ಭಾಷೆಯೊಂದು ಭಾವ ಶಕ್ತಿ. ಯಾವುದೇ ಭಾಷೆ ಒಂದು ಕಾವ್ಯವಾದಾಗ, ಕಾದಂಬರಿಯಾದಾಗ, ಕಥೆಯಾದಾಗ ಅದು ಬೇರೆ ರೂಪ ಪಡೆದುಕೊಳ್ಳುತ್ತದೆ, ಅದನ್ನು ಅಭಿವ್ಯಕ್ತಿ ಮಾಡಿ ಲೋಕಕ್ಕೆ ಪರಿಚಯಿಸುವ ಕೆಲಸವನ್ನು ಬರಹಗಾರರು ಮಾಡುತ್ತಾರೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ಹೇಳಿದರು.
ಐಐಪಿ ಪ್ರಕಾಶನ, ಕುಂಭಕ ಸಾಂಸ್ಕೃತಿಕ ಪ್ರತಿಷ್ಠಾನ ಹಾಗೂ ಕರ್ನಾಟಕ ವಿಕಾಸ ರಂಗ ಚಿಕ್ಕಮಗಳೂರು ನಗರದ ಎಂಎಲ್‌ವಿ ರೋಟರಿ ಸಭಾಂಗಣದಲ್ಲಿ ಭಾನುವಾರ ಏರ್ಪಡಿಸಿದ್ದ ಸಾಹಿತಿ ಕುಂದೂರು ಅಶೋಕ್ ಅವರು ಬರೆದಿರುವ ಹದಿನಾರು ಹಳ್ಳಿಯ ಒಂದು ಕುಟುಂಬದ ಜಾವಣಿಗೆ ಸೀಮೆ ನಾಡಿನ ಪಾಳೇಗಾರ ದ್ಯಾವಣ್ಣಗೌಡರನ್ನು ಕುರಿತಾದ ಐತಿಹಾಸಿಕ ಕಥನ ‘ಪಾಳೆಯಪಟ್ಟು’ ಕಾದಂಬರಿಯನ್ನು ಜನಾರ್ಪಣೆ ಮಾಡಿ, ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕುಂದೂರು ಅಶೋಕ್ ಅವರ”ಪಾಳೆಯಪಟ್ಟು” ಕಾದಂಬರಿ ಐತಿಹಾಸಿಕ ವಿಷಯವೊಂದರ ಸಾಂಸ್ಕೃತಿಕ ಕಥನ ಐತಿಹಾಸಿಕ ಘಟನೆಗಳನ್ನು ವಸ್ತು ವೈವಿಧ್ಯತೆಯ ಹಿನ್ನೆಲೆಯಲ್ಲಿ ಪರಿಕಲ್ಪನಾತ್ಮಕವಾಗಿ ವಿಸ್ತೃತಗೊಳಿಸಿ ಕಲಾರೂಪಗೊಳಿಸುವಂತದ್ದು.ಆದ್ದರಿಂದ ಇದನ್ನು ಐತಿಹಾಸಿಕ ದಾಖಲು ಎಂದು ಓದದೆ ಕಲಾಕೃತಿಯಾಗಿ ಓದಬೇಕಿದೆ ಎಂದರು.
“ಪಾಳೆಯಪಟ್ಟು”ಕಾದಂಬರಿಯಲ್ಲಿ ಬರುವ ನಾಯಕರ ಘಟನಾವಳಿಗಳು ಐತಿಹಾಸಿಕ ವಿಚಾರಗಳೊಂದಿಗೆ ಪರಿಕಲ್ಪನಾತ್ಮಕ ಸತ್ಯಗಳು ಎಂಬುದನ್ನು ಓದುಗರು ಗ್ರಹಿಸಿಕೊಳ್ಳಬೇಕು ಎಂದ ಅವರು ಇತಿಹಾಸವನ್ನು ವರ್ತಮಾನದಲ್ಲಿ ನಿಂತು ನೋಡಿರುವ ಕುಂದೂರು ಅಶೋಕ್ ಅವರ ಶ್ರಮ ಸಾರ್ಥಕವಾಗಿದೆ ಎಂದು ಪ್ರಶಂಸಿಸಿದರು.
ಸಾಹಿತಿ ನಾಡೋಜ ಕುಂ.ವೀರಭದ್ರಪ್ಪ ಮಾತನಾಡಿ, ಸಂಘಟನಾ ಚತುರರಾದ ಕುಂದೂರು ಅಶೋಕ್ ಅವರು ಇತ್ತೀಚೆಗೆ ಸಾಹಿತ್ಯ ಕ್ಷೇತ್ರದ ಬರವಣಿಗೆಯಲ್ಲಿ ತಮ್ಮನ್ನು ಗಂಭೀರವಾಗಿ ತೊಡಗಿಸಿಕೊಂಡಿದ್ದಾರೆ.ಶತಮಾನಗಳ ಹಿಂದಿನ ಗ್ರಾಮೀಣ ವಾತಾವರಣವನ್ನು ಹಾಗೂ ದೇಸೀ ಸಂಸ್ಕೃತಿಯನ್ನು ಕೃತಿಯುದ್ದಕ್ಕೂ ಕಾವ್ಯಾತ್ಮಕ ಶೈಲಿಯಲ್ಲಿ ನಿರೂಪಿಸಿದ್ದಾರೆ ಎಂದು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ, ಕುಂಭಕ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ, ಲೇಖಕ ಕುಂದೂರು ಅಶೋಕ್ ಪುಸ್ತಕ ಹಾಗೂ ಅಕ್ಷರ ಸಂಸ್ಕೃತಿಯನ್ನು ಜನಮಾನಸಕ್ಕೆ ತಲುಪಿಸಿದರೆ ಸಮಾಜ ಸಮ ಸಮಾಜದತ್ತ ಮುನ್ನಡೆಯುತ್ತದೆ.ಇಲ್ಲವಾದರೆ, ಪ್ರಜಾಪ್ರಭುತ್ವದ ಹೆಸರಿನಲ್ಲಿ ಸರ್ವಾಧಿಕಾರಿ ಧೋರಣೆ ತಲೆಯೆತ್ತುತ್ತವೆ ಎಂದರು. ಕೃತಿಯ ರಚನೆಗೆ ಹಾಗೂ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದವರಿಗೆ ಕೃತಜ್ಞತೆ ಸಲ್ಲಿಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಐಐಪಿ ಪ್ರಕಾಶನದ ವ್ಯವಸ್ಥಾಪಕ ನಂಜೇಶ್ ಬೆಣ್ಣೂರು ತಮ್ಮ ಸಂಸ್ಥೆಯಿಂದ ಇದುವರೆಗೂ ಮೂರು ಸಾವಿರ ಪುಸ್ತಕಗಳನ್ನು ಪ್ರಕಟಿಸಲಾಗಿದೆ, ಐಐಪಿ ಪ್ರಕಾಶನವು ಒಂದು ವಿಷನ್ ಸ್ಟೇಟ್ಮೆಂಟ್ ನೊಂದಿಗೆ ಲೇಖಕ ಮತ್ತು ಓದುಗರೊಂದಿಗೆ ಸೇತು ಸಂಬಂಧವನ್ನು ಕಟ್ಟಿಕೊಡುತ್ತಾ ಪುಸ್ತಕ ಸಂಸ್ಕೃತಿಯನ್ನು ನಿರಂತರವಾಗಿ ಹರಡುವ ಕೆಲಸ ಮಾಡಲಾಗುತ್ತಿದೆ ಎಂದರು.
ಇದೇ ವೇಳೆ ಲೇಖಕ ಮತ್ತು ಸಾಹಿತಿ ತರೀಕೆರೆಯ ಮನಸುಳಿ ಮೋಹನ್ ಅವರಿಗೆ ಕುಂಭಕ ಸಾಂಸ್ಕೃತಿಕ ಪ್ರತಿಷ್ಠಾನದ ವತಿಯಿಂದ “ಕುಂಭಕ ಸಾಹಿತ್ಯ ಸಿರಿ” 2026ರ ಪ್ರಶಸ್ತಿಯನ್ನು ಪ್ರಧಾನ ಮಾಡಲಾಯಿತು. ನಾಡು-ನುಡಿಗೆ ದುಡಿದ ಹಿನ್ನೆಲೆಯಲ್ಲಿ ಕರ್ನಾಟಕ ವಿಕಾಸರಂಗದ ವತಿಯಿಂದ ಕನ್ನಡ ಸೇನೆಯ ಜಗದೀಶ್ ಮರಾಬೈಲ್ ಅವರನ್ನು ಸನ್ಮಾನಿಸಲಾಯಿತು.
ವಿಧಾನಪರಿಷತ್ ಸದಸ್ಯ ಸಿ.ಟಿ ರವಿ ಮಾಜಿ ಶಾಸಕ ಎಂ.ಪಿ.ಕುಮಾರಸ್ವಾಮಿ ಮಾತನಾಡಿದರು.
ಲೇಖಕ ಡಿ.ಎಂ.ಮಂಜುನಾಥಸ್ವಾಮಿ, ಅಧ್ಯಾಪಕ ಡಾ.ಹೆಚ್.ಎಂ ಮಹೇಶ್ ಹಾದಿಹಳ್ಳಿ, ಗಾಯಕ ಮಲ್ಲಿಗೆ ಸುಧೀರ್, ಕ ಸಾ ಪ ಮಾಜಿ ಅಧ್ಯಕ್ಷ ಹಿರೇಮಗಳೂರು ಪುಟ್ಟಸ್ವಾಮಿ, ಪೂರ್ಣಪ್ರಜ್ಞ ಸಂಸ್ಥೆಯ ಪ್ರಾಂಶುಪಾಲ ಮೇರುತುಂಗ, ಕುಂಭಕ ಸಾಂಸ್ಕೃತಿಕ ಪ್ರತಿಷ್ಠಾನದ ಭದ್ರಮ್ಮ, ಅವನಿ, ಅಪೂರ್ವ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.
ಜಿಲ್ಲೆಯ ವಿವಿಧ ತಾಲೂಕುಗಳಿಂದ ಕುಂಭಕ ಸಾಹಿತ್ಯ ಪ್ರತಿಷ್ಠಾನದ ಹಿತೈಷಿಗಳು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮಕ್ಕೆ ಆಗಮಿಸಿದ್ದರು.
•••••••••••••
ಡಿ.ಎಂ.ಮಂಜುನಾಥಸ್ವಾಮಿ



