ರಾಷ್ಟ್ರೀಯ ಕಾಂಗ್ರೆಸ್ ಪಕ್ಷದಲ್ಲಿ ಪ್ರಾಮಾಣಿಕವಾಗಿ ನಿಷ್ಠೆ, ಶ್ರದ್ಧೆಯಿಂದ ಕಾಯಕ ಮಾಡುವವರಿಗೆ ಉತ್ತಮ ಅವಕಾಶಗಳು ಲಭಿಸುತ್ತವೆ ಎಂಬುದಕ್ಕೆ ಹೆಚ್.ಪಿ ಮಂಜೇಗೌಡ ಸ್ಪಷ್ಟ ನಿದರ್ಶನ ಎಂದು ಶಾಸಕ ಹೆಚ್.ಡಿ ತಮ್ಮಯ್ಯ ಹೇಳಿದರು.
ಚಿಕ್ಕಮಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಕಚೇರಿ ಆವರಣದಲ್ಲಿ ಏರ್ಪಡಿಸಲಾಗಿದ್ದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಹೆಚ್.ಪಿ ಮಂಜೇಗೌಡ ಅವರ ಅಧಿಕಾರ ಸ್ವೀಕಾರ ಸಮಾರಂಭದ ಹಾಗೂ ಅಭಿನಂದನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕಳೆದ 8 ವರ್ಷಗಳಿಂದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಪ್ರಾಮಾಣಿಕ ಶ್ರದ್ಧೆಯಿಂದ ಕೆಲಸ ಮಾಡಿದ ಮಂಜೇಗೌಡರು ಬೀಕನಹಳ್ಳಿ ಗ್ರಾಮ ಪಂಚಾಯಿತಿಗೆ ಸತತ ನಾಲ್ಕನೇ ಬಾರಿಗೆ ಸದಸ್ಯರಾಗಿ ಆಯ್ಕೆಯಾಗುವ ಮೂಲಕ ದೊಡ್ಡ ಜವಾಬ್ದಾರಿಯನ್ನು ನಿರ್ವಹಿಸಿದ್ದು, ಇದು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಿಗೆ ಸ್ಪೂರ್ತಿ ಮತ್ತು ಸುದಿನ ಎಂದರು.
ಹಲವಾರು ಲೋಕಸಭೆ, ವಿಧಾನಸಭೆ ಚುನಾವಣೆಗಳಲ್ಲಿ ಸಕ್ರಿಯವಾಗಿ ಪಕ್ಷಕ್ಕಾಗಿ ಪ್ರಾಮಾಣಿಕತೆಯಿಂದ ದುಡಿದ ಫಲವಾಗಿ ಇಂದು ಕಾಂಗ್ರೆಸ್ ಪಕ್ಷ ಮಂಜೇಗೌಡರನ್ನು ಸಿಡಿಎ ಅಧ್ಯಕ್ಷರನ್ನಾಗಿ ಆಯ್ಕೆಮಾಡಿದೆ ಎಂದು ತಿಳಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್, ನಗರಾಭಿವೃದ್ಧಿ ಪೌರಾಡಳಿತ ಸಚಿವ ಭೈರತ್ತಿ ಸುರೇಶ್, ಇಂಧನ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ. ಜಾರ್ಜ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ. ಕೆ.ಪಿ ಅಂಶುಮಂತ್ ಸೇರಿದಂತೆ ನಾಯಕರು ಸೇರಿ ಮಂಜೇಗೌಡರ ಮನೆ ಬಾಗಿಲಿಗೆ ಸಿಡಿಎ ಅಧ್ಯಕ್ಷರ ಆದೇಶ ಪ್ರತಿಯನ್ನು ಅವರ ಮನೆ ಬಾಗಿಲಿಗೆ ತಲುಪಿಸುವ ಕೆಲಸ ಮಾಡಿದ್ದಾರೆಂದು ಶ್ಲಾಘಿಸಿದರು.
ರಾಜಕೀಯ ಕ್ಷೇತ್ರದಲ್ಲಿ ನಿಷ್ಠಾವಂತರಾಗಿ ಪ್ರಾಮಾಣಿಕವಾಗಿ ಗಟ್ಟಿಯಾಗಿ ಕೆಲಸ ಮಾಡಿದಾಗ ಮಾತ್ರ ಪಕ್ಷ ಗುರ್ತಿಸುತ್ತದೆ. ಈಗಾಗಲೇ ವಿವಿಧ ಹುದ್ದೆಗಳಿಗೆ ಪಕ್ಷದ ಕಾರ್ಯಕರ್ತರನ್ನು ಗುರ್ತಿಸಿ ನಾಮನಿರ್ದೇಶಿತ ಸದಸ್ಯರನ್ನಾಗಿ ಮಾಡಿದೆ ಎಂದು ತಿಳಿಸಿದರು.
ಕಳೆದ 19 ತಿಂಗಳಿನಿಂದ ಯಾವುದೇ ಕಪ್ಪು ಚುಕ್ಕೆ ಇಲ್ಲದಂತೆ ನಯಾಜ್ ಅಹಮದ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ ಎಂದು ಅಭಿನಂದಿಸಿದ ಅವರು, ಇಂದು ಅಧಿಕಾರ ಸ್ವೀಕರಿಸುತ್ತಿರುವ ಹೆಚ್.ಪಿ ಮಂಜೇಗೌಡರು ಒಳ್ಳೆಯ ಆಡಳಿತ ನೀಡಿ ಪಕ್ಷಕ್ಕೆ ಕೀರ್ತಿ ತರಲಿ ಎಂದು ಶುಭ ಹಾರೈಸಿದರು.
ಸಮಾಜದ ಎಲ್ಲ ಸಮುದಾಯ ಮತ್ತು ವರ್ಗದವರನ್ನು ಪ್ರೀತಿಯಿಂದ ಒಗ್ಗಟ್ಟಾಗಿ ಸಮಾನಾಗಿ ವಿಶ್ವಾಸಕ್ಕೆ ತೆಗೆದುಕೊಂಡಾಗ ರಾಜಕೀಯ ಪಕ್ಷ ಸಂಘಟನೆಯಾಗುತ್ತದೆ ಎಂದರು.
ವಿಧಾನ ಪರಿಷತ್ ಮಾಜಿ ಸದಸ್ಯೆ ಗಾಯಿತ್ರಿ ಶಾಂತೇಗೌಡ ಮಾತನಾಡಿ, ಸಿಡಿಎ ಅಧಿಕಾರದಲ್ಲಿ ಜನಸ್ನೇಹಿಯಾಗಿ ನೂತನ ಅಧ್ಯಕ್ಷ ಹೆಚ್.ಪಿ ಮಂಜೇಗೌಡ ಅವರು ಅಧಿಕಾರಿಗಳನ್ನು ವಿಶ್ವಾಸಕ್ಕೆ ಪಡೆದು ಉತ್ತಮ ಕೆಲಸ ಮಾಡಿ ಎಂದು ಕಿವಿಮಾತು ಹೇಳಿದ ಅವರು, ಪಕ್ಷ ಸಂಘಟನೆಯಲ್ಲಿ ಎಲ್ಲರನ್ನೂ ಸಮನಾಗಿ ಕಂಡಿದ್ದಾರೆಂದು ಶ್ಲಾಘಿಸಿದರು.
ಸೈಯದ್ ಹನೀಫ್, ಡಿ.ಎಸ್ ಚಂದ್ರೇಗೌಡ, ನಯಾಜ್ ಅಹಮದ್ ಮುಂತಾದವರು ಸಿಡಿಎ ಅಧಿಕಾರವನ್ನು ಅತ್ಯಂತ ಯಶಸ್ವಿಯಾಗಿ ಆಡಳಿತ ನಡೆಸಿದ್ದಾರೆ ಎಂದು ಸ್ಮರಿಸಿ, ನಿಷ್ಠಾವಂತ ಕಾರ್ಯಕರ್ತರನ್ನು ಪಕ್ಷ ಗುರ್ತಿಸುತ್ತದೆ ಎಂಬುದಕ್ಕೆ ಮಂಜೇಗೌಡರು ಸ್ಪಷ್ಟ ಉದಾಹರಣೆ ಎಂದರು.
ನೂತನ ಅಧ್ಯಕ್ಷ ಹೆಚ್.ಪಿ ಮಂಜೇಗೌಡ ಅಧಿಕಾರ ಸ್ವೀಕರಿಸಿ ಅಭಿನಂದನೆ ಗೌರವಗಳನ್ನು ಪಡೆದು ಮಾತನಾಡಿ, 2000 ನೇ ಇಸವಿಯಲ್ಲಿ ಗ್ರಾಮ ಪಂಚಾಯಿತಿ ಸದಸ್ಯನಾಗಿ ಆಯ್ಕೆಯಾಗುವ ಮೂಲಕ ರಾಜಕೀಯ ಪ್ರವೇಶ ಮಾಡಿ ಆ ಮೂಲಕ ನಾಲ್ಕು ಬಾರಿ ಗ್ರಾ.ಪಂ ಸದಸ್ಯನಾಗಿ ಆಯ್ಕೆಯಾಗಿರುವುದಕ್ಕೆ ಸಮಾಜದ ಜನರ ಆಶೀರ್ವಾದ ಹಾಗೂ ಸ್ನೇಹಿತರ ಸಹಕಾರ ಕಾರಣ ಎಂದರು.
ಬಿಜೆಪಿ ಭದ್ರಕೋಟೆಯಾಗಿದ್ದ ಬೀಕನಹಳ್ಳಿ ಗ್ರಾಮ ಪಂಚಾಯಿತಿ ಅನ್ನು ಮೊದಲ ಬಾರಿಗೆ ಕಾಂಗ್ರೆಸ್ ಪಕ್ಷದ ಸದಸ್ಯನಾಗಿ ಆಯ್ಕೆಯಾಗುವ ಮೂಲಕ ಪಕ್ಷದ ಖಾತೆ ತೆರೆಯಲು ಅವಕಾಶವಾಗಿತ್ತು. 2013 ರಲ್ಲಿ ಕೆ.ಎಸ್ ಶಾಂತೇಗೌಡರು ಸ್ಪರ್ಧಿಸಿದ್ದ ವಿಧಾನಸಭಾ ಚುನಾವಣೆಯಲ್ಲಿ ಬೂತ್ ಮಟ್ಟದ ಅಧ್ಯಕ್ಷನಾಗಿ ಉತ್ತಮ ಕೆಲಸ ಮಾಡಿದ್ದನ್ನು ಪರಿಗಣಿಸಿದ ಪಕ್ಷ ಬ್ಲಾಕ್ ಕಾಂಗ್ರೆಸ್ ಹುದ್ದೆಗೆ ನೇಮಕ ಮಾಡಿತ್ತು. ಇಂದು ಸಿಡಿಎ ಅಧ್ಯಕ್ಷನಾಗಿ ಆಯ್ಕೆಯಾಗಿರುವುದಕ್ಕೆ ಸಂತೋಷವಾಗುತ್ತಿದೆ ಎಂದರು.
ಶಾಸಕ ಹೆಚ್.ಡಿ. ತಮ್ಮಯ್ಯನವರು ಆಯ್ಕೆಯಾದ ಬಳಿಕ ಈ ಹುದ್ದೆ ಲಭಿಸಿದೆ ಎಂದು ಹೇಳಿದ ಅವರು, ಐದು ವರ್ಷದ ಅಧಿಕಾರವಧಿ ಸಿಕ್ಕಾಗ ಮಾಡುವ ಜನಪರ ಕಾರ್ಯಗಳು ಪ್ರೀತಿ ರಾಜಕಾರಣಕ್ಕೆ ನಾಂದಿಯಾಗಿದ್ದು, ಅದಕ್ಕಾಗಿ ಪಕ್ಷದ ನಾಯಕರು, ಮುಖಂಡರು, ಸಚಿವರು ಎಲ್ಲರಿಗೂ ಚಿರಋಣಿಯಾಗಿದ್ದೇನೆ ಎಂದರು.
ದೀನದಲಿತರ, ಬಡವರ, ಶೋಷಿತ ವರ್ಗದ ಕಷ್ಟದಲ್ಲಿರುವವರಿಗೆ ಸ್ಪಂದಿಸುವ ಕೆಲಸವನ್ನು ಮಾಡುವ ಜೊತೆಗೆ ನಗರದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುವುದಾಗಿ ಕಲ್ಯಾಣ ನಗರ ಮಾದರಿಯಲ್ಲಿ ನಗರದ ಸುತ್ತಮುತ್ತ ಅಭಿವೃದ್ಧಿಯಾಗುವಂತೆ ಗುರಿ ಹೊಂದಿದ್ದು, ಯಾರಿಗೂ ನೋವಾಗದಂತೆ ನಡೆದುಕೊಳ್ಳುವಂತೆ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ರೇಖಾ ಹುಲಿಯಪ್ಪಗೌಡ, ಡಾ. ಡಿ.ಎಲ್ ವಿಜಯಕುಮಾರ್, ಎಐಸಿಸಿ ಕಾರ್ಯದರ್ಶಿ ಬಿ.ಎಂ ಸಂದೀಪ್, ಎಂ.ಸಿ. ಶಿವಾನಂದಸ್ವಾಮಿ ನೂತನ ಅಧ್ಯಕ್ಷರನ್ನು ಅಭಿನಂದಿಸಿ ಮಾತನಾಡಿದರು.
ವೇದಿಕೆಯಲ್ಲಿ ಮುಖಂಡರುಗಳಾದ ಹೆಚ್.ಹೆಚ್ ದೇವರಾಜ್, ನಯಾಜ್ ಅಹಮದ್, ಸೈಯದ್ ಹನೀಫ್, ಮಲ್ಲೇಶ್ ಸ್ವಾಮಿ, ರಾಜೇಗೌಡ, ಚಂದ್ರಪ್ಪ, ಬಿ.ಎಲ್ ಬೆಟ್ಟಗೆರೆ ಪ್ರವೀಣ್, ನಾರಾಯಣಗೌಡ, ಲಕ್ಷ್ಮಣ, ಹಿರೇಮಗಳೂರು ರಾಮಚಂದ್ರ, ಗಂಗಾಧರ್ ಉಪಸ್ಥಿತರಿದ್ದರು.



