಿಂದ ಕಾರ್ಯಚಟುವಟಿಕೆಯಲ್ಲಿ ತೊಡಗಿದ್ದು, ಸುರಿಯುವ ಮಳೆಯ ಮಧ್ಯೆಯೂ ಮಾತೆಯರು ಹಾಗೂ ಸ್ವಯಂಸೇವಕರು ಕಾರ್ಯಕ್ರಮವನ್ನು ನಿರಂತರವಾಗಿ ಅನುಸರಿಸಿದ ದೃಶ್ಯ ಗಮನ ಸೆಳೆಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಂಜಯ್ಯ ಅವರು ಮಾತನಾಡಿ – “ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾಗ ನಕ್ಸಲರನ್ನು ಬಂಧಿಸುವ ಸಂದರ್ಭದಲ್ಲಿ ಸಂಘದ ಸ್ವಯಂಸೇವಕರು ನಮ್ಮೊಂದಿಗೆ ನೇರವಾಗಿ ನಿಂತಿದ್ದರು. ಅವರ ತ್ಯಾಗ ಮನೋಭಾವವೇ ನಮಗೆ ಬಲವಾಯಿತು” ಎಂದು ನೆನಪಿಸಿಕೊಂಡರು. ಬಾಲ್ಯದಲ್ಲಿ ಕಾರಂತ್ ಭಟ್ ಅವರೊಂದಿಗೆ ಶಾಖೆಯಲ್ಲಿ ಬೆಳೆದ ಅನುಭವವೇ ತಾನು ಪೊಲೀಸ್ ಇಲಾಖೆಗೆ ಸೇರುವ ಪ್ರೇರಣೆ ಎಂದರು.

RSS ಪ್ರಚಾರಕ್ ಉಮೇಶ್ ಅವರು ಸಂಘದ ಹುಟ್ಟು ಹಾಗೂ ಇತಿಹಾಸವನ್ನು ನೆನಪಿಸಿಕೊಂಡು, ಪಂಚ ಪರಿವರ್ತನೆಗಳಾದ – ಕುಟುಂಬ ಮೌಲ್ಯ ರಕ್ಷಣೆ, ಸಾಮಾಜಿಕ ಸಾಮರಸ್ಯ, ಪರಿಸರ ಸಂರಕ್ಷಣೆ, ಸ್ವದೇಶಿ–ಸ್ವಭೂಷಣ–ಸ್ವಭಾಷೆ ಪ್ರಚಾರ, ಸಾಮಾಜಿಕ ನಡವಳಿಕೆ ಕುರಿತಾಗಿ ವ್ಯಾಪಕ ಚಳುವಳಿಗೆ ಸ್ವಯಂಸೇವಕರು ಮುಂದಾಗಬೇಕೆಂದು ಕರೆ ನೀಡಿದರು.
ಸಂಘದ ಶತಮಾನೋತ್ಸವದ ಸಂದರ್ಭದಲ್ಲಿ ಸಮಾಜವು ಸಂಘದ ಆದರ್ಶಗಳತ್ತ ಹೆಜ್ಜೆ ಹಾಕುತ್ತಿರುವುದು ಕಂಡುಬಂದಿದ್ದು, ಸ್ವಯಂಸೇವಕರು ಇನ್ನಷ್ಟು ತ್ಯಾಗಭಾವದಿಂದ ಕಾರ್ಯನಿರ್ವಹಿಸಬೇಕೆಂಬ ಬಾವನೆ ಉತ್ಸವದಲ್ಲಿ ವ್ಯಕ್ತವಾಯಿತು.



