ಮೂಡಿಗೆರೆಯಲ್ಲಿ ತಾಲ್ಲೂಕು ಕಾಂಗ್ರೇಸ್ ವತಿಯಿಂದ ನೂತನ ವಿಧಾನ ಪರಿಷತ್ ಸದಸ್ಯೆ ಡಾ. ಆರತಿ ಕೃಷ್ಣ ಅವರಿಗೆ ಅಭಿನಂದನಾ ಸಮಾರಂಭ ಏರ್ಪಡಿಸಲು ನಿರ್ಧರಿಸಿದ್ದು, ಕಾರ್ಯಕ್ರಮಕ್ಕೆ ಕೆಪಿಸಿಸಿ ಅಧ್ಯಕ್ಷರು ಮತ್ತು ರಾಜ್ಯದ ಉಪಮುಖ್ಯಮಂತ್ರಿಗಳಾದ ಡಿ.ಕೆ. ಶಿವಕುಮಾರ್ ಅವರನ್ನು ಆಹ್ವಾನಿಸಲಾಗಿದೆ ಎಂದು ಮೂಡಿಗೆರೆ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಹೆಚ್.ಜಿ. ಸುರೇಂದ್ರ ತಿಳಿಸಿದರು.
ಈ ಬಗ್ಗೆ ಮಾಧ್ಯಮಕ್ಕೆ ಮಾಹಿತಿ ನೀಡಿರುವ ಅವರು ; ನಮ್ಮ ಜಿಲ್ಲೆಯವರೇ ಆದ ಮತ್ತು ಶೃಂಗೇರಿ ಮಾಜಿ ಶಾಸಕ ಬೇಗಾನೆ ರಾಮಯ್ಯನವರ ಪುತ್ರಿಯಾದ ಕಾಂಗ್ರೇಸ್ ಹಿರಿಯ ನಾಯಕಿ ಶ್ರೀಮತಿ ಆರತಿ ಕೃಷ್ಣ ಅವರು ವಿಧಾನಪರಿಷತ್ ಸದಸ್ಯರಾಗಿ ನಾಮನಿರ್ದೇಶನಗೊಂಡಿರುವುದು ಜಿಲ್ಲೆಗೆ ಹೆಮ್ಮೆ ತರುವ ಸಂಗತಿ. ಅವರಿಗೆ ಮೂಡಿಗೆರೆ ತಾಲ್ಲೂಕು ಕಾಂಗ್ರೇಸ್ ವತಿಯಿಂದ ಶಾಸಕಿ ನಯನಾ ಮೋಟಮ್ಮನವರ ಅಧ್ಯಕ್ಷತೆಯಲ್ಲಿ ಅಭಿನಂದನಾ ಸಮಾರಂಭ ಏರ್ಪಡಿಸಲು ನಿರ್ಧರಿಸಲಾಗಿದೆ.
ಈ ಪ್ರಯುಕ್ತ ಕಾರ್ಯಕ್ರಮಕ್ಕೆ ಡಿ.ಕೆ.ಶಿವಕುಮಾರ್ ಅವರನ್ನು ಮುಖ್ಯ ಅತಿಥಿಯಾಗಿ ಆಹ್ವಾನಿಸಲು ನಿರ್ಧರಿಸಿದ್ದು. ಶನಿವಾರ ಕಾಂಗ್ರೇಸ್ ಪಕ್ಷದ ನಿಯೋಗ ಬೆಂಗಳೂರಿನಲ್ಲಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿಯಾಗಿ ಆಹ್ವಾನ ನೀಡಲಾಯಿತು.
ಉಪಮುಖ್ಯಮಂತ್ರಿಗಳು ಕಾರ್ಯಕ್ರಮಕ್ಕೆ ಆಗಮಿಸಲು ಒಪ್ಪಿಗೆ ಸೂಚಿಸಿದ್ದು, ಅವರ ಅನುಕೂಲ ದಿನಾಂಕವನ್ನು ಪರಿಗಣಿಸಿ ನವೆಂಬರ್ ನಲ್ಲಿ ಕಾರ್ಯಕ್ರಮ ನಿಗದಿ ಮಾಡಲಾಗುವುದು ಎಂದು ಹೆಚ್.ಜಿ.ಸುರೇಂದ್ರ ತಿಳಿಸಿದ್ದಾರೆ.
ಇದೇ ಸಂದರ್ಭದಲ್ಲಿ ಡಿ.ಕೆ. ಶಿವಕುಮಾರ್ ಅವರು ಮೂಡಿಗೆರೆ ಕ್ಷೇತ್ರದ ಕಾಂಗ್ರೇಸ್ ಪಕ್ಷದ ಸಂಘಟನೆ ಮತ್ತು ಅಭಿವೃದ್ದಿ ವಿಚಾರವಾಗಿ ನಿಯೋಗದ ಸದಸ್ಯರೊಂದಿಗೆ ಚರ್ಚಿ ನಡೆಸಿ ಸೂಕ್ತ ಸಲಹೆ ಸೂಚನೆಗಳನ್ನು ನೀಡಿದರು ಎಂದು ಹೆಚ್.ಜಿ. ಸುರೇಂದ್ರ ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ.
ಉಪಮುಖ್ಯಮಂತ್ರಿಗಳನ್ನು ಭೇಟಿಯಾದ ನಿಯೋಗದಲ್ಲಿ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷರೊಂದಿಗೆ ಮಾಜಿ ಸಚಿವ ಬಿ.ಬಿ.ನಿಂಗಯ್ಯ, ಮಾಜಿ ಶಾಸಕ ಎಂ.ಪಿ.ಕುಮಾರಸ್ವಾಮಿ, ತಾಲ್ಲೂಕು ಗ್ಯಾರಂಟಿ ಅನುಷ್ಟಾನ ಸಮಿತಿ ಅಧ್ಯಕ್ಷ ಬಿ.ಎಸ್. ಜಯರಾಂ, ಬ್ಲಾಕ್ ಕಾಂಗ್ರೇಸ್ ಮಾಜಿ ಅಧ್ಯಕ್ಷ ಎಂ.ಪಿ. ಮನು, ಮುಖಂಡರಾದ ಪಿ.ಆರ್.ವಿನಯ ಕುಮಾರ್, ಜಿಲ್ಲಾ ಕಾಂಗ್ರೇಸ್ ಉಪಾಧ್ಯಕ್ಷ ಸಿ.ಕೆ. ಇಬ್ರಾಹಿಂ, ಬ್ಲಾಕ್ ಕಾಂಗ್ರೇಸ್ ಮಾಜಿ ಕಾರ್ಯದರ್ಶಿ ಪಿ.ಆರ್.ವಿನಯಕುಮಾರ್, ಪಟ್ಟಣ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಇಂತಿಯಾಜ್, ಪಲ್ಗುಣಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಎ.ಸಿ.ಅಯೂಬ್, ಬಣಕಲ್ ಹೋಬಳಿ ಕಾಂಗ್ರೇಸ್ ಕಾರ್ಯದರ್ಶಿ ಉಮ್ಮರ್, ಬಣಕಲ್ ಗ್ರಾಮ ಪಂಚಾಯತಿ ಉಪಾಧ್ಯಕ್ಷ ಇರ್ಫಾನ್, ಜಿಲ್ಲಾ ಕಾಂಗ್ರೇಸ್ ಸದಸ್ಯ ಮಜೀದ್, ತಾಲ್ಲೂಕು ಯುವ ಕಾಂಗ್ರೇಸ್ ಮಾಜಿ ಅಧ್ಯಕ್ಷ ಇಮ್ರಾನ್, ಜಿ.ಪಂ. ಮಾಜಿ ಸದಸ್ಯ ನಿಖಿಲ್ ಚಕ್ರವರ್ತಿ ಮುಂತಾದವರು ಇದ್ದರು.



