ಸರ್ದಾರ್ ವಲ್ಲಭಬಾಯಿ ಪಟೇಲ್ ಅವರ 150ನೇ ಜನ್ಮದಿನದ ಅಂಗವಾಗಿ ದೇಶದಾದ್ಯಂತ ಹಮ್ಮಿಕೊಂಡಿರುವ ಏಕತಾ ನಡಿಗೆ ಕಾರ್ಯಕ್ರಮದ ಅಂಗವಾಗಿ ಮೂಡಿಗೆರೆ ಪಟ್ಟಣದಲ್ಲಿ ಏಕತಾ ನಡಿಗೆ ಜಾಥಾವನ್ನು ಏರ್ಪಡಿಸಲಾಗಿತ್ತು.
ತಾಲೂಕು ಆಡಳಿತ, ಜಿಲ್ಲಾ ಆಡಳಿತ ಮತ್ತು ವಿವಿಧ ಸಂಘಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಏಕತಾ ನಡಿಗೆ ಕಾರ್ಯಕ್ರಮ ಪಟ್ಟಣದಲ್ಲಿ ಅತ್ಯಂತ ಅದ್ದೂರಿಯಾಗಿ ನೆರವೇರಿತು.

ಏಕತಾನಡಿಗೆಯನ್ನು ಮೂಡಿಗೆರೆ ಪಟ್ಟಣದ ತಾಲೂಕು ಆಸ್ಪತ್ರೆ ಆವರಣದಿಂದ ಆರಂಭಿಸಿ ನಗರದ ಪ್ರಮುಖ ಬೀದಿಗಳಲ್ಲಿ ಹಾದು ಅಮರ್ ಜವಾನ್ ವೃತ್ತದವರೆಗೂ ತಲುಪಿ ಅಲ್ಲಿ ಸಾರ್ವಜನಿಕ ಸಭಾ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಈ ಸಂದರ್ಭದಲ್ಲಿ ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸದಸ್ಯರಾದ ಕೋಟ ಶ್ರೀನಿವಾಸ ಪೂಜಾರಿ ಅವರು ಮಾತನಾಡಿ ; ಸರ್ದಾರ್ ವಲ್ಲಭಭಾಯಿ ಪಟೇಲ್ ಅವರು ದೇಶಕ್ಕೆ ನೀಡಿದ ಕೊಡುಗೆಯನ್ನು ಸ್ಮರಿಸಿದರು. ದೇಶವನ್ನು ಒಗ್ಗೂಡಿಸುವುದರಲ್ಲಿ ಮತ್ತು ಅಖಂಡ ಭಾರತ ನಿರ್ಮಾಣದಲ್ಲಿ ಅವರು ನೀಡಿದ ಅಪ್ರತಿಮಾ ಕೊಡುಗೆಯನ್ನು ಕೊಂಡಾಡಿದರು. ದೇಶದ ಉಪ ಪ್ರಧಾನಿಯಾಗಿ ಅವರು ಮಾಡಿದ ಮಹತ್ವದ ಕಾರ್ಯವನ್ನು ಸ್ಮರಿಸಿದರು.

ಏಕತಾ ನಡಿಗೆಯನ್ನು ಉದ್ಘಾಟಿಸಿ ಮಾತನಾಡಿದ ವಿಧಾನ ಪರಿಷತ್ ಉಪಸಭಾಪತಿ ಎಂ ಕೆ ಪ್ರಾಣೇಶ್ ಅವರು ಸರ್ದಾರ್ ವಲ್ಲಭಭಾಯಿ ಪಟೇಲ್ ಅವರು ದೇಶಕ್ಕೆ ನೀಡಿರುವ ಅನುಪಮ ಕೊಡುಗೆಯನ್ನು ಸ್ಮರಿಸಿದರು. ಅವರ 150ನೇ ಜನ್ಮ ದಿನಾಚರಣೆ ಅಂಗವಾಗಿ ದೇಶದಾದ್ಯಂತ ಏಕತಾ ನಡಿಗೆ ಹಮ್ಮಿಕೊಂಡಿರುವುದು ಅತ್ಯಂತ ಅರ್ಥಪೂರ್ಣವಾಗಿದೆ. ಭಾರತವು ಅತ್ಯಂತ ಸದೃಢ ಪ್ರಜಾಪ್ರಭುತ್ವ ರಾಷ್ಟ್ರ ಆಗಿರುವುದಕ್ಕೆ ಅದರ ಹಿಂದೆ ಸರ್ದಾರ್ ಪಟೇಲ್ ಅವರ ಕೊಡುಗೆ ಅನುಪಮವಾಗಿದೆ ಎಂದು ಸ್ಮರಿಸಿದರು .

ಕಾರ್ಯಕ್ರಮದಲ್ಲಿ ಕಾಫಿ ಮಂಡಳಿ ಅಧ್ಯಕ್ಷ ದಿನೇಶ್ ದೇವರುಂದ, ಮೂಡಿಗೆರೆ ತಹಸಿಲ್ದಾರ್ ಶ್ರೀಮತಿ ಅಶ್ವಿನಿ, ಇ.ಓ. ಶ್ರೀಮತಿ ದಯಾವತಿ, ಬಿ ಇ ಓ ಶ್ರೀಮತಿ ಮೀನಾಕ್ಷಿ, ವಿವಿಧ ಇಲಾಖೆಯ ಅಧಿಕಾರಿಗಳು, ನೌಕರರು, ದಿಶಾ ಕಮಿಟಿ ಅಧ್ಯಕ್ಷ ಕಲ್ಮುರುಡಪ್ಪ, ದಿಸಾ ಕಮಿಟಿ ಸದಸ್ಯ ಮನೋಜ್ ಹಳೇಕೋಟೆ, ಮುಖಂಡರಾದ ದೀಪಕ್ ದೊಡ್ಡಯ್ಯ, ಬಿ.ಜೆ.ಪಿ. ತಾಲ್ಲೂಕು ಅಧ್ಯಕ್ಷ ಗಜೇಂದ್ರ ಟಿ ಎಂ, ಟಿ.ಎ.ಪಿ.ಸಿ.ಎಂ.ಎಸ್ ಅಧ್ಯಕ್ಷ ಕಲ್ಲೇಶ್ ಎಂ.ಎಲ್., ನಿವೃತ್ತ ಯೋಧರ ಸಂಘದ ಅಧ್ಯಕ್ಷ ಎಂ.ಕೆ. ಚಂದ್ರೇಶ್, ಸೇರಿದಂತೆ ಬಿಜೆಪಿ ಪಕ್ಷದ ಹಲವು ಮುಖಂಡರು, ರೋಟರಿ, ಲಯನ್ಸ್, ಜೇಸಿಐ ಸೇರಿದಂತೆ ವಿವಿಧ ಸಂಘಸಂಸ್ಥೆಗಳ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು ವಿವಿಧ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು, ಸಾರ್ವಜನಿಕರು ಏಕತಾ ನಡಿಗೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಿದರು




