ತನ್ನ ಸ್ವಂತ ಜಮೀನಿನಲ್ಲಿ ಫಸಲು ನೀಡುತ್ತಿದ್ದ ಕಾಫಿಗಿಡಗಳನ್ನು ತೆರವುಗೊಳಿಸಿ ಸಾರ್ವಜನಿಕರಿಗೆ ರಸ್ತೆ ಬಿಟ್ಟುಕೊಟ್ಟು ಕಾಫಿ ಬೆಳೆಗಾರರೊಬ್ಬರು ದೊಡ್ಡತನ ಮೆರೆದಿದ್ದಾರೆ. ಇವರ ಈ ಕಾಳಜಿಯ ಕಾರ್ಯಕ್ಕೆ ಸ್ಥಳೀಯರು ಅಭಿನಂದನೆ ಸಲ್ಲಸಿದ್ದಾರೆ.
ಮೂಡಿಗೆರೆ ತಾಲ್ಲೂಕಿನ ಮಾಕೋನಹಳ್ಳಿ ಸಮೀಪದ ತುದಿಯಾಲ ಗ್ರಾಮದಲ್ಲಿ ಸುಮಾರು 8-10 ಕೃಷಿಕ ಕುಟುಂಬದವರಿಗೆ ಹೊರ ಪ್ರಪಂಚದ ಸಂಪರ್ಕಕ್ಕೆ ರಸ್ತೆಯ ವ್ಯವಸ್ಥೆ ಇರಲಿಲ್ಲ. ಕಿರಿದಾದ ಓಣಿಯೊಂದರ ಮೂಲಕ ಅವರು ತಿರುಗಾಡುವಂತಹ ಸ್ಥಿತಿ ನಿರ್ಮಾಣವಾಗಿತ್ತು. ಇಕ್ಕಟ್ಟಾದ ದಾರಿಯಲ್ಲಿ ಆನಾರೋಗ್ಯ ಪೀಡಿತರನ್ನು ಮತ್ತು ಮೃತ ವ್ಯಕ್ತಿಗಳನ್ನು ಸ್ಮಶಾನಕ್ಕಾಗಲಿ ಆಸ್ಪತ್ರೆಗೆ ಆಗಲಿ ಜೋಳಿಗೆಯಲ್ಲಿ ಕಟ್ಟಿಕೊಂಡು ಬರಬೇಕಾದ ಸ್ಥಿತಿಯಿತ್ತು.

ಈ ಕುಗ್ರಾಮಕ್ಕೆ ಬಂದು ಮತ ಯಾಚನೇ ಮಾಡಬೇಕಾದಾಗ ರಾಜಕಾರಣಿಗಳು ಅಲ್ಲಿಯ ಜನರಿಗೆ ದಾರಿ ಮಾಡಿಕೊಡುವ ಭರವಸೆ ನೀಡುತ್ತಿದ್ದರೆ ವಿನಃ ಅವರ ಭರವಸೆಗಳು ಈಡೇರಿರಲಿಲ್ಲ.
ಇದರಿಂದ ಅಲ್ಲಿದ್ದ ಕುಟಂಬ ರೋಸಿಹೋಗಿದ್ದು. ತೋಟದ ಮಾಲೀಕರ ಬಳಿ ತಮ್ಮ ಗೋಳನ್ನು ತೋಡಿಕೊಂಡಾಗ. ತೋಟದ ಮಾಲೀಕರಾದ ಮತ್ತು ಜೆಡಿಎಸ್ ಕಾರ್ಯಕರ್ತರಾದ ಸತ್ಯ ಎಂ.ಜಿ. (ದಿ. ಎಂ.ಸಿ.ಗೋಪಾಲಗೌಡರ ಮಗ) ಅವರು ಅಲ್ಲಿನ ಕುಟುಂಬ ಸದಸ್ಯರೊಂದಿಗೆ ಮಾತನಾಡಿ ರಸ್ತೆಗೆ ತಮ್ಮ ತೋಟದಲ್ಲಿ ಜಾಗ ಬಿಟ್ಟುಕೊಡುವ ಭರವಸೆ ನೀಡಿದರು. ಅದಕ್ಕೆ ಅವರು ಹಾಕಿದ ಷರತ್ತು ಎಂದರೆ ಮಾಕೋನಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಜೆಡಿಎಸ್ ಅಭ್ಯರ್ಥಿಯನ್ನು ಗೆಲ್ಲಿಸಬೇಕು ಎಂದು ಕೇಳಿಕೊಂಡಿದ್ದರು.
2020 ರ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಕಾರಬೈಲ್ ನ ಕೆ.ಎನ್.ಪುಟ್ಟರಾಜು ಅವರು ಜಯಶಾಲಿಯಾಗಿದ್ದರು. ಚುನಾವಣೆಯಲ್ಲಿ ಗೆಲುವು ಸಾಧಿಸಿದ ನಂತರ ಮಾತು ಉಳಿಸಿಕೊಳ್ಳುವ ಸಲುವಾಗಿ ಹಾಗೂ ತನ್ನ ಸ್ನೇಹಿತನಿಗೆ ಮತ ಹಾಕಿದ್ದಕ್ಕೆ ಕೃತಜ್ಞತೆ ಸಲ್ಲಿಸುವ ಸಲುವಾಗಿ ಎಂ.ಜಿ.ಸತ್ಯ ಅವರು ವಾಹನವೊಂದು ಓಡಾಡುವ ರೀತಿಯಲ್ಲಿ 30 ವರ್ಷ ಹಿಂದಿನಿಂದ ಫಸಲು ಕೊಡುತ್ತಿದ್ದ ಗಿಡಗಳನ್ನು ತೆರವುಗೊಳಿಸಿ 14 ಅಡಿ ರಸ್ತೆಯನ್ನು ನಿರ್ಮಿಸಿಕೊಟ್ಟಿದ್ದು ಸ್ನೇಹಿತರಿಗೆ ಮತ್ತು ಸಾರ್ವಜನಿಕರಿಗೆ ಕೊಟ್ಟ ಮಾತು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾದರು.
ಜೆಡಿಎಸ್ ಪಕ್ಷದ ಹಿರಿಯ ನಾಯಕರಾದ ಗಬ್ಬಳ್ಳಿ ಚಂದ್ರೇಗೌಡ, ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಕೆ.ಆರ್.ಅನೀಲ್ ಮಾರ್ಗದರ್ಶನದಲ್ಲಿ ಡಿಸೆಂಬರ್ 2025 ರಲ್ಲಿ ಕಾರಬೈಲ್ ಕೆ.ಎನ್.ಪುಟ್ಟರಾಜು ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರ ಕಚ್ಚಾ ರಸ್ತೆ ನಿರ್ಮಿಸಿಕೊಟ್ಟಿದ್ದು, ಇತ್ತೀಚೆಗೆ ರಸ್ತೆಯನ್ನು ಓಡಾಡಲಿಕ್ಕೆ ಅನುವು ಮಾಡಿಕೊಟ್ಟರು.
ಮುಂದಿನ ದಿನಗಳಲ್ಲಿ ರಸ್ತೆಯನ್ನು ಕಾಂಕ್ರಿಟೀಕರಣಗೊಳಿಸಲು ಸಭೆಯಲ್ಲಿ ತಿರ್ಮಾನಿಸಲಾಗಿದೆ ಎಂದ ಪುಟ್ಟರಾಜು ಅವರು ಕೊಟ್ಟ ಮಾತನ್ನು ಉಳಿಸಿಕೊಂಡ ಎಂ.ಜಿ.ಸತ್ಯ ಅವರಿಗೆ ಸಾರ್ವಜನಿಕವಾಗಿ ಸನ್ಮಾನಿಸಿ ಅಭಿನಂದಿಸಿದರು. ಈ ಸಂದರ್ಭದಲ್ಲಿ ಗ್ರಾಮದ ಎಂ.ಜಿ.ಸುಂದರೇಶ್ ಉಪಸ್ಥಿತರಿದ್ದರು.
ರಸ್ತೆ ನಿರ್ಮಾಣಕ್ಕೆ ತಮ್ಮ ಕಾಫಿ ತೋಟದ ಜಾಗವನ್ನು ಬಿಟ್ಟುಕೊಟ್ಟ ಸತ್ಯ ಅವರಿಗೆ ಮತ್ತು ಅದಕ್ಕೆ ಸಹಕಾರ ನೀಡಿದ ಮುಖಂಡರುಗಳಿಗೆ ಗ್ರಾಮಸ್ಥರು ಅಭಿನಂದಿಸಿ ತಮ್ಮ ಕೃತಜ್ಞತೆ ಸಲ್ಲಿಸಿದರು.
ನಮ್ಮ ಅಜ್ಜ-ಮುತ್ತಜ್ಜರ ಕಾಲದಿಂದಲೂ ಈ ಜಾಗದಲ್ಲೆ ವಾಸಿಸುತಿದ್ದು. ನಮ್ಮ ಗೋಳು ಆಲಿಸಲು ಯಾರು ಬರಲಿಲ್ಲಾ. ಆದರೆ ತೋಟದ ಮಾಲೀಕರಾದ ಎಂ.ಜಿ.ಸತ್ಯ ಅವರು ತಮ್ಮ ಸ್ವಂತ ಜಾಗದಲ್ಲಿ ರಸ್ತೆ ಮಾಡಿಕೊಡುವುದರೊಂದಿಗೆ ನಮ್ಮ ಸಮಸ್ಯೆಗೆ ಮುಕ್ತಿ ದೊರಕಿಸಿದ್ದಾರೆ. ಅವರಿಗೆ ನಾವು ಎಂದೆಂದಿಗೂ ಚಿರಋಣಿಗಳು.
ಅಣ್ಣಪ್ಪ, ಸ್ಥಳೀಯ ನಿವಾಸಿ



