ಮಾನವನ ಸ್ವಾರ್ಥ ನಡೆಯಿಂದ ಪರಿಸರದ ಮೇಲೆ ಅಪಾರ ಒತ್ತಡ ಹೆಚ್ಚುತ್ತಿದೆ ಎಂದು ಚಿಕ್ಕಮಗಳೂರು ಪ್ರಾದೇಶಿಕ ಸಾರಿಗೆ ಕಚೇರಿಯ ಮೋಟಾರ್ ವಾಹನ ನಿರೀಕ್ಷಕ ಡಾ.ಮಂಜುನಾಥ್ ಆತಂಕ ವ್ಯಕ್ತಪಡಿಸಿದರು.
ಅವರು ಶನಿವಾರ ಮೂಡಿಗೆರೆ ತೋಟಗಾರಿಕಾ ಮಹಾ ವಿದ್ಯಾಲಯದಲ್ಲಿ ಪ್ರಾದೇಶಿಕ ಸಾರಿಗೆ ಕಚೇರಿ, ಮೂಡಿಗೆರೆ ಕರ್ತವ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಏರ್ಪಡಿಸಿದ್ದ ವಾಯು ಮಾಲಿನ್ಯ ನಿಯಂತ್ರಣ ಮಾಸಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಐಷಾರಾಮಿ ಕಾರುಗಳ ಬಳಕೆ, ಅತಿಯಾದ ಏರ್‍ಕಂಡೀಷನ್ ಉಪಕರಣಗಳು ಹಾಗೂ ಅನಿಯಂತ್ರಿತ ಮಾನವ ಚಟುವಟಿಕೆಗಳು ವಾಯು ಮಾಲಿನ್ಯಕ್ಕೆ ಪ್ರಮುಖ ಕಾರಣವಾಗುತ್ತಿದೆ. ಪ್ಲಾಸ್ಟಿಕ್ ನಿಷೇಧಿಸಿ, ವಾಹನ ಬಳಕೆ ್ನ ನಿಯಂತ್ರಿಸುವ ಮೂಲಕ ಗಿಡಗಳನ್ನು ನೆಟ್ಟು ಪರಿಸರ ಸಂರಕ್ಷಣೆಗೆ ಪ್ರತಿಯೊಬ್ಬರೂ ಮುಂದಾಗಬೇಕಿದೆ ಎಂದು ಹೇಳಿದರು.
ತೋಟಗಾರಿಕೆ ಮಹಾ ವಿದ್ಯಾಲಯದ ಡೀನ್ ಡಾ.ಶ್ರೀನಿವಾಸ್ ಮಾತನಾಡಿ, ಹಿಂದೆ ಶುದ್ಧ ಗಾಳಿ, ಸ್ವಚ್ಛ ಪರಿಸರವಿತ್ತು. ಆದರೆ ಈಗ ಪರಿಸರ ಸಂಪೂರ್ಣ ಹಾನಿಯಾಗುತ್ತಿದೆ. ರಾಸಾಯನಿಕ ಬಳಕೆಯಿಂದ ಆಹಾರ ಪದಾರ್ಥಗಳು ವಿಷಕಾರಿಯಾಗುತ್ತಿವೆ. ಈ ಬಗ್ಗೆ ಯುವ ಪೀಳಿಗೆಗೆ ಜಾಗೃತಿ ಮೂಡಿಸು ಕಾರ್ಯ ನಡೆಯಬೇಕಿದೆ ಎಂದು ಹೇಳಿದರು.
ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ಪ್ರಸನ್ನ ಕುಮಾರ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಶುದ್ಧ ಪರಿಸರವನ್ನು ಮುಂದಿನ ತಲೆಮಾರಿಗೆ ಉಳಿಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಪರಿಸರ ಜಾಗೃತಿ ನಿಮಿತ್ತ ಪ್ರಬಂಧ ಸ್ಪರ್ಧೆ ಏರ್ಪಡಿಸಲಾಗಿದ್ದು, ವಿಜೇತರನ್ನು ಸಾರಿಗೆ ಇಲಾಖೆ ಗೌರವಿಸಿ ಬಹುಮಾನ ವಿತರಿಸಲಾಯಿತು.
ಉಪನ್ಯಾಸಕರಾದ ಡಾ.ಇಮ್ರಾನ್, ಡಾ.ವೆಂಕಟೇಶ್, ಮಂಜುನಾಥ್ ಪತ್ರಕರ್ತರಾದ ಅಮರನಾಥ್, ಪ್ರಕಾಶ್ ಬಕ್ಕಿ, ಸಾರಿಗೆ ಇಲಾಖೆ ತಾಂತ್ರಿಕ ಸಹಾಯಕ ಸಂತೋಷ್, ತೇಜಸ್, ದೇವರಾಜ್, ಸಂತೋಷ್ ಮತ್ತಿತರರಿದ್ದರು.



