ಬಂಗಾಳಕೊಲ್ಲಿಯಲ್ಲಿ ವಾಯಭಾರ ಕುಸಿತದ ಹಿನ್ನೆಲೆ ರಾಜ್ಯದ ಕೆಲವು ಭಾಗಗಳಲ್ಲಿ ಮೋಡಕವಿದ ವಾತಾವರಣ ಮತ್ತು ಶೀತಗಾಳಿ ಬೀಸುತ್ತಿದೆ
ಬಂಗಾಳಕೊಲ್ಲಿಯಲ್ಲಿ ತೀವ್ರ ವಾಯುಭಾರ ಕುಸಿತವಾಗಿದ್ದು, ಮುಂದಿನ ಒಂದೆರಡು ದಿನ ಕರ್ನಾಟಕ ಒಳನಾಡಿನ ಕೆಲವು ಭಾಗಗಳಲ್ಲಿ ಶೀತಗಾಳಿ ಬೀಸುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಕರ್ನಾಟಕದ ಒಳನಾಡಿನ ಕೆಲವು ಸ್ಥಳಗಳಲ್ಲಿ ಕನಿಷ್ಠ ತಾಪಮಾನವು ಮೂರರಿಂದ ಆರು ಡಿಗ್ರಿ ಸೆಲ್ಸಿಯಸ್‌ಗಿಂತ ಕಡಿಮೆಯಿದ್ದರೆ, ಇನ್ನು ಕೆಲ ಪ್ರದೇಶಗಳಲ್ಲಿ ಮಂಜು ಕವಿದ ವಾತಾವರಣವಿರಲಿದೆ. ಬೆಂಗಳೂರಿನಲ್ಲಿ ತುಂತುರು ಮಳೆಯಾಗಿದೆ.
ಏತನ್ಮಧ್ಯೆ ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ತೀವ್ರ ವಾಯುಭಾರ ಕುಸಿತವು ದುರ್ಬಲಗೊಂಡು ಉತ್ತರ ಶ್ರೀಲಂಕಾದ ಕರಾವಳಿಯನ್ನು ದಾಟುವ ಸಾಧ್ಯತೆಯಿದೆ ಎಂದು ಪ್ರಾದೇಶಿಕ ಹವಾಮಾನ ಕೇಂದ್ರ ತಿಳಿಸಿದೆ.
ಜನವರಿ 13ರ ವರೆಗೆ ಮೋಡಕವಿದ ವಾತಾರವಣ ಮುಂದುವರಿಯುವ ಸಾಧ್ಯತೆ ಇದ್ದು ಅಲ್ಲಲ್ಲಿ ಹಗುರ ಮಳೆಯಾಗಬಹುದು ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ
ಶನಿವಾರ ಮಧ್ಯಾಹ್ನದ ನಂತರ ಇದ್ದಕ್ಕಿದಂತೆ ವಾತಾವರಣದಲ್ಲಿ ಬದಲಾವಣೆ ಕಂಡು ಬಂದಿದೆ. ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ಮೋಡಕವಿದ ವಾತಾವರಣ ಸೃಷ್ಟಿಯಾಗಿದೆ. ಕಾಫಿ ಅಡಿಕೆ ಕಾಳುಮೆಣಸು ಭತ್ತದ ಕೊಯ್ಲಿನಲ್ಲಿ ತೊಡಗಿಸಿಕೊಂಡಿರುವ ರೈತರಿಗೆ ಈ ವಾತಾವರಣ ಅತಂಕ ಸೃಷ್ಷಿಸಿದೆ.
ಅಕಾಲಿಕ ಮಳೆಯಾದರೆ ಕಣದಲ್ಲಿರುವ ಫಸಲು ಒಣಗಿಸಲು ತೊಂದರೆಯಾಗುವುದರ ಜೊತೆಗೆ ಗಿಡದಲ್ಲಿರುವ ಫಸಲು ನೆಲಸೇರಲಿದ್ದು ಜೊತೆಗೆ ಅಕಾಲಿಕವಾಗಿ ಕಾಫಿ ಹೂಬಿಟ್ಟು ಮುಂದಿನ ಫಸಲಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ.



