ಗ್ಯಾಸ್ ಸಿಲಿಂಡರ್ ಸೋರಿಕೆಯಿಂದ ಸುಟ್ಟ ಗಾಯಗಳಿಗೀಡಾದ ಪ್ರಕರಣದಲ್ಲಿ ಪರಿಹಾರ ನೀಡದೆ ಸೇವಾ ನ್ಯೂನತೆ ಎಸಗಿರುವ ಆರೋಪದಲ್ಲಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು 1.20 ಲಕ್ಷ ರೂ. ಪರಿಹಾರ ನೀಡುವಂತೆ ಆದೇಶ ನೀಡಿದೆ.
ಇಂಡಿಯನ್ ಆಯಿಲ್ ಕಾರ್ಪೋರೇಶನ್ ಹಾಗೂ ಎಸ್‌ಬಿಐ ಜನರಲ್ ಇನ್ಶೂರೆನ್ಸ್ ಕಂಪನಿ ವಿರುದ್ಧ ಈ ತೀರ್ಪು ಹೊರ ಬಿದ್ದಿದೆ.
ಹಾಸನ ಜಿಲ್ಲೆ ಬೇಲೂರು ತಾಲ್ಲೂಕು ಗೆಂಡೆಹಳ್ಳಿ ಗ್ರಾಮದ ಜೆ.ಆರ್.ರವೀಶ್ ಎಂಬುವವರ ಭಾವ ಮಂಜುನಾಥ ಮನೆಯಲ್ಲಿ 2023ರ ಸೆಪ್ಟಂಬರ್ 20 ರಂದು ಗ್ಯಾಸ್ ಸಿಲಿಂಡರ್ ಸೋರಿಕೆಯಾಗಿತ್ತು.
ಈ ಅನಾಹುತದ ವೇಳೆ ಮಂಜುನಾಥ ಅವರು ಸುಟ್ಟ ಗಾಯಗಳಿಗೀಡಾಗಿದ್ದು, ಅವರನ್ನು ರಕ್ಷಿಸುವ ಸಂದರ್ಭದಲ್ಲಿ ರವೀಶ್ ಅವರ ಕಾಲುಗಳಿಗೂ ಸುಟ್ಟ ಗಾಯಗಳಾಗಿದ್ದವು.
ಈ ಹಿನ್ನೆಲೆಯಲ್ಲಿ ರವೀಶ್ ತಮ್ಮ ಅಕ್ಕ, ಭಾವ ಗ್ರಾಹಕರಾಗಿರುವ ಚಿಕ್ಕಮಗಳೂರಿನ ಮೆ| ಶಿವನೀಲ್ ಗ್ಯಾಸ್ ಸೇಲ್ಸ್‌ನ ಮಾಲೀಕ ರಜಿತ್ ರುದ್ರ, ಇಂಡಿಯನ್ ಆಯಿಲ್ ಕಾಪೋರೇಶನ್ ಲಿಮಿಟೆಡ್, ನ್ಯೂ ಇಂಡಿಯಾ ಅಶೂರೆನ್ಸ್ ಕಂಪನಿ ಲಿಮಿಟೆಡ್‌ನ ಚಿಕ್ಕಮಗಳೂರು ಶಾಖಾ ವ್ಯವಸ್ಥಾಪಕರು ಹಾಗೂ ಎಸ್‌ಬಿಐ ಜನರಲ್ ಇನ್ಶೂರೆನ್ಸ್ ಕಂಪನಿ ಲಿಮಿಟೆಡ್‌ನ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಿ ಪರಿಹಾರವನ್ನು ಕೋರಿದ್ದರು.
ಅವರ ಮನವಿಗೆ ಯಾವುದೇ ಸಂಸ್ಥೆಗಳು ಸ್ಪಂದಿಸಲಿಲ್ಲ. ಈ ಹಿನ್ನೆಲೆಯಲ್ಲಿ ರವೀಶ್ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ 2024ರ ಆಗಸ್ಟ್ 14 ರಂದು ದೂರು ನೀಡಿದ್ದರು. ಪ್ರಕರಣದ ಬಗ್ಗೆ ವಿಚಾರಣೆ ನಡೆಸಿದ ಆಯೋಗವು ನವೆಂಬರ್ 20 ರಂದು ಇಂಡಿಯನ್ ಆಯಿಲ್ ಕಾರ್ಪೋರೇಶನ್ ಹಾಗೂ ಎಸ್‌ಬಿಐ ಜನರಲ್ ಇನ್ಶೂರೆನ್ಸ್ ಕಂಪನಿ ವಿರುದ್ಧ ತೀರ್ಪು ನೀಡಿದ್ದು, ಸುಟ್ಟ ಗಾಯಾಳುಗಳ ಚಿಕಿತ್ಸಾ ವೆಚ್ಚದ ಬಾಬ್ತು 1,20,000 ರೂ., ಪರಿಹಾರವಾಗಿ 30,000 ರೂ. ಹಾಗೂ ಪ್ರಕರಣದ ಖರ್ಚು-ವೆಚ್ಚಕ್ಕಾಗಿ 10,000 ರೂ.ನೀಡುವಂತೆ ಆದೇಶ ನೀಡಿದೆ.
ಪ್ರಕರಣದಲ್ಲಿ ಶಿವನೀಲ್ ಗ್ಯಾಸ್ ಸೇಲ್ಸ್ ಹಾಗೂ ನ್ಯೂ ಇಂಡಿಯಾ ಅಶೂರೆನ್ಸ್ ಕಂಪನಿಯ ವಿರುದ್ಧದ ದೂರನ್ನು ವಜಾಗೊಳಿಸಲಾಗಿದೆ. ಆಯೋಗದ ಅಧ್ಯಕ್ಷ ಎನ್.ಆರ್.ಚೆನ್ನಕೇಶವ, ಸದಸ್ಯರಾದ ಈ.ಪ್ರೇಮಾ ಮತ್ತು ಡಾ.ಮಂಜುನಾಥ ಬಮ್ಮನಕಟ್ಟಿ ಇವರುಗಳು ಗ್ರಾಹಕರ ಹಿತರಕ್ಷಣೆಗೆ ಪೂರಕವಾಗಿ ಈ ತೀರ್ಪು ನೀಡಿದ್ದಾರೆ.



