February 6, 2026

 

 

ನಿರೂಪಣೆ :
ಡಾ. ಸುಧಾ ಹೆಚ್.ಎಸ್
ಸಂಸ್ಕøತ ಉಪನ್ಯಾಸಕರು,
ಮೈಸೂರು.
ಮೊ. 9448233119
ಒಮ್ಮೆ ಸುಮ್ಮನೆ ನಿಂತು ನಮ್ಮ ಸುತ್ತಲಿನವರೆಲ್ಲರ ಜೀವನವನ್ನು ಆಳವಾಗಿ ಅವಲೋಕಿಸಿ ನೋಡಿದಾಗ ಎಲ್ಲರಲ್ಲೂ ಯಾವುದೋ ಒಂದು ತುಡಿತ ಕಾಣಿಸುತ್ತದೆ. ಆದರೆ ಆ ತುಡಿತದೊಳಗೂ ಒಂದು ವೇಗವಾದ ನಡಿಗೆಯಿರುವಂತೆ ಗೋಚರಿಸಿದರೆ ತಟ್ಟನೆ ಆ ನಡಿಗೆ ನಿಧಾನವಾದಂತೆ ತೋರುತ್ತದೆ.  ಏಕೆಂದರೆ ಅವರೆಲ್ಲರೂ ಸಹ ಅವರವರ ಮನಸ್ಸಿನ ಉತ್ಸಾಹಕ್ಕೆ ತಕ್ಕಂತೆ ಹೆಜ್ಜೆ ಹಾಕುತ್ತಿದ್ದಾರೆ ಎಂದೆನಿಸುತ್ತದೆ. ಹೌದು ಅದೂ ಸರಿಯೇ!  ಪಕ್ಕನೇ ಕಣ್ಣು ಸಾಲಾಗಿ ಸಾಗುತ್ತಿರುವ ಮಕ್ಕಳ ಗುಂಪಿನತ್ತ ತಿರುಗಿದಾಗ ಅವರೊಳಗಿನ ಉತ್ಸಾಹವೇ ಬೇರೆ, ಅವರ ಪ್ರಪಂಚವೇ ಬೇರೆ!  ಅವರಿಗೆ ನಾಳಿನ ಚಿಂತೆಯಿಲ್ಲದ ಮುಗ್ಧ ಮನಸ್ಸು, ಆದರೂ ಆ ಮಕ್ಕಳಿಗೆ ಶಾಲೆಗೆ ತೆರಳುವಾಗಿನ ಉತ್ಸಾಹ ಒಂದಾದರೆ, ಶಾಲೆಯಿಂದ ಮರುಳುವಾಗಿನ ಉತ್ಸಾಹವೇ ಬೇರೆ. ಅವರೆಡಕ್ಕೂ ಅಪಾರ ವ್ಯತ್ಯಾಸ ಎದ್ದು ಕಾಣುತ್ತದೆ. ಅಂದರೆ ಈ ಜೀವನೋತ್ಸಾಹ ನಮ್ಮ ಎಲ್ಲ ಕ್ರಿಯೆಗಳ ಪ್ರತಿಕ್ರಿಯೆ ಎಂದರೆ ತಪ್ಪಾಗಲಾರದು.  ಇದು ಸಕಲ ಜೀವರಾಶಿಗಳಿಗೂ ಅವರವರ ಕ್ರಿಯೆಗಳಿಗನುಗುಣವಾಗಿ ಅನ್ವಯವಾಗುತ್ತದೆ.
ಈ ಪ್ರಪಂಚಕ್ಕೆ ಬಂದ ಜೀವಿಗಳಾರೂ ಸಹ ಸೋಲ ಬೇಕೆಂದು ಹುಟ್ಟಿಲ್ಲ, ಎಲ್ಲ ಹುಟ್ಟಿನಲ್ಲಿಯೂ ಒಂದೊಂದು ಸಾಧಕ ಭಾವವಿದ್ದು ಅವರದ್ದೇ ಆದ ಸಾರ್ಥಕತೆಯಿದೆ.  ಇಲ್ಲಿನ ಗೊಂದಲಗಳ ನಡುವಿನ ಗೆಲ್ಲುವುದಕ್ಕೆ ನಮ್ಮೊಳಗಿನ ಉತ್ಸಾಹವು ಇಂಧನದಂತೆ ಕೆಲಸ ಮಾಡುತ್ತದೆ.  ಈ ಇಂಧನವು ಒಳಗೆ ಅಂತರ್ಮುಖಿಯಾಗಿ ಕುಳಿತಿರುವ ಸಾಧನೆಯ ಕಿಡಿಗೆ ತಗುಲಿದರೆ ಬದುಕು ಸರ್ರನೆ ತನ್ನಷ್ಟಕ್ಕೆ ಮೇಲೇರುತ್ತದೆ. “ಮೊಗದಲ್ಲಿ ನಿಮಗೆ ನಿರುತ್ಸಾಹದ ಮೋಡ ಕವಿದಿದ್ದರೆ ಆ ದಿನ ನೀವು ಒಳಗೆ ಕೋಣೆಯಲ್ಲಿಯೇ ಇರಿ, ನಿಮ್ಮ ದುಗುಡದ ಕಾಯಿಲೆಯನ್ನು ಜಗತ್ತಿಗೆ ಹರಡಲು ನಿಮಗೆ ಯಾವ ಅಧಿಕಾರವಿಲ್ಲ” ಎನ್ನುತ್ತಾರೆ ಸ್ವಾಮಿ ವಿವೇಕಾನಂದರು, ಅಂದರೆ ವಿಶಾದದ ಸ್ಥಾಯಿಭಾವವನ್ನು ನಿಮ್ಮದಾಗಿಸಿಕೊಂಡು ಒಳಗೇ ಕೊರಗಿಕೊಳ್ಳುತ್ತಾ ಅದರಂತಗೆಯೇ ಜಗತ್ತನ್ನು ಕಂಡು ಅದು ಸರಿಯಿಲ್ಲ, ಅದು ಸರಿ ಯಿಲ್ಲ ಇದು ಸರಿಯಿಲ್ಲ ಎಂದು ಬೇಸರಗೊಂಡು ಜೀವನವನ್ನು ಬೇಡದ ಚಿಂತೆಯೆಂಬ ಮೂಟೆ ಹೊತ್ತು ಸಾಗುವುದನ್ನು ನಿವಾರಿಸಿಕೊಂಡು ಬದುಕಿನಲ್ಲಿ ಒಳ್ಳೆಯ ಗುರಿಯಿಟ್ಟುಕೊಂಡು ಅದರ ಸಾಧನೆಯ ಮಾರ್ಗವನ್ನು ಹುಡುಕುವ ಉತ್ಸಾಹವನ್ನು ಮೈಗೂಡಿಸಿ ಕೊಳ್ಳಬೇಕು ಇದು ನಮ್ಮೊಳಗಿನ ಚೈತನ್ಯದ ಚಿಲುಮೆಯಾಗಬೇಕು, ಈ ಚಿಲುಮೆಯು ನಮ್ಮ ಅಂತರಂಗದ ನಕಾರಾತ್ಮಕ ಭಾವನೆಗಳನ್ನು ಬುಡಸಹಿತ ಕಿತ್ತುಹಾಕಿ ಕಾರ್ಯಕ್ಷಮತೆಯನ್ನು ಹೆಚ್ಚಿಸುವಂತಾಗಬೇಕು, ಅರಿಯದ ಮುಗ್ಧ ಮಕ್ಕಳ ಮನಸ್ಸಿನ ಸಹಜ ಉತ್ಸಾಹದಂತಿರಬೇಕು ಆಗಷ್ಟೇ ನಮ್ಮ ಮನಸ್ಸು ರಚನಾತ್ಮಕ ಕ್ರಿಯೆಯತ್ತ ತೊಡಗಿಕೊಂಡು ಜೀವನದ ಪ್ರತಿಹಂತವನ್ನು ಪ್ರೀತಿಸುವಂತೆ ಮಾಡುತ್ತದೆ. ಇದನ್ನೇ ಮಾನ್ಯ ಡಿ.ವಿ.ಜಿ.ಯವರೂ ಸಹ ಈ ರೀತಿ ಹೇಳುತ್ತಾರೆ.
ಸುಂದರವನೆಸಗು ಜೀವನದ ಸಾಹಸದಿಂದೆ |
ಕುಂದಿಲ್ಲವದಕೆ ಸಾಹಸಭಂಗದಿಂದೆ ||
ಮುಂದಕದು ಸಾಗುವುದು ಮರಳಿ ಸಾಹಸದಿಂದೆ |
ಚೆಂದ ಧೀರೋದ್ಯಮವೆ – ಮಂಕುತಿಮ್ಮ ||
     “ನಿನ್ನ ಸಾಹಸದಿಂದ ಜೀವನವನ್ನು ಸುಂದರವನ್ನಾಗಿ ಮಾಡಿಕೊ, ಒಂದು ವೇಳೆ ಈ ಸಾಹಸಕ್ಕೆ ಭಂಗ ಬಂದರೆ ಏನು ತೊಂದರೆಯಿಲ್ಲ, ಅದು ಪುನಃ ಅದೇ ಸಾಹಸದಿಂದ ಮುಂದೆ ಸಾಗುತ್ತದೆ, ಈ ಧೀರತನದಿಂದ ಕೂಡಿದ ಉದ್ಯಮವೇ ಬಾಳಿನಲ್ಲಿ ಸೊಗಸು”.
     ಜೀವನದಲ್ಲಿ ಯಾವುದೋ ಒಂದು ಗುರಿಯಿಟ್ಟುಕೊಂಡು ಅದರ ಸಾಧನೆಯತ್ತ ಹೊರಟಾಗ ಹತ್ತು ಹಲವಾರು ಅಡೆತಡೆಗಳು ಬಂದು ಆ ಸಾಧನೆಗೆ ಭಂಗವಾಗಬಹುದು ಆದರೆ ಅದು ಅಂತ್ಯವಲ್ಲ ಹಾಗೆಯೇ ಅದರಿಂದ ಆಗುವ ತೊಂದರೆಯೂ ಸಹ ಅಲ್ಪಸ್ವಲ್ಪ ಇದ್ದಿರಬಹುದು ಹಾಗಂತ ಅದು ಅಲ್ಲಿಗೇ ಮೊಟಕುಗೊಳ್ಳುವುದಿಲ್ಲ “ಮರಳಿ ಯತ್ನವ ಮಾಡು” ಎಂಬ ಮಾತಿನಂತೆ ಅದು ಪುನಃ ಅದೇ ಉತ್ಸಾಹದಿಂದ ಮೇಲೆದ್ದು ನಿಂತು ಸಾಗುತ್ತಿರಬೇಕು, ಈ ದಿಟ್ಟತನದ ನಿರ್ಧಾರ ನಮ್ಮೊಳಗೆ ಇದೆ ಎಂದಾದರೆ ಅದಕ್ಕೆ ಸೋಲಿಲ್ಲ, ಬಾಳಿನ ಆಗು ಹೋಗುಗಳು “ಹಾವು-ಏಣಿ” ಆಟವಿದ್ದಂತೆ, ಇದರಲ್ಲಿಯೇ ಒಂದು ಸೊಗಸನ್ನು ಕಾಣುವಂತಹ ದೃಷ್ಟಿಕೋನ ನಮ್ಮದಾಗಬೇಕು ಆಗಷ್ಟೇ ನಮಗೆ ಅದರ ಸವಿಯನ್ನು ಉಣ್ಣಲು ಸಾಧ್ಯವಾಗುತ್ತದೆ. ಜೀವನದಲ್ಲಿ ಇಂತಹ ಸಣ್ಣ-ಪುಟ್ಟ ಸಮಸ್ಯೆಗಳು ಎದುರಾದಾಗ ಅದನ್ನು ಹೇಗೆ ಎದುರಿಸಬೇಕು ಎಂಬ ಜಾಣತನ ನಮ್ಮಲ್ಲಿ ಬೆಳೆಯಲು ಸಾಧ್ಯವಾಗುತ್ತದೆ ಮತ್ತು ನಮ್ಮ ಆಂತರ್ಯದಲ್ಲಿ ಅಡಗಿರುವ ಸಾಧಿಸುವ ಛಲ, ಗುರಿಯೆಡೆಗೆ ಸಾಗುವ ಉತ್ಸಾಹ ಪುಟಿದು ಮೇಲೆ ಬರುವ ಮಾರ್ಗವಾಗುತ್ತದೆ, ಸಾಧನೆಯ ಹಾದಿ ಯಲ್ಲಿ ಬರುವ ತೊಂದರೆಗಳನ್ನೇ ಬಂಡವಾಳವಾಗಿಸಿಕೊಂಡು ಜೀವನದ ಸೌಧವನ್ನು ಕಟ್ಟಿಕೊಳ್ಳಬೇಕು. ಜಗತ್ತಿನ ಎಲ್ಲ ಜೀವಿಗಳು ಸಹ ಜೀವನದ ಸುಖ-ಸಂತೋಷವನ್ನು ಪಡೆದುಕೊಳ್ಳಲು ತವಕ ಪಡುತ್ತಲೇ ಇರುತ್ತವೆ, ಆನಂದ ಪಡುವುದು ಆತ್ಮದ ಒಂದು ಸಹಜವಾದ ಸ್ವಭಾವ. ಆದ್ದರಿಂದ ಬದುಕಿನಲ್ಲಿ ಸುಖ-ಸಂತೋಷಗಳನ್ನು ಅನುಭವಿಸುವುದು ನಮ್ಮಗಳ ಹಕ್ಕು, ಅದಕ್ಕಾಗಿಯೇ ಜೀವನದಲ್ಲಿ ಬರುವ ಹೋರಾಟವನ್ನು ದಿಟ್ಟತನದಿಂದ ಎದುರಿಸುವ ಎದೆಗಾರಿಕೆ ಬೆಳೆಸಿಕೊಳ್ಳುವುದು ಅನಿವಾರ್ಯ ಕೂಡ ಆಗಿದೆ.  ಆದ್ದರಿಂದ ಈ ಜಗತ್ತಿಗೆ ಬಂದು ನಾವು ನಗುತ್ತಲೋ – ಅಳುತ್ತಲೋ, ಕಷ್ಟಪಡುತ್ತಲೋ ಅಥವಾ ಲೀಲಾಜಾಲವಾಗಿಯೋ – ಹೇಗಾದರೂ ಸರಿಯೇ ಈ ಜೀವನವನ್ನು ಎದುರಿಸಲೇಬೇಕು, ಎದುರಾಗುವ ಸಮಸ್ಯೆಗಳನ್ನು ನಿವಾರಿಸಿಕೊಂಡು ಬರುವ ಸುಖವನ್ನು ಅಪ್ಪಿಕೊಂಡಾಗ ಆ ಅಪ್ಪುಗೆಯಲ್ಲಿನ ಸುಖವೇ ಬೇರೆ!  ಕಷ್ಟಗಳಿದ್ದರೆ ಮಾತ್ರ ನಮಗೆ ಸುಖದ ಬೆಲೆ ತಿಳಿಯಲು ಸಾಧ್ಯ. ಆದ್ದರಿಂದ ಈ ಜೀವನವನ್ನು ‘ಗೋಳು’ ಎಂದುಕೊಳ್ಳದೇ ‘ಸವಾಲು’ ಎಂದುಕೊಂಡು ಸಾಗಿದಾಗ ಅದರೊಳಗಿನ ಸುಖದ ಅರಿವು ಆಗಲು ಸಾಧ್ಯವಾಗುತ್ತದೆ.
ಎಲ್ಲರಿಗಮಾಗಿ ತಾನ್, ಎಲ್ಲರುಂ ತನಗಾಗಿ |                                                                                            ನಿಲ್ಲುವೇಕಾತ್ಮತೆಯ ಬಾಳ್ವೆಯಿಂ ಕಲಿಯಲ್ ||                                                                                    ಸಲ್ಲುವುಪಕರಣಗಳು ಮನೆ ರಾಜ್ಯಸಂಸಾರ  |                                                                                        ವಲ್ಲಗಳೆಯದಿರವನು – ಮಂಕುತಿಮ್ಮ ||
     “ತಾನು ಎಲ್ಲರಿಗೋಸ್ಕರ ಬಾಳಬೇಕು, ಎಲ್ಲರೂ ನನಗಾಗಿ ಇದ್ದಾರೆ ಎನ್ನುವ ಏಕಾತ್ಮತೆಯನ್ನು ಬಾಳಿನಲ್ಲಿ ಕಲಿಯಲು ಸಿದ್ಧನಾಗು, ಇದಕ್ಕಾಗಿ ನಮಗೆ ಇರುವ ಉಪಕರಣಗಳು ಮನೆ, ರಾಜ್ಯ ಮತ್ತು ಸಂಸಾರ ಇದನ್ನು ಅಲ್ಲಗಳೆಯಬೇಡ”.
     ಜೀವನದಲ್ಲಿ ನಾನು-ನನ್ನದು ಎಂದು ಸ್ವಾರ್ಥತನವನ್ನು ಬೆಳೆಸಿಕೊಳ್ಳದೆ ತನ್ನ ಸುತ್ತಲಿರುವವರ ಬದುಕಿನ ಕಷ್ಟಗಳನ್ನು ಅರಿತು ಅವರ ಇರುವಿಕೆಯಿಂದ ತನ್ನ ಬದುಕಿನಲ್ಲಾಗಿರುವ ಬದಲಾವಣೆಗಳು ಅವರಿಂದ ತನಗಾಗಿರುವ ಸಹಾಯ, ಸಹಕಾರ ಇದೆಲ್ಲವನ್ನು ಅರಿತುಕೊಂಡು ಅವರೆಲ್ಲರೂ ನನಗಾಗಿಯೇ ಇದ್ದಾರೆ, ಅವರು ನನ್ನವರು ಎಂದುಕೊಂಡು ಅವರೊಳಗೆ ನಾನೊಬ್ಬ ಎಂಬ ಏಕಾತ್ಮ ಭಾವವನ್ನು ಕಲಿತುಕೊಂಡು ಮುನ್ನಡೆದಾಗ ನಿಸ್ವಾರ್ಥ ಜೀವನವನ್ನು ನಡೆಸಲು ಸಾಧ್ಯವಾಗುತ್ತದೆ. ಈ ನಿಸ್ವಾರ್ಥ ಜೀವನವು ನಮ್ಮದಾಗಬೇಕು ಎಂದಾದರೆ ನಾವು ನಮ್ಮ ಮನೆ-ಕುಟುಂಬ, ಸಂಸಾರ ಇವೆಲ್ಲವನ್ನು  ಸಾಧನವನ್ನಾಗಿ ಬಳಸಿಕೊಳ್ಳಬೇಕು “ಮನೆಗೆದ್ದು ಮಾರು ಗೆಲ್ಲು” ಎಂಬ ನಾಣ್ಣುಡಿಯಂತೆ ನಮ್ಮವರನ್ನೇ ಪ್ರೀತಿಸಲಾರದ ನಾವು ಪರರನ್ನು ಪ್ರೀತಿಸಲು ಸಾಧ್ಯವೇ? ಆದ್ದರಿಂದ ಮೊದಲ ಆಧ್ಯತೆ ನಮ್ಮ ಮನೆಯವರಿಗೆ ನೀಡಬೇಕು, ನಂತರ ನಮ್ಮ ಸುತ್ತಲಿನವರು, ನೆರೆಹೊರೆಯವರು, ನಮ್ಮ ದೇಶ ಈ ರೀತಿ ವಿಶಾಲವಾದ ಮನೋಭಾವವನ್ನು ಬೆಳೆಸಿಕೊಂಡು ಎಲ್ಲರನ್ನು ಒಂದೇ ಸಮನಾಗಿ ನೋಡಿಕೊಳ್ಳುವ ಮನಸ್ಥಿತಿಯನ್ನು ರೂಢಿಸಿಕೊಂಡಾಗ ಮಾತ್ರ ನಮ್ಮ ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ.  ಮೊದಲ ಆದ್ಯತೆಯನ್ನು ನಮ್ಮ ‘ಮನೆಗೆ’ ನೀಡಿ ಎಲ್ಲರಲ್ಲೂ ಒಂದೇ ರೀತಿಯ ಪ್ರೀತಿ-ವಿಶ್ವಾಸ ಗಳಿಸಿಕೊಂಡರೆ ಜೀವನದಲ್ಲಿ ಏಕಾತ್ಮತೆಯ ಭಾವ ಹೊಂದಲು ಸಾಧ್ಯವಾಗುತ್ತದೆ.
ವ್ಯರ್ಥವೀ ಜೀವನದ ಬಡಿದಾಟವೆನ್ನದಿರು |                                                                                          ಅರ್ಥವಹುದದು ನಿನಗೆ ಪೂರ್ಣದರ್ಶನದಿಂ ||                                                                                      ನರ್ತಿಪನು ಜಡಜೀವರೂಪಂಗಳಲಿ ಬೊಮ್ಮ |                                                                                    ಪೂರ್ತಿಯಿದನರಿಯೆ ಸೊಗ – ಮಂಕುತಿಮ್ಮ ||
     “ಜೀವನವನ್ನು ಕೇವಲ ವ್ಯರ್ಥವಾದ ಬಡಿದಾಟ ಎನ್ನಬೇಡ, ಅದರ ಸಂಪೂರ್ಣವಾದ ದರ್ಶನವನ್ನು ಮಾಡದೇ ಈ ರೀತಿ ತೀರ್ಮಾನಕ್ಕೆ ಬಂದಿದ್ದೀಯೇ, ಅದರ ಸಂಪೂರ್ಣ ದರ್ಶನವನ್ನು ನೀನು ಕಂಡಾಗ ಅದರಲ್ಲಿ ಸಕಲ ಜಡಜೀವಿಗಳಲ್ಲೂ ಪರಮಾತ್ಮನ ಇರುವಿಕೆಯನ್ನು ಕಾಣುತ್ತಾ ಇದರ ಅರ್ಥವನ್ನು ನೀನು ಪೂರ್ಣವಾಗಿ ತಿಳಿದುಕೊಂಡಾಗ ಮಾತ್ರ ಅತ್ಯಂತ ಸುಖವನ್ನು ಅನುಭವಿಸುವಂತವ ನಾಗುತ್ತೀಯ”.
     ಬದುಕಿನಲ್ಲಿ ಬೇಸರವಾದಾಗ ನಾವು ಸಹಜವಾಗಿಯೇ ಈ ಜೀವನ ಸಾಕಾಗಿ ಹೋಗಿದೆ, ಇದೊಂದು ವ್ಯರ್ಥವಾದ ಅರ್ಥವಿಲ್ಲದ ಬಡಿದಾಟ ಎಂದು ಬೇಸರಪಟ್ಟುಕೊಳ್ಳುವುದು ಸರ್ವೇ ಸಾಮಾನ್ಯ.  ಹಾಗಾದರೆ ಪರಮಾತ್ಮನು ಈ ಮನುಜ ಸೃಷ್ಟಿಯನ್ನು ಮಾಡಿದ  ಉದ್ದೇಶವಾದರೂ ಏನು? ಎಂಬ ಪ್ರಶ್ನೆ ಏಳುವುದು ಸಹಜ, ಆದರೆ ಈ ಸೃಷ್ಟಿಯ ಹಿಂದೆ ಒಂದು ಸದುದ್ದೇಶವಿರಲೇಬೇಕು, ಹಾಗೆಂದೇ ಪರಮಾತ್ಮ ಪ್ರಪಂಚದ ಎಲ್ಲ ಜೀವಿಗಳಿಗಿಂತ ಮೇಲಾಗಿರುವಂತೆ, ಆಲೋಚನಾಶಕ್ತಿಯನ್ನು ಕೊಟ್ಟು ಈ ಮನುಷÀ್ಯನನ್ನು ಸೃಷ್ಟಿಸಿದ್ದಾನೆ.  ಅದಕ್ಕೆ ತಕ್ಕಂತೆಯೇ ಈ ಬದುಕಿನಲ್ಲಿ ಕೆಲವು ಸಮಸ್ಯೆಗಳನ್ನು ತುಂಬಿಟ್ಟಿದ್ದಾನೆ, ಆ ಸಮಸ್ಯೆಗಳನ್ನು ಎದುರಿಸಲು ಬೇಕಾದ ಜಾಣ್ಮೆಯನ್ನು ನಮ್ಮೊಳಗೆ ಅಡಗಿಸಿಟ್ಟಿದ್ದಾನೆ, ಅದು ಬೂದಿ ಮುಚ್ಚಿದ ಕೆಂಡದಂತೆ ನಮ್ಮ ಅಂತರಾತ್ಮದಲ್ಲಿ ಹುದುಗಿ ಕುಳಿತುಕೊಂಡಿದೆ, ಯಾವಾಗ ನಮ್ಮ ಮನಸ್ಸು ಪರಿಪೂರ್ಣವಾಗಿ ಅದರೊಳಗೆ ಹೊಕ್ಕಿ ಕೊಂಡಾಗ ಅದು ಮಿಂಚಿನಂತೆ ಮೇಲೇಳುವ ಸಾಮಥ್ರ್ಯವನ್ನು ಹೊಂದಿದೆ. ಆದ್ದರಿಂದ ಈ ನಮ್ಮ ಬುದ್ಧಿಶಕ್ತಿ ಬೆಳಗಲಿಕ್ಕೆ ಎದು ರಾಗುವ ಇಂತಹ ಸಮಸ್ಯೆಗಳು ಸೋಪಾನವಾಗುತ್ತದೆ, ಈ ಸೋಪಾನವನ್ನು ಮೆಲ್ಲನೆ ಹತ್ತಿ ಮೇಲೆ ನಡೆದರೆ ಮನುಜ ಜೀವನದ ಪರಿಪೂರ್ಣತೆಯನ್ನು ಅರ್ಥ ಮಾಡಿಕೊಳ್ಳುತ್ತಾನೆ. ಆಗ ನಿಜವಾದ ಜೀವನದ ಅರ್ಥ ಅವನಿಗೆ ಗೋಚರವಾಗುತ್ತದೆ. ಆದ್ದರಿಂದ ಕೇವಲ ಸಣ್ಣಪುಟ್ಟ ಅಡೆತಡೆಗಳಿಗೆ ಎದೆಗುಂದಿ ಈ ಜೀವನವೇ ವ್ಯರ್ಥ ಎನ್ನುವ ತೀರ್ಮಾನವು ಸರಿಯಾದುದಲ್ಲ. ಒಂದೊಮ್ಮೆ ನಮ್ಮ ಅಂತರಾತ್ಮಕ್ಕೆ ಈ ಜೀವನದ ಪರಿಪೂರ್ಣತೆಯು ಅರಿವಿಗೆ ಬಂದಾಗ ನಮಗೆ ಪ್ರಪಂಚದ ಸಕಲ ಜಡ-ಜೀವಿಗಳಲ್ಲೂ ಪರಮಾತ್ಮನ ಇರುವಿಕೆಯು ಕಾಣಲು ಪ್ರಾರಂಭವಾಗುತ್ತದೆ. ಆಗ ಪರಮಾತ್ಮನ ಸೃಷ್ಟಿಯ ಹಿನ್ನೆಲೆ ಹಾಗೂ ಉದ್ದೇಶ ಎರಡೂ ಸಹ ಅರ್ಥವಾಗುತ್ತದೆ.  ಇಂತಹ ಇರುವಿಕೆಯು ನಮ್ಮಲ್ಲಿ ಅಮಿತಾನಂದವನ್ನು ನೀಡಿ ನಮ್ಮ ವ್ಯಕ್ತಿತ್ವವನ್ನು ಅತ್ಯುನ್ನತ ಮಟ್ಟಕ್ಕೆ ಒಯ್ಯುತ್ತದೆ, ಆಗ ಪ್ರಪಂಚದ ಸಕಲ ವಸ್ತುವಿನಲ್ಲಿಯೂ ಅಡಗಿರುವ ಪರಿಪೂರ್ಣತೆಯ ಹಾಗೂ ಪ್ರಕೃತಿಯಲ್ಲಿ ಅದರ ಅವಿನಾಭಾವ ಸಂಬಂದವೂ ನಮ್ಮ ಅರಿವಿಗೆ ಗೋಚರಿಸುತ್ತದೆ. ಇದೊಂದು ಆಧ್ಯಾತ್ಮಿಕ ಭಾವದ ನೆಲೆಯೂ ಸಹ ಆಗಿದ್ದು ಈ ದೆಸೆಯಲ್ಲಿ ನಾವು ನಮ್ಮ ಸುತ್ತಲಿನ ಎಲ್ಲ ಜಂಜಾಟವನ್ನು ಬದಿಗಿಟ್ಟು ಪರಮಾತ್ಮನ ದಿವ್ಯ ಸಾನಿಧ್ಯವನ್ನು ಕಾಣುತ್ತ ಅತ್ಯಂತ ಅನಿರ್ವಚನೀಯ ಸಂತಸವನ್ನು ಹೊಂದುತ್ತೇವೆ ಆಗ ನಮಗೆ ನಮ್ಮ ಜೀವನ ಸಾರ್ಥಕವಾಯಿತು ಎಂಬ ಭಾವನೆ ತಾನಾಗಿಯೇ ಬಂದು ಪರಮಸುಖವನ್ನು ಹೊಂದುತ್ತೇವೆ. ಈ ಸಾಲುಗಳಲ್ಲಿ ಮಾನ್ಯ ಡಿ.ವಿ.ಜಿ.ಯವರು ಜೀವನದ ಪರಿಪೂರ್ಣತೆಯ ಸತ್ಯವನ್ನು ಆಧ್ಯಾತ್ಮದ ನೆಲೆಗಟ್ಟಿನಲ್ಲಿ ತುಂಬಿಕೊಟ್ಟಿದ್ದಾರೆ ಎಂದರೆ ತಪ್ಪಾಗಲಾರದು.  ಮಹಾ ಮಹಾ ಸಾಧಕರೆಲ್ಲರೂ ಸಹ ಇಂತಹ ಪರಿಪೂರ್ಣ ಭಾವವನ್ನು ಹೊಂದಿದವರೇ ಆಗಿದ್ದಾರೆ, ಅವರೆಲ್ಲರೂ ಪರಮಾತ್ಮನಲ್ಲಿ ಐಕ್ಯತಾ ಭಾವವನ್ನು ಹೊಂದಿ ಉನ್ನತಮಟ್ಟಕ್ಕೆ ಏರಿದ್ದಾರೆ.
ಬೊಮ್ಮನೇ ಸಂಸೃತಿಯ ಕಟ್ಟಿಕೊಂಡುತ್ಸಹಿಸೆ |                                                                                    ಸುಮ್ಮನರೆಚಣವಿರದೆ ಪ್ರಕೃತಿ ತೊಡಗುತಿರೆ ||                                                                                        ಜನ್ಮಸಾಕೆನುವುದೇಂ?  ದುಮ್ಮಾನವಡುವುದೇಂ?                                                                                ಚಿಮ್ಮುಲ್ಲಸವ ಧರೆಗೆ – ಮಂಕುತಿಮ್ಮ ||
     ಪರಮಾತ್ಮನೇ ಈ ಸಂಸಾರವನ್ನು (ಸಂಸೃತಿ) ಕಟ್ಟಿಕೊಂಡು ಉತ್ಸಾಹದಿಂದಿರಲು, ಪ್ರಕೃತಿ ಅರೆಕ್ಷಣವೂ ಸುಮ್ಮನಿರದೆ ತನ್ನ ಕೆಲಸದಲ್ಲಿ ತೊಡಗಿರಲು, ನಿನಗೆ ಮಾತ್ರ ಈ ಜನ್ಮ ಸಾಕು ಎಂದೇಕೆ ಅನ್ನಿಸುತ್ತದೆ?  ನೀನು ದುಃಖ (ದುಮ್ಮಾನ) ಪಡುವುದೇಕೆ?  ಈ ಭೂಮಿಗೆ ಉತ್ಸಾಹವನ್ನು ತುಂಬುತ್ತಾ ಆನಂದವನ್ನು ಪಸರಿಸು.
     ಪ್ರಪಂಚದ ಸೃಷ್ಟಿ-ಸ್ಥಿತಿ-ಲಯ ಇವುಗಳನ್ನು ನಿರಂತರವಾಗಿ ಮಾಡುತ್ತಿರುವ ಪರಮಾತ್ಮನಿಗೆ ಕಿಂಚಿತ್ತು ಬೇಸರವಿಲ್ಲ, ಎಡಬಿಡದೆ ಈ ಕಾರ್ಯವನ್ನು ಮಾಡುತ್ತಲೇ ಇರುತ್ತಾನೆ, ಅವನಿಗೆ ಯಾವ ವಾರದ ರಜೆ, ಹಬ್ಬದ ರಜೆ ಎಂದೇನು ಇಲ್ಲ ಆದರೂ ಅವನಿಗೆ ದಣಿವೂ ಇಲ್ಲ ಬೇಸರವೂ ಇಲ್ಲ, ಇದರಲ್ಲಿ ಇನ್ನೂ ಹೆಚ್ಚಿನ ಆವಿಷ್ಕಾರ ಮಾಡುವ (ಇತ್ತೀಚಿನ ಹುಟ್ಟುವ ಮಕ್ಕಳು ತುಂಬಾ ಚುರುಕು, ಅವುಗಳ ಏನಾದರೂ ವಿಶೇಷವಾದ ಗುಣವನ್ನು ನಾವು ನೋಡುತ್ತಲೇ ಇರುತ್ತೇವೆ) ಉತ್ಸುಕತೆಯಲ್ಲಿದ್ದಾನೆ.  ಅದರಂತೆ ಈ ಸೃಷ್ಟಿಕರ್ತನಿಗೆ ಸದಾ ಜೊತೆಗೂಡುವ ಪ್ರಕೃತಿ ತಾನೇನು ಕಡಿಮೆಯಿಲ್ಲ ಎನ್ನುತ್ತಾ ನಿರಂತರವಾಗಿ ಕಾಲಕಾಲಕ್ಕೆ ತಕ್ಕಂತೆ ಮಳೆ, ಬೆಳೆ ಎಲ್ಲವನ್ನು ನೀಡುತ್ತಾ ಬಂದಿದ್ದಾಳೆ.  ಈ ರೀತಿಯಾಗಿ ಮಾಡಿದ ಕೆಲಸವನ್ನೇ ಮಾಡಬೇಕಲ್ಲ ಎನ್ನುವ ಬೇಸರ ಪರಮಾತ್ಮನಿಗಾಗಲೀ ಪ್ರಕೃತಿಗಾಗಲಿ ಎಲ್ಲದಿರುವಾಗ ಹುಲುಮಾನವರಾದ ನಮಗೇಕೆ ಈ ಜೀವನದ ಬಗ್ಗೆ ಬೇಸರ ಬರಬೇಕು? ಬದುಕು ನಿಂತ ನೀರಲ್ಲ, ಒಂದೊಮ್ಮೆ ಕಷ್ಟ ಬಂತೆಂದಾ ದದರೆ ಅದನ್ನು ಪರಮಾತ್ಮ ನಿರಂತರವಾಗಿರಲು ಬಿಡುವವನಲ್ಲ ಏನಾದರೊಂದು ಅದರಿಂದ ಪಾರಾಗುವ  ಮಾರ್ಗವನ್ನು ತೋರಿಯೇ ತೀರುತ್ತಾನೆ. ಹೀಗಿರುವಾಗ ಬೇಸರಪಡುವ ಅಗತ್ಯವಾದರೂ ಏನಿದೆ?  ಕಳೆದು ಹೋದದಕ್ಕೆ ದುಃಖ ಪಡುತ್ತಾ ಕುಳಿತುಕೊಂಡು ಇಂದಿನ ಈ ಕ್ಷಣದ ಸಂತೋಷವನ್ನೂ ಪಡೆಯಲಾರದ ಬುದ್ಧಿಗೇಡಿತನ ಮನುಷ್ಯನಿಗೆ ಏಕೆ ಬೇಕು? ಆ ಆಲೋಚನಾ ಶಕ್ತಿಯನ್ನು ಹೊಂದಿರುವ ಮನುಷ್ಯ ಬಂದದ್ದನ್ನು ಎದುರಿಸುವ ಛಲದಿಂದ ಮುನ್ನುಗ್ಗುತ್ತಿರ ಬೇಕು-ಸೋಲೋ-ಗೆಲವೋ ಅದು ನಂತರದ ವಿಚಾರ.  ಆದ್ದರಿಂದ ಸದಾ ಬೆಟ್ಟ ತನ್ನ ತಲೆಯ ಮೇಲೆಯೇ ಇದೆ ಎಂಬ ವಿನಾಕಾರಣದ ಚಿಂತೆ-ದುಃಖ ಇವುಗಳನ್ನು ಬದಿಗಿಟ್ಟು ಇಂದಿನ ದಿನವನ್ನು ಆನಂದ ದಿಂದ ಅನುಭವಿಸುತ್ತಾ, ತಾನೂ ಸಂತೋಷಪಟ್ಟು ಜೊತೆಯಲ್ಲಿದ್ದ ವರನ್ನು ಸಂತೋಷಪಡಿಸುವಂತಹ ಗುಣವನ್ನು ಮನುಷÀ್ಯರಾದ ನಾವು ಪಡೆದುಕೊಳ್ಳಬೇಕು, ಆಗ ಜಗತ್ತೇ ನಮ್ಮದಾಗಬಲ್ಲದು.  ಆದ್ದರಿಂದ ನಮಗೆ ದೊರೆತಿರುವುದರಲ್ಲಿ ತೃಪ್ತಿ ಹೊಂದುತ್ತಾ, ನಮ್ಮ ಏಳಿಗೆಗಾಗಿ ಪ್ರಾಮಾಣಿಕವಾಗಿ ಪ್ರಯತ್ನ ಪಡುವಂತಿದ್ದರೆ ಜಗತ್ತನ್ನೇ ಮನುಜ ಗೆಲ್ಲಬಲ್ಲ. ನಮ್ಮಲ್ಲಿನ ಒಳ್ಳೆಯ ನಡತೆಗೆ ಪ್ರಕೃತಿ ಸಹ ಬೆಂಗಾವಲಾಗಿರುತ್ತಾಳೆ. ಆದ್ದರಿಂದ ಅಂಜುಗಳಿತನವನ್ನು ಬಿಟ್ಟು ನಮ್ಮ ಪಾಲಿಗೆ ದೊರೆತ ವಸ್ತುವಿನಲ್ಲಿಯೇ ಸುಖವನ್ನು ಕಾಣುತ್ತಾ ಹೋದಲ್ಲಿ ಬದುಕಿನ ಉತ್ಸಾಹ ದುಪ್ಪಟ್ಟಾಗಬಲ್ಲದು. ಇದರಿಂದ ನಮ್ಮ ಸುತ್ತಲಿನ ಪರಿಸರವು ಸಹ ಸಂತೋಷವಾಗಿಡಬಹುದು.
ಕೋಟಿ ದೆಸೆಯುಸಿರುಗಳು, ಕೋಟಿ ರಸದಾವಿಗಳು |                                                                              ಕೋಟಿ ಹೃದಯದ ಹೋಹೋ ಹಾಹಾ ಕಾರಗಳು ||                                                                            ಕೂಟ ಕೂಡಿಹುವಂತರಿಕ್ಷದಲಿ ನೀನದರಿನ್ |                                                                                        ಓಟವೋದುವುದೆತ್ತ ..?  ಮಂಕುತಿಮ್ಮ ||
     ಪ್ರಪಂಚದ ಪೂರ್ತಿ ಜೀವಿಗಳ ಉಸಿರಾಟ, ಅವರು ಪಡುವ ಸಂಕಟ ಮತ್ತು ಅವರ ಹೃದಯದಿಂದ ಬರುವ ಹಾಹಾಕಾರಗಳು ಸೇರಿಕೊಂಡಿರುವಾಗ, ನಾನು ಅದರಿಂದ ತಪ್ಪಿಸಿಕೊಂಡು ಓಡಬಲ್ಲೆ ಎನ್ನುವುದು ಸಾಧ್ಯವಾಗದ ಮಾತುಗಳಾಗುತ್ತವೆ.
     ಈ ಪ್ರಪಂಚವೆಲ್ಲ ಸಕಲ ಜೀವರಾಶಿಗಳಿಂದ ತುಂಬಿಕೊಂಡಿದ್ದು ಆ ಜೀವರಾಶಿಗಳು ದಿನ ದಿನವು ಪಡುವ ಸಂಕಟ ಅವುಗಳ ಚೀತ್ಕಾರ ಕೇಳಿಸುತ್ತಲೇ ಇರುತ್ತದೆ. ಮಾನವನ ಜನ್ಮವು ಈ ಸುಳಿಯೊಳಗೆ ಸಿಲುಕಿಕೊಂಡಿದೆ, ಆದ್ದರಿಂದ ಈ ಸಂಕಟದಿಂದ ಹೊರಬರುವ ಮಾರ್ಗವಂತೂ ಸಂಪೂರ್ಣವಾಗಿ ಮುಚ್ಚಿಹೋಗಿದೆ, ಏಕೆಂದರೆ ಈ ಹಾಹಾಕಾರ, ಸಂಕಟ ಎಲ್ಲವನ್ನು ಜಗತ್ತಿನಲ್ಲಿ ಹುಟ್ಟಿದ ಪ್ರತಿಯೊಬ್ಬರೂ ಅನುಭವಿಸುತ್ತಲೇ ಇರುವಾಗ ಅಲ್ಲದೆ ಸಂಸಾರದಲ್ಲಿ ನನ್ನವರು ಎಂದುಕೊಂಡಿರುವವರೂ ಸಹ ಈ ಸುಳಿಯಿಂದ ಹೊರಬರಲಾಗದೆ ಒದ್ದಾಡುತ್ತಿರುವಾಗ ನಾನೊಬ್ಬ ಮಾತ್ರ ಇವರೆಲ್ಲರಿಂದ ದೂರ ಹೋಗಬೇಕು ಎನ್ನುವ ಆಲೋಚನೆಯು ಸಾಧ್ಯವಿಲ್ಲದ ಮಾತು.  ಹಾಗಾಗಿ ಈ ಎಲ್ಲ ದುರಾಲೋಚನೆಯನ್ನು ಬಿಟ್ಟು ಈ ಪ್ರಪಂಚ ನನಗಾಗಿ ಸೃಷ್ಟಿಯಾಗಿದೆ, ಸೃಷ್ಟಿಯ ಸೊಬಗನ್ನು ನಾನು ಆನಂದಿಸಬೇಕು, ಸದಾ ನಗುವ ಪ್ರಕೃತಿಯನ್ನು ಹೆಚ್ಚು ಪ್ರೀತಿಸಬೇಕು, ತನ್ಮೂಲಕವಾಗಿ ತನ್ನ ಅಂತರಾತ್ಮದ ಚಿಂತೆಯ ಗೋಡೆಯನ್ನು ಸರಿಸಿಬಿಡುತ್ತಾ ಎಲ್ಲದರಲ್ಲಿಯೂ, ಎಲ್ಲರಲ್ಲಿಯೂ ಸಂತೋಷವನ್ನು ಕಾಣುವ ಮನೋಭಾವವನ್ನು ಬೆಳೆಸಿಕೊಳ್ಳುತ್ತಾ ಸಾಗಿದಾಗ ತಾನೂ ಸಹ ಸಂತೋಷದಿಂದ ಇದ್ದು ನಮ್ಮವರನ್ನೂ ಸಹ ಸಂತೋಷವಾಗಿಡುವ ಪ್ರಾಮಾಣಿಕ ಚಿತ್ತ ನಮ್ಮದಾಗಬೇಕು.

Leave a Reply

Your email address will not be published. Required fields are marked *

Related News

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ