ಹೆಸರು, ಮನೆ, ಆಸ್ತಿಪಾಸ್ತಿ, ಸಾಂಸಾರಿಕ ಜೀವನ, ನಮ್ಮವರೆಲ್ಲರನ್ನೂ ತ್ಯಜಿಸಿ ಸಂಯಮದ ಪಥದಲ್ಲಿ ನಡೆದು ಆತ್ಮ ಪಥದಲ್ಲಿ ಮೋಕ್ಷ ಪಥದತ್ತ ನಡೆಯುವುದೇ ಜೈನ ದೀಕ್ಷೆ ಎಂದು ಚಿಕ್ಕಮಗಳೂರು ಮೂರ್ತಿ ಪೂಜೆ ಸಂಘದ ಟ್ರಸ್ಟಿ ರಾಜೇಶ್ ಶಿಶೋಧ್ಯ ತಿಳಿಸಿದರು.
ಚಿಕ್ಕಮಗಳೂರು ನಗರದ ತೇರಾಪಂಥ್ ಭವನದಲ್ಲಿ ನಡೆದ ಪ್ರೀತಿಬಾಯಿ ಸೋಲಂಕಿ ಅವರ ಜೈನ ದೀಕ್ಷೆ ಅಂಗವಾಗಿ ನಡೆದ ವರ್ಷಿದಾನ್ ಆಚರಣೆ ವೇಳೆ ಮಾತನಾಡಿದ ಅವರು, ನಗರದ ರಾಜೇಂದ್ರ ಸೋಲಂಕಿ ಹಾಗೂ ಗೀತಾ ಬಾಯಿ ಅವರ ಸೋಲಂಕಿ ಅವರ ಪುತ್ರಿ ಪ್ರೀತಿಬಾಯಿ ಸೋಲಂಕಿ ಜೈನ ದೀಕ್ಷೆ ಪಡೆಯುತ್ತಿದ್ದಾರೆ. ಚಿಕ್ಕಮಗಳೂರಿನಲ್ಲಿ ನಡೆಯುತ್ತಿರುವ ಮೂರನೇ ದೀಕ್ಷೆ ಕಾರ್ಯಕ್ರಮವಾಗಿದೆ ಎಂದು ಮಾಹಿತಿ ನೀಡಿದರು.
ಆಚಾರ್ಯ ಅಭಯಶೇಖರ ಸೂರಿಜೆ ಅವರು ಪ್ರೀತಿ ಬಾಯಿ ಸೋಲಂಕಿ ಅವರಿಗೆ ದೀಕ್ಷೆನೀಡಲಿದ್ದಾರೆ. ಗುರುಗಳು ದೀಕ್ಷೆ ಪಡೆದು ಪ್ರಸ್ತುತ 52 ವರ್ಷವಾಗಿದೆ. ಇದುವರೆಗೆ 700ಕ್ಕೂ ಅಧಿಕ ಪುಸ್ತಕ ಬರೆದಿದ್ದಾರೆ. 500ಕ್ಕೂ ಅಧಿಕ ಸಾದ್ವಿಯರು ಹಾಗೂ 100ಕ್ಕೂ ಅಧಿಕ ಸಂತರು ಇವರೊಂದಿಗೆ ಇದ್ದಾರೆ. ಗುರುಗಳು ಹೋದಲ್ಲೆಲ್ಲಾ ಲೋಕಕಲ್ಯಾಣ ಕಾರ್ಯ ನಡೆಯುತ್ತಿದೆ ಎಂದು ಹೇಳಿದರು.
ಪ್ರೀತಿ ಅವರು ತಂದೆ, ತಾಯಿ, ಅಣ್ಣ, ತಂಗಿ ಎಲ್ಲ ಸಂಬಂಧಗಳನ್ನು ತ್ಯಜಿಸಿ ಮೋಕ್ಷ ಮಾರ್ಗದಲ್ಲಿ ಮುಂದುವರಿಯುತ್ತಿದ್ದಾರೆ. ಹೀಗಾಗಿ ಬುಧವಾರ ವರ್ಷಿದಾನ್ ಆಚರಣೆ ನಡೆಸಲಾಗಿದೆ. ವರ್ಷಿದಾನ್ ಎಂದರೆ ದೀಕ್ಷೆ ಪಡೆಯುವವರು ತಮಗೆ ಸೇರಿದ ಎಲ್ಲ ವಸ್ತುಗಳನ್ನು ದಾನ ಮಾಡುವ ಆಚರಣೆಯಾಗಿದೆ. ಈ ಆಚರಣೆ ನಡೆದ ಮರುದಿನ ದೀಕ್ಷೆ ಕಾರ್ಯಕ್ರಮ ನಡೆಯಲಿದೆ ಎಂದು ವಿವರಿಸಿದರು.
ಪ್ರಮುಖರಾದ ಮಹೇಂದ್ರ ಡೋಸಿ ಮಾತನಾಡಿ, ಎಲ್ಲ ವೈಭವವನ್ನೂ ತ್ಯಾಗ ಮಾಡಿ ಬಿಳಿವಸ್ತ್ರ ಧರಿಸಿ, ನೆಲದಲ್ಲಿ ಮಲಗುತ್ತಾ, ಬರಿಗಾಲಿನಲ್ಲಿ ಓಡಾಡುತ್ತಾ ಧರ್ಮದ ಕಾರ್ಯ ನಡೆಸುವುದೇ ದೀಕ್ಷೆ ಸ್ವೀಕಾರ ಎಂದು ಹೇಳಿದರು.
ಜೈನ ದೀಕ್ಷೆ ಸ್ವೀಕರಿಸಿದ ಪ್ರೀತಿ ಸೋಲಂಕಿ ಅವರ ತಂದೆ ರಾಜೇಂದ್ರ ಸೋಲಂಕಿ ಮಾತನಾಡಿ, ಲಕ್ಷದಲ್ಲಿ ಒಬ್ಬರು ಜೈನ ದೀಕ್ಷೆ ಸ್ವೀಕಾರ ಮಾಡುತ್ತಾರೆ. ಈ ಬಗ್ಗೆ ಖುಷಿಯಿದೆ. ಆದರೆ ಮಗಳು ದೂರವಾಗುತ್ತಾಳೆ ಎಂಬ ನೋವೂ ಇದೆ. ಆದರೆ ಧರ್ಮ ಮಾರ್ಗದಲ್ಲಿ ನಡೆದು ಸಮಾಜವನ್ನು ಉತ್ತಮ ಮಾರ್ಗದಲ್ಲಿ ನಡೆಸುತ್ತಾಳೆ ಎಂಬ ಸಮಾಧಾನವಿದೆ ಎಂದರು.
ಜೈನ ದೀಕ್ಷೆ ಸ್ವೀಕರಿಸಿದ ಪ್ರೀತಿ ಸೋಲಂಕಿ ಮಾತನಾಡಿ, ಎಲ್ಲರೂ ಒಂದಲ್ಲಾ ಒಂದು ದಿನ ಇರುವುದನ್ನೆಲ್ಲಾ ಬಿಟ್ಟು ಹೋಗಲೇಬೇಕು. ಆದರೆ ನಾನು ಮೊದಲೇ ಎಲ್ಲ ಆಸ್ತಿ, ಅಂತಸ್ತನ್ನು ಬಿಟ್ಟು ಹೋಗುತ್ತಿದ್ದೇನೆ. ಈ ಬಗ್ಗೆ ನನಗೆ ಹೆಚ್ಚಿನ ಖುಷಿಯಿದೆ. ಹಿಂದಿನಿಂದಲೂ ಗುರುಗಳ ಭೇಟಿ ನೀಡಿದಾಗ ಸಾಕಷ್ಟು ಮಾಹಿತಿ ಪಡೆದು ಇದರಿಂದ ಪ್ರಭಾವಿತಗೊಂಡು ಜೈನ ದೀಕ್ಷೆ ಸ್ವೀಕರಿಸಿದ್ದೇನೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಪ್ರಮುಖರಾದ ಲಾಲ್ ಚಂದ್ ಬುಲ್ಡೋಚ, ಕಾಂತಿಲಾಲ್ ವಿಫುಲ್ ಕುಮಾರ್ ಜೈನ್, ಶ್ರೀ ಜೈನ ಶ್ವೇತಾಂಬರ್ ತೇರಾಪಂಥ್ ಸಭಾ, ತೇರಾಪಂಥ್ ಟ್ರಸ್ಟ್, ತೇರಾಪಂಥ್ ಮಹಿಳಾ ಮಂಡಲ್, ತೇರಾಪಂಥ್ ಯುವಕ್ ಪರಿಷತ್, ಅಣುವ್ರತ್ ಸಮಿತಿ, ತೇರಾಪಂಥ್ ಫ್ರೋಫೇಶನಲ್ ಫೋರಂ, ಜ್ಯಾನಶಾಲಾ, ಕಿಶೋರ್ ಮಂಡಲ್, ಕನ್ಯಾಮಂಡಲ್ ಮತ್ತಿತರರಿದ್ದರು. ಕಾರ್ಯಕ್ರಮಕ್ಕೂ ಮೊದಲು ವಿವಿಧಾ ಕಲಾತಂಡಗಳೊಂದಿಗೆ ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನೆಡೆಸಲಾಯಿತು.



