ಪರಿಶ್ರಮ, ತ್ಯಾಗ, ಸಮಾಜದ ಒಳಿತನ್ನು ಬಯಸುವವರನ್ನು ಪ್ರಾಥಃಕಾಲದಲ್ಲಿ ಸ್ಮರಣೆ ಮಾಡಿಕೊಳ್ಳುವುದೇ ಪ್ರಾಥಃಸ್ಮರಣೀಯರಾಗಿದ್ದು, ಇದಕ್ಕೆ ನಿಜ ಅರ್ಥ ಡಾ. ಬಾಲಗಂಗಾಧರನಾಥ ಮಹಾಸ್ವಾಮಿಗಳು ಎಂದು ವಿಶ್ವ ಒಕ್ಕಲಿಗರ ಮಹಾ ಸಂಸ್ಥಾನ ಮಠದ ಪರಮ ಪೂಜ್ಯ ಜಗದ್ಗುರುಗಳಾದ ಶ್ರೀ ಡಾ. ನಿಶ್ಚಲಾನಂದನಾಥ ಸ್ವಾಮೀಜಿ ಹೇಳಿದರು.
ಅವರು ಮಂಗಳವಾರ ಚಿಕ್ಕಮಗಳೂರು ಜಿಲ್ಲಾ ಒಕ್ಕಲಿಗರ ಸಮುದಾಯ ಭವನದಲ್ಲಿ ಜಿಲ್ಲಾ ಒಕ್ಕಲಿಗರ ಸಂಘ ಏರ್ಪಡಿಸಲಾಗಿದ್ದ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪರಮಪೂಜ್ಯ ಜಗದ್ಗುರು ಭೈರವೈಕ್ಯ ಶ್ರೀಶ್ರೀಶ್ರೀ ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿಯವರ 81ನೇ ಜಯಂತ್ಯೋತ್ಸವ, ವಿದ್ಯಾರ್ಥಿ ವೇತನ ವಿತರಣೆ ಮತ್ತು ಸನ್ಮಾನ ಕಾರ್ಯಕ್ರಮದ ದಿವ್ಯಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಒಂದೆಡೆ ವ್ಯಕ್ತಿಯಾಗಿ ಇನ್ನೊಂದೆಡೆ ದಿವ್ಯ ಶಕ್ತಿಯಾಗಿ ನೋಡಬಹುದಾಗಿದ್ದು, ಶ್ರೀಗಳು ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾಗದಿದ್ದರೆ ಮಠ ಬೆಳೆಯುತ್ತಿರಲಿಲ್ಲ. ನಾಡಿನ ರೈತ ಸಮುದಾಯಕ್ಕೆ ಹೆಮ್ಮೆಯ ಗೌರವ, ಶಕ್ತಿ, ಸ್ಥಾನಮಾನಗಳು ಲಭಿಸಿದವು ಎಂದು ಹೇಳಿದರು.
ಇದರಿಂದಾಗಿ ಬಾಲಗಂಗಾಧರನಾಥ ಶ್ರೀಗಳು ಇಡೀ ಜಗತ್ತಿನಲ್ಲಿ ದಾರ್ಶನಿಕರಲ್ಲಿ ಸಮುದಾಯದ ಪ್ರಜ್ಞೆ ಬಂದಾಗ ಆಧ್ಯಾತ್ಮಿಕ ಅತೀ ಎತ್ತರದ ಶಿಖರವನ್ನು ಏರಿದರು. ಸಮುದಾಯದ ಪ್ರಜ್ಞೆ ಬಂದಾಗ ರಾಜಕೀಯದಲ್ಲಿ ಅತಿ ಎತ್ತರಕ್ಕೆ ಬೆಳೆದವರು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಎಂದ ಅವರು, ಭಾರತ ಸಾಹಿತ್ಯ ಪರಂಪರೆಯಲ್ಲಿ ಜಗತ್ತಿನ ಸಾಹಿತ್ಯ ಪರಂಪರೆಯಲ್ಲಿ ಸಾಹಿತ್ಯ ಶಿಖರ ಏರಿದವರು ದಿಗ್ಗಜ ಕುವೆಂಪು ಅವರು ಎಂದು ಬಣ್ಣಿಸಿದರು.
ಈ ಮೂವರು ದಿಗ್ಗಜರನ್ನು ಸಮುದಾಯ, ಈ ನಾಡು, ದೇಶ ಪ್ರಾಥಃಕಾಲದಲ್ಲಿ ಸ್ಮರಣೆ ಮಾಡಬೇಕಾಗಿದೆ. ಅಂಥ ಶಕ್ತಿಯನ್ನು ಸಮಾಜಕ್ಕೆ ನೀಡಿದ್ದಾರೆ. ನಾಡಿಗೆ, ಸಮಸ್ತ ಸಮುದಾಯಕ್ಕೆ ಒಳ್ಳೆಯದನ್ನು ಬಯಸಿದ್ದಾರೆಂದು ತಿಳಿಸಿದರು.
ಆದಿಚುಂಚನಗಿರಿ ಮಹಾಸಂಸ್ಥಾನ ಕೇವಲ ಒಕ್ಕಲಿಗ ಸಮುದಾಯಕ್ಕೆ ಸೀಮಿತವಾಗದೆ ಐದುನೂರಕ್ಕೂ ಹೆಚ್ಚು ಸಂಸ್ಥಾನಗಳಲ್ಲಿ ವ್ಯಾಸಂಗ ಮಾಡುತ್ತಿರುವವರು, ಕೆಲಸ ಮಾಡುತ್ತಿರುವವರು ಸಮುದಾಯದವರಲ್ಲ. ಎಲ್ಲರನ್ನೂ ಒಳಗೊಂಡ ಮಹಾ ಸನ್ನಿಧಿ ಆದಿಚುಂಚನಗಿರಿ ಮಹಾಸಂಸ್ಥಾನ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಟಿ.ರಾಜಶೇಖರ್ ಮಾತನಾಡಿ, ಬಾಲಗಂಗಾಧರನಾಥ ಶ್ರೀಗಳು ಒಕ್ಕಲಿಗ ಸಮುದಾಯಕ್ಕೆ ಹಾಕಿಕೊಟ್ಟ ಬುನಾದಿ, ಸಮಾಜಕ್ಕೆ ಕೊಟ್ಟ ಕೊಡುಗೆ ಜೊತೆಗೆ ಅವರ ಮಾರ್ಗದರ್ಶನದಲ್ಲಿ ಸರ್ವರೂ ನಡೆದಾಗ ಮಾತ್ರ ಅವರ ಸೇವೆಗೆ ನಿಜ ಅರ್ಥ ಬರುತ್ತದೆ ಎಂದರು.
ಸAಸ್ಕೃತಿ, ಸಂಸ್ಕಾರ, ಹಿರಿಯರ ಮಾರ್ಗದರ್ಶನ ಸಮುದಾಯದ ವಿದ್ಯಾರ್ಥಿ ಯುವಜನರಲ್ಲಿ ಅರಿವು ಮೂಡಿಸುವುದೇ ಈ ಕಾರ್ಯಕ್ರಮದ ಉದ್ದೇಶ ಎಂದು ಹೇಳಿದರು.
ಎಐಟಿ ಪ್ರಾಂಶುಪಾಲ ಡಾ. ಸಿ.ಟಿ ಜಯದೇವ ಮಾತನಾಡಿ, ಡಾ. ಬಾಲಗಂಗಾಧರನಾಥ ಶ್ರೀಗಳು ಪೀಠಾಧ್ಯಕ್ಷರಾದ ಮೇಲೆ ಯಾರಿಗೂ ಗೊತ್ತಿಲ್ಲದ ಆದಿಚುಂಚನಗಿರಿ ಮಹಾಸಂಸ್ಥಾನ ಮಠ ಇಂದು ಇಡೀ ಜಗತ್ತಿನಲ್ಲೇ ಪ್ರಸಿದ್ಧಿ ಪಡೆದಿದೆ. ಬಡತನದಲ್ಲಿ ನಲುಗುತ್ತಿದ್ದ ಮಠ ಚಿನ್ನದ ಗಿರಿಯಾಗಿದೆ. ಇದಕ್ಕೆ ಶ್ರೀಗಳ ಪರಿಶ್ರಮ, ತ್ಯಾಗ ಕಾರಣ ಎಂದರು.
ಸಮಾಜದಲ್ಲಿದ್ದ ಬಡತನ, ಅನಕ್ಷರತೆ, ಅಸ್ಪೃಷ್ಯತೆ, ಮೌಢ್ಯತೆಯಿಂದ ನಾಗರಿಕರನ್ನು ಹೊರತರಬೇಕಾದರೆ ಶಿಕ್ಷಣದಿಂದ ಮಾತ್ರ ಸಾಧ್ಯ ಎಂದು ಮನಗಂಡಿದ್ದ ಶ್ರೀಗಳು ಈ ನಿಟ್ಟಿನಲ್ಲಿ ನಾಡಿನಾದ್ಯಂತ ನೂರಾರು ಶಿಕ್ಷಣ ಸಂಸ್ಥೆಗಳನ್ನು ಪ್ರಾರಂಭಿಸಿದರು ಎಂದು ಹೇಳಿದರು.
ಅನ್ನ, ಆರೋಗ್ಯ, ಶಿಕ್ಷಣವನ್ನು ಜನರ ಮೂಲಭೂತ ಕರ್ತವ್ಯ ಎಂದು ಭಾವಿಸಿ ಈ ನಾಡಿನ ರೈತರು ಮತ್ತು ಮಕ್ಕಳಿಗೆ ಅಗತ್ಯ ಇರುವ ಮೂಲಭೂತ ಸೌಲಭ್ಯಗಳನ್ನು ನೀಡಿ ಸಮಾಜದ ಮುನ್ನಲೆಗೆ ತಂದರು ಎಂದು ತಿಳಿಸಿದರು.
ಮಠದಲ್ಲಿ ಕನಿಷ್ಠ 10 ಸಾವಿರ ಮಕ್ಕಳಿಗೆ ಶಿಕ್ಷಣ ನೀಡಬೇಕೆಂಬ ಶ್ರೀಗಳ ಗುರಿ ಮತ್ತು ಆಶಯ ಇಂದು 1.70 ಲಕ್ಷ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ. ಇದರಿಂದಾಗಿ ಶ್ರೀಗಳ ಕನಸು ನನಸಾಗಿದೆ ಎಂದು ಹೇಳಿದರು. ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕ ಇನ್ನೂ ಹಲವಾರು ಕ್ಷೇತ್ರಗಳಲ್ಲಿ ಬಾಲಗಂಗಾಧರನಾಥ ಶ್ರೀಗಳು ಸ್ಪರ್ಶಿಸಿದ್ದಾರೆಂದು ತಿಳಿಸಿದರು.
ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಡಾ. ಜೆ.ಪಿ. ಕೃಷ್ಣೇಗೌಡ, ಉಪಾಧ್ಯಕ್ಷ ಟಿ.ಡಿ ಮಲ್ಲೇಶ್, ಕಾರ್ಯದರ್ಶಿ ಎಂ.ಎಸ್ ಪ್ರದೀಪ್ ಕುಮಾರ್, ನಿರ್ದೇಶಕರುಗಳಾದ ಬಿ.ಸಿ ಲೋಕಪ್ಪಗೌಡ, ಕೆ.ಬಿ ಅನಂತೇಗೌಡ, ಕೆ.ಪಿ ರಾಜೇಂದ್ರ, ಕೆ.ಯು ರತೀಶ್ ಕುಮಾರ್, ಹರಿಣಾಕ್ಷಿ ನಾಗರಾಜ್, ಎಂ. ಅಶೋಕ್, ಎಂ.ಬಿ ಸತೀಶ್, ಯು.ಪಿ ಮನುಕುಮಾರ್, ಕೆ.ಪಿ ಪೃಥ್ವಿರಾಜ್, ಹೆಚ್.ಕೆ ನವೀನ್, ಪಿ.ರಾಜು, ಹೆಚ್.ಎಸ್ ಮೋಹನ್, ಕೆ.ಬಿ ಸಜಿತ್, ಸಿ.ಟಿ ರೇವತಿ, ಸಂತೋಷ್ ಎಂ.ಬಿ, ಟಿ.ಎಂ ಉಮಾಶಂಕರ್, ಟಿ.ಎಲ್ ಭವ್ಯನಟೇಶ್, ಪವಿತ್ರರತೀಶ್ ಹಳೇಕೋಟೆ, ಜೆ.ಪಿ ಹೊಯ್ಸಳ, ಐ.ವಿ ಮಂಜುಚೇತನ್, ಎಂ.ಸಿ ಪ್ರಕಾಶ್, ಸಿಇಓ ಕುಳ್ಳೇಗೌಡ, ವ್ಯವಸ್ಥಾಪಕರಾದ ತೇಜಸ್ ಮೂರ್ತಿ ಉಪಸ್ಥಿತರಿದ್ದರು.



