ರಾಜ್ಯದ ಹಿರಿಯ ಕಾರ್ಮಿಕ ಮುಖಂಡ ಅನಂತ್ ಸುಬ್ಬರಾವ್(84 ವರ್ಷ) ತೀವ್ರ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅನಂತ್ ಸುಬ್ಬರಾವ್ ಅವರಿಗೆ ಬುಧವಾರ ಸಂಜೆ ಬೆಂಗಳೂರಿನ ತಮ್ಮ ಮನೆಯಲ್ಲೇ ಇದ್ದಕ್ಕಿದ್ದಂತೆ ಎದೆನೋವು, ಉಸಿರಾಟದ ತೊಂದರೆ ಕಾಣಿಸಿಕೊಂಡಿತ್ತು. ಕೂಡಲೇ ಅವರನ್ನು ಬೆಂಗಳೂರಿನ ವಿಜಯನಗರದ ಗ್ಲೋಬಲ್ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಆಸ್ಪತ್ರೆಗೆ ಸಾಗುವ ಮಾರ್ಗದಲ್ಲೇ ಕೊನೆಯುಸಿರೆಳೆದಿದ್ದಾರೆ.
ಸಾರಿಗೆ ನೌಕರರ ಜಂಟಿ ಕ್ರಿಯಾ ಸಮಿತಿಯ ಅಧ್ಯಕ್ಷರಾಗಿ ಕೆಲಸ ಮಾಡುತ್ತಿದ್ದ ಅನಂತ್ ಸುಬ್ಬರಾವ್ ನೇತೃತ್ವದಲ್ಲಿ ಗುರವಾರ ಮುಷ್ಕರ ಹಾಗೂ ಬೆಂಗಳೂರು ಚಲೋ ನಡೆಸಲು ಸಾರಿಗೆ ನೌಕರರು ನಿರ್ಧರಿಸಿದ್ದರು. ಆದರೆ ಅವರ ನಿಧನದಿಂದಾಗಿ ಸಾರಿಗೆ ನೌಕರರ ಮುಷ್ಕರ ಹಾಗೂ ಬೆಂಗಳೂರು ಚಲೋವನ್ನು ಮುಂದೂಡಲಾಗಿದೆ.
ಮೂಲತಃ ಹಾಸನ ಜಿಲ್ಲೆಯ ಅರಕಲಗೂಡು ಮೂಲದವರಾದ ಅನಂತ ಸುಬ್ಬಾರಾವ್ ಅವರು, ಆರಂಭದ ದಿನಗಳಲ್ಲಿ ಟ್ರೇಡ್ ಯೂನಿಯನ್‌ಗಳ ಬಣ ನಾಯಕರಾಗಿ ಹೆಸರುವಾಸಿಯಾಗಿದ್ರು. ಬಳಿಕ ಎಐಟಿಯುಸಿಯ ಮೂಲಕ ಬೆಳೆದು ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿದ್ರು. ಕಳೆದ ಐದು ದಶಕಗಳಿಂದ ಕಾರ್ಮಿಕ ಸಂಘಟನೆಗಳ ಜೊತೆ ಗುರುತಿಸಿಕೊಂಡಿದ್ದ ಅನಂತ ಸುಬ್ಬರಾವ್ ಅವರು ಸಾರಿಗೆ ನೌಕರರ ಪರ ನಿರಂತರ ಹೋರಾಟ ಮಾಡಿಕೊಂಡು ಬಂದಿದ್ದರು. ಕಾರ್ಮಿಕ ಮುಖಂಡರಾಗಿ ಅನೇಕ ಚಳವಳಿ, ಹೋರಾಟವನ್ನ ಸಂಘಟಿಸಿದ್ದರು.
ಅನಂತ ಸುಬ್ಬರಾವ್ ಅವರ ಕುಟುಂಬವೇ ಸಾಮಾಜಿಕ ಹೋರಾಟದಲ್ಲಿ ಸಕ್ರಿಯವಾಗಿದೆ. ಅವರಿಗೆ ಇಬ್ಬರು ಹೆಣ್ಣುಮಕ್ಕಳು. ಅವರ ಎರಡನೇ ಪುತ್ರಿ ಜ್ಯೋತಿ ಅವರು ವಿವಿಧ ಸಂಘಟನೆಗಳ ಮೂಲಕ ಜನಪರ, ಮಹಿಳಾಪರ ಹೋರಾಟಗಳಲ್ಲಿ ಸಕ್ರಿಯರಾಗಿದ್ದಾರೆ. ಅನಂತ ಸುಬ್ಬರಾವ್ ಅವರ ಅಳಿಯ ಮೂಡಿಗೆರೆ ವಿಧಾನಸಭಾ ಕ್ಷೇತ್ರದಲ್ಲಿ ಸಿಪಿಐ ಅಭ್ಯರ್ಥಿಯಾಗಿದ್ದ ಸಾತಿ ಸುಂದರೇಶ್ (ಜ್ಯೋತಿ ಅವರ ಪತಿ) ಪ್ರಸ್ತುತ ಸಿಪಿಐ ರಾಜ್ಯ ಕಾರ್ಯದರ್ಶಿಯಾಗಿ ಪಕ್ಷವನ್ನು ಮುನ್ನಡೆಸುತ್ತಿದ್ದಾರೆ.
ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದ್ದ ಅನಂತಸುಬ್ಬರಾವ್ ಅವರು ಎಲ್ಲಾ ಕಟ್ಟುಪಾಡುಗಳನ್ನು ತೊರೆದು ಸ್ವತಂತ್ರ ಚಿಂತನೆಗಳೊಂದಿಗೆ ಬದುಕು ನಡೆಸಿದ್ದರು. ಜಾತಿ ವ್ಯವಸ್ಥೆ, ಸಾಮಾಜಿಕ ತಾರತಮ್ಯದ ವಿರುದ್ಧ ನಿರಂತರ ಧ್ವನಿಯಾಗಿದ್ದರು. ಕುವೆಂಪು ಅವರ ವಿಶ್ವಮಾನವ ತತ್ವವನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡಿದ್ದರು.
ಅನಂತಸುಬ್ಬಾರಾವ್ ಅವರ ಇಚ್ಛೆಯಂತೆ ಅವರ ಅಂಗಾಂಗ ಮತ್ತು ದೇಹವನ್ನು ನಿಮ್ಹಾನ್ಸ್ ಆಸ್ಪತ್ರೆಗೆ ದಾನಮಾಡಲಾಗುತ್ತಿದೆ. ಬುಧವಾರ ಅವರ ಮಿದುಳು ಮತ್ತು ಕಣ್ಣುಗಳನ್ನು ದಾನ ಮಾಡಲಾಯಿತು. ಗುರುವಾರ ಪೂರ್ಣ ದೇಹ ದಾನ ಮಾಡಲಾಗವುದು ಎಂದು ಅವರ ಅಳಿಯ ಸಾತಿ ಸುಂದರೇಶ್ ಮಾಧ್ಯಮಕ್ಕೆ ತಿಳಿಸಿದ್ದಾರೆ.

ಅನಂತ ಸುಬ್ಬರಾವ್ ಅವರ ನಿಧನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಹಲವು ಸಚಿವರು, ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.
ಭಾರತ ಕಮ್ಯುನಿಸ್ಟ್ ಪಕ್ಷದ ಹಿರಿಯ ನಾಯಕ ಹಾಗೂ ಜನಪ್ರಿಯ ಕಾರ್ಮಿಕ ಮುಖಂಡರಾದ ಎಚ್.ವಿ. ಅನಂತ ಸುಬ್ಬರಾವ್ ಅವರು ನಿಧನರಾದ ಸುದ್ದಿ ತಿಳಿದು ದುಃಖವಾಯಿತು. ಸುದೀರ್ಘ ನಾಲ್ಕು ದಶಕಗಳ ಕಾಲ ಕಾರ್ಮಿಕ ಮುಖಂಡರಾಗಿ ಅನೇಕ ಚಳವಳಿಗಳನ್ನು ಮುನ್ನಡೆಸಿದ್ದ ಹೋರಾಟಗಾರ ಅನಂತ ಸುಬ್ಬರಾವ್ ನನಗೂ ಆತ್ಮೀಯರಾಗಿದ್ದರು.
ಅವರ ದಣಿವರಿಯದ ಹೋರಾಟದ ಛಲ ಮತ್ತು ಸೈದ್ಧಾಂತಿಕ ಬದ್ಧತೆ ಹೋರಾಟಗಾರರಿಗೆ ಒಂದು ಮಾದರಿ. ಅವರ ನಿರ್ಗಮನದಿಂದ ಸಮಾಜಕ್ಕೆ, ಮುಖ್ಯವಾಗಿ ಕಾರ್ಮಿಕ ವರ್ಗಕ್ಕೆ ತುಂಬಲಾರದ ನಷ್ಟವಾಗಿದೆ.
ಮೃತರ ಆತ್ಮಕ್ಕೆ ಚಿರಶಾಂತಿ ಲಭಿಸಲಿ, ಅವರ ಕುಟುಂಬವರ್ಗಕ್ಕೆ ನೋವು ಭರಿಸುವ ಶಕ್ತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ.
ಮುಖ್ಯಮಂತ್ರಿ ಸಿದ್ದರಾಮಯ್ಯ



