ಟೆಂಪೋ ಟ್ರಾವೆಲರ್ ವಾಹನ ಸ್ಕೂಟಿಗೆ ಡಿಕ್ಕಿಯಾದ ಪರಿಣಾಮ ದುರಂತ ಅಂತ್ಯಕಂಡ ಆಲ್ದೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಉದ್ಯೋಗಿ ಶ್ರೀಮತಿ ನವಮಿ (25 ವರ್ಷ) ಯವರ ಸಾವಿಗೆ ಜನರು ಕಂಬನಿ ಮಿಡಿದಿದ್ದಾರೆ.
ಸೋಮವಾರ ಮುಂಜಾನೆ ನವಮಿಯವರು ಆಲ್ದೂರು ಸಹಕಾರ ಸಂಘದಲ್ಲಿ ಗಣರಾಜ್ಯೋತ್ಸವ ಧ್ವಜಾರೋಹಣ ಕಾರ್ಯಕ್ರಮಕ್ಕೆ ಎಂದು ಸ್ಕೂಟಿಯಲ್ಲಿ ಆಗಮಿಸುತ್ತಿದ್ದಾಗ ಆಲ್ದೂರು ಬೀರಿಂಜೆ ಹೊಳೆಯ ಸಮೀಪ ಟೆಂಪೋ ಟ್ರಾವೆಲರ್ ವಾಹನವೊಂದು ಸ್ಕೂಟಿಗೆ ಡಿಕ್ಕಿಹೊಡೆದು ನವಮಿ ಸಾವನ್ನಪ್ಪಿದ್ದರು. ಹೆಲ್ಮೆಟ್ ಧರಿಸಿದ್ದರು ಸಹ ತಲೆಗೆ ತೀವ್ರ ಬಿಟ್ಟು ಬಿದ್ದಿದ್ದರಿಂದ ಚಿಕ್ಕಮಗಳೂರು ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗ ಮಧ್ಯದಲ್ಲೇ ನವಮಿ ಕೊನೆಯುಸಿರೆಳೆದಿದ್ದರು.
ಆಲ್ದೂರು ಸಮೀಪದ ಹುಣಸೆಮಕ್ಕಿ ಗ್ರಾಮದ ವಿಕಾಸ್ ಎಂಬುವವರ ಪತ್ನಿ ನವಮಿ ಅವರು ಆಲ್ದೂರು ಸಹಕಾರ ಸಂಘದಲ್ಲಿ ಉದ್ಯೋಗಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು
ಅಪಘಾತ ನಡೆಸಿದ ಟಿಟಿ ವಾಹನ ನಿಲ್ಲಿಸದೆ ಪರಾರಿಯಾಗಿದ್ದು ವಾಹನ ಸಂಖ್ಯೆಯ ಆಧಾರದಲ್ಲಿ ವಾಹನವನ್ನು ಕಡೂರು ಸಮೀಪ ವಶಕ್ಕೆ ಪಡೆದು ಆಲ್ದೂರು ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ನಿಂತಿದ್ದ ಬಸ್ ಒಂದನ್ನು ಓವರ್ ಟೇಕ್ ಮಾಡಿ ಬಲಬದಿಗೆ ಬಂದ ಟಿಟಿ ವಾಹನ ನವಮಿಯರ ಸ್ಕೂಟಿಗೆ ಡಿಕ್ಕಿ ಹೊಡೆದು ನಿಲ್ಲಿಸದೇ ಪರಾರಿಯಾಗಿದ್ದ.
ಚಿಕ್ಕಮಗಳೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿ ಮಧ್ಯಾಹ್ನ 2 ಗಂಟೆಯಿಂದ ಆಲ್ದೂರು ಸಹಕಾರ ಸಂಘದ ಆವರಣದಲ್ಲಿ ಪಾರ್ಥಿವ ಶರೀರವನ್ನು ಸಾರ್ವಜನಿಕ ದರ್ಶನಕ್ಕೆ ಇಡಲಾಗಿತ್ತು.
ಈ ಸಂದರ್ಭದಲ್ಲಿ ಆಲ್ದೂರು ಮತ್ತು ಸುತ್ತಮುತ್ತಲಿನ ಸಾವಿರಾರು ಮಂದಿ ಸ್ಥಳದಲ್ಲಿ ಸೇರಿ ನವಮಿ ಮೃತದೇಹದ ಅಂತಿಮ ದರ್ಶನ ಪಡೆದರು. ಸಹಕಾರ ಸಂಘದಲ್ಲಿ ಆಹಾರ ಶಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ನವಮಿಯವರು ಇಲ್ಲಿನ ಜನರಿಗೆ ಚಿರಪರಿಚಿತರು. ತನ್ನ ಕರ್ತವ್ಯದ ಸಂದರ್ಭದಲ್ಲಿ ನಗುಮೊಗದ ಅವರ ಕಾರ್ಯನಿರ್ವಹಣೆಯನ್ನು ಎಲ್ಲರೂ ಕೊಂಡಾಡುತ್ತಿದ್ದರು. ವಿಶೇಷವಾಗಿ ಪಡಿತರ ಪಡೆಯಲು ಬರುವ ವಯಸ್ಕರಿಗೆ ಇವರು ವಿಶೇಷ ಆದ್ಯತೆಯನ್ನು ನೀಡುತ್ತಿದ್ದದು, ಎಷ್ಟೇ ಜನರಿದ್ದರೂ ಯಾರ ಮನಸ್ಸಿಗೂ ನೋವಾಗದಂತೆ ಸಹನೆಯಿಂದ ಕಾರ್ಯನಿರ್ವಹಿಸುತ್ತಿದ್ದರು, ಇಂತಹ ಸಹೃದಯಿ ಹೆಣ್ಣುಮಗುವಿಗೆ ಈ ರೀತಿಯ ಸಾವು ಬಂತಲ್ಲ ಎಂದು ಎಲ್ಲರ ಕಣ್ಣಾಲಿಗಳು ತೇವಗೊಂಡಿದ್ದವು. ಆಲ್ದೂರಿನ ಬಹುತೇಕ ವರ್ತಕರು ತಮ್ಮ ಅಂಗಡಿ ಮುಗ್ಗಟ್ಟುಗಳನ್ನು ಮುಚ್ಚಿ ಗೌರವ ಸಲ್ಲಿಸಿದರು.
ಮೂಡಿಗೆರೆ ಶಾಸಕಿ ನಯನಾ ಮೋಟಮ್ಮನವರು ಅಂತಿಮ ನಮನ ಸಲ್ಲಿಸಿದರು. ವಿಧಾನ ಪರಿಷತ್ ಉಪಸಭಾಪತಿ ಎಂ.ಕೆ. ಪ್ರಾಣೇಶ್, ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಸೇರಿದಂತೆ ಹಲವು ಗಣ್ಯರು ಚಿಕ್ಕಮಗಳೂರು ಆಸ್ಪತ್ರೆಗೆ ಭೇಟಿ ನೀಡಿ ಮೃತರ ಕುಟುಂಬಕ್ಕೆ ಸಾಂತ್ವಾನ ಹೇಳಿದರು.
ನಂತರ ಸೋಮವಾರ ರಾತ್ರಿ ಹುಣಸೆಮಕ್ಕಿ ಗ್ರಾಮದಲ್ಲಿ ಅಂತಿಮ ಸಂಸ್ಕಾರ ನೆರವೇರಿಸಲಾಯಿತು.
ನವಮಿಯವರು ಆಲ್ದೂರು ಸಮೀಪದ ಮಾಗರಹಳ್ಳಿ ಗ್ರಾಮದ ವೆಂಕಟೇಶ್ ಗೌಡ ಶ್ರೀಮತಿ ಪೂರ್ಣಿಮಾ ಅವರ ಏಕೈಕ ಪುತ್ರಿ, ಹುಣಸೇಮಕ್ಕಿ ಗ್ರಾಮದ ವಿಕಾಸ್ ಅವರನ್ನು ವಿವಾಹವಾಗಿದ್ದರು. ಇವರಿಗೆ ಮೂರು ವರ್ಷದ ಹೆಣ್ಣು ಮಗು ಇದೆ. ನವಮಿ ಅತ್ಯಂತ ಸೌಮ್ಯ ಸ್ವಭಾವದವರಾಗಿದ್ದರು, ಎಲ್ಲರ ಪ್ರೀತಿ ವಿಶ್ವಾಸಕ್ಕೆ ಪಾತ್ರರಾಗಿದ್ದರು.



