ಹಿಂದೂ ಎಂಬುದು ಎಲ್ಲವನ್ನೂ ಮತ್ತು ಎಲ್ಲರನ್ನೂ ಒಳಗೊಂಡಿರುವುದಾಗಿದೆ. ಇದು ವಸುದೈವ ಕುಟುಂಬಕಂ ಎಂಬ ಮಹಾನ್ ಸಂದೇಶವನ್ನು ನೀಡಿದ ವಿಶಾಲ ಅರ್ಥ ಮತ್ತು ಆಚರಣೆಯನ್ನು ಒಳಗೊಂಡಿರುವ ವಿಶಿಷ್ಠ ಧರ್ಮವಾಗಿದೆ ಎಂದು ರಾಷ್ಟ್ರೀಯ ಸ್ವಯಂ ಸೇವಕಾ ಸಂಘದ ಪ್ರಾಂತ ಸಹ ಸಂಪರ್ಕ ಪ್ರಮುಖ್ ಯಾದವ್ ಕೃಷ್ಣ ಹೇಳಿದರು.
ಅವರು ಬುಧವಾರ ಮೂಡಿಗೆರೆ ತಾಲ್ಲೂಕಿನ ಗೌಡಹಳ್ಳಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಊರುಬಗೆ ಮಂಡಲ ವ್ಯಾಪ್ತಿಯ ಹಿಂದೂ ಸಮಾಜೋತ್ಸವ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣಕಾರರಾಗಿ ಮಾತನಾಡಿದರು.
ಜಗತ್ತಿನ ಶಾಂತಿಗೆ ಹಿಂದೂ ಧರ್ಮದವ ವಿಚಾರಗಳು ಬಹುಮುಖ್ಯವಾಗಿದೆ. ಹಿಂದೂ ಧರ್ಮ ಎಂದಿಗೂ, ಯಾರ ಮೇಲೂ ಆಕ್ರಮಣ ಮನೋಭಾವನೆಯನ್ನು ಪ್ರದರ್ಶಿಸಿಲ್ಲ. ಆದರೆ ತನ್ನ ಮೇಲೆ ನಡೆದ ಆಕ್ರಮಣಕ್ಕೆ ಕಾಲಕಾಲಕ್ಕೆ ತಕ್ಕ ಉತ್ತರ ನೀಡಿದೆ. ಇವತ್ತು ಜಗತ್ತಿನೆಲ್ಲೆಡೆ ಯುದ್ಧ ಅಶಾಂತಿಯ ಭಾವನೆ ಬೆಳೆಯುತ್ತಿರುವಾಗ ಅದನ್ನು ಶಮನಗೊಳಿಸಲು ಭಾರತದ ಪಾತ್ರ ಬಹುಮುಖ್ಯವಾಗಿದೆ ಎಂದರು.
ನಮ್ಮ ಹಿಂದೂ ಪರಂಪರೆಯನ್ನು ಇಂದಿನ ಯುವಜನಾಂಗಕ್ಕೆ ಪ್ರಚುರಪಡಿಸುವ ಮೂಲಕ ಅವರಿಗೆ ನಮ್ಮ ಧರ್ಮದ ಉದಾತ್ತ ಚಿಂತನೆಗಳನ್ನು ಬಿತ್ತುವ ಕೆಲಸವನ್ನು ಮಾಡಬೇಕಾಗಿದೆ ಎಂದರು.
ಸಾಮಾಜಿಕ ಕಾರ್ಯಕರ್ತೆ, ಮೂಡಿಗೆರೆ ಪಟ್ಟಣ ಪಂಚಾಯಿತಿ ಸದಸ್ಯೆ ಶ್ರೀಮತಿ ಆಶಾ ಮೋಹನ್ ಅವರು ಮಾತನಾಡಿ ; ಪ್ರತಿಯೊಬ್ಬ ಹಿಂದೂವೂ ತನ್ನ ಧರ್ಮ ಮತ್ತು ಸಂಸ್ಕೃತಿಯ ಬಗ್ಗೆ ಹೆಮ್ಮೆ ಪಡಬೇಕು. ನಮ್ಮ ಮಕ್ಕಳು ಉತ್ತಮ ಸಂಸ್ಕಾರ ಬೆಳೆಸಿಕೊಳ್ಳಲು ಮನೆಯ ಮೊದಲ ಶಾಲೆಯಾಗಿದ್ದು, ತಾಯಂದಿರು ತಮ್ಮ ಮಕ್ಕಳಿಗೆ ಹಿಂದೂ ಧರ್ಮದ ಉನ್ನತವಾದ ಆಚಾರ ವಿಚಾರಗಳನ್ನು ಬಿತ್ತುವ ಕೆಲಸ ಮಾಡಬೇಕು ಎಂದರು.
ಊರುಬಗೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಡಿ.ಎಂ.ರವೀಂದ್ರ ಬಾಳೆಗದ್ದೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಸಮಾವೇಶದ ಯಶಸ್ಸಿಗೆ ಸಹಕರಿಸಿದ ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸಿದರು.
ಜಿ.ಎಂ. ಸಂತೋಷ್ ಹೊರಟ್ಟಿ ಕಾರ್ಯಕ್ರಮ ನಿರೂಪಿಸಿದರು, ಸಂತೋಷ್ ಕುಂಬರಡಿ ವೇದಿಕೆಗೆ ಆಹ್ವಾನಿಸಿದರು, ಡಿ.ವೈ. ಹರೀಶ್ ಸ್ವಾಗತಿಸಿ, ರಕ್ಷಯ್ ಮೇಕನಗದ್ದೆ ವಂದಿಸಿದರು, ಸುಚಿತ್ರ ಪ್ರಸನ್ನ ಪಾರ್ಥನೆ ನೆರವೇರಿಸಿದರು.



