ಮೂಡಿಗೆರೆ ತಾಲ್ಲೂಕು ಬಾಳೂರು ಹೀರೆಹಕ್ಲೆ ಎಸ್ಟೇಟ್ ನ ಮಾಲೀಕರಾದ ಬಿ ಎಲ್ ಮಂಜುನಾಥಗೌಡರು (84 ವರ್ಷ) ಹೃದಯಾಘಾತದಿಂದ ಇಂದು (ಬುಧವಾರ) ಮಧ್ಯಾಹ್ನ ನಿಧನ ಚಿಕ್ಕಮಗಳೂರು ಆಶ್ರಯ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಬಾಳೂರು ಮಂಡಲ ಪಂಚಾಯಿತಿ ಪ್ರಥಮ ಅಧ್ಯಕ್ಷರಾಗಿದ್ದರು. ಮಂಜುನಾಥಗೌಡರು ಈ ಭಾಗದ ಹಿರಿಯ ಮುಖಂಡರು ಮತ್ತು ಹಿರಿಯ ಕಾಫಿ ಬೆಳೆಗಾರರಾಗಿದ್ದರು. ಇವರು ಉದ್ದಿಮೆದಾರರು ಆಗಿದ್ದರು ಅಂದಿನ ಕಾಲದಲ್ಲಿಯೇ ಅನೇಕ ಲಾರಿಗಳು ಮತ್ತು ಕಾರುಗಳನ್ನು ಇಟ್ಟು ಬಾಡಿಗೆಗೆ ನೀಡಿದ್ದರು.
ಅತ್ಯಂತ ಸೌಮ್ಯ ಸ್ವಭಾವದವರಾಗಿ ಎಲ್ಲರ ಪ್ರೀತಿ ವಿಶ್ವಾಸಕ್ಕೆ ಪಾತ್ರರಾಗಿದ್ದರು. ಸಾರ್ವಜನಿಕ ಕಾರ್ಯಗಳಿಗೆ ಅಪಾರ ದೇಣಿಗೆ ನೀಡುತ್ತಿದ್ದರು. ಸಮಾಜಸೇವೆಯಲ್ಲಿ ಆಸಕ್ತಿ ಹೊಂದಿದ್ದರು.
ಇವರು ಪತ್ನಿ ಶ್ರೀಮತಿ ಡಿ.ಎಲ್. ವಸಂತ ಕುಮಾರಿ (ಚಿಕ್ಕಮಗಳೂರ ಜಿಲ್ಲಾ ಪರಿಷತ್ ಮಾಜಿ ಅಧ್ಯಕ್ಷರು), ಓರ್ವ ಪುತ್ರ, ಮೂವರು ಪುತ್ರಿಯರು ಹಾಗೂ ಅಪಾರ ಬಂಧುಗಳನ್ನು ಅಗಲಿದ್ದಾರೆ.
ಮೃತರ ಅಂತ್ಯಕ್ರಿಯೆಯನ್ನು ನಾಳೆ ದಿನಾಂಕ 19-02-2026ರ ಗುರುವಾರ ಸಂಜೆ 4:00 ಗಂಟೆಗೆ ಸ್ವಗ್ರಾಮ ಬಾಳೂರಿನಲ್ಲಿ ನೆರವೇರಿಸಲಾಗುವುದು ಎಂದು ಮಂಜುನಾಥಗೌಡರ ಅಣ್ಣನ ಮಗ, ಮೂಡಿಗೆರೆ ಬೆಳೆಗಾರರ ಸಂಘದ ಅಧ್ಯಕ್ಷ ಬಿ.ಆರ್. ಬಾಲಕೃಷ್ಣ, ಮಂಜುನಾಥಗೌಡರ ಪತ್ನಿಯ ಸಹೋದರರಾದ ಜಿಲ್ಲಾ ಕಾಂಗ್ರೇಸ್ ಮಾಜಿ ಅಧ್ಯಕ್ಷ ಡಾ.ಡಿ.ಎಲ್. ವಿಜಯಕುಮಾರ್ ಮತ್ತು ಕೃಷಿಕ ಸಮಾಜದ ಜಿಲ್ಲಾ ಅಧ್ಯಕ್ಷ ಡಿ.ಎಲ್ ಅಶೋಕ್ ಕುಮಾರ್ ತಿಳಿಸಿದ್ದಾರೆ.
ಮಂಜುನಾಥಗೌಡ ಅವರ ನಿಧನಕ್ಕೆ ಕರ್ನಾಟಕ ಬೆಳೆಗಾರರ ಒಕ್ಕೂಟ, ಮೂಡಿಗೆರೆ ಬೆಳೆಗಾರರ ಸಂಘ, ಕೃಷಿಕ ಸಮಾಜ, ವಿವಿಧ ರಾಜಕೀಯ ಪಕ್ಷಗಳ ಹಾಗೂ ಸಂಘಸಂಸ್ಥೆಗಳ ಮುಖಂಡರು ತಮ್ಮ ಸಂತಾಪ ವ್ಯಕ್ತಪಡಿಸಿದ್ದಾರೆ.



