ಎನ್‌ಸಿಪಿ ಮುಖ್ಯಸ್ಥ ಮತ್ತು ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರು ಇಂದು ಬುಧವಾರ ಬೆಳಿಗ್ಗೆ ಮುಂಬೈನಿಂದ ಬಾರಾಮತಿಗೆ ಹೊರಟಿದ್ದ ವಿಮಾನ ಪತನಗೊಂಡು ಮೃತಪಟ್ಟಿದ್ದಾರೆ.
ಪೈಲಟ್‌ಗಳು ಮತ್ತು ಪವಾರ್ ಅವರ ಭದ್ರತಾ ಸಿಬ್ಬಂದಿ ಸೇರಿದಂತೆ ಇತರ ನಾಲ್ವರು ಕೂಡ ಸಾವನ್ನಪ್ಪಿದ್ದಾರೆ.
ಮುಂಬೈನಿಂದ ಬೆಳಿಗ್ಗೆ 8 ಗಂಟೆ ಸುಮಾರಿಗೆ ಹೊರಟ ವಿಮಾನ, ಒಂದು ಗಂಟೆಯ ನಂತರ ಬಾರಾಮತಿ ವಿಮಾನ ನಿಲ್ದಾಣದ ಬಳಿ ಇಳಿಯುವ ಸಮಯದಲ್ಲಿ ಅಪಘಾತಕ್ಕೀಡಾಯಿತು. ಸ್ಥಳೀಯ ಸಂಸ್ಥೆ ಚುನಾವಣೆ ಪ್ರಚಾರಕ್ಕಾಗಿ ಪವಾರ್ ತೆರಳುತ್ತಿದ್ದರು ಎಂದು ತಿಳಿದುಬಂದಿದೆ.
ಅಪಘಾತ ನಡೆದ ಸ್ಥಳದಲ್ಲಿ ಬೆಂಕಿ ಮತ್ತು ಹೊಗೆ ದಟ್ಟವಾಗಿ ಆವರಿಸಿದೆ. ನಜ್ಜುಗುಜ್ಜಾದ ವಿಮಾನದ ಅವಶೇಷಗಳ ಮಧ್ಯೆ ದೇಹಗಳನ್ನು ಹೊರಕ್ಕೆ ತೆಗೆಯುತ್ತಿರುವ ದೃಶ್ಯಗಳು ಕಂಡುಬಂದಿವೆ. ಅಪಘಾತದಲ್ಲಿ ವಿಮಾನದಲ್ಲಿದ್ದ ಎಲ್ಲಾ ಐದು ಪ್ರಯಾಣಿಕರು ಸಾವನ್ನಪ್ಪಿದ್ದಾರೆ ಎಂದು ನಾಗರಿಕ ವಿಮಾನಯಾನ ನಿರ್ದೇಶನಾಲಯ ತಿಳಿಸಿದೆ.
66 ವರ್ಷದ ಅಜಿತ್ ಪವಾರ್, ಹಿರಿಯ ರಾಜಕಾರಣಿ ಮತ್ತು ಎನ್‌ಸಿಪಿ ಸಂಸ್ಥಾಪಕ ಶರದ್ ಪವಾರ್ ಅವರ ಸೋದರಳಿಯ ಮತ್ತು ಲೋಕಸಭಾ ಸಂಸದೆ ಸುಪ್ರಿಯಾ ಸುಳೆ ಅವರ ಸೋದರ ಸಂಬಂಧಿಯಾಗಿದ್ದರು.
2023 ರಲ್ಲಿ, ಅಜಿತ್ ಪವಾರ್ ನೇತೃತ್ವದಲ್ಲಿ ಎನ್‌ಸಿಪಿಯಲ್ಲಿ ಬಂಡಾಯ ಎದ್ದಿತ್ತು. ಇದು ಪಕ್ಷವನ್ನು ಎರಡು ಬಣಗಳಾಗಿ ವಿಭಜಿಸಿತು. ಚಿಕ್ಕಪ್ಪ ಶರದ್ ಪವಾರ್ ಮತ್ತು ಅಜಿತ್ ಪವಾರ್ ನೇತೃತ್ವದಲ್ಲಿ ಎರಡು ಎನ್‌ಸಿಪಿ ಬಣಗಳು ಉದಯಿಸಿದವು. ನಂತರ ಅವರು ಎನ್‌ಡಿಎ ಜೊತೆ ಸೇರಿ ಉಪಮುಖ್ಯಮಂತ್ರಿಯಾದರು.



