ಸಂಕ್ರಾಂತಿ ಹಬ್ಬ ಭಾವೈಕ್ಯತೆ ಹಾಗೂ ಪ್ರಕೃತಿ ಆರಾಧನೆಯ ಸಂದೇಶ ನೀಡುತ್ತದೆ ಎಂದು ಚಿಕ್ಕಮಗಳೂರು ನಗರಸಭಾ ಅಧ್ಯಕ್ಷೆ ಶೀಲಾದಿನೇಶ್ ನುಡಿದರು.
ಶ್ರೀಪಾರ್ವತಿ ಮಹಿಳಾಮಂಡಳಿ ಚಿಕ್ಕೊಳಲೆ ಸದಾಶಿವಶಾಸ್ತ್ರಿ ಸಭಾಂಗಣದಲ್ಲಿ ಆಯೋಜಿಸಿದ್ದ ‘ಸಂಕ್ರಾಂತಿ ಸಂಭ್ರಮ’ ಉದ್ಘಾಟಿಸಿ ಮಾತನಾಡಿದರು.
ಹಿಂದೂ ಧರ್ಮಗಳಲ್ಲಿ ಹಬ್ಬ ಆಚರಣೆಗಳು ವಿಶೇಷವಾಗಿರುತ್ತವೆ. ಕ್ಯಾಲೆಂಡರ್ ಪ್ರಕಾರ ಮೊದಲು ಬರುವ ಹಬ್ಬವೇ ಸಂಕ್ರಾಂತಿ. ಇದಕ್ಕೆ ಸೂರ್ಯದೇವ ಅಧಿಪತಿ. ಹಳ್ಳಿಗಳಲ್ಲಿ ರೈತರು ಬೆಳೆದ ಫಸಲನ್ನು ಕೊಯ್ದಿ, ರಾಶಿಮಾಡಿ ಪೂಜಿಸಿ ಆಚರಿಸುವಂತ ಹಬ್ಬ ಇದಾಗಿದೆ ಎಂದ ಶೀಲಾ, ಚಿಕ್ಕವರಿರುವಾಗ ತವರೂರಿನಲ್ಲಿ ಭತ್ತರಾಶಿ ಪೂಜಿಸಿ ಭತ್ತ ಕುಟ್ಟಿ ತೆಗೆದ ಅಕ್ಕಿಯಿಂದ ಬೆಲ್ಲ, ತುಪ್ಪ ಹಾಕಿ ಮಾಡಿದ ಬೆಲ್ಲದಅನ್ನವನ್ನು ಹಂಚಿ ಉಣ್ಣುವ ಸಂಭ್ರಮ ಇತ್ತು. ಬೆಲ್ಲದ ಅನ್ನವನ್ನು ಇಲ್ಲೆಲ್ಲ ಪೊಂಗಲ್ ಎನ್ನುತ್ತಾರೆಂದರು.
ಉತ್ತರ ಕರ್ನಾಟಕದಲ್ಲಿ ಮನೆಗಳಲ್ಲಿ ಜೋಳ, ಸಜ್ಜೆರೊಟ್ಟಿ, ತರಕಾರಿ ಪಲ್ಯಗಳು, ಬುತ್ತಿ, ವಿವಿಧ ಬಗೆಯ ಚಟ್ನಿಪುಡಿ ಮತ್ತಿತರ ಖಾದ್ಯಗಳನ್ನು ಮಾಡಿಕೊಂಡು ಒಟ್ಟಾಗಿ ನದಿದಡ, ಉದ್ಯಾನ ವನಗಳಲ್ಲಿ ಬಂಧುಮಿತ್ರರೊಂದಿಗೆ ಪರಸ್ಪರ ಹಂಚಿಕೊಂಡು ಊಟಮಾಡುವ ಪದ್ಧತಿ ಇದೆ ಎಂದರು.
ವೀರಶೈವ ಸಂಸ್ಕøತಿಯಲ್ಲಿ ಪವಿತ್ರ ಗ್ರಂಥವಾದ ‘ಸಿದ್ಧಾಂತ ಶಿಖಾಮಣಿ’ಯನ್ನು ಮನೆ-ಮನಕ್ಕೆ ತಲುಪಿಸುವಲ್ಲಿ ಪಾರ್ವತಿ ಮಹಿಳಾ ಮಂಡಳಿ ದಶಕಗಳಿಂದ ಶ್ರಮಿಸುತ್ತಿರುವುದು ಅಭಿನಂದನೀಯ. ಸಾಧಕ ಮಹಿಳೆಯರನ್ನು ಗುರುತಿಸಿ ಗೌರವಿಸುತ್ತಿರುವುದು ಸಂತಸ ಎಂದ ನಗರಸಭಾಧ್ಯಕ್ಷೆ ಶೀಲಾ, ತಾವೂ ಸಹ ಈ ಮಂಡಳಿಯ ಸದಸ್ಯೆಯಾಗಿ ಜೊತೆಗೂಡುವ ಆಸಕ್ತಿ ತೋರಿದರು.
ಶ್ರೀಪಾರ್ವತಿ ಮಹಿಳಾ ಮಂಡಳಿ ಅಧ್ಯಕ್ಷೆ ಸುಮಿತ್ರಾಶಾಸ್ತ್ರಿ ಸಮಾರಂಭದ ಅಧ್ಯಕ್ಷತೆವಹಿಸಿ ಮಾತನಾಡಿ ‘ಎಳ್ಳು-ಬೆಲ್ಲ ತಿಂದ ಒಳ್ಳೆ ಮಾತನಾಡು’ ಎಂಬ ನಾಣ್ನುಡಿ ಪ್ರಚಲಿತದಲ್ಲಿದೆ. ಬಾಳೆಹೊನ್ನೂರು ಹಸಿರು ಪೀಠದ ಪರಂಪರೆ ಮತ್ತು ಆಚಾರ್ಯಗೀತೆಗಳನ್ನು ಕಲಿಯುವ ಉದ್ದೇಶದಿಂದ ಪ್ರಾರಂಭವಾದ ನಮ್ಮ ಮಂಡಳಿ ದಶಮಾನೋತ್ಸವದ ಸಂಭ್ರಮಕ್ಕೆ ಪಾದಾರ್ಪಣೆ ಮಾಡುತ್ತಿದೆ ಎಂದರು.
ಮಂಡಳಿಯ ಮೊದಲ ಕಾರ್ಯಕ್ರಮ ‘ಸಂಕ್ರಾಂತಿ’ ಹಬ್ಬ ಎಂಬುದು ಸಂತಸದ ಸಂಗತಿ. ಐದಾರು ಗೆಳತಿಯರಿಂದ ಪ್ರಾರಂಭವಾದ ಮಂಡಳಿಯಲ್ಲಿ ಈಗ 50ಕ್ಕೂ ಹೆಚ್ಚು ಸದಸ್ಯರಿದ್ದಾರೆ. ಮನೆಯಲ್ಲಿ ಹಬ್ಬವನ್ನು ಮನೆಮಂದಿಯಷ್ಟೇ ಆಚರಿಸುವಾಗ ಕೆಲಸದ ಒತ್ತಡ ಹೆಚ್ಚಾಗಿರುತ್ತದೆ. ಆದರೆ ಇಲ್ಲಿ ಸ್ನೇಹಿತೆಯರೊಂದಿಗೆ ಬೆರೆತು ಹರ್ಷದಿಂದ ಹಬ್ಬ ಸಂಭ್ರಮಿಸಲಾಗುತ್ತಿದೆ. ಪ್ರತಿ ಕಾರ್ಯಕ್ರಮದಲ್ಲಿ ಶ್ರೀರೇಣುಕಗೀತೆಗಳನ್ನು ಸಾಮೂಹಿಕವಾಗಿ ಹಾಡಲಾಗುತ್ತದೆ. ಸುಮಾರು 20ಕ್ಕೂ ಹೆಚ್ಚು ಗೀತೆಗಳನ್ನು ಅಭ್ಯಾಸಮಾಡಿ ಹಾಡುವುದನ್ನು ಕಲಿತಿರುವುದಾಗಿ ಹೇಳಿದರು.
ಕಾರ್ಯದರ್ಶಿ ಭವಾನಿವಿಜಯಾನಂದ ಪ್ರಾಸ್ತಾವಿಸಿ ಕಳೆದ ಒಂಭತ್ತುವರ್ಷಗಳಿಂದ ನಮ್ಮ ಮಂಡಳಿಯಿಂದ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ಮಹಿಳೆಯರನ್ನು ಮುಖ್ಯಅತಿಥಿಗಳಗಿ ಕರೆಸಿ ಹಬ್ಬಗಳ ವೈಶಿಷ್ಟ್ಯತೆ ಮತ್ತು ವೈಜ್ಞಾನಿಕ ಕಾರಣಗಳನ್ನು ತಿಳಿಸುವ ಕಾರ್ಯ ಮಾಡಲಾಗುತ್ತಿದೆ ಎಂದರು.
ಉಪಾಧ್ಯಕ್ಷೆ ಶೈಲಾಬಸವರಾಜು ನೇತೃತ್ವದಲ್ಲಿ ಆಚಾರ್ಯಗೀತೆ ಸಾಮೂಹಿಕವಾಗಿ ಹಾಡಲಾಯಿತು. ಸದಸ್ಯರಾದ ಗೀತಾಬಾಲಿ ಸ್ವಾಗತಿಸಿ, ಶೈಲಜಾ ವಂದಿಸಿದರು. ಅನಿತಾಹೇಮಂತ್ ಪ್ರಾರ್ಥಿಸಿ, ರೇಖಾಪ್ರಸನ್ನ ಪರಿಚಯಿಸಿದರು. ಪುಷ್ಪಾಕುಮಾರಸ್ವಾಮಿ, ಸರೋಜಮ್ಮ ಮತ್ತು ಸುಶೀಲಮ್ಮ ವೇದಘೋಷ ಮಾಡಿದರು.
ನಗರಸಭಾ ಅಧ್ಯಕ್ಷೆ ಶೀಲಾದಿನೇಶ್ ಮತ್ತು ‘ಶಿಕ್ಷಣ ತಜ್ಞೆ’ ಸೇರಿದಂತೆ ವಿವಿಧ ಪ್ರಶಸ್ತಿಪಡೆದ ಹಿನ್ನಲೆಯಲ್ಲಿ ಅಂಗನವಾಡಿ ಕಾರ್ಯಕರ್ತರು ಮತ್ತು ಸಹಾಯಕಿಯರ ಸಂಘದ ತಾಲ್ಲೂಕು ಅಧ್ಯಕ್ಷೆಯೂ ಆಗಿರುವ ಎಸ್.ಶೈಲಾಬಸವರಾಜುರನ್ನು ಗೌರವಿಸಲಾಯಿತು.
ಉಪಾಧ್ಯಕ್ಷೆ ಮಂಜುಳಾ ಮಹೇಶ್, ಪಾರ್ವತಿ ಬಸವರಾಜು, ಭವಾನಿ, ಪಾರ್ವತಮ್ಮ ರುದ್ರಪ್ಪ ವೇದಿಕೆಯಲ್ಲಿದ್ದರು. ಆಟೋಟ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಎಳ್ಳು-ಬೆಲ್ಲ ಹಂಚಲಾಯಿತು.



