ಮಸೀದಿಗಳಿಗೆ ಅಧಿಕಾರಿಗಳು ಭೇಟಿ ನೀಡಿ ಕಾನೂನು ಬಾಹಿರ ಚಟುವಟಿಕೆಯ ಬಗ್ಗೆ ಅರಿವು ಮೂಡಿಸುವ ಅಗತ್ಯವಿಲ್ಲ. ಗಾಂಜಾ, ಅಫೀಮು, ಡ್ರಗ್ಸ್ ಸೇರಿದಂತೆ ಇತರೆ ಕಾನೂನು ಬಾಹಿರ ಚಟುವಟಿಕೆಗಳಿಗೂ ಮಸೀದಿಗಳಿಗೂ ಯಾವುದೆ ಸಂಬಂಧವಿಲ್ಲ. ಅಧಿಕಾರಿಗಳು ಅರಿವು ಮೂಡಿಸುವ ನೆಪದಲ್ಲಿ ಮಸೀದಿಗಳಿಗೆ ಪ್ರವೇಶಿಸಿ ಬೆದರಿಕೆ ಹಾಕುವುದನ್ನು ಸಹಿಸಲು ಸಾಧ್ಯವಿಲ್ಲ ಎಂದು ಸಂಯುಕ್ತ ಜಮಾತ್ ಒಕ್ಕೂಟದ ಅಧ್ಯಕ್ಷ ಸಿ.ಕೆ.ಇಬ್ರಾಹಿಂ ಹೇಳಿದರು.
ಮೂಡಿಗೆರೆ ತಾಲ್ಲೂಕಿನ ಚಕ್ಕಮಕ್ಕಿ ಗ್ರಾಮದ ಬದ್ರಿಯಾ ಜುಮಾ ಮಸೀದಿಯಲ್ಲಿ ಮಂಗಳವಾರ ನಡೆದ ಸಂಯುಕ್ತ ಜಮಾತ್ ಒಕ್ಕೂಟದ ಮಹಾಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮುಸ್ಲಿಮರು ಕಾನೂನು ಬಾಹಿರ ಚಟುವಟಿಕೆಯಲ್ಲಿ ಪಾಲ್ಗೊಳ್ಳುವುದಿಲ್ಲ. ಅಂತಹ ಉದ್ದೇಶಗಳಿಗೆ ಪ್ರೇರೇಪಣೆ ನೀಡುವವರು ಮುಸ್ಲಿಂ ಸಮುದಾಯದಲ್ಲಿ ಯಾರೊಬ್ಬರೂ ಇಲ್ಲ. ಸರ್ಕಾರ ಮಸೀದಿಗಳಿಗೆ ಅಧಿಕಾರಿಗಳನ್ನು ಕಳಿಸಿ ಅರಿವು ಮೂಡಿಸುವ ಅಗತ್ಯವಿಲ್ಲ. ಮಸೀದಿಗಳು ತನ್ನದೆ ಆದ ಪಾವಿತ್ರತೆಯನ್ನು ಹೊಂದಿದೆ. ಧಾರ್ಮಿಕ ಕಾರ್ಯವನ್ನು ಹೊರತುಪಡಿಸಿ ಇತರೆ ಯಾವುದೆ ರೀತಿಯ ಚಟುವಟಿಕೆಗಳಿಗೆ ಮಸೀದಿಗಳಲ್ಲಿ ಅವಕಾಶವಿಲ್ಲ. ಹಾಗಿದ್ದರೂ ಸರ್ಕಾರ ದಕ್ಷಿಣ ಕನ್ನಡ ಜಿಲ್ಲೆಯ ಕೆಲ ಮಸೀದಿಗಳಿಗೆ ಅಧಿಕಾರಿಗಳನ್ನು ಕಳಿಸಿ ಹಿರಿಯ ಧಾರ್ಮಿಕ ವಿದ್ವಾಂಸರ ಮುಂದೆ ಬೆದರಿಕೆ ಹಾಕುವ ರೀತಿಯಲ್ಲಿ ಅರಿವು ಮೂಡಿಸುವ ನಾಟಕವಾಡುತ್ತಿರುವುದು ಸರಿಯಲ್ಲ. ಇಂತಹ ಮನೋಭಾವನೆಯನ್ನು ಅಧಿಕಾರಿಗಳು ಕೈಬಿಡಬೇಕು ಎಂದು ತಿಳಿಸಿದರು.
ಕಳೆದ 25 ವರ್ಷದ ಹಿಂದೆ ಆರಂಭಿಸಿದ ಸಂಯುಕ್ತ ಜಮಾತ್ ಒಕ್ಕೂಟ ವ್ಯಾಪ್ತಿಯಲ್ಲಿ 17 ಮಸೀದಿಗಳಿವೆ. ಪ್ರತಿಯೊಂದು ಮಸೀದಿಗೆ ಸೇರಿ ಜಮಾತ್ ಸದಸ್ಯರಾಗಿರುವ ಬಡತನದಲ್ಲಿರುವ ಕುಟುಂಬದ ಹೆಣ್ಣು ಮಕ್ಕಳ ಮದುವೆಗೆ ಮತ್ತು ಅನಾರೋಗ್ಯ ಪೀಡಿತರಿಗೆ ಸಂಯುಕ್ತ ಜಮಾತ್ ಒಕ್ಕೂಟದಿಂದ ಆರ್ಥಿಕವಾಗಿ ಸಹಾಯ ನೀಡಲಾಗುತ್ತದೆ. ಸಂಯುಕ್ತ ಜಮಾತ್ ಒಕ್ಕೂಟ ಆರಂಭವಾದ ಬಳಿಕ ಮಸೀದಿಗಳ ವ್ಯಾಪ್ತಿಗೆ ಧಾರ್ಮಿಕ ನ್ಯಾಯಾಧೀಶರಾದ ಖಾಝಿಯನ್ನು ನೇಮಿಸಲಾಗಿದೆ. ಮಸೀದಿ ವ್ಯಾಪ್ತಿಯ ಬಹುತೇಕ ವಿಚಾರಗಳಿಗೆ ಖಾಝಿಯವರೆ ತೀರ್ಮಾನ ನೀಡುತ್ತಾರೆ. ಹಬ್ಬಗಳ ಆಚರಣೆ, ಮದುವೆ ಸೇರಿದಂತೆ ಕೆಲ ಮಹತ್ವದ ಧಾರ್ಮಿಕ ವಿಚಾರದಲ್ಲಿ ಖಾಝಿ ಅವರು ಪತ್ವಾ ಹೊರಡಿಸಿದರೆ ಅದನ್ನು ಪ್ರಶ್ನಿಸಲು ಯಾರಿಗೂ ಅಧಿಕಾರವಿರುವುದಿಲ್ಲ. ಅಂತಹ ಮಹತ್ವದ ಖಾಝಿ ಹುದ್ದೆಯಲ್ಲಿ ಶೈಖುನಾ ಕೊಯ್ಯೋಡು ಉಮ್ಮರ್ ಮುಸ್ಲಿಯಾರ್ ಈಗ ನಿರ್ವಹಿಸುತ್ತಿದ್ದಾರೆ ಎಂದು ತಿಳಿಸಿದರು.
ನೂತನ ಪದಾಧಿಕಾರಿಗಳ ಆಯ್ಕೆ ವೇಳೆ ಸಭಾಧ್ಯಕ್ಷತೆಯನ್ನು ವಹಿಸಿದ್ದ ಭೂತನಕಾಡು ಇಸಾಕ್ ಹಾಜಿ ಮಾತನಾಡಿ, ಧಾರ್ಮಿಕ ಸಂಸ್ಥೆಗಳು ಸಮಾಜಕ್ಕೆ ಒಳಿತನ್ನು ಮಾಡುತ್ತವೆ ಹೊರತು ಕೆಡುಕು ಮಾಡುವ ಉದ್ದೇಶವನ್ನು ಹೊಂದಿರುವುದಿಲ್ಲ. ಮುಸ್ಲಿಂ ಸಮುದಾಯ ಪರೋಪಕಾರವನ್ನು ಮೈಗೂಡಿಸಿಕೊಂಡು ಬಂದಿದೆ. ತಮ್ಮ ಜೀವವನ್ನು ಲೆಕ್ಕಿಸದೆ ಮುಸ್ಲಿಂ ಯುವಕರು, ಸಮಾಜ ಸೇವೆ ಮಾಡುತ್ತಾರೆ. ತುರ್ತು ಸಂದರ್ಭದಲ್ಲಿ ಇನ್ನೊಬ್ಬರ ಪ್ರಾಣ ಉಳಿಸಲು ರಕ್ತವನ್ನು ನೀಡುತ್ತಾರೆ. ಮುಸ್ಲಿಂ ಸಮುದಾಯದಲ್ಲಿ ಧಾರ್ಮಿಕ ನಂಬಿಕೆ ಜೊತೆಗೆ ಸಾಮಾಜಿಕ ನಂಬಿಕೆ ಹೆಚ್ಚಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸಿ.ಕೆ.ಇಬ್ರಾಹಿಂ ಹಾಜಿ, ಮುಸ್ತಫಾ ಯಮಾನಿ, ಸಿನಾನ್ ಫೈಝಿ, ಅಬ್ದುಲ್ಲಾ ಹಾಜಿ, ಎ.ಸಿ.ಅಯೂಬ್ ಹಾಜಿ, ಜೆ.ಬಿ.ಅಲಿ ಹಾಜಿ, ಇಸ್ಮಾಯಿಲ್ ಬೀಜವಳ್ಳಿ, ಎಂ.ಎಸ್.ಇಬ್ರಾಹಿಂ, ಅಕ್ರಂ ಹಾಜಿ, ಎಂ.ಎಚ್.ಇಬ್ರಾಹಿಂ ಹಾಜಿ, ಎ.ಎಂ.ಶರೀಫ್, ಬಿ.ಎಚ್.ಮಹಮ್ಮದ್, ಮಜೀದ್, ಮಹಮ್ಮದ್ ಹಾಜಿ ಇತರರಿದ್ದರು.
ನೂತನ ಪದಾಧಿಕಾರಿಗಳ ಆಯ್ಕೆ
ಸಂಯುಕ್ತ ಜಮಾತ್ ಒಕ್ಕೂಟದ ಅಧ್ಯಕ್ಷರಾಗಿ ಸಿ.ಕೆ.ಇಬ್ರಾಹಿಂ ಹಾಜಿ, ಗೌರವಾಧ್ಯಕ್ಷರಾಗಿ ಅಕ್ರಂ ಹಾಜಿ, ಉಪಾಧ್ಯಕ್ಷರಾಗಿ ಎಂ.ಎಚ್.ಇಬ್ರಾಹಿಂ ಹಾಜಿ, ಎ.ಎಂ.ಶರೀಫ್ ಹಾಜಿ, ಮಹಮ್ಮದ್ ಅಲಿ, ಮಜೀದ್, ಎಂ.ಎಸ್.ಲತೀಫ್, ಮಹಮ್ಮದ್ ಹಾಜಿ, ಎ.ಸಿ.ಅಯೂಬ್ ಹಾಜಿ,
ಪ್ರಧಾನ ಕಾರ್ಯದರ್ಶಿಯಾಗಿ ಜೆ.ಬಿ.ಅಲಿ ಹಾಜಿ, ಸಹಕಾರ್ಯದರ್ಶಿಗಳಾಗಿ ರಿಜ್ವಾನ್ ಅಲಿ, ಅಸ್ಗರ್, ಮೊಯ್ದಿನ್ ಸೇಟ್, ಖಜಾಂಚಿಯಾಗಿ ಅಶ್ರಫ್, ಅಬ್ದುಲ್ಲಾ ಹಾಜಿ, ಧಾರ್ಮಿಕ ಸಲಹೆಗಾರರಾಗಿ ಮುಸ್ತಫಾ ಯಮಾನಿ, ಸಿನಾನ್ ಫೈಝಿ, ಮಾಧ್ಯಮ ಸಲಹೆಗಾರರಾಗಿ ಕಿರುಗುಂದ ಅಬ್ಬಾಸ್ ಸದಸ್ಯರಾಗಿ 36 ಮಂದಿಯನ್ನು ಆಯ್ಕೆ ಮಾಡಲಾಯಿತು.



