ಕೃಷಿ ವಿಜ್ಞಾನ ಕೇಂದ್ರ ಮೂಡಿಗೆರೆ ಸಭಾಂಗಣದಲ್ಲಿ ನವೆಂಬರ್ 12 ರಂದು ನೆಸ್ಲೇ ಇಂಡಿಯಾದ ಅಗ್ರಿಕಲ್ಚರಲ್ ಸರ್ವೀಸಸ್ ವಿಭಾಗವು ಚಿಕ್ಕಮಗಳೂರು ಜಿಲ್ಲೆಯ ಕಾಫಿ ಪರಿಸರ ವ್ಯವಸ್ಥೆಗಳಲ್ಲಿ ಜೇನುಹುಳುಗಳು ಮತ್ತು ಇತರೆ ಪಾಲಿನೇಟರ್‌ಗಳ ಮಹತ್ವವನ್ನು ಉತ್ತೇಜಿಸುವ ಉದ್ದೇಶದಿಂದ “ಪಾಲಿನೇಟರ್ಸ್ ಫಾರ್ ಪ್ರಾಸ್ಪೆರಿಟಿ” ಕಾರ್ಯಕ್ರಮವನ್ನು ಆಯೋಜಿಸಿತು. ಈ ಕಾರ್ಯಕ್ರಮವು ಪುನರುತ್ಪಾದಕ ಕೃಷಿಯ ದಿಕ್ಕಿನಲ್ಲಿ ಮಹತ್ವದ ಹೆಜ್ಜೆಯಾಗಿ ಗುರುತಿಸಲ್ಪಟ್ಟಿತು.
ಈ ಸಂದರ್ಭದಲ್ಲಿ ಜಿಲ್ಲೆಯ ವಿವಿಧ ಭಾಗಗಳಿಂದ 450 ಕ್ಕೂ ಹೆಚ್ಚು ಕಾಫಿ ಬೆಳೆಗಾರರು ಮತ್ತು ಅವರ ಕುಟುಂಬ ಸದಸ್ಯರು ಉತ್ಸಾಹಭರಿತವಾಗಿ ಭಾಗವಹಿಸಿ ಕಾರ್ಯಕ್ರಮಕ್ಕೆ ಅದ್ಭುತ ಬೆಂಬಲ ನೀಡಿದರು. ಜೇನುಹುಳಿಗಳ ಪಾತ್ರ, ಕಾಫಿ ಉತ್ಪಾದಕತೆ ಹೆಚ್ಚಿಸುವಲ್ಲಿ ಪಾಲಿನೇಟರ್‌ಗಳ ಮಹತ್ವ, ಜೀವವೈವಿಧ್ಯ ಸಂರಕ್ಷಣೆ ಮತ್ತು ಪರಿಸರ ಆರೋಗ್ಯ ಇತ್ಯಾದಿ ವಿಷಯಗಳನ್ನು ಕಾರ್ಯಕ್ರಮದಲ್ಲಿ ವಿಶೇಷವಾಗಿ ಒತ್ತು ನೀಡಲಾಯಿತು.

ನೆಸ್ಲೇ ಅಗ್ರಿಕಲ್ಚರಲ್ ಸರ್ವೀಸಸ್‌ನ ಲೀಡ್ – ನೆಸ್ಕಾಫೆ ಪ್ಲ್ಯಾನ್, ಚಿಕ್ಕಮಗಳೂರು, ಶಿವಕುಮಾರ ಬಿ.ಎಸ್. ಕೃತಜ್ಞತೆಯ ಭಾವ ವ್ಯಕ್ತಪಡಿಸುತ್ತಾ ಹೇಳಿದರು: “ಪಾಲಿನೇಟರ್ಸ್ ಫಾರ್ ಪ್ರಾಸ್ಪೆರಿಟಿ ಕಾರ್ಯಕ್ರಮ ನನ್ನ ಜೀವನದ ಒಂದು ಸಾರ್ಥಕ ಕ್ಷಣ. 450 ಕ್ಕೂ ಹೆಚ್ಚು ಕಾಫಿ ಬೆಳೆಗಾರರು ಒಂದೇ ವೇದಿಕೆಯಲ್ಲಿ ಕೂಡಿರುವುದನ್ನು ನೋಡುವುದು ಅತ್ಯಂತ ಭಾವನಾತ್ಮಕ ಮತ್ತು ಪ್ರೇರಣಾದಾಯಕವಾಗಿತ್ತು. ನಮ್ಮ ಎಲ್ಲಾ ಕಾಫಿ ರೈತರಿಗೆ ಹೃತ್ಪೂರ್ವಕ ಧನ್ಯವಾದಗಳು — ನೀವು ಸದಾ ನಮ್ಮ ಪ್ರಯತ್ನಗಳ ಹೃದಯಭಾಗವಾಗಿದ್ದೀರಿ. ನಿಮ್ಮ ಪ್ರೀತಿ, ಪ್ರೋತ್ಸಾಹ ಮತ್ತು ನಿಸ್ವಾರ್ಥ ಬೆಂಬಲವೇ ಈ ಕಾರ್ಯಕ್ರಮವನ್ನು ಅದ್ಭುತ ಯಶಸ್ಸಿನತ್ತ ಕೊಂಡೊಯ್ದಿತು. ನೀವು ಎಂದಿಗೂ ನನ್ನನ್ನು ಕೇವಲ ಅಧಿಕಾರಿಯಾಗಿ ನೋಡಿಲ್ಲ; ನಿಮ್ಮ ಮನೆಯವನಂತೆ ಸ್ವೀಕರಿಸಿದ್ದೀರಿ — ಇದೇ ನನ್ನ ಅತ್ಯಂತ ದೊಡ್ಡ ಶಕ್ತಿ.” ಈ ಕಾರ್ಯಕ್ರಮದ ಯಶಸ್ಸಿಗೆ ತೊಡಗಿಸಿಕೊಂಡ ಪ್ರಗತಿಪರ ಮತ್ತು ಪ್ರೋಆಕ್ಟಿವ್ ರೈತರಿಗೆ, ಹಾಗು ಆಯೋಜನಾ ಸಮಿತಿ ಸದಸ್ಯರಿಗೆ ವಿಶೇಷ ಧನ್ಯವಾದಗಳನ್ನು ಸಲ್ಲಿಸಿದರು.

“ಕಾಫಿ ಪರಿಸರ ವ್ಯವಸ್ಥೆಗಳಲ್ಲಿ ಜೇನುಹುಳು ಸಾಕಾಣಿಕೆ ಮತ್ತು ಜೇನುಕುಳಿ (ಬೀ ಫ್ಯಾಮಿಲಿ) ನಿರ್ವಹಣೆ” ಕುರಿತು ತಾಂತ್ರಿಕ ತರಬೇತಿ ಅಧಿವೇಶನವನ್ನು ಡಾ. ಆರ್.ಎನ್. ಕೆಂಚರಡ್ಡಿ, ಪ್ರೊಫೆಸರ್ – ಕೃಷಿ ಕೀಟಶಾಸ್ತ್ರ, ನಡೆಸಿ, ಪಾಲಿನೇಟರ್ ನಿರ್ವಹಣೆ ಮತ್ತು ಪುನರುತ್ಪಾದಕ ಕೃಷಿಯ ಬಗ್ಗೆ ಮಹತ್ತರ ಮಾಹಿತಿಗಳನ್ನು ಹಂಚಿಕೊಂಡರು.
ಕಾರ್ಯಕ್ರಮದಲ್ಲಿ ದಿನೇಶ್ ಎಂ.ಜೆ., ಅಧ್ಯಕ್ಷರು, ಕಾಫಿ ಮಂಡಳಿ, ಭಾರತ ಸರ್ಕಾರ, ಸುಕುಮಾರನ್ ಕರುತ್ತರ, ಮುಖ್ಯಸ್ಥರು – ಅಗ್ರಿಕಲ್ಚರಲ್ ಸರ್ವೀಸಸ್ (ಕಾಫಿ & ಟೀ), ನೆಸ್ಲೇ ನಂಜನಗೂಡು, ಹಳಸೆ ಶಿವಣ್ಣ, ಅಧ್ಯಕ್ಷರು, ಕರ್ನಾಟಕ ಗ್ರೋವರ್ಸ್ ಫೆಡರೇಷನ್, ಅಶೋಕಕುಮಾರ ಡಿ.ಎಲ್., ಅಧ್ಯಕ್ಷರು, ಜಿಲ್ಲೆ ಕೃಷಿಕ ಸಮಾಜ, ಬಿ.ಆರ್. ಬಾಲಕೃಷ್ಣ, ಅಧ್ಯಕ್ಷರು, ಮೂಡಿಗೆರೆ ತಾಲ್ಲೂಕು ಪ್ಲಾಂಟರ್ಸ್ ಅಸೋಸಿಯೇಷನ್, ಕೆ.ಆರ್. ಕೇಶವ್, ಮಾಜಿ ಉಪಾಧ್ಯಕ್ಷರು, ಕಾಫಿ ಮಂಡಳಿ, ಡಾ. ಶ್ರೀನಿವಾಸ್, ಡೀನ್, ಹಾರ್ಟಿಕಲ್ಚರ್ ಕಾಲೇಜು, ಮೂಡಿಗೆರೆ, ಡಾ. ಕೃಷ್ಣಮೂರ್ತಿ ಎ.ಟಿ., ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥರು, KVK ಮೂಡಿಗೆರೆ, ವಿಶ್ವನಾಥ ಹಡಗಲಿ, SLO, ಕಾಫಿ ಮಂಡಳಿ, ಮೂಡಿಗೆರೆ ಉಪಸ್ಥಿತರಿದ್ದರು.



