ಪಾಕಿಸ್ತಾನದ ವಿರುದ್ಧ ಟಿ20 ವಿಶ್ವಕಪ್ ಲೀಗ್ ಪಂದ್ಯದಲ್ಲಿ 61 ರನ್‌ಗಳ ಭರ್ಜರಿ ಜಯ ಸಾಧಿಸಿ ಭಾರತ ಇತಿಹಾಸ ನಿರ್ಮಿಸಿದೆ. ದಾಖಲೆಯ ಜಯದೊಂದಿಗೆ ಗ್ರೂಪ್ ಎ ವಿಭಾಗದಲ್ಲಿ 6 ಅಂಕ ಸಂಪಾದಿಸಿ ಟೀಂ ಇಂಡಿಯಾ ಸೂಪರ್ 8 ಹಂತವನ್ನು ಪ್ರವೇಶಿಸಿದೆ.
ಗೆಲ್ಲಲು 176 ರನ್‌ಗಳ ಕಠಿಣ ಗುರಿಯನ್ನು ಪಡೆದ ಪಾಕಿಸ್ತಾನ 18 ಓವರ್‌ಗಳಲ್ಲಿ114 ರನ್ ಅಷ್ಟೇ ಗಳಿಸಿ 61 ರನ್ ಗಳ ಅಂತರದಿಂದ ಸೋಲು ಕಂಡಿದೆ.
ಶ್ರೀಲಂಕಾದ ರಾಜಧಾನಿ ಕೊಲಂಬೋ ಪ್ರೇಮದಾಸ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಬ್ಯಾಟಿಂಗ್‌ಗೆ ಸಹಕಾರ ನೀಡದ ಪಿಚ್‌ನಲ್ಲಿ ಇಶಾನ್ ಕಿಶನ್ ಸ್ಫೋಟಕ ಬ್ಯಾಟಿಂಗ್ ಭಾರತಕ್ಕೆ ನೆರವಾಯ್ತು. ಅಭಿಷೇಕ್ ಶರ್ಮಾ ಮೊದಲ ಓವರ್‌ನಲ್ಲೇ ಶೂನ್ಯಕ್ಕೆ ಔಟಾದರೂ ಇಶನ್ ಕಿಶನ್ ಅಬ್ಬರದ ಬ್ಯಾಟ್ ಬೀಸಿದರು. 27 ಎಸೆತಗಳಲ್ಲಿ ಅರ್ಧಶತಕ ಹೊಡೆದ ಕಿಶನ್ ಅಂತಿಮವಾಗಿ 77 ರನ್(40 ಎಸೆತ, 10 ಬೌಂಡರಿ, 3 ಸಿಕ್ಸ್) ಹೊಡೆದು ಔಟಾದರು.
ಇಶನ್ ಕಿಶನ್ ಕಿಶನ್ ಔಟಾದಾಗ ತಂಡದ ಮೊತ್ತ 88 ರನ್ ಆಗಿತ್ತು ಈ ಪೈಕಿ ಎರಡನೇ ವಿಕೆಟಿಗೆ ಇಶನ್ ಕಿಶನ್ ಮತ್ತು ತಿಲಕ್ ವರ್ಮ 46 ಎಸೆತಗಳಲ್ಲಿ 87 ರನ್ ಜೊತೆಯಾಟ ಆಡಿದ್ದರು. ಈ ಪೈಕಿ ಇಶನ್ ಒಬ್ಬರೇ 76 ರನ್ ಹೊಡೆದಿದ್ದರು. ತಿಲಕ್ ವರ್ಮಾ 25 ರನ್(24 ಎಸೆತ, 2 ಬೌಂಡರಿ, 1 ಸಿಕ್ಸ್) ಸೂರ್ಯಕುಮಾರ್ ಯಾದವ್32 ರನ್(29 ಎಸೆತ,3 ಬೌಂಡರಿ) ಹೊಡೆದು ಔಟಾದರು.
ಕೊನೆಯಲ್ಲಿ ಶಿವಂ ದುಬೆ 27 ರನ್(17 ಎಸೆತ, 3 ಬೌಂಡರಿ, 1 ಸಿಕ್ಸ್) ರಿಂಕು ಸಿಂಗ್ ಔಟಾಗದೇ 11 ರನ್(4 ಎಸೆತ, 1 ಬೌಂಡರಿ, 1ಸಿಕ್ಸ್) ಹೊಡೆದು ತಂಡದ ಮೊತ್ತವನ್ನು 170ರ ಗಡಿಯನ್ನು ದಾಟಿಸಿದರು.
ಸವಾಲಿನ ಮೊತ್ತವನ್ನು ಬೆನ್ನತ್ತಿದ ಪಾಕಿಸ್ತಾನದ ಪತನಕ್ಕೆ ಮುನ್ನುಡಿ ಬರೆದವರು ಹಾರ್ದಿಕ್ ಪಾಂಡ್ಯ. ಮೊದಲ ಓವರ್‌ನಲ್ಲೇ ಸಾಹಿಬ್‌ಜಾದಾ ಫರ್ಹಾನ್ ಶೂನ್ಯಕ್ಕೆ ಔಟ್ ಆದರೆ ನಂತರ ಸೈಮ್ ಅಯೂಬ್ 6 ರನ್, ನಾಯಕ ಸಲ್ಮಾನ್ ಆಘಾ ಅವರನ್ನು ಬುಮ್ರಾ ಔಟ್ ಮಾಡುತ್ತಾರೆ. ತಂಡದ ಮೊತ್ತ 34 ರನ್ ಆಗಿದ್ದಾಗ ಬಾಬರ್ ಅಜಂ ಔಟಾದಗಲೇ ಪಾಕ್ ಸೋಲು ಖಚಿತವಾಗಿತ್ತು.
ಪಾಕ್ ಪರ ಉಸ್ಮಾನ್ ಖಾನ್ 44 ರನ್ (34 ಎಸೆತ, 6 ಬೌಂಡರಿ, 1 ಸಿಕ್ಸ್) ಹೊಡೆದು ಸ್ವಲ್ಪ ಪ್ರತಿರೋಧ ತೋರಿದರು. ಭಾರತದ ಪರ ಪಾಂಡ್ಯ, ಬುಮ್ರಾ, ಅಕ್ಷರ್ ಪಟೇಲ್, ವರುಣ್ ಚಕ್ರವರ್ತಿ, ತಲಾ ಎರಡು ವಿಕೆಟ್ ಪಡೆದರು. ಕುಲದೀಪ್ ಯಾದವ್, ತಿಲಕ್ ವರ್ಮಾ ತಲಾ 1 ವಿಕೆಟ್ ಪಡೆದರು.
ಈ ಜಯದೊಂದಿಗೆ ತನ್ನ ಗ್ರೂಪ್ ನಲ್ಲಿ ಸತತ ಮೂರು ಪಂದ್ಯಗಳನ್ನು ಜಯಿಸಿ 6 ಅಂಕಗಳನ್ನು ಗಳಿಸಿದ ಭಾರತ ತಂಡ ಸೂಪರ್ 8 ಹಂತಕ್ಕೆ ಅರ್ಹತೆ ಗಳಿಸಿದೆ.
ಇಲ್ಲಿಯವರೆಗೆ ಟಿ20 ವಿಶ್ವಕಪ್ ಭಾರತ ಪಾಕ್ ಮಧ್ಯೆ 9 ಪಂದ್ಯ ನಡೆದಿದೆ. ಈ ಪೈಕಿ 8 ಪಂದ್ಯದಲ್ಲಿ ಭಾರತ ಗೆದ್ದರೆ 1 ಪಂದ್ಯವನ್ನು ಮಾತ್ರ ಪಾಕ್ ಗೆದ್ದಿದೆ. 50 ಓವರ್‌ಗಳ ವಿಶ್ವಕಪ್‌ನಲ್ಲಿ ಇಲ್ಲಿಯವರೆಗೆ 9 ಪಂದ್ಯ ನಡೆದಿದ್ದು ಎಲ್ಲಾ ಪಂದ್ಯವನ್ನು ಭಾರತವೇ ಗೆದ್ದಿದೆ. ಹೀಗಾಗಿ ಐಸಿಸಿ ಆಯೋಜನೆಯ ವಿಶ್ವಕಪ್‌ನಲ್ಲಿ ಪಾಕ್ ವಿರುದ್ಧದ ಸೆಣಸಾಟದಲ್ಲಿ 16-1 ಅಂತರದಲ್ಲಿ ತನ್ನ ಪಾರಮ್ಯ ಮೆರೆದಿದೆ.



