ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹದಲ್ಲಿ ಭಯೋತ್ಪಾದಕರು, ವಿಕೃತ ಕಾಮಿಗಳಿಗೆ ರಾಜಾತಿಥ್ಯ ನೀಡುತ್ತಿರುವ ರಾಜ್ಯ ಸರ್ಕಾರದ ವಿರುದ್ದ ಜಿಲ್ಲಾ ಯುವಮೋರ್ಚಾ ಕಾರ್ಯಕರ್ತರು ಚಿಕ್ಕಮಗಳೂರು ಆಜಾದ್‌ಪಾರ್ಕ್ ವೃತ್ತದಲ್ಲಿ ಪ್ರತಿಭಟನೆ ನಡೆಸಿ ಮುಖ್ಯಮಂತ್ರಿ ಮತ್ತು ಗೃಹಸಚಿವರ ರಾಜೀನಾಮೆಗೆ ಪಟ್ಟುಹಿಡಿದರು.
ಬಿಜೆಪಿ ಕಚೇರಿಯಿಂದ ಸರ್ಕಾರದ ವಿರುದ್ಧ ಧಿಕ್ಕಾರ ಕೂಗುತ್ತಾ ಸಾಗಿದ ಕಾರ್ಯಕರ್ತರು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಕಚೇರಿ ಮುತ್ತಿಗೆಗೆ ಯತ್ನಿಸಲು ಮುಂದಾದಾಗ ಪೊಲೀಸರು ತಡೆಹಿಡಿದು ವಶಕ್ಕೆ ಪಡೆದರು. ಈ ನಡುವೆ ಪೊಲೀಸರ ಜೊತೆ ವಾಗ್ವಾದ ನಡೆಸಿದ ಕಾರ್ಯಕರ್ತರು ನಾವುಗಳು ಭಯೋತ್ಪಾದಕರೇ, ಗನ್ ತರುವ ಅವಶ್ಯಕತೆ ಏನಿದೆ ಎಂದು ಮಾತಿನ ಚಕಮಕಿ ನಡೆದಾಗ ಪೊಲೀಸರು ಬಂಧನಕ್ಕೆ ಒಳಪಡಿಸಿದರು.
ಯುವಮೋರ್ಚಾ ಜಿಲ್ಲಾಧ್ಯಕ್ಷ ಸಂತೋಷ್ ಕೋಟ್ಯಾನ್ ಮಾತನಾಡಿ ಭಯೋತ್ಪಾದಕರು, ವಿಕೃತ ಕಾಮಿ, ದೇಶದ್ರೋಹಿಗಳಿಗೆ ರಾಜ್ಯದ ಕಾಂಗ್ರೆಸ್ ಸರ್ಕಾರ ಸಕಲ ಸವಲತ್ತನ್ನು ಪೂರೈಸಿ ರಾಜಾತಿಥ್ಯ ನೀಡುತ್ತಿದ್ದು, ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.
ಕಾರಾಗೃಹದಲ್ಲಿ ವಿಕೃತ ಕಾಮಿ ಹಾಗೂ ಭಯೋತ್ಪಾದಕರ ಕೈಯಲ್ಲಿ ಸ್ಮಾರ್ಟ್ಪೋನ್ ಬಳಸುತ್ತಿರುವು ದು ಸ್ಪಷ್ಟವಾಗಿ ಗೋಚರಿಸುತ್ತಿದೆ. ಇದು ರಾಜ್ಯದ ಕಾನೂನು ಸುವ್ಯವಸ್ಥೆಯ ವೈಫಲ್ಯತೆ ನೇರವಾಗಿ ಎದ್ದುಕಾಣುತ್ತಿದೆ ಎಂದು ಟೀಕಿಸಿದರು.
ಎಸ್ಸಿ ಮೋರ್ಚಾ ಜಿಲ್ಲಾಧ್ಯಕ್ಷ ಕುರುವಂಗಿ ವೆಂಕಟೇಶ್ ಮಾತನಾಡಿ ಬಡವರು, ಶೋಷಿತರು, ದಲಿತರು ಹಾಗೂ ರೈತರ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ರಾಜ್ಯದ ಕಾಂಗ್ರೆಸ್ ಸರ್ಕಾರದಲ್ಲಿ ಸಂಪೂರ್ಣ ಕಾನೂನು ಸುವ್ಯವಸ್ಥೆ ನೆಲಕಚ್ಚಿದೆ, ಖೈದಿಗಳಿಗೆ ಐಶರಾಮಿ ಬದುಕಲು ಅವಕಾಶ ಕಲ್ಪಿಸಿಕೊಟ್ಟಿರುವ ಕೆಟ್ಟ ರಾಜ್ಯಸರ್ಕಾರದ ನಡೆಯನ್ನು ಜನತೆ ಖಂಡಿಸಬೇಕು ಎಂದರು.
ಸಾರ್ವಜನಿಕ ವಲಯದಲ್ಲಿ ದೊರಕದ ಐಶರಾಮಿ ಜೀವನ, ಸೆರೆವಾಸದಲ್ಲಿ ಮಾಡಿಕೊಟ್ಟ ಕಾರಾಗೃಹ ಅಧಿಕಾರಿಗಳನ್ನು ನೌಕರಿಯಿಂದ ವಜಾಗೊಳಿಸಬೇಕು. ಮುಖ್ಯಮಂತ್ರಿಗಳು, ಗೃಹಸಚಿವರು ಈ ಪ್ರಕರಣ ನೈತಿಕ ಹೊಣೆಹೊತ್ತು ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಯುವಮೋರ್ಚಾದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಚಿನ್‌ಗೌಡ, ಉಪಾದ್ಯಕ್ಷೆ ಅಂಕಿತ, ಕಾರ್ಯದರ್ಶಿ ರಾಜೇಶ್, ಶಶಿಆಲ್ದೂರು, ಓಬಿಸಿ ರಾಜ್ಯ ಕಾರ್ಯದರ್ಶಿ ಬಿ.ರಾಜಪ್ಪ, ಬಿಜೆಪಿ ನಗ ರಾಧ್ಯಕ್ಷ ಪುಷ್ಪರಾಜ್, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಜಸಂತಾ ಅನಿಲ್‌ಕುಮಾರ್, ಕವಿತಾ ಶೇಖರ್, ರೂಪ ಕುಮಾರ್ ಪಾಲ್ಗೊಂಡಿದ್ದರು



