ಕಾಡಾನೆಗಳಾದ ಭೀಮಾ ಹಾಗೂ ಕ್ಯಾಪ್ಟನ್ ನಡುವಿನ ಭೀಕರ ಕಾಳಗದಲ್ಲಿ ಭೀಮಾ ಒಂದು ದಂತ ಕಳೆದುಕೊಂಡಿರುವ ಘಟನೆ ಬೇಲೂರು ತಾಲ್ಲೂಕಿನ ಜಗಬೋರನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಎರಡು ದೈತ್ಯಾಕಾರದ ಕಾಡಾನೆಗಳು ಮದದಲ್ಲಿದ್ದವು. ಭಾನುವಾರ ಜಗಬೋರನಹಳ್ಳಿ ಗ್ರಾಮದ ಬಳಿ ಭೀಮಾ ಹಾಗೂ ಕ್ಯಾಪ್ಟನ್ ಎದುರಾಗಿ ಭೀಕರ ಕಾಳಗ ನಡೆಸಿವೆ.
ಕಾಳಗದ ವೇಳೆ ಸಿಟ್ಟಿನಲ್ಲಿ ಭೀಮಾ ಮರಕ್ಕೆ ಗುದ್ದಿದ್ದಾನೆ. ಗುದ್ದಿದ ರಭಸಕ್ಕೆ ಭೀಮನ ಒಂದು ದಂತ ಮುರಿದು ಬಿದ್ದಿದೆ.
ದಂತ ಕಳೆದುಕೊಂಡು ಒಂಟಿಸಲಗ ಭೀಮಾ ಘೀಳಿಡುತ್ತಿದ್ದು, ಭೀಮನ ಸೊಂಡಿಲಿನ ಬಳಿ ರಕ್ತ ಸುರಿಯುತ್ತಿದೆ. ಕಾಫಿ ತೋಟದಲ್ಲಿ ನಿಂತು ಭೀಮಾ ನರಳಾಡಿದ. ಕಾಳಗದಲ್ಲಿ ಕ್ಯಾಪ್ಟನ್‌ಗೂ ಗಂಭೀರ ಸ್ವರೂಪದ ಗಾಯಗಳಾಗಿವೆ.

ಕಾದಾಟದಲ್ಲಿ ದಂತ ಮುರಿದುಕೊಂಡ ಭೀಮ ಯಾರ ಕಣ್ಣಿಗೂ ಕಾಣದಂತೆ ನಾಪತ್ತೆಯಾಗಿದ್ದಾನೆ.
ಭಾನುವಾರ ಸಂಜೆ 6:30ರ ಸುಮಾರಿಗೆ ಹಳೆ ಬಿಕ್ಕೋಡು ಬಳಿ ಭೀಮ ಕಾಣಿಸಿಕೊಂಡಿದ್ದ. ಬಳಿಕ ಅರಣ್ಯ ಇಲಾಖೆ ಸಿಬ್ಬಂದಿ ಕಣ್ತಪ್ಪಿಸಿ ಮರೆಯಾಗಿದ್ದಾನೆ. ದಂತ ಮುರಿದುಕೊಂಡ ಬಳಿಕ ಭೀಮನ ಆರೋಗ್ಯದ ಸ್ಥಿತಿ ಬಗ್ಗೆ ತಿಳಿಯಲು ಭೀಮನಿಗಾಗಿ ಹುಡುಕಾಟ ನಡೆಸಲಾಗುತ್ತಿದೆ. ಆದರೆ ರಾತ್ರಿಯಿಡಿ ಶೋಧ ನಡೆಸಿದರೂ ಸಹ ಭೀಮನ ಸುಳಿವು ಸಿಕ್ಕಿಲ್ಲ.
ಗಲಾಟೆ ಬಳಿಕ ಕ್ಯಾಪ್ಟನ್ ಗುಂಪು ಸೇರಿಕೊಂಡಿದ್ದಾನೆ. ಭೀಮ ಮಾತ್ರ ದಂತ ಮುರಿದುಕೊಂಡು ನರಳಾಡುತ್ತಾ ಕಾಡಿನಲ್ಲಿ ಮರೆಯಾಗಿದ್ದಾನೆ.
ಭಾನುವಾರ ಜಗಬೋರನಹಳ್ಳಿ ಗ್ರಾಮದ ಮನೆಯೊಂದರ ಅಂಗಳದಲ್ಲೇ ಭೀಮಾ ಮತ್ತು ಕ್ಯಾಪ್ಟನ್ ಮುಖಾಮುಖಿಯಾಗಿದ್ದವು. ಮದವೇರಿದ ಭೀಮಾ ಮನೆಯ ಅಂಗಳದಲ್ಲಿದ್ದ ನೀರಿನ ಸಿಂಟೆಕ್ಸ್, ಎತ್ತಿನ ಗಾಡಿ, ಜೋಳದ ಬಣವೆಗಳನ್ನು ಪುಡಿಗೈದಿತ್ತು. ನಂತರ ಅಲ್ಲಿಂದ ತೆರಳಿ ಕಾಫಿ ತೋಟವೊಂದರಲ್ಲಿ ಮತ್ತೆ ಮುಖಾಮಖಿಯಾಗಿದ್ದವು. ಆ ಸಂದರ್ಭದಲ್ಲಿ ಭೀಮಾ ಸಿಟ್ಟಿನಿಂದ ಮರವೊಂದಕ್ಕೆ ಗುದ್ದಿದ ಸಂದರ್ಭದಲ್ಲಿ ತನ್ನ ದಂತವನ್ನು ಕಳೆದುಕೊಂಡಿದೆ.
ಭೀಮಾ ಈ ಭಾಗದಲ್ಲಿ ಅತಿ ಪರಿಚಿತ ಆನೆಯಾಗಿದೆ. ಊರಿನ ಬೀದಿಗಳಲ್ಲಿ ಸಾಕಾನೆಯಂತೆ ರಾಜಗಾಂಭೀರ್ಯದಿಂದ ಸಾಗುತ್ತಾ ಜನರಿಗೆ ಹತ್ತಿರದಿಂದ ದರ್ಶನ ನೀಡುತ್ತಿರುತ್ತಲೇ ಇರುತ್ತಾನೆ. ಭೀಮಾ ಮತ್ತು ಕ್ಯಾಪ್ಟನ್ ಈ ಹಿಂದೆಯೂ ಹಲವು ಬಾರಿ ಪರಸ್ಪರ ಮುಖಾಮುಖಯಾಗಿದ್ದವು. ಆಗೆಲ್ಲಾ ಭೀಮಾ ಕ್ಯಾಪ್ಟನ್ ನನ್ನು ಹಿಮ್ಮೆಟ್ಟಿಸುತ್ತಿತ್ತು. ಆದರೆ ಭಾನುವಾರ ತನ್ನದೇ ಸ್ವಯಂಕೃತ ಸಿಟ್ಟಿನಿಂದ ತನ್ನ ದಂತವನ್ನು ಕಳೆದುಕೊಂಡು ಸಾವು ಬದುಕಿನ ನಡುವೆ ನರಳಾಟ ನಡೆಸುತ್ತಾ ಕಾಡಿನಲ್ಲಿ ಕಣ್ಮರೆಯಾಗಿದ್ದಾನೆ.



