ಶ್ರೀ ಸತ್ಯನಾರಾಯಣ ದೇವರ ಪೂಜೆಯು ಜೀವನದ ಮೌಲ್ಯ ಸಂಸ್ಕಾರ ಬಳಸುವಂತಹ ಒಂದು ವ್ರತವಾಗಿದೆ ಎಂದು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಧರ್ಮೋತ್ಥಾನ ಟ್ರಸ್ಟಿನ ಟ್ರಸ್ಟಿ ಪ್ರಶಾಂತ್ ಚಿಪ್ರಗುತ್ತಿ ಹೇಳಿದರು.
ಅವರು ಶುಕ್ರವಾರ ಶ್ರೀ ಕ್ಷೇತ್ರ ಧರ್ಮಸ್ಥಳ ಸಂಘ ಹಾಗೂ ವಿವಿಧ ಸ್ವಸಹಾಯ ಸಂಘಗಳ ಸಂಯುಕ್ತಾಶ್ರಯದಲ್ಲಿ ಮೂಡಿಗೆರೆ ಪಟ್ಟಣದ ಶ್ರೀ ಹಿರೇದೇವರಮ್ಮನ ಬನ ಅಯ್ಯಪ್ಪ ಸ್ವಾಮಿ ದೇವಸ್ಥಾನ ಆವರಣದಲ್ಲಿ ಏರ್ಪಡಿಸಿದ್ದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಆಧ್ಯಾತ್ಮಿಕ ಪ್ರಕಾರ ಪೂಜೆಗೆ ಪ್ರತ್ಯೇಕ ಸಮಯ ದಿನವೆಂಬುದಿರುವುದಿಲ್ಲ. ಶ್ರೀಕೃಷ್ಣ ಹೇಳಿದಂತೆ ನಮ್ಮ ಜೀವನದ ಪ್ರತಿಯೊಂದು ಕ್ಷಣ ಹಾಗೂ ಆಲೋಚನೆ ಮಾಡುವಂತ ಎಲ್ಲಾ ಕೆಲಸ, ಪ್ರತಿ ಹೆಜ್ಜೆಯೂ ಪೂಜೆಯಾಗಿರಬೇಕು. ಅದಕ್ಕೆ ಯಜ್ಞ ಎಂದು ಕರೆಯುತ್ತಾರೆ. ಹಾಗಾಗಿ ಮಾನವ ತನ್ನ ಜೀವನದಲ್ಲಿ ಪ್ರತಿ ಹೆಜ್ಜೆ ಇಡುವಾಗ, ಎಚ್ಚರಿಕೆಯಿಂದ ಸತ್ಯದ ಮಾರ್ಗದಲ್ಲಿ ನಡೆಸುವ ಸಂಸ್ಕಾರ ಕೊಡುವುದೇ ಶ್ರೀ ಸತ್ಯನಾರಾಯಣ ಸ್ವಾಮಿ ಪೂಜೆ ಉದ್ದೇಶವೆಂದು ಹೇಳಿದರು.
ಕಸಾಪ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ನಿರ್ಮಲಾ ಮಂಚೇಗೌಡ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ದೇವರಿಗೆ ಶ್ರದ್ಧೆ, ಭಕ್ತಿಯಿಂದ ಪೂಜೆ ಸಲ್ಲಿಸಿದರೆ ಪೂಜೆ ಫಲ ಒಲಿಯುತ್ತದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಸತ್ಯನಾರಾಯಣ ಸ್ವಾಮಿ ಪೂಜಾ ಸಮಿತಿ ಅಧ್ಯಕ್ಷೆ ಗೌರಮ್ಮ ಬೀಜುವಳ್ಳಿ ವಹಿಸಿದ್ದರು. ದೇವಸ್ಥಾನದ ಸಮಿತಿಯ ಮದೀಶ್, ಧರ್ಮಸ್ಥಳ ಸಂಘದ ಜಿಲ್ಲಾ ನಿರ್ದೇಶಕ ಸದಾನಂದ ಬಂಗೇರ, ಯೋಜನಾಧಿಕಾರಿ ಸುಧೀರ್, ನಿವೃತ್ತ ಸೈನಿಕ ವೆಂಕಟೇಶ್‍ಗೌಡ ಮತ್ತಿತರರಿದ್ದರು.



